ADVERTISEMENT

‘ಲವ್ವು ಗಿವ್ವು ಎಲ್ಲಾ ನನಗಿಷ್ಟ ಇಲ್ಲ!’

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2016, 19:30 IST
Last Updated 21 ಡಿಸೆಂಬರ್ 2016, 19:30 IST
‘ಲವ್ವು ಗಿವ್ವು  ಎಲ್ಲಾ ನನಗಿಷ್ಟ ಇಲ್ಲ!’
‘ಲವ್ವು ಗಿವ್ವು ಎಲ್ಲಾ ನನಗಿಷ್ಟ ಇಲ್ಲ!’   

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರಾದ ಪೂಜಾ, ‘ತಿಥಿ’ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದವರು.   ಮೊದಲ ಚಿತ್ರದಲ್ಲೇ ಸಹಜಾಭಿನಯದ ಮೂಲಕ ಗಮನ ಸೆಳೆದ ಪೂಜಾ, ಇದೀಗ  ಕನ್ನಡದ ಬೇಡಿಕೆಯ ನಟಿ. ಸದ್ಯ ‘ಮೂಕಹಕ್ಕಿ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಅವರು ‘ಕಾಮನಬಿಲ್ಲು’ ಜತೆ ಪುಟ್ಟ ಸಂಭಾಷಣೆ ನಡೆಸಿದರು.

* ನಟನೆ ನಿಮ್ಮನ್ನು ಸೆಳೆದದ್ದು ಹೇಗೆ?
ನಟನೆಗೆ ಸಂಬಂಧಿಸಿದಂತೆ ಯಾವ ಹಿನ್ನೆಲೆಯೂ ನನಗಿರಲಿಲ್ಲ. ಮೈಸೂರಿನ ಯುವರಾಜ ಕಾಲೇಜಿನಲ್ಲಿ ಓದುತ್ತಿದ್ದಾಗ, ದೂರದರ್ಶನದ ಧಾರಾವಾಹಿಯೊಂದರಲ್ಲಿ ನಟಿಸಲು ಆಡಿಷನ್‌ಗೆಂದು ಸ್ನೇಹಿತೆ ಜತೆ ಹೋಗಿದ್ದೆ. ಅದೃಷ್ಟವಶಾತ್ ನಾನು ಆಯ್ಕೆ ಆದೆ. ಆದರೆ, ಧಾರಾವಾಹಿ ಶುರುವಾಗಲೇ ಇಲ್ಲ. ಆದರೆ, ಆ ನಿರ್ದೇಶಕರ ಸಲಹೆ ಮೇರೆಗೆ ‘ತಿಥಿ’ ಚಿತ್ರದ ಆಡಿಷನ್‌ಗೆ ಹೋದೆ. ಅಲ್ಲಿ ಕಾವೇರಿ ಪಾತ್ರಕ್ಕೆ ಆಯ್ಕೆಯಾದೆ. ಹೀಗೆ ನಟನೆ ನಂಟು ಆರಂಭವಾಯಿತು.

* ಸಾಮಾನ್ಯವಾಗಿ ಎಲ್ಲರೂ ನಿಮ್ಮನ್ನು ‘ತಿಥಿ’ ಪೂಜಾ ಎಂದೇ  ಕರೆಯುತ್ತಾರೆ? ಇದರಿಂದ ಮುಜುಗರವಾಗಿದೆಯಾ?
ಹಾಗೇನಿಲ್ಲ. ಮೊದಲ ಚಿತ್ರದ ಪಾತ್ರವೊಂದರ ಮೂಲಕವೇ ಎಲ್ಲರೂ ಗುರುತಿಸುವಂತಾಗಿರುವುದು ನನ್ನ ಅದೃಷ್ಟ. ನಾನೀಗ ಕೆಲಸ ಮಾಡುತ್ತಿರುವ ಚಿತ್ರಗಳ ಸೆಟ್‌ನಲ್ಲೂ ಎಲ್ಲರೂ ನನ್ನನ್ನು ಹಾಗೆಯೇ ರೇಗಿಸುತ್ತಿರುತ್ತಾರೆ. ಆಗ ನನಗೆ ಮುಜುಗರವಾಗುವುದಿಲ್ಲ. ಬದಲಿಗೆ ಒಂದು ರೀತಿಯಲ್ಲಿ ಹೆಮ್ಮೆ ಎನಿಸುತ್ತದೆ.

