ADVERTISEMENT

ರಸ್ತೆಗೆ ಇಳಿಯಲು ನಾವ್‌ ರೆಡಿ

ಬಸೀರ ಅಹ್ಮದ್ ನಗಾರಿ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST

2014ರ ಏಪ್ರಿಲ್‌ ತಿಂಗಳು. ವಾಹನಗಳ ಮಾರಾಟ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಮಧ್ಯಾಂತರ ಬಜೆಟ್‌ನಲ್ಲಿ ವಾಹನಗಳ ಅಬಕಾರಿ ಸುಂಕ ಇಳಿಕೆ ಕ್ರಮವೂ ಫಲ ನೀಡಿರಲಿಲ್ಲ! ಆದರೆ ಮೇ ತಿಂಗಳಲ್ಲಿ ಅಲ್ಪ ಚೇತರಿಕೆ ಕಂಡಿತು. ಇದೀಗ ಜೂನ್‌ನಲ್ಲಿ ಮತ್ತೆ ಒಟ್ಟಾರೆ ವಾಹನಗಳ ಮಾರಾಟ 12.15 ರಷ್ಟು ಏರಿಕೆ ಕಂಡಿದೆ. ಇದರಲ್ಲಿ ಪ್ರಯಾಣಿಕ ವಾಹನಗಳದ್ದು ಸಿಂಹಪಾಲು. ಕಳೆದ ವರ್ಷಕ್ಕೆ ಹೋಲಿಸಿದರೆ ಜೂನ್‌ ತಿಂಗಳಲ್ಲಿ ಪ್ರಯಾಣಿಕ ಕಾರುಗಳ ಮಾರಾಟ ದರ ಶೇಕಡ 14.76 ರಷ್ಟು ಹೆಚ್ಚಿದೆ.

ಕಾರು ಖರೀದಿಸುವ ಜನರಿಗೆ ಬಜೆಟ್‌ ಮುಗಿಯಲಿ, ಅಬಕಾರಿ ಸುಂಕ ನೋಡೋಣ, ಹಬ್ಬಕ್ಕೆ ಕೊಳ್ಳೋಣ,.. ಹೀಗೆ ಒಂದೊಂದು ಯೋಜನೆ, ಲೆಕ್ಕಾಚಾರ. ಇದೀಗ ಬಜೆಟ್‌ ಮುಗಿಯಿತು. ಅಬಕಾರಿ ಸುಂಕ ಕಡಿತವನ್ನು ಸರ್ಕಾರ ಡಿಸೆಂಬರ್‌ 31ರವರೆಗೆ ವಿಸ್ತರಿಸಿದ್ದೂ ಆಯಿತು. ಹಬ್ಬಗಳ ಸರಣಿಯೂ ಮುಂದಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಕಾರುಗಳ ಬಗ್ಗೆ ಒಂದಿಷ್ಟು ಮಾಹಿತಿ...

ಟಾಟಾ ಬೋಲ್ಟ್‌
ಟಾಟಾ ಮೋಟಾರ್ಸ್‌ನ ಬಹು ನಿರೀಕ್ಷಿತ ಮಾದರಿಗಳಲ್ಲಿ ಇದೂ ಒಂದು. (ಇನ್ನೊಂದು ಟಾಟಾ ಝೆಸ್ಟ್‌. ಈ ಬಗ್ಗೆ ಕಳೆದ ವಾರ ಪ್ರಜಾವಾಣಿ ‘ಟೆಸ್ಟ್‌ ಡ್ರೈವ್‌’ ವರದಿ ಪ್ರಕಟಿಸಿತ್ತು).ಇದು ಹ್ಯಾಚ್‌ಬ್ಯಾಕ್‌ ಕಾರು. ಹಳೆಯ ಇಂಡಿಕಾದ ಅಲ್ಪ ಅಂಶಗಳಿವೆಯಾದರೂ ಸಂಪೂರ್ಣ ಹೊಸ ವಿನ್ಯಾಸ ಮೇಳೈಸಿಕೊಂಡಿದೆ. ಹೊಸ ಹೆಡ್‌ಲೈಟ್ಸ್‌, ಬಂಪರ್‌, ಗ್ರಿಲ್‌ಗಳೊಂದಿಗೆ ಕಾರಿನ ಮುಂಭಾಗ ಆಕರ್ಷಿಸುತ್ತದೆ. ‘ಝೆಸ್ಟ್‌’ನಂತೆಯೇ ಬ್ಲೂಟೂತ್‌ ಹಾಗೂ ಇತರ ಸೌಲಭ್ಯಗಳುಳ್ಳ ಇನ್ಫೊಟೇನ್ಮೆಂಟ್‌ ಟಚ್‌ಸ್ಕ್ರೀನ್‌ ಇದೆ.

ಉಭಯ ಡೀಸೆಲ್‌ (1.3 ಲೀಟರ್‌ ಡೀಸೆಲ್ ಎಂಜಿನ್‌) ಹಾಗೂ ಪೆಟ್ರೋಲ್‌ (1.2 ಲೀಟರ್‌ ಪೆಟ್ರೋಲ್‌ ಎಂಜಿನ್) ಮಾದರಿಗಳಲ್ಲಿ ಸಿಗಲಿದೆ. ಎಲ್ಲಾ ಅಂದುಕೊಂಡಂತೆ ಆದರೆ ಹಬ್ಬದ ವೇಳೆಗೆ ಮಾರುಕಟ್ಟೆ ಪ್ರವೇಶಿಸಲಿದೆ. ಅಂದಾಜು ಬೆಲೆ 5ರಿಂದ 6.5 ಲಕ್ಷ ರೂಪಾಯಿ (ಎಕ್ಸ್‌ ಷೋರೂಂ ).

ಮರ್ಸಿಡಿಸ್‌ ಬೆಂಜ್‌ ಜಿಎಲ್‌ಎ
ದೇಶದಲ್ಲಿ ಅತಿ ವೇಗದಲ್ಲಿ ಬೆಳೆಯುತ್ತಿರುವ ಎಸ್‌ಯುವಿ ವಾಹನಗಳ ಪಟ್ಟಿಗೆ ಶೀಘ್ರವೇ ಮತ್ತೊಂದು ಸೇರ್ಪಡೆಯಾಗಲಿದೆ. ಅದುವೇ ‘ಮರ್ಸಿಡಿಸ್‌ ಬೆಂಜ್‌ ಜಿಎಲ್‌ಎ’.  ಕಾಂಪ್ಯಾಕ್ಟ್‌ ಐಷಾರಾಮಿ ಎಸ್‌ಯುವಿ  ವಿಭಾಗದಲ್ಲಿ ಈ ಕಾರು ಸದ್ದು ಮಾಡುವುದು ಬಹುತೇಕ ಖಚಿತ. ಆಡಿ ಕ್ಯೂ3 ಹಾಗೂ ಬಿಎಂಡಬ್ಲ್ಯೂ ಎಕ್ಸ್‌1 ಮಾದರಿಗೆ ಪೈಪೋಟಿ ಒಡ್ಡಬಲ್ಲದು. ಪೆಟ್ರೋಲ್‌ ಹಾಗೂ ಡೀಸೆಲ್‌ ಮಾದರಿಗಳಲ್ಲಿ ಲಭ್ಯ.

ಪೆಟ್ರೋಲ್‌  ಎಂಜಿನ್‌ 156 ಪಿಎಸ್‌ ಹಾಗೂ ಡೀಸೆಲ್‌ ಎಂಜಿನ್‌ 136 ಪಿಎಸ್‌ ಶಕ್ತಿ ಉತ್ಪಾದಿಸಬಲ್ಲದು. ಬಿಡುಗಡೆಗೂ ಮುನ್ನವೇ ಬುಕ್ಕಿಂಗ್‌ ಆರಂಭಿಸಿರುವ ಕಂಪೆನಿ, ಬೆಲೆ ಬಗ್ಗೆ ಏನನ್ನೂ ತಿಳಿಸಿಲ್ಲ. ಸೆಪ್ಟೆಂಬರ್‌ ಅಥವಾ ಆ  ಬಳಿಕ ಬಿಡುಗಡೆಯ ನಿರೀಕ್ಷೆಗಳಿವೆ. ಅಂದಾಜು ಬೆಲೆ 25 ರಿಂದ 35 ಲಕ್ಷ ರೂಪಾಯಿ (ಎಕ್ಸ್‌ ಷೋರೂಂ ).

