ADVERTISEMENT

‘ಮ್ಯಾಷಪ್’ ಮಾರ್ದನಿ

ವಿಶಾಖ ಎನ್.
Published 19 ಏಪ್ರಿಲ್ 2017, 19:30 IST
Last Updated 19 ಏಪ್ರಿಲ್ 2017, 19:30 IST
ವಿದ್ಯಾ
ವಿದ್ಯಾ   

ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಮನಶ್ಶಾಸ್ತ್ರ ಪದವಿ ಪಡೆದ ವಿದ್ಯಾ, ಚೆನ್ನೈನ ಅಯ್ಯರ್ ಕುಟುಂಬದ ಕುಡಿ. ಅವರ ಯೂಟ್ಯೂಬ್ ಚಾನೆಲ್ ‘ವಿದ್ಯಾ ವೋಕ್ಸ್’ ಈಗ ಜನಪ್ರಿಯ. ಪಾಶ್ಚಿಮಾತ್ಯ ಹಾಡು ಹಾಗೂ ಭಾರತೀಯ ಸಿನಿಮಾ ಗೀತೆಯನ್ನು ಹದವರಿತು ಬೆರೆಸಿ, ಅವರು ವಿಡಿಯೊಗಳನ್ನು ರೆಕಾರ್ಡ್ ಮಾಡಿದ್ದಾರೆ. ಅವನ್ನು ಯೂಟ್ಯೂಬ್‌ಗೆ ಎರಡು ವರ್ಷಗಳಿಂದ ಅಪ್‌ಲೋಡ್ ಮಾಡುತ್ತಾ ಬಂದಿದ್ದು, ಕೋಟ್ಯಂತರ ಜನರು ನೋಡಿ ಮೆಚ್ಚಿದ್ದಾರೆ.

ಒಂದಿಷ್ಟು ಕೂದಲುಗಳಿಗೆ ನೀಲಿ ಬಣ್ಣ ಬಳಿದುಕೊಂಡ ವಿದ್ಯಾ, ಸಂಗೀತ ಮೆಚ್ಚುವ ಹೊಸ ತಲೆಮಾರಿನ ಜಾಲತಾಣಿಗರ ನೆಚ್ಚಿನ ಹೆಸರು.
ಎರಡು ಭಿನ್ನ ಗೀತೆಗಳನ್ನು ಒಟ್ಟಿಗೆ ಒಂದೇ ವಾದ್ಯ ಸಂಯೋಜನೆಗೆ ಒಗ್ಗಿಸಿ ಹಾಡಿ, ತಯಾರಿಸುವ ವಿಡಿಯೊಗಳಿಗೆ ‘ಮ್ಯಾಷಪ್’ ಎನ್ನುತ್ತಾರೆ.

ಕನ್ನಡದಲ್ಲಿಯೂ ಇಂಥ ವರಸೆ ಶುರುವಾಗಿದ್ದು, ಪುನೀತ್ ರಾಜ್‌ಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರದ ‘ಗೊಂಬೆ ಹೇಳುತೈತೆ’ ಹಾಡನ್ನು ಅನೇಕರು ಹಾಡಿ, ಅದರ ವಿಡಿಯೊಗಳನ್ನು ರೆಕಾರ್ಡ್ ಮಾಡಿ,ಯೂಟ್ಯೂಬ್‌ಗೆ‘ಅಪ್ಲೋಡ್’ ಮಾಡಿದ್ದಾರೆ.

ಗಣೇಶ್ ಕಾರಂತ್ ಎಂಬುವರು ಹಾಡಿರುವ ಗೀತೆಯನ್ನು ಯೂಟ್ಯೂಬ್‌ನಲ್ಲಿ ಮೂರೂವರೆ ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಎಂಟು ಸಾವಿರ ಜನ ಮೆಚ್ಚಿಕೊಂಡಿದ್ದಾರೆ. ‘ಗೊಂಬೆ ಹೇಳುತೈತೆ’ ಜೊತೆಗೆ, ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡನ್ನೂ ಅವರು ಬೆರೆಸಿದ್ದು, ಅದನ್ನು ‘ಮೆಡ್ಲಿ’ ಎಂದು ಕರೆದುಕೊಂಡಿದ್ದಾರೆ. 

ಜನಪ್ರಿಯ ಗೀತೆಗಳನ್ನು ಎಂಥವರೂ ಗುನುಗುವುದು ಸಹಜ. ಮಧುರವಾಗಿ ಹಾಡಬಲ್ಲವರು ಆಪ್ತೇಷ್ಟರ ಎದುರು ತಮ್ಮ ಪ್ರತಿಭೆ ಅನಾವರಣಗೊಳಿಸುತ್ತಿದ್ದುದನ್ನು ಕಂಡಿದ್ದೇವೆ. ಶ್ರುತಿ ಬದಲಿಸಿ ಹಾಡುವುದು, ಮೂಲ ಗಾಯನದಲ್ಲಿ ಇರುವ ತಪ್ಪುಗಳನ್ನು ತಿದ್ದಿ, ‘ಹೀಗಿರಬೇಕಿತ್ತು’ ಎಂದು ಪ್ರಸ್ತುತಪಡಿಸಿದವರನ್ನೂ ನೋಡಿದ್ದೇವೆ. ಕ್ರಮೇಣ ಈ ಧೋರಣೆಗೆ ತಾಂತ್ರಿಕ ಕಸುವು ಸಿಕ್ಕಿತು. ಅದರ ಪರಿಣಾಮವೇ ‘ರೀಮಿಕ್ಸ್’.