* ಸಿನಿಮಾದತ್ತ ಬರದಿದ್ದರೆ ಬೇರೇನು ಮಾಡುತ್ತಿದ್ದೀರಿ?
ನಟನೆ ನನಗೆ ಪ್ರವೃತ್ತಿಯೇ ಹೊರತು ವೃತ್ತಿಯಲ್ಲ. ನಾನು ಎಂ.ಸಿ.ಎ ಓದುತ್ತಿದ್ದೇನೆ. ಮುಂದೊಂದು ದಿನ ಸ್ವಂತ ಕಂಪೆನಿ ಆರಂಭಿಸಬೇಕು ಎಂಬ ಆಲೋಚನೆ ಇದೆ.

* ಕಾಲೇಜಿನಲ್ಲಿ ಎಲ್ಲರೂ ನಿಮ್ಮನ್ನು ‘ಕಿರಣ್‌ಬೇಡಿ’ ಮತ್ತು ‘ದೀಪಾ ಸನ್ನಿಧಿ’ ಎಂದು ಕರೆಯುತ್ತಿದ್ದರಂತೆ? 
ಹೌದು. ಮೈಸೂರಿನ ಯುವರಾಜ ಕಾಲೇಜಿನಲ್ಲಿ ಸಿಕ್ಕ ಟೈಟ್ಲುಗಳು ಇವು. ಆಗಷ್ಟೇ ಬಿ.ಸಿ.ಎ.ಗೆ ಸೇರಿದ್ದೆ. ಹೊಸದರಲ್ಲಿ ಆ ಕಾಲೇಜಿನ ಕೆಲ ಹುಡುಗರು ರ‍್ಯಾಗಿಂಗ್     ಮಾಡುತ್ತಿದ್ದರು.

ಒಂದು ದಿನ ಆ ಗುಂಪು, ನನಗೆ ಮತ್ತು ನನ್ನ ಸ್ನೇಹಿತೆಗೆ ಏನೇನೊ ಕಾಮೆಂಟ್ ಮಾಡಿ ರೇಗಿಸಿದ್ದರು. ಆಗ ಎಲ್ಲರಿಗೂ ಬೈದು, ಅವಳನ್ನು ಸಮಾಧಾನ ಮಾಡಿ ಕರೆದುಕೊಂಡು ಬಂದಿದ್ದೆ. ಮಾರನೇ ದಿನ ಅದೇ ಗ್ಯಾಂಗ್, ಕಾಲೇಜ್ ಗೇಟ್ ಹತ್ತಿರ ನಮ್ಮನ್ನು ಅಡ್ಡಹಾಕಿತ್ತು. ಆಗ ಮಾತಿಗೆ ಮಾತು ಬೆಳೆಯಿತು. ಕೋಪದಲ್ಲಿ ನಾನೊಬ್ಬನ ಕೆನ್ನೆಗೆ ಹೊಡೆದೆ ಅದೇ ಕೊನೆ, ಮತ್ಯಾರೂ ನಮ್ಮ ತಂಟೆಗೆ ಬರಲಿಲ್ಲ.

ಅಂದಿನಿಂದ ಕಾಲೇಜಿನಲ್ಲಿ ನನಗೆ ‘ಕಿರಣ್ ಬೇಡಿ’ ಅಂತ ಕರೆಯೋಕೆ ಶುರು ಮಾಡಿಬಿಟ್ಟರು. ಇನ್ನು, ನನ್ನ ಚುಡಾಯಿಸುತ್ತಿದ್ದ ಕೆಲ ಹುಡುಗರು ‘ಬಂದ್ಲು ನೋಡ್ರೋ, ದೀಪಾ ಸನ್ನಿಧಿ’ ಅಂತ ಹೇಳ್ತಿದ್ರು. ಅವರಿಗೂ ಎಲ್ಲರೆದುರಿಗೇ ಎಚ್ಚರಿಕೆ ಕೊಟ್ಟಿದ್ದೆ. ವಿಚಿತ್ರವೆಂದರೆ, ನಾನು ಯಾರ ಜತೆ ಜಗಳವಾಡಿದ್ದೆನೋ, ಯಾರಿಗೆ ಬೈದಿದ್ದೆನೋ ಅವರೇ ಈಗ ನನ್ನ ಆಪ್ತಸ್ನೇಹಿತರು.