ADVERTISEMENT

ಡಸ್ಟನ್‌ ಗೋ ಪ್ಲಸ್‌
ಜಪಾನ್‌ ಮೂಲದ ನಿಸಾನ್ ಮೋಟಾರ್ ಕಂಪೆನಿಯು ‘ಡಸ್ಟನ್‌’ ಬ್ರ್ಯಾಂಡ್‌ ಅಡಿಯಲ್ಲಿ ಮತ್ತೊಂದು ವಾಹನ ಬಿಡುಗಡೆಗೆ ಸಿದ್ಧವಾಗಿದೆ. ಅದುವೇ ‘ಡಸ್ಟನ್‌ ಗೋ ಪ್ಲಸ್‌’. ಹೆಸರೇ ಸೂಚಿಸುವಂತೆ ‘ಪ್ಲಸ್‌’ ಕಾರು, ವಿನ್ಯಾಸದಲ್ಲಿ ಹಿಂದಿನ ‘ಡಸ್ಟನ್‌ ಗೋ’ನ ಅಂಶಗಳ ಬಳುವಳಿಯಿದೆ. ಒಳಾಂಗಣ ವಿನ್ಯಾಸ ಬಹುತೇಕ ಹಾಗೆಯೇ ಇದೆ. ‘ಗೋ’ದಂತೆಯೇ ‘ಪ್ಲಸ್‌’ಗೂ ನಿಸಾನ್‌ ಮೈಕ್ರಾ ತಳಹದಿ ಇದೆ.

ಇದು ಬಹು ಬಳಕೆಯ ವಾಹನವಾಗಿದ್ದು (ಎಂಪಿವಿ), ಏಳು ಆಸನಗಳ ಸಾಮರ್ಥ್ಯವುಳ್ಳದ್ದು. ಉಭಯ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ ದೊರೆಯಲಿದೆ. 1.2 ಲೀಟರ್‌ ಪೆಟ್ರೋಲ್ ಎಂಜಿನ್‌, ಗರಿಷ್ಠ 68 ಪಿಎಸ್‌ ಶಕ್ತಿ ಹಾಗೂ 104 ಎನ್‌ಎಂ ಟಾರ್ಕ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 1.5 ಲೀಟರ್‌ ಡೀಸೆಲ್‌ ಎಂಜಿನ್‌ ಗರಿಷ್ಠ 66 ಪಿಎಸ್‌ ಶಕ್ತಿ ಹಾಗೂ 160ಎನ್‌ಎಂ ಟಾರ್ಕ್‌ ಉತ್ಪಾದಿಸಬಲ್ಲದು. ಎರಡು–ಮೂರು ತಿಂಗಳಲ್ಲಿ ಬಿಡುಗಡೆ ನಿರೀಕ್ಷಿಸಲಾಗಿದೆ. ಅಂದಾಜು ಬೆಲೆ 5.70 ರಿಂದ 7.50 ಲಕ್ಷ ರೂಪಾಯಿ (ಎಕ್ಸ್‌ ಷೋರೂಂ).

ಹೊಸ ಸ್ಕೋಡಾ ರ‍್ಯಾಪಿಡ್‌
ಇದು ಮಧ್ಯಮ ಶ್ರೇಣಿಯ ಸೆಡಾನ್‌ ಕಾರು. ಸಂಪೂರ್ಣ ಹೊಸ ಕಾರೇನೂ ಅಲ್ಲವಾದರೂ ಹಳೆಯದರ ಹೊಸ ರೂಪವೂ ಅಲ್ಲ! ಆದರೆ ಬಿಡುಗಡೆಗೊಂಡಾಗ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಹೊಂದಿದ ಕಡಿಮೆ ಬೆಲೆಯ ಡೀಸೆಲ್‌ ಕಾರು ಎಂಬ ಕಾರಣಕ್ಕಾಗಿ ಇದು ಸದ್ದು ಮಾಡುತ್ತಿದೆ!