ಹಳೆಯ ಹಾಡುಗಳಿಗೆ ಒಂದಿಷ್ಟು ಬೀಟ್ಸ್–ಚಿಲ್ಸ್ ಸೇರಿಸಿ ಅವನ್ನೇ ಪ್ರತ್ಯೇಕವಾಗಿ ಮಾರುಕಟ್ಟೆಗೆ ಬಿಟ್ಟು, ಬಾಲಿವುಡ್‌ನ ಕೆಲವು ಸಂಗೀತಮೋಹಿಗಳು ಹಣವನ್ನೂ ಮಾಡಿದರು. ತಮ್ಮ ಹಾಡುಗಳನ್ನು ಕದ್ದು, ಅವಕ್ಕೆ ಹೊಸ ವಾದ್ಯಸಂಗೀತ ಸೇರಿಸಿದವರನ್ನು ಕೆಲವು ಆಡಿಯೊ ಕಂಪೆನಿಗಳು ನ್ಯಾಯಾಲಯಕ್ಕೆ ಎಳೆದ ಉದಾಹರಣೆಗಳೂ ಇವೆ. ಅದು ಹಕ್ಕುಸ್ವಾಮ್ಯದ ಪ್ರಶ್ನೆ.

ಹವ್ಯಾಸಕ್ಕೆಂದು ಹಾಡುವ ಯುವಜನತೆಗೆ ಯೂಟ್ಯೂಬ್ ದೊಡ್ಡ ವೇದಿಕೆಯಾಗಿ ಒದಗಿಬಂದಿರುವುದು ಗಮನಾರ್ಹ. ಮನೆಯ ಗೋಡೆಗಳ ನಡುವೆ ಹಾಡಿ ಖುಷಿಪಡುತ್ತಿದ್ದ ಯುವಜನತೆ ಈಗ ಸಂಗೀತ ಪ್ರೀತಿಯ ಪ್ರಯೋಗಗಳಿಗೆ ಯೂಟ್ಯೂಬ್ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದೆ.

ADVERTISEMENT

ಭಾಷೆ ಯಾವುದೇ ಇರಲಿ, ಜನಪ್ರಿಯ ಹಾಡುಗಳನ್ನು ಪೋಣಿಸಿ ಹಾಡುತ್ತಾ ‘ಮಿಸಳಭಾಜಿ’ ರೆಕಾರ್ಡ್ ಮಾಡುವ ಚಾಳಿ ಅನೇಕರಿಗಿದೆ.
ಈಗ ಝೀ ಕನ್ನಡ ವಾಹಿನಿಯ ‘ಸರೆಗಮಪ’ ಸ್ಪರ್ಧೆಯ ಮೂಲಕ ಮನೆಮಾತಾಗಿರುವ ಸಂಜಿತ್ ಹೆಗ್ಡೆ ಕೂಡ ಅನುಕರಿಸಿ ಹಾಡುವ ‘ಮೆಡ್ಲಿ’ ವಿಡಿಯೊಗಳನ್ನು ಯೂಟ್ಯೂಬ್‌ನಲ್ಲಿ ‘ಅಪ್ಲೋಡ್’ ಮಾಡಿದ್ದಾರೆ.

ಸ್ನೇಹಿತನೊಬ್ಬ ಬಾಯಿಯಲ್ಲೇ ಡ್ರಮ್ಸ್, ಚಿಲ್ಸ್ ದನಿಯನ್ನು ಮೂಡಿಸಿ, ಅದಕ್ಕೆ ಸಂಜಿತ್ ಹಾಡಿರುವ ವಿಡಿಯೊಗಳೂ ನೋಡಲು ಲಭ್ಯ. ಅವರ ಪ್ರತಿ ವಿಡಿಯೊವನ್ನು ಸರಾಸರಿ ಎರಡು ಲಕ್ಷ ಜನ ನೋಡಿದ್ದಾರೆ. ‘ಸರೆಗಮಪ’ ಸ್ಪರ್ಧೆಯಲ್ಲಿ ಇರುವ ತನಕ ಯೂಟ್ಯೂಬ್‌ನಲ್ಲಿ ಅವರ ವಿಡಿಯೊಗಳನ್ನು ನೋಡುವವರ ಸಂಖ್ಯೆ ಗಣನೀಯವಾಗಿ ಏರುವುದರಲ್ಲಿ ಅನುಮಾನವೇ ಇಲ್ಲ.

ಹಿಂದಿ ಚಿತ್ರಗಳ ಹಿನ್ನೆಲೆ ಗಾಯಕ ಅರಿಜಿತ್ ಸಿಂಗ್ ಹಾಡಿರುವ ಕೆಲವು ಗೀತೆಗಳನ್ನು ಸಂಜಿತ್ ಶ್ರುತಿ ಬದಲಿಸಿ ಹಾಡಿದ್ದಾರೆ. ಅವುಗಳಲ್ಲಿ ಬಹುತೇಕವನ್ನು ಏಳೆಂಟು ಸಾವಿರ ಜನ ಇಷ್ಟಪಟ್ಟಿದ್ದಾರೆ. ವೃತ್ತಿಪರವಾಗಿ ‘ಮ್ಯಾಷಪ್’ ಮಾಡುತ್ತಿರುವ ಕೆಲವು ಗಾಯಕ–ಗಾಯಕಿಯರು ಭಾರತದಲ್ಲಿ ಹಣವನ್ನೂ ಗಳಿಸಲಾರಂಭಿಸಿದ್ದಾರೆ. ವಿದ್ಯಾ ಅಂಥವರಲ್ಲಿ ಒಬ್ಬರು.

ಶಂಕರ್ ಟಕ್ಕರ್ ಎಂಬ ಇನ್ನೊಬ್ಬ ಸಂಗೀತಮೋಹಿಯ ಜತೆ ವಿದ್ಯಾ ತಮ್ಮ ‘ಮ್ಯಾಷಪ್ ಯಾತ್ರೆ’ ಮುಂದುವರಿಸಿದ್ದಾರೆ. ಎಲ್ಲಿ ಗೌಲ್ಡಿಂಗ್ಸ್ ಅವರ ‘ಲವ್ ಮಿ ಲೈಕ್ ಯೂ ಡೂ’ ಇಂಗ್ಲಿಷ್ ಗೀತೆ ಹಾಗೂ ಎ.ಆರ್. ರೆಹಮಾನ್ ಸಂಯೋಜನೆಯ ‘ಹೊಸ್ಸಾನಾ’ ತಮಿಳು ಗೀತೆಯನ್ನು ಹಾಡಿ, ಅದರ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ‘ಅಪ್ಲೋಡ್’ ಮಾಡಿದ ಮೇಲೆ ವಿದ್ಯಾ ಜನಪ್ರಿಯರಾದರು. ‘ಚಯ್ಯ ಚಯ್ಯ’ ಹಿಂದಿ ಹಾಡು ಹಾಗೂ ಮೈಕಲ್ ಜಾಕ್ಸನ್‌ನ ‘ಡೋಂಟ್ ಸ್ಟಾಪ್’ ಗೀತೆಯನ್ನು ಸೇರಿಸಿ ಅವರು ಮಾಡಿದ ‘ಮ್ಯಾಷಪ್’ ನೋಡಿ ನಟ ಶಾರುಖ್ ಖಾನ್ ಕೂಡ ಫೇಸ್್ಬುಕ್‌ನಲ್ಲಿ ಪ್ರತಿಕ್ರಿಯಿಸಿದರು.

ವಿದ್ಯಾ ಕಾಲಕ್ರಮೇಣ ‘ಮ್ಯಾಷಪ್’ ಜೊತೆಗೆ ತಮ್ಮ ಖಾಸಗಿ ಬದುಕಿನ ವಿವರಗಳನ್ನೂ ಯೂಟ್ಯೂಬ್‌ನಲ್ಲಿ ದಾಖಲಿಸಿದರು. ಅವರ ವಿಡಿಯೊಗಳನ್ನು ಏನಿಲ್ಲವೆಂದರೂ 50 ಲಕ್ಷ ಜನ ನೋಡುತ್ತಾರೆ. ಎಲ್ಲಾ ಅಭಿಮಾನಿಗಳ ಸಂಖ್ಯೆ ಸೇರಿಸಿದರೆ ಎರಡು ಕೋಟಿಯನ್ನು ಮೀರುತ್ತದೆ.

ಅಮೆರಿಕದಲ್ಲಿ ನೆಲೆಸಿದ್ದ ವಿದ್ಯಾ ಕರ್ನಾಟಕ ಸಂಗೀತ ಕಲಿತವರು. ಇಲ್ಲಿನ ಸಂಗೀತ ಬೇರು. ಅಲ್ಲಿನದ್ದು ಚಿಗುರು. ಎರಡನ್ನೂ ಮೇಳೈಸಿದ ಅವರ ಜನಪ್ರಿಯತೆ ಕೆಲವು ಕಛೇರಿಗಳನ್ನು ಆಯೋಜಿಸುವ ಮಟ್ಟಕ್ಕೂ ಹೋಯಿತು.

ತಮ್ಮದೇ ಒಂದು ಸ್ವಂತ ಹಾಡಿನ ವಿಡಿಯೊ ಕೂಡ ಸಿದ್ಧಪಡಿಸಿದರು. ಗಂಟಲು ಹಾಳಾಗಿ ಕಛೇರಿಗೆ ಹೋಗಲು ಸಾಧ್ಯವಾಗದ್ದನ್ನೂ ಅವರು ವಿಡಿಯೊ ಮಾಡಿ ‘ಅಪ್ಲೋಡ್’ ಮಾಡಿದರು. ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದೂ ಆ ವಿಡಿಯೊ ಮೂಲಕವೇ.