* ‘ತಿಥಿ’ ಚಿತ್ರದಲ್ಲಿ ನಟಿಸಿದ ಮೇಲೆ ತುಂಬಾ ಹುಡುಗ್ರು ಹಿಂದೆ ಬಿದ್ದಿದ್ದರಂತೆ? ನಿಮಗೆ ಯಾರ ಮೇಲಾದರೂ ಕ್ರಷ್ ಆಗಿತ್ತಾ?
ಕಾಲೇಜು ಅಂದ ಮೇಲೆ ಅದೆಲ್ಲ ಸಾಮಾನ್ಯ. ಆದರೆ, ಅವರತ್ತ ನಾನು ತಿರುಗಿ ನೋಡಿಲ್ಲ. ‘ತಿಥಿ’ ಸಿನಿಮಾ ಮಾಡುವುದಕ್ಕೂ ಮುಂಚೆ ನನ್ನ ಸ್ಕೂಟರ್‌ಗೆ ಲವ್ ಲೆಟರ್ ಸಿಕ್ಕಿಸಿ ಹೋಗಿರುತ್ತಿದ್ದರು. ನಿಜ ಹೇಳಬೇಕೆಂದರೆ, ನನಗೆ ಅದ್ಯಾವುದರ ಬಗ್ಗೆಯೂ ಆಸಕ್ತಿಯೇ ಇಲ್ಲ. ಇದುವರೆಗೂ ಯಾರ ಮೇಲೂ ಕ್ರಷ್ ಆಗಿಲ್ಲ.

* ಲವ್ ಮ್ಯಾರೇಜ್ ಇಷ್ಟವೋ, ಅರೇಂಜ್ ಮ್ಯಾರೇಜ್ ಇಷ್ಟವೋ?
ನನಗೆ ಈ ಲವ್ ಗಿವ್ವು ಅಂದ್ರೆ ಇಷ್ಟ ಇಲ್ಲ. ಅರೇಂಜ್ ಮ್ಯಾರೇಜ್ ಇಷ್ಟ. ನೋಡುವುದಕ್ಕೆ ಸುಂದರವಾಗಿರುವ, ಒಳ್ಳೆಯ ಕೆಲಸದಲ್ಲಿರುವ, ನನಗಿಂತ ಸ್ವಲ್ಪ ಎತ್ತರ, ಎಲ್ಲರೊಂದಿಗೆ ಬೆರೆಯುವ ಸ್ವಭಾವ, ಒಳ್ಳೆಯ ಮನೆತನ– ಇವಿಷ್ಟು ಕ್ವಾಲಿಟಿ ಇರುವಯಾವ ಹುಡುಗನಾದರೂ ನನಗೆ ಇಷ್ಟವಾಗುತ್ತಾನೆ.

* ಶೂಟಿಂಗ್ ಸೆಟ್‌ನಲ್ಲಿ ಮರೆಯಲಾಗದ ಘಟನೆ?
‘ಮೂಕಹಕ್ಕಿ’ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಹಸುವೊಂದು ನನಗೆ ತಿವಿದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದೆ. ಅದು ಮರೆಯಲಾಗದ ಘಟನೆ.

ದನ ಕರು ಎಂದರೆ ನನಗೆ ಭಯ. ಆದರೆ, ಶೂಟಿಂಗ್‌ಗಾಗಿಯೇ ನಾನು ಆ ಹಸುವಿನ ಜತೆಯೇ ಹದಿನೈದು ದಿನ ಇದ್ದು ಸ್ವಲ್ಪಮಟ್ಟಿಗೆ ಪಳಗಿದ್ದೆ. ಇದಕ್ಕೂ ಮುಂಚೆ ನಡೆದ ಶಾಟ್‌ಗಳಲ್ಲೆಲ್ಲಾ ಅದರ ಜತೆಯೇ ನಟಿಸಿದ್ದೆ. ಆದರೆ, ಅದೊಂದು ದಿನ ಏನಾಗಿತ್ತೊ ಗೊತ್ತಿಲ್ಲ. ಮುಂದೆ ಹೋಗುತ್ತಿದ್ದ ನನ್ನನ್ನು ಒಮ್ಮೆಲೇ ತಿವಿಯಿತು. ಅದರ ಕೋಡು ಶರ್ಟಿಗೆ ತಾಕಿ, ನಾನು ಬದಿಗೆ ಬಿದ್ದಿದ್ದರಿಂದ ಬಚಾವಾದೆ. ಇಲ್ಲದಿದ್ದರೆ, ನಾನು ಹುಟ್ಟಿದ ಮಾರನೇ ದಿನವೇ (ನವೆಂಬರ್ 28) ಇಲ್ಲವಾಗುತ್ತಿದ್ದೆ.

* ನಿಮ್ಮ ಮುಂದಿನ ಪ್ರಾಜೆಕ್ಟ್‌ಗಳು?
ಸದ್ಯ ‘ಮೂಕ ಹಕ್ಕಿ’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಮತ್ತೆ ನಾಲ್ಕೈದು ಕಥೆಗಳನ್ನು ಕೇಳಿದ್ದೇನೆ. ಇನ್ನೂ ಯಾವುದಕ್ಕೂ ಒಪ್ಪಿಗೆ ಸೂಚಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT