ADVERTISEMENT

ಮೆಹಬೂಬ್‌ ಬಾಳಿಗೆ ಬೆಳಕಾದ ಸಂಗೀತ

ಸಿದ್ದು ಆರ್.ಜಿ.ಹಳ್ಳಿ
Published 28 ಜೂನ್ 2017, 19:30 IST
Last Updated 28 ಜೂನ್ 2017, 19:30 IST
ಮೆಹಬೂಬ್‌ ಬಾಳಿಗೆ ಬೆಳಕಾದ ಸಂಗೀತ
ಮೆಹಬೂಬ್‌ ಬಾಳಿಗೆ ಬೆಳಕಾದ ಸಂಗೀತ   

ಕಣ್ಣೀರ ಧಾರೆ... ಇದೇಕೆ ಇದೇಕೆ...
ನನ್ನೊಲವಿನ ಹೂವೆ... ಈ ಶೋಕವೇಕೆ...’
‘ಹೊಸಬೆಳಕು’ ಚಿತ್ರದ ಡಾ. ರಾಜ್‌ಕುಮಾರ್‌ ಹಾಡಿರುವ ಈ ಹಾಡಿನ ಒಂದೊಂದು ಅಕ್ಷರವನ್ನೂ ಅನುಭವಿಸಿ, ಮೆಹಬೂಬ್‌ ಸಾಬ್‌ ಎಂಬ 22ರ ತರುಣ ಭಾವಪೂರ್ಣವಾಗಿ ಹಾಡುತ್ತಿದ್ದರೆ, ಆ ಹಾಡನ್ನು ಮೈಯೆಲ್ಲ ಕಿವಿಯಾಗಿಸಿಕೊಂಡು ಕೇಳುತ್ತಿದ್ದ ಪ್ರೇಕ್ಷಕರು ಮತ್ತು ತೀರ್ಪುಗಾರರ ಕಣ್ಣಲ್ಲಿ ನೀರು ಧಾರೆಯಾಗಿ ಹರಿಯುತ್ತಿತ್ತು.

ಡಾ.ರಾಜ್‌ ಅವರು ಆ ಸಿನಿಮಾದಲ್ಲಿ ಅಂಧನಾಗಿ ಅಭಿನಯಿಸಿದ್ದರೆ, ಮೆಹಬೂಬ್‌ ಸಾಬ್‌ ಅವರು ನಿಜ ಜೀವನದಲ್ಲಿ ಹುಟ್ಟು ಅಂಧ. ಹಾಗಾಗಿ ಅವರು, ‘ಬಾಳೆಲ್ಲಾ ನನಗೆ ಇರುಳಾದರೇನು, ಜತೆಯಾಗಿ ಎಂದೆಂದು ನೀ ಇಲ್ಲವೇನು...’ ಎಂದು ಸಂಗೀತವನ್ನೇ ಕುರಿತು ಹಾಡುವಂತಿತ್ತು. ಹೌದು, ಮೆಹಬೂಬ್‌ ಅವರ ಕತ್ತಲೆಯ ಜಗತ್ತಿಗೆ ಸಂಗೀತವೇ ಬೆಳಕಿಂಡಿ. ‘ಸ ರಿ ಗ ಮ ಪ ದ ನಿ’ಗಳೇ ಅವರನ್ನು ಕೈಹಿಡಿದು ಮುನ್ನಡೆಸುತ್ತಿವೆ. ಹೊಸ ಬೆಳಕು ತೋರುತ್ತಿವೆ.

ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ‘ಸರಿಗಮಪ ಸೀಸನ್‌–13’ರ ಕಾರ್ಯಕ್ರಮದ ಮೂಲಕ ಮೆಹಬೂಬ್‌ ಸಾಬ್‌ ಈಗ ಮನೆ ಮಾತಾಗಿದ್ದಾರೆ. ಫೇಸ್‌ಬುಕ್‌ನಲ್ಲಿ ಇವರ ಹೆಸರಿನಲ್ಲಿ ಫ್ಯಾನ್ಸ್‌ ಕ್ಲಬ್‌ ಶುರುವಾಗಿದ್ದು, ಅದರಲ್ಲೀಗ 301 ಮಂದಿ ಸದಸ್ಯರು.

ADVERTISEMENT

ಚಿತ್ರಗೀತೆಗಳ ಗುಂಗು...
ಮೆಹಬೂಬ್‌ ಅವರ ಊರು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕು ಹರಲಾಪುರ. ಇವರ ತಂದೆ ಷರೀಫ್‌ ಸಾಬ್‌, ಕಟ್ಟಡ ಕಾರ್ಮಿಕ. ತಾಯಿ ರಜಿಯಾ ಬೇಗಂ ಅವರಿಗೆ ಕೂಲಿ ಕೆಲಸ. ಎಲ್ಲ ಮಕ್ಕಳಂತೆ ಶಾಲೆಗೆ ಹೋಗಲು ಸಾಧ್ಯವಾಗದೆ ಮನೆಯಲ್ಲೇ ಉಳಿದರು ಮೆಹಬೂಬ್‌. ರೇಡಿಯೊದಲ್ಲಿ ಬರುತ್ತಿದ್ದ ಹಳೆಯ ಕನ್ನಡ ಚಿತ್ರಗೀತೆಗಳನ್ನು ಗುನುಗುತ್ತಾ, ಕಾಲ ಕಳೆಯುತ್ತಿದ್ದರು. ಒಮ್ಮೆ ಇವರ ಮನೆಗೆ ದೊಡ್ಡಪ್ಪ ಹುಮಾಯೂನ್‌ ಬಂದರು. ಸಂಗೀತ ಶಿಕ್ಷಕರಾಗಿದ್ದ ಅವರಿಗೆ, ಮೆಹಬೂಬ್‌ ಅವರಿಗಿದ್ದ ಸಂಗೀತದ ಆಸಕ್ತಿ ಗುರುತಿಸಲು ಕಷ್ಟವಾಗಲಿಲ್ಲ. ‘ನಿನ್ನ ಧ್ವನಿ ಚೆನ್ನಾಗಿದೆ, ಸಂಗೀತ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡು’ ಎಂದು ಆಶೀರ್ವದಿಸಿದರು.

ಕೈಬೀಸಿ ಕರೆದ ಪುಣ್ಯಾಶ್ರಮ...
ದಾವಣಗೆರೆಯಲ್ಲಿರುವ ಗದುಗಿನ ಶ್ರೀ  ವೀರೇಶ್ವರ ಪುಣ್ಯಾಶ್ರಮದ ಶಾಖಾ ಮಠಕ್ಕೆ 2003ರಲ್ಲಿ ಮೆಹಬೂಬ್‌ ಸೇರಿಕೊಂಡರು. ಅಲ್ಲಿ, ಗುರುಗಳಾದ ರಾಮಲಿಂಗ ಜೊಲ್ಲಾಪುರ ಅವರ ಮಾರ್ಗದರ್ಶನದಲ್ಲಿ ಹಿಂದೂಸ್ತಾನಿ ಸಂಗೀತಾಭ್ಯಾಸ ಆರಂಭಿಸಿದರು. ‘ಪ್ರತಿ ಹುಣ್ಣಿಮೆ ಸಂದರ್ಭದಲ್ಲಿ ಆಶ್ರಮದಲ್ಲಿ ನಡೆಯುವ ‘ಶಿವಾನುಭವ ಗೋಷ್ಠಿ’ಗೆ ಗದಗದಿಂದ ಪುಟ್ಟರಾಜ ಗವಾಯಿಗಳು ಬರುತ್ತಿದ್ದರು. ಒಮ್ಮೆ, ಮೆಹಬೂಬ್‌ ಸಾಬ್‌ ಮತ್ತು ಮಲ್ಲಿಕಾರ್ಜುನ ಜಂಬಗಿ ಸಂಗೀತಾಭ್ಯಾಸ ಮಾಡುತ್ತಿದ್ದುದು ಗವಾಯಿಗಳ ಕಿವಿಗೆ ಬಿತ್ತು.

ಸ್ನಾನಕ್ಕೆ ಹೊರಟಿದ್ದ ಗವಾಯಿಗಳು, ಆ ಹುಡುಗರನ್ನು ಕರೆಸಿ ಎಂದರು. ಇವರಿಬ್ಬರ ತಲೆಯ ಮೇಲೆ ಹಸ್ತವಿಟ್ಟು ಆಶೀರ್ವದಿಸಿ, ‘ನಿಮ್ಮ ದನಿ ಚೆಂದ ಐತಿ, ಛಲೋ ಅಭ್ಯಾಸ ಮಾಡ್ರಿ...’ ಎಂದು ಹೇಳಿದರು. ಇದು ಈ ಹುಡುಗರಿಗೆ ಸಿಕ್ಕ ದೊಡ್ಡ ಗೌರವ ಮತ್ತು ಪುಣ್ಯ’ ಎಂದು ಆ ಸಂದರ್ಭವನ್ನು ಜೊಲ್ಲಾಪುರ ನೆನಪಿಸಿಕೊಂಡರು. ಜೀ ಕನ್ನಡ ವಾಹಿನಿಯವರು ಸರಿಗಮಪ ಕಾರ್ಯಕ್ರಮಕ್ಕಾಗಿ ಶಿವಮೊಗ್ಗದಲ್ಲಿ ಆಡಿಷನ್‌ ನಡೆಸುತ್ತಿದ್ದ ವಿಷಯವನ್ನು ಸ್ನೇಹಿತರಿಂದ ತಿಳಿದುಕೊಂಡ ಮೆಹಬೂಬ್‌, ಆಡಿಷನ್‌ನಲ್ಲಿ ಭಾಗವಹಿಸಿದರು.

ಅಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರದ ‘ನೋಡಲಾಗದೆ ದೇವ ನೋಡಲಾಗದೆ..’ ಭಕ್ತಿಗೀತೆಯನ್ನು ಹಾಡಿದರು. ಅದನ್ನು ಕೇಳಿದ ತೀರ್ಪುಗಾರರು ‘ನಿಮ್ಮ ಧ್ವನಿ ಚೆನ್ನಾಗಿದೆ. ಬೇರೆ ಪ್ರಕಾರದ ಹಾಡನ್ನು ಹಾಡಿ’ ಎಂದರು. ಆಗ, ‘ಬಬ್ರುವಾಹನ’ ಚಿತ್ರದ ‘ಆರಾಧಿಸುವೆ ಮದನಾರಿ..’ ಪ್ರಣಯ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ತೀರ್ಪುಗಾರರ ಮನಗೆದ್ದರು.

ಒಮ್ಮೆ ‘ಜನುಮ ನೀಡುತ್ತಾಳೆ ನಮ್ಮ ತಾಯಿ...’ ಗೀತೆಯನ್ನು ಹಾಡಿದಾಗ ಮೂಲ ಗಾಯಕ ಮತ್ತು ತೀರ್ಪುಗಾರರೂ ಆದ ರಾಜೇಶ್‌ ಕೃಷ್ಣನ್‌ ಕೂಡ ಮೆಹಬೂಬ್‌ ಅವರೊಂದಿಗೆ ಹಾಡಿ ಮೆಚ್ಚುಗೆ ಸೂಚಿಸಿದರು.

ರಾಜ್‌ಕುಮಾರ್‌ ಚಿತ್ರದ ‘ಬೊಂಬೆ ಹೇಳುತೈತೆ...’ ಹಾಡನ್ನು ಹಾಡಿದಾಗಂತೂ ‘ನಿಮ್ಮನ್ನು ಪಡೆದ ಈ ವೇದಿಕೆಯೇ ಪುಣ್ಯ’ ಎಂದು ಹೊಗಳಿದ ಗಾಯಕ ವಿಜಯಪ್ರಕಾಶ್‌ ಅವರು ವೇದಿಕೆ ಮೇಲೇರಿ ಮತ್ತೆ ಹಾಡನ್ನು ಒಟ್ಟಿಗೆ ಹಾಡಿ, ಬೆನ್ನು ತಟ್ಟಿದರು.

ಸಂಗೀತವೇ ಧರ್ಮ: ‘ಗದುಗಿನ ಪುಣ್ಯಾಶ್ರಮದಲ್ಲಿ ಕಲಿತ ನಾವೇ ಧನ್ಯರು. ಜಾತಿ, ಮತ, ಧರ್ಮ ಎಂಬ ಭೇದ ಭಾವ ಮಾಡದೆ ಎಲ್ಲರನ್ನೂ ತಮ್ಮ ಮಕ್ಕಳಂತೆ ಪೋಷಿಸುತ್ತಾರೆ. ಪುಟ್ಟರಾಜ ಗವಾಯಿಗಳ ಆರ್ಶಿರ್ವಾದದಿಂದ 13 ವರ್ಷಗಳಿಂದ ಸಂಗೀತ ಕಲಿಯುತ್ತಿದ್ದೇನೆ.

ಪ್ರಸ್ತುತ ಸಂಗೀತ ಶಿಕ್ಷಣದಲ್ಲಿ ದ್ವಿತೀಯ ಪಿಯು ಓದುತ್ತಿದ್ದೇನೆ. ಮುಂದೆ ಪದವಿ ಶಿಕ್ಷಣ ಪಡೆಯಬೇಕು. ಸಂಗೀತ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕೆಂಬ ಗುರಿಯಿದೆ. ಅಂಧತ್ವ ಸಾಧನೆಗೆ ಎಂದಿಗೂ ಅಡ್ಡಿಯಾಗಿಲ್ಲ...’ ಎಂಬುದು ಮೆಹಬೂಬ್‌  ಮನದಾಳದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.