ಬೇರೆಯವರ ಸಂಯೋಜನೆಯ ಹಾಡುಗಳನ್ನು ಅನುಮತಿಯಿಲ್ಲದೇ ಹಾಡುವುದು ತಪ್ಪಲ್ಲವೇ ಎಂಬ ಪ್ರಶ್ನೆಗೆ ವಿದ್ಯಾ ಕೊಡುವ ಉತ್ತರ ಹೀಗಿದೆ: ‘ಅಮೆರಿಕದಲ್ಲಿದ್ದಾಗ ನನ್ನನ್ನು ಅಸ್ಮಿತೆಯ ಪ್ರಶ್ನೆ ಕಾಡಿತು. ಚಿಕ್ಕಂದಿನಲ್ಲೇ ಕರ್ನಾಟಕ ಸಂಗೀತ ಕಲಿತಿದ್ದೆ. ಅದು ನನ್ನ ಬೇರು. ಅಲ್ಲಿ ಪಾಶ್ಚಾತ್ಯ ಗೀತೆಗಳನ್ನು ಕೇಳುತ್ತಿದ್ದೆ. ಎಷ್ಟೋ ಹಾಡುಗಳು ನನ್ನ ನೆಲದ ಇನ್ಯಾವುದೋ ಗೀತೆಗಳನ್ನು ನೆನಪಿಸುತ್ತಿದ್ದವು.

ಅವುಗಳನ್ನು ಸೇರಿಸಿ ಹಾಡಿದರೆ ಚೆನ್ನಾಗಿರುತ್ತಲ್ಲವೇ ಎಂದು ಈ ಪ್ರಯತ್ನಕ್ಕೆ ಕೈಹಾಕಿದೆ. ಸಂಭಾವನೆಯ ವಿಷಯ ಬಂದಾಗ ನಾವು ಮೂಲ ಸಂಗೀತ ಸಂಯೋಜಕರು ಅಥವಾ ಆಡಿಯೊ ಸಂಸ್ಥೆಯ ಅನುಮತಿಯನ್ನು ಕೇಳಲೇಬೇಕು. ನಮಗೆ ಆ ಪರಿಜ್ಞಾನವಿದೆ. ಅಮೆರಿಕದಲ್ಲಿಯೂ ಈ ಕುರಿತು ಸಾಕಷ್ಟು ಚರ್ಚೆಗಳಾದವು.

ಮ್ಯಾಷಪ್‌ಗೆ ಹಾಡು ಬಳಸುವವರು ಆಯಾ ಗೀತೆಯ ಹಕ್ಕುಸ್ವಾಮ್ಯ ಪಡೆದವರಿಗೆ ಹಾಡೊಂದಕ್ಕೆ 0.9 ಡಾಲರ್ (ಸುಮಾರು 60 ರೂಪಾಯಿ) ಕೊಟ್ಟರೆ ಸಾಕಿತ್ತು. ಬರಬರುತ್ತಾ ಅಂಥ ಪ್ರಯೋಗಗಳನ್ನು ಖಂಡಿಸುವವರ ಸಂಖ್ಯೆ ಹೆಚ್ಚಾದ್ದರಿಂದ, ಅಲ್ಲಿ ಮ್ಯಾಷಪ್ ಹುಚ್ಚು ಕಡಿಮೆಯಾಯಿತು’.

ವಿದ್ಯಾ ಅವರ ವಾರಗೆಯ ಅನೇಕ ಯುವಕರು ಯೂಟ್ಯೂಬ್ ವೇದಿಕೆ ಮೇಲೆ ಗಾನಹವ್ಯಾಸದ ದರ್ಶನ ಮಾಡಿಸುತ್ತಿದ್ದಾರೆ. ಅಹಮದಾಬಾದ್‌ನ ದರ್ಶಿತ್ ನಾಯಕ್, ಸನಮ್ ಪುರಿ, ಪಿಯಾನೊ ವಾದಕ ಆಕಾಶ್ ಗಾಂಧಿ, ಹೈದರಾಬಾದ್ ಐಐಟಿ ವಿದ್ಯಾರ್ಥಿನಿಯಾಗಿದ್ದ ಶರ್ಲಿ ಸೇಟಿಯಾ, ಎಂಟಿವಿಯಲ್ಲಿ ‘ಗುಮ್ರಾಹ್’ ತರಹದ ಷೋನಲ್ಲಿ ಕಾಣಿಸಿಕೊಂಡ ಆವನಿ ಜೋಷಿ, ‘ಮೈ ತೇನು ಸಮಝಾವಾ ಕಿ’ ಹಿಂದಿ ಹಾಡಿನ ಮೂಲಕ ಮನಸೂರೆಗೊಂಡ ಶ್ರದ್ಧಾ ಶರ್ಮ, ಅಮ್ಮನ ಪ್ರೀತಿಯ ಕಾರಣಕ್ಕೇ ಹಾಡುಗಳ ವಿಡಿಯೊ ಮಾಡತೊಡಗಿದ ಅಮಿಕಾ ಶೇಲ್ – ಹೆಚ್ಚು ಸದ್ದು ಮಾಡಿದ ‘ಮ್ಯಾಷಪ್’ ಕಂಠಗಳಿವು. 

ತಮ್ಮ ಸಂಯೋಜನೆಯ ಹಾಡುಗಳನ್ನು ದೊಡ್ಡ ಸಂಭಾವನೆ ಪಡೆದು ಕಛೇರಿಗಳಲ್ಲಿ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಡುತ್ತಿರುವುದನ್ನು ಆಕ್ಷೇಪಿಸಿ ಸಂಗೀತ ಸಂಯೋಜಕ ಇಳಯರಾಜ ವಕೀಲರಿಂದ ನೋಟಿಸ್ ಕಳುಹಿಸಿದ ಪ್ರಕರಣ ಇನ್ನೂ ಹಸಿರಾಗಿದೆ. ಇದೇ ರೀತಿ ಕೆಲವು ‘ಮ್ಯಾಷಪ್’ ಗಾಯಕರನ್ನೂ ಹಕ್ಕುಸ್ವಾಮ್ಯದ ಹಿನ್ನೆಲೆಯ ತಕರಾರುಗಳು ಕಾಡಿರುವುದು ಇದೆ.

ಇನ್ನು ಕೆಲವರು ಸಂಯೋಜಕರಿಂದ ಅಧಿಕೃತವಾಗಿ ಅನುಮತಿ ಪಡೆದು, ಒಪ್ಪಂದ ಮಾಡಿಕೊಂಡೇ ‘ಮ್ಯಾಷಪ್’ಗಳನ್ನು ಯೂಟ್ಯೂಬ್‌ಗೆ ‘ಅಪ್ಲೋಡ್’ಮಾಡಿದ್ದಾರೆ. ಅಂಥವರಿಗೆ ‘ಮ್ಯಾಷಪ್’ ಹಣ ತರುವ ಮಾರುಕಟ್ಟೆ ಒದಗಿಸಿರುವುದು ವಿಶೇಷ. ವಿದ್ಯಾ ಕೂಡ ಅಂಥವರಲ್ಲಿ ಒಬ್ಬರು.

ಯೂಟ್ಯೂಬ್ ವೇದಿಕೆ ಅವರಿಗೆ ಚಿಮ್ಮುಹಲಗೆ. ಕಛೇರಿಗಳನ್ನು ಆಯೋಜಿಸುವ ದಾರಿ ತೋರಿಸಿಕೊಟ್ಟಿದ್ದೂ ಅದೇ. ಕೆಲವು ದೇಶಗಳ ಅಭಿಮಾನಿಗಳು ಕಛೇರಿ ನಡೆಸಿಕೊಡುವಂತೆ ಅವರಿಗೆ ಆಮಂತ್ರಣ ನೀಡಿರುವುದೇ ಇದಕ್ಕೆ ಸಾಕ್ಷಿ.

ರೀಮಿಕ್ಸ್ ಸಂಸ್ಕೃತಿ ಈಗ ಹಳತು. ಕೆಲವು ಪಬ್ ಹಾಗೂ ಬಾರ್‌ಗಳಲ್ಲಿ ಸಂಗೀತ ಕೇಳಿಸುವ ‘ಡಿಜೆ’ಗಳಿಗೂ ‘ಮ್ಯಾಷಪ್’ಗಳು ಸಿದ್ಧ ಟಾನಿಕ್ ಆಗಿ ಲಭ್ಯವಾಗುತ್ತಿವೆ. ಯಾವುದು ಟ್ರೆಂಡ್, ಯಾವುದು ಸದ್ಯದ ಮಾಧುರ್ಯ, ಯಾವ ಹಾಡು ಜನ ಕುಣಿಯಲು ತಕ್ಕಂತೆ ಇದೆ ಎನ್ನುವುದಕ್ಕೆಲ್ಲ ಡಿಜೆಗಳಿಗೂ ಇವು ದಾರಿದೀಪವಾಗಿವೆ.

ಬಾಲಿವುಡ್‌ನ ‘ಅಧಿಕೃತ ಡಿಜೆ’ ಎಂದೇ ಹೆಸರಾದ ಚೇತಸ್ ಕೂಡ ‘ಮ್ಯಾಷಪ್’ ಹಾಗೂ ‘ಮೆಡ್ಲಿ’ ಮೋಹಿ. ಎಷ್ಟೋ ಸಿನಿಮಾಗಳ ಆಡಿಯೊ ಬಿಡುಗಡೆ ಸಮಾರಂಭಗಳನ್ನು ಕಳೆಗಟ್ಟಿಸಲು ಚೇತಸ್ ಪ್ರತಿಭೆಯನ್ನು ಬಳಸಿಕೊಳ್ಳುವ ನಿರ್ಮಾಪಕರಿದ್ದಾರೆ.