ಹಳೆಯ ರ‍್ಯಾಪಿಡ್‌ 1.6 ಲೀಟರ್‌ ಡೀಸೆಲ್‌ ಹಾಗೂ ಅಷ್ಟೇ ಸಾಮರ್ಥ್ಯದ ಪೆಟ್ರೋಲ್‌ ಎಂಜಿನ್ ಹೊಂದಿತ್ತು. ಆದರೆ ಹೊಸ ರ‍್ಯಾಪಿಡ್‌, 1.5 ಲೀಟರ್ ಡೀಸೆಲ್‌ ಎಂಜಿನ್‌ ಅಳವಡಿಸಿಕೊಂಡು ಈ ವರ್ಷಾಂತ್ಯದ ವೇಳೆಗೆ ರಸ್ತೆಗಿಳಿಯಲಿದೆ. ಅಂದಾಜು ಬೆಲೆ 10 ಲಕ್ಷ ರೂಪಾಯಿ  (ಎಕ್ಸ್‌ ಷೋರೂಂ) ಒಳಗೆ ನಿರೀಕ್ಷಿಸಲಾಗಿದೆ. ಸ್ಕೋಡಾ ಕಂಪೆನಿಯೂ 2015ರಲ್ಲಿ ಆರು ಸ್ಪೀಡ್‌ಗಳ ಡ್ಯುಯಲ್‌ ಕ್ಲಚ್‌ ಗೇರ್‌ ಬಾಕ್ಸ್‌ನೊಂದಿಗೆ ರ‍್ಯಾಪಿಡ್‌ ಅನ್ನು ಮಾರುಕಟ್ಟೆಗೆ ಬಿಡುವ ವರದಿಗಳಿವೆ.

ಹೊಸ ಫಿಯೆಟ್‌ ಪುಂಟೊ
ಇದು ಹ್ಯಾಚ್‌ಬ್ಯಾಕ್‌ ಕಾರು. ವಿನ್ಯಾಸದಲ್ಲಿ ಒಳಾಂಗಣ ಹಾಗೂ ಹೊರಮೈ ಕಾಸ್ಮೆಟಿಕ್‌ ಬದಲಾವಣೆಗೆ ಒಳಪಟ್ಟ ಪುಂಟೊದ ಹೊಸ ರೂಪ ಎನಿಸುತ್ತದೆ. ಇದರ ಒಳಾಂಗಣ ಹಿಂದಿನ ಲಿನಿಯಾ ವಿನ್ಯಾಸವನ್ನೇ ಹೋಲುತ್ತದೆ. ನೂತನ ಹಾಗೂ ಆಕರ್ಷಕ ಬಣ್ಣದ ಲೋಗೊ ಅಂಟಿಸಿಕೊಂಡು ರಸ್ತೆಗಿಳಿಯುವ ನಿರೀಕ್ಷೆಗಳಿವೆ.

ಪೆಟ್ರೋಲ್‌ ಮಾದರಿಯಲ್ಲಿ ಎರಡು ಬಗೆಯಲ್ಲಿ  ದೊರೆಯಲಿವೆ. (1.2 ಲೀಟರ್ ಹಾಗೂ 1.4 ಪೆಟ್ರೋಲ್ ಎಂಜಿನ್‌). 1.3 ಲೀಟರ್ ಮಲ್ಟಿಜೆಟ್‌ ಡೀಸೆಲ್‌ ಎಂಜಿನ್‌ನಲ್ಲೂ ಸಿಗಲಿದೆ. ಈ ಕಾರು ವರ್ಷಾಂತ್ಯಕ್ಕೆ ಭಾರತದ ಮಾರುಕಟ್ಟೆ ಪ್ರವೇಶಿಸುವ ವರದಿ ಇತ್ತು. ಆದರೆ, ಮಾರುತಿ ಸುಜುಕಿಯ ಸ್ವಿಫ್ಟ್‌ ಹಾಗೂ ಹುಂಡೈನ ಐ20 ವಾಹನಗಳಿಗೆ ಪೈಪೋಟಿ ನೀಡುವ ಉದ್ದೇಶವಿದ್ದು, ಇನ್ನೊಂದು ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಅಂದಾಜು ಬೆಲೆ 5.5 ರಿಂದ 7.5 ಲಕ್ಷ ರೂಪಾಯಿ (ಎಕ್ಸ್‌ ಷೋರೂಂ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.