ADVERTISEMENT

ವಾಹನಗಳ ಎಂಜಿನ್‌ನ ರಕ್ತ ಆಯಿಲ್

ಜಯಸಿಂಹ ಆರ್.
Published 27 ಮೇ 2015, 19:30 IST
Last Updated 27 ಮೇ 2015, 19:30 IST
ವಾಹನಗಳ ಎಂಜಿನ್‌ನ ರಕ್ತ ಆಯಿಲ್
ವಾಹನಗಳ ಎಂಜಿನ್‌ನ ರಕ್ತ ಆಯಿಲ್   

ಪೆಟ್ರೋಲ್ ಒಂದು ವಾಹನದ ಜೀವಧಾತು ಹೇಗೋ ಹಾಗೆಯೇ ಲೂಬ್ರಿಕೇಷನ್ ಆಯಿಲ್ ಸಹ ವಾಹನಗಳ ಎಂಜಿನ್‌ನ ರಕ್ತ. ಒಂದು ಎಂಜಿನ್ ಸುಸ್ಥಿತಿಯಲ್ಲಿ ಇರಲು, ನಯವಾಗಿ ಕೆಲಸ ಮಾಡಲು ಎಂಜಿನ್ ಆಯಿಲ್ ಸಹ ಸುಸ್ಥಿತಿಯಲ್ಲಿ ಇರಬೇಕಾದದ್ದು ಅತ್ಯಗತ್ಯ. ಮೊಪೆಡ್, ಬೈಕ್, ಆಟೊ, ಕಾರ್, ಎಸ್‌ಯುವಿ, ಬಸ್, ಲಾರಿ... ವಾಹನ ಯಾವುದೇ ಇರಲಿ, ಅವುಗಳ ಎಂಜಿನ್‌ನಲ್ಲಿ ಆಯಿಲ್ ಇರಲೇಬೇಕು. ಆದರೆ ಇಲ್ಲಿ ದ್ವಿಚಕ್ರ ವಾಹನಗಳಲ್ಲಿ ಆಯಿಲ್ ನಿರ್ವಹಣೆಯ ಬಗ್ಗೆ ಮಾತ್ರ ಗಮನ ಹರಿಸೋಣ.

2 ಸ್ಟ್ರೋಕ್ ಮೊಪೆಡ್ ಮತ್ತು ಬೈಕ್‌ಗಳಲ್ಲಿ ಎಂಜಿನ್‌ಗೆ ನೇರವಾಗಿ ಆಯಿಲ್ ತುಂಬಲು ಸಾಧ್ಯವಿಲ್ಲ. ಬದಲಿಗೆ ಪೆಟ್ರೋಲ್ ತುಂಬಿಸುವಾಗಲೇ ಪೆಟ್ರೋಲ್‌ನೊಂದಿಗೆ ಆಯಿಲ್ ಮಿಶ್ರಣ ಮಾಡಿ ತುಂಬಿಸಬೇಕು. ಹೀಗಾಗಿ ಇಲ್ಲಿ ಆಯಿಲ್ ನಿರ್ವಹಣೆಯ ಪ್ರಶ್ನೆಯೇ ಬರುವುದಿಲ್ಲ.

ಆದರೆ 4 ಸ್ಟ್ರೋಕ್ ವಾಹನಗಳ ಸ್ಥಿತಿ ಹೀಗಲ್ಲ. ಎಂಜಿನ್‌ ಕೇಸ್‌ನಲ್ಲಿ, ಗಿಯರ್ ಬಾಕ್ಸ್‌ನಲ್ಲಿ ಸದಾ ನಿಗದಿತ ಪ್ರಮಾಣದ ಆಯಿಲ್ ಇರಲೇಬೇಕು. ಆಯಿಲ್ ಕನಿಷ್ಠ ಮಟ್ಟಕ್ಕಿಂತ ಕಡಿಮೆ ಆಗಲೂಬಾರದು, ಗರಿಷ್ಠಕ್ಕಿಂತ ಹೆಚ್ಚು ಆಗಲೂಬಾರದು.