ಯಾರದ್ದೋ ಮಟ್ಟು. ಗಾಯಕ–ಗಾಯಕಿ ಇನ್ಯಾರೋ. ವಾದ್ಯವೃಂದದಲ್ಲಿ ಇದ್ದವರನ್ನು ಯಾರು ಬಲ್ಲರು? ಆದರೆ, ಹಾಡೊಂದು ಸೆಳೆದರೆ, ಅದರ ಪುನರ್‌ಸೃಷ್ಟಿ ಸಹಜ. ಅದರ ‘ದರ್ಶನ’ಕ್ಕೂ ದೊಡ್ಡದೊಂದು ವೇದಿಕೆ ನಿರ್ಮಾಣವಾಗಿರುವುದು, ಹಣ ತರುವ ದಾರಿಯೂ ಅದಾಗಿರುವುದು ಆಸಕ್ತಿಕರ. ಅಯ್ಯರ್ ಮನೆಯ ಹುಡುಗಿ ವಿದ್ಯಾ ಹಾಡಷ್ಟೇ ಅಲ್ಲ, ಅವರ ಮೂಗುತಿ, ತೊಡುವ ವಸ್ತ್ರಗಳು ಕೂಡ ಸುದ್ದಿಯಾಗುತ್ತಿವೆ!

*****
ವಿದ್ಯಾ ‘ಮ್ಯಾಷಪ್’ ವಿಡಿಯೊಗಳಲ್ಲಿ ಇಂಗ್ಲಿಷ್‌ನ ‘ಬಿ ಫ್ರೀ’ ಹಾಗೂ ತಮಿಳಿನ ‘ಪಳಿವಾಳು ಭದ್ರವಟಕಂ’ ಎರಡನ್ನೂ ಸೇರಿಸಿದ ಗೀತೆ ಅತಿ ಹೆಚ್ಚು ಜನಪ್ರಿಯ. ಮೂರೂಮುಕ್ಕಾಲು ನಿಮಿಷದ ಈ ವಿಡಿಯೊದಲ್ಲಿ ವಿದ್ಯಾ ಹಾಗೂ ಅವರ ಸಹೋದರಿ ಇಬ್ಬರೂ ಹಾಡಿದ್ದಾರೆ. 

ಸಿನಿಮಾ ಹಾಡಿನ ಚಿತ್ರೀಕರಣದಷ್ಟೇ ವೃತ್ತಿಪರತೆಯಿಂದ ಚಿತ್ರೀಕರಣ ಮಾಡಿರುವುದು ವಿದ್ಯಾಗೆ ನಾಯಕಿಯ ಪ್ರಭಾವಳಿಯನ್ನು ದಕ್ಕಿಸಿಕೊಟ್ಟಿದೆ. ಈ ವಿಡಿಯೊವನ್ನು ಒಂದು ಕೋಟಿ ಜನ ವೀಕ್ಷಿಸಿದ್ದು, ಒಂದೂವರೆ ಲಕ್ಷ ಸಂಗೀತಾಭಿಮಾನಿಗಳು ಇಷ್ಟಪಟ್ಟಿದ್ದಾರೆ.

ವಿದ್ಯಾ ಅವರಂತೆ ಹಾಡುಗಳಿಗೆ ಸಿನಿಮಾ ಸ್ಪರ್ಶ ಕೊಡಲಾಗದ ದರ್ಶಿತ್ ನಾಯಕ್ ಮೈಕ್‌ನ ಎದುರು ನಿಂತು ಹಾಡಿಯೇ ಬಹುತೇಕ ವಿಡಿಯೊಗಳನ್ನು ಅಪ್್ಲೋಡ್ ಮಾಡಿದ್ದಾರೆ. ‘ಬುಲೆಯಾ’ ಹಿಂದಿ ಹಾಡು ಹಾಗೂ ‘ಯೇ ದಿಲ್ ಹೈ ಮುಷ್ಕಿಲ್’ ಚಿತ್ರದ ಗೀತೆಗಳ ಮಿಸಳಭಾಜಿ ಗೀತೆಯನ್ನು ಒಂದೂವರೆ ಲಕ್ಷ ಜನ ಮೆಚ್ಚಿದ್ದಾರೆ.

ಐಐಟಿ ವಿದ್ಯಾರ್ಥಿನಿಯಾಗಿದ್ದ ಕಾರಣಕ್ಕೆ ಶರ್ಲಿ ಸೇಟಿಯಾ ‘ಮ್ಯಾಷಪ್’ ಜನಪ್ರಿಯತೆಯ ಗ್ರಾಫ್ ಎತ್ತರದಲ್ಲಿದೆ. ‘ಬೋಲ್ ದೋ ನಾ ಝರಾ’ ಗೀತೆಯನ್ನು ಅವರು ತಮ್ಮದಾಗಿಸಿಕೊಂಡು ಹಾಡಿರುವ ವಿಡಿಯೊವನ್ನು ಒಂದೂವರೆ ಕೋಟಿ ಜನ ವೀಕ್ಷಿಸಿದ್ದಾರೆ.

ಅಂತರ್‌ದೀಪ್ ಹಜಾರಿಕಾ ಕೀಬೋರ್ಡ್ ನುಡಿಸಿ, ಸಿದ್ಧ ಟ್ಯೂನ್‌ಗಳಿಗೆ ಬೇರೆಯದೇ ಶ್ರುತಿ ಹಾಗೂ ವಾದ್ಯ ಸಂಯೋಜನೆ ಒದಗಿಸಿಕೊಟ್ಟಿದ್ದಾರೆ. ಈ ವಿಡಿಯೊಗಳಲ್ಲಿ ಹಾಡಿನ ಜೊತೆಗೆ ಗಾಯಕಿಯ ಸುಂದರ ವದನ ಕೋರೈಸುವುದರಿಂದ ಸಹಜವಾಗಿಯೇ ಜನಪ್ರಿಯವಾಗಿರಲಿಕ್ಕೂ ಸಾಕು.

ಎಂಟಿವಿ ಮೂಲಕ ಪರಿಚಿತ ಮುಖವೇ ಆಗಿರುವ ಆವನಿ ಜೋಶಿ ವಿಡಿಯೊಗಳಿಗೂ ಅಭಿಮಾನಿ ವೃಂದ ದೊಡ್ಡದಿದೆ. ನೀತಾಶಾ, ಸುಂದರ ಮುಖದಿಂದ ಮನೆಮಾತಾಗಿರುವ ‘ಮ್ಯಾಷಪ್’ ತಾರೆ. ಪಂಜಾಬಿ ಹಾಗೂ ಹಿಂದಿ ಹಾಡುಗಳನ್ನು ಹದವರಿತಂತೆ ಬೆರೆಸಿ, ಗಿಟಾರ್ ಕೂಡ ನುಡಿಸುತ್ತಾ ಹಾಡುವ ಸ್ಫುರದ್ರೂಪಿ ಗಾಯಕ ಸನಮ್ ಪುರಿ ವಿಡಿಯೊಗಳಲ್ಲಿ ‘ಹಸೀ ತೊ ಫಸಿ’ ಚಿತ್ರಗೀತೆ ಹೆಚ್ಚು ಜನಪ್ರಿಯವಾಗಿರುವ ಮ್ಯಾಷಪ್. ಇದನ್ನು ಒಂದೂಕಾಲು ಕೋಟಿ ಸಂಗೀತಪ್ರೇಮಿಗಳು ವೀಕ್ಷಿಸಿದ್ದಾರೆ.

ಆಕಾಶ್ ಗಾಂಧಿ ಗಾಯಕರಲ್ಲ. ಅವರ ಪಿಯಾನೊ ಸಾಥ್‌ಗೆ ಅನೇಕ ಗಾಯಕ–ಗಾಯಕಿಯರು ಹಾಡುತ್ತಾರೆ. ಆ ವಿಡಿಯೊಗಳನ್ನು ಏನಿಲ್ಲವೆಂದರೂ ಸರಾಸರಿ 60 ಲಕ್ಷ ಜನ ನೋಡುತ್ತಾರೆ. ತಮ್ಮ ಕಲಿಕೆಯನ್ನು ಸಾಣೆಗೆ ಒಡ್ಡಿಕೊಳ್ಳಲು ‘ಮ್ಯಾಷಪ್’ ಒಂದು ದಾರಿ ಎಂದೇ ಆಕಾಶ್ ಭಾವಿಸಿದ್ದಾರೆ.
ಕನ್ನಡದಲ್ಲಿ ಈಗೀಗ ‘ಮ್ಯಾಷಪ್’ ವಿಡಿಯೊಗಳು ವ್ಯಾಪಕವಾಗುತ್ತಿವೆ.

‘ಕಿರಿಕ್ ಪಾರ್ಟಿ’ ಚಿತ್ರದ ‘ಬೆಳಗೆದ್ದು ಯಾರ ಮುಖವ ನಾನು ನೋಡಿದೆ’ ಹಾಡನ್ನು ಇಟ್ಟುಕೊಂಡು ಅನೇಕ ಯುವಕ–ಯುವತಿಯರು ಯೂಟ್ಯೂಬ್ ವಿಡಿಯೊಗಳನ್ನು ಸೃಷ್ಟಿಸಿದ್ದಾರೆ. ಅದು ಬಿಟ್ಟರೆ ‘ರಾಜಕುಮಾರ’ ಸಿನಿಮಾದ ‘ಬೊಂಬೆ ಹೇಳುತೈತೆ’ ಹಾಡನ್ನು ಅನುಕರಿಸಿ ಹಾಡುತ್ತಿರುವವರ ಸಂಖ್ಯೆ ದೊಡ್ಡದಿದೆ. ಗಣೇಶ್ ಕಾರಂತ್ ಈ ಹಾಡು ಹಾಗೂ ‘ಕಸ್ತೂರಿ ನಿವಾಸ’ ಚಿತ್ರದ ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡನ್ನು ಬೆರೆಸಿ ‘ಮ್ಯಾಷಪ್’ ಮಾಡಿದ್ದಾರೆ.

ಹಾಡುವ ಹವ್ಯಾಸವನ್ನು ಹೀಗೆ ವಿಡಿಯೊ ಮೂಲಕ ಹಂಚಿಕೊಂಡು ಸುಖಿಸುತ್ತಿರುವ, ವ್ಯೋಮ ಪ್ರಪಂಚದಲ್ಲಿ ತಮ್ಮದೇ ಬಳಗವನ್ನು ಕಟ್ಟಿಕೊಳ್ಳುತ್ತಿರುವ ಯುವಜನತೆಯ ಆತ್ಮವಿಶ್ವಾಸ ಕಂಡರೆ ಖುಷಿಯಾಗದೇ ಇರದು.

ಅನೇಕತೆಯಲ್ಲಿ ಏಕತೆ
ಯಾರದ್ದೋ ಹಾಡನ್ನು ಅನುಕರಿಸುವವರ ಪರಂಪರೆಯೂ ಪ್ರಚಾರಕ್ಕೆ ಅಗತ್ಯ ಎಂದು ಹಿಂದೊಮ್ಮೆ ಸಂಗೀತ ನಿರ್ದೇಶಕ ಕೆ. ಕಲ್ಯಾಣ್ ಹೇಳಿದ್ದರು. ಅವರಿಗೆ ‘ಮ್ಯಾಷಪ್’ ಬಗೆಗೆ ಅಷ್ಟೇನೂ ತಿಳಿದಿಲ್ಲ. ಈ ತಲೆಮಾರಿನ ಮಟ್ಟುಗಾರ ಅನೂಪ್ ಸೀಳಿನ್ ಕೂಡ ಇಂಥದೊಂದು ವಿದ್ಯಮಾನವನ್ನು ಬೆರಗಿನಿಂದಲೇ ಕೇಳಿಸಿಕೊಂಡರು.

ಅವರಿಗೂ ಯಾವ ‘ಮ್ಯಾಷಪ್’ ಗಾಯಕ–ಗಾಯಕಿಯರ ಹೆಸರೂ ನೆನಪಿಲ್ಲ. ಆದರೆ, ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತರಾದ ರಿಕಿ ಕೇಜ್ ಅವರು ‘ಮ್ಯಾಷಪ್’ ವಿಡಿಯೊಗಳನ್ನು ನೋಡಿದ್ದಾರೆ.

‘ಸಂಗೀತದ ಮೂಲ ಸಂಗತಿಗಳಿಗೆ ಚ್ಯುತಿ ಇಲ್ಲದಂತೆ ಮ್ಯಾಷಪ್ ಮಾಡಿದರೆ ಅದು ಸಹನೀಯ. ಅನೇಕತೆಯಲ್ಲಿ ಏಕತೆಯನ್ನು ಕಾಣಿಸುವ ತಂತ್ರಗಾರಿಕೆಯಾಗಿ ಇದು ನನಗೆ ಇಷ್ಟ. ಯಾವುದೇ ದೇಶದ ಒಂದು ಹಾಡು ಮತ್ತ್ಯಾವುದೋ ದೇಶದ ಇನ್ನೊಂದನ್ನು ನಿರ್ದಿಷ್ಟ ಬಿಂದುವಿನಲ್ಲಿ ಸಂಧಿಸುವ ಕ್ರಿಯೆಗೆ ಇದು ಕನ್ನಡಿ ಹಿಡಿಯುತ್ತದೆ. ಆದರೆ, ಸೃಜನಶೀಲತೆ ಇಲ್ಲಿ ಶೂನ್ಯ.

ನನಗೆ ಮ್ಯಾಷಪ್ ಗಾಯಕ–ಗಾಯಕಿಯರ ಹೆಸರುಗಳು ನೆನಪಿನಲ್ಲಿ ಉಳಿಯುವುದೇ ಇಲ್ಲ. ಯಾವುದೋ ರೈಲಿನಲ್ಲಿ ಸಿಕ್ಕು, ಇಳಿಯುವ ಪ್ರಯಾಣಿಕರಂತೆ ಅವರೆಲ್ಲ ಭಾಸವಾಗುತ್ತಾರೆ. ಕಾಣಿಸಿಕೊಳ್ಳುತ್ತಾರೆ, ಮರೆಯಾಗಿಬಿಡುತ್ತಾರೆ. ಸಂಗೀತದಲ್ಲಿ ಸ್ವಂತಿಕೆಗೇ ಬೆಲೆ.

ಹಾಡುಗಳನ್ನು ಕಟ್ಟುವವರಾಗಬೇಕು. ಆಗ ಸಂಗೀತಗಾರರಾಗಿ, ಗಾಯಕ-ಗಾಯಕಿಯರಾಗಿ ಅವರು ಉಳಿಯುತ್ತಾರೆ. ಯಾರದ್ದೋ ಹಾಡನ್ನು ಸುಮ್ಮನೆ ಕದ್ದು ಹಾಡಿ ದುಡ್ಡು ಮಾಡುವುದೂ ಸರಿಯಲ್ಲ. ಅನುಮತಿ ಪಡೆದು ವ್ಯವಸ್ಥಿತವಾಗಿಯೇ ಹಾಡಬೇಕು’ ಎಂದು ರಿಕಿ ಕೇಜ್ ಪ್ರತಿಕ್ರಿಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.