ಸಣ್ಣ ಪುಟ್ಟ ರಿಪೇರಿಗೆಲ್ಲಾ ನೀವು ನಿಮ್ಮ ಬೈಕ್ ಅಥವಾ ಸ್ಕೂಟರ್‌ಗಳನ್ನು ಗ್ಯಾರೇಜ್‌ಗೆ ಕೊಂಡೊಯ್ಯುವುದಾದರೆ, ಈ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ಸರ್ವಿಸ್‌ಗೆ ಬಿಟ್ಟಾಗ ಎಂಜಿನ್ ಆಯಿಲ್ ಬದಲಿಸಿದರಾಯಿತು. ನಿಮ್ಮ ಮೆಕ್ಯಾನಿಕ್ ಅದರ ಕಾಳಜಿ ವಹಿಸುತ್ತಾರೆ.

ಆದರೆ ಗಾಡಿ ಚಾಲೂ ಮಾಡುವಾಗ ಆಯಿಲ್‌ನ ಸದುಪಯೋಗ ಪಡೆಯಲು ಬಹುತೇಕ ಮಂದಿ ಮರೆಯುತ್ತಾರೆ. ಪ್ರತೀ ಬೈಕ್ ಅಥವಾ ಸ್ಕೂಟರ್‌ನೊಂದಿಗೆ ಕೊಟ್ಟಿರುವ ಮ್ಯಾನ್ಯುಯೆಲ್‌ನೊಂದಿಗೆ ಆಯಿಲ್ ನಿರ್ವಹಣೆಯ ಬಗ್ಗೆ ವಿವರಣೆ ಇರುತ್ತದೆ.

ರಾತ್ರಿಯೆಲ್ಲಾ ನಿಂತಿರುವ ಬೈಕ್‌ ಅನ್ನು ಬೆಳಿಗ್ಗೆ ಏಕಾಏಕಿ ಚಾಲೂ ಮಾಡುವಂತಿಲ್ಲ. ಬೈಕ್‌ನ ಇಗ್ನೀಷನ್‌ ಅನ್ನು ಚೋಕ್‌ ಮೋಡ್‌ನಲ್ಲಿ ಇರಿಸಿ, ಆನ್ ಮಾಡಬೇಕು, ನಂತರ ಅದೇ ಸ್ಥಿತಿಯಲ್ಲಿ ಒಂದೆರಡು ನಿಮಿಷ ಬಿಡಬೇಕು ಎಂದು ಮ್ಯಾನ್ಯುಯೆಲ್ ಹೇಳುತ್ತದೆ. ಹೆಚ್ಚು ಹೊತ್ತು ನಿಂತಿರುವ ಬೈಕ್‌ನ ಎಂಜಿನ್‌ನ ತಳದಲ್ಲಿ ಆಯಿಲ್ ಶೇಖರವಾಗಿರುತ್ತದೆ. ಅದು ಎಂಜಿನ್‌ನ ಎಲ್ಲಾ ಭಾಗಗಳಿಗೂ ಹರಡಿದಾಗ ಮಾತ್ರ ಎಂಜಿನ್ ನಯವಾಗಿ ಓಡುತ್ತದೆ.

ಎಂಜಿನ್‌ನ ಎಲ್ಲಾ ಭಾಗಕ್ಕೂ ಆಯಿಲ್ ತಲುಪಬೇಕೆಂದರೆ ಎಂಜಿನ್ ಬಿಸಿಯಾಗಬೇಕು. ಹೀಗಾಗಿ ಚೋಕ್‌ ಮೋಡ್‌ನಲ್ಲಿ ಬೈಕ್‌ ಎಂಜಿನ್ ಅನ್ನು ಚಾಲೂ ಮಾಡಬೇಕು. ತೀರಾ ಮಳೆಯಲ್ಲಿ ನೆಂದ, ಥಂಡಿಯ ವಾತಾವರಣದಲ್ಲಿ ಹೆಚ್ಚು ಕಾಲ, ಹೆಚ್ಚು ದಿನಗಳ ಕಾಲ ನಿಂತ ಗಾಡಿಗಳನ್ನು ಏಕಾಏಕಿ ಚಾಲೂ ಮಾಡುವಂತಿಲ್ಲ. ಮೊದಲಿಗೆ ಗಾಡಿಗಳನ್ನು ನೇರವಾಗಿ ನಿಲ್ಲಿಸಿ, ಇಗ್ನೀಷನ್ ಆಫ್ ಆಗಿರುವ ಸ್ಥಿತಿಯಲ್ಲೇ ಒಂದೆರಡು ಬಾರಿ ಕಿಕ್ಕರ್ ತುಳಿದರಾಯಿತು. ಎಂಜಿನ್ ತಳ ಸೇರಿ ಹೆಪ್ಪುಗಟ್ಟಿದ ಆಯಿಲ್, ಎಂಜಿನ್‌ನ ಬೇರೆ ಬೇರೆ ಭಾಗಗಳಿಗೆ ಸಾಗುತ್ತದೆ. ನಂತರ ಚೋಕ್‌ ಮೋಡ್‌ನಲ್ಲಿರಿಸಿ ಎಂಜಿನ್ ಚಾಲೂ ಮಾಡಬೇಕು.

ಹೀಗೆ ಮಾಡದಿದ್ದರೆ ಏನಾಗುತ್ತದೆ ಎಂಬ ಪ್ರಶ್ನೆ ಮೂಡಬಹುದು. ಆಯಿಲ್ ಲೇಪನವಿಲ್ಲದೆ ಚಾಲೂ ಆಗುವ ಎಂಜಿನ್‌ನ ಬಿಡಿಭಾಗಗಳು ಪರಸ್ಪರ ಘರ್ಷಿಸಿ, ಅವುಗಳ ಮೇಲೆ ಗಾರುಗಳಾಗುತ್ತವೆ. ದೀರ್ಘಕಾಲದಲ್ಲಿ ಎಂಜಿನ್‌ನ ಜೀವಿತಾವಧಿ ಕುಗ್ಗುತ್ತದೆ. ಹೀಗೆ ಮಾಡಿದರೆ ಉಪಯೋಗವೇನು ಎಂಬ ಪ್ರಶ್ನೆಯೂ ಮೂಡಬಹುದು. ಬೆಳಿಗ್ಗೆ ಬೆಳಿಗ್ಗೆ ಗಾಡಿ ಚಾಲೂ ಮಾಡಿದಾಗ ಎದುರಾಗುವ ಕೋಲ್ಡ್ ಸ್ಟಾರ್ಟ್ ಸಮಸ್ಯೆ ಇರುವುದಿಲ್ಲ. ಅದಕ್ಕೂ ಮಿಗಿಲಾಗಿ ಆರಂಭದಿಂದಲೇ ಎಂಜಿನ್ ನಯವಾಗಿ ಕೆಲಸ ಮಾಡುತ್ತದೆ. ಇದರಿಂದ ಮೈಲೇಜ್ ಮತ್ತು ಪಿಕ್‌ಅಪ್ ಉತ್ತಮವಾಗಿರುತ್ತದೆ. ತಯಾರಕ ಕಂಪೆನಿ ಸೂಚಿಸುವ ಮಿನರಲ್ ಆಯಿಲ್ ಉತ್ತಮವಾಗೇ ಇರುತ್ತದೆ. ಆದರೆ ಇನ್ನೂ ಉತ್ತಮ ಆಯಿಲ್ ಮಾರುಕಟ್ಟೆಯಲ್ಲಿ ಲಭ್ಯ. ಎಂಜಿನ್ ಅನ್ನು ಮತ್ತಷ್ಟು ನಯಗೊಳಿಸಲು ಸೆಮಿಸಿಂಥೆಟಿಕ್ ಮತ್ತು ಸಿಂಥೆಟಿಕ್ ಆಯಿಲ್‌ಗಳನ್ನು ಬಳಸಲಾಗುತ್ತದೆ. ಅವುಗಳ ಆಯ್ಕೆ ಮತ್ತು ಉಪಯೋಗಗಳ ಬಗ್ಗೆ ಕೊಂಚ ಗಮನ ಹರಿಸೋಣ.

ಸೆಮಿ ಸಿಂಥೆಟಿಕ್ ಆಯಿಲ್
ಇದು ಮಿನರಲ್ ಮತ್ತು ಸಿಂಥೆಟಿಕ್ ಆಯಿಲ್‌ನ ಹದವಾದ ಮಿಶ್ರಣ. ಇದರ ಬೆಲೆ ಮಿನರಲ್ ಆಯಿಲ್‌ಗಳಿಗಿಂತ ದುಪ್ಪಟ್ಟು. ಆದರೆ ಇವುಗಳ ಉಪಯೋಗವೂ ದುಪ್ಪಟ್ಟು. ಈ ಆಯಿಲ್‌ಗಳನ್ನು ಬಳಸುವುದರಿಂದ ಎಂಜಿನ್ ಮತ್ತಷ್ಟು ನಯವಾಗುತ್ತದೆ. ಗಾಡಿಯ ಎಂಜಿನ್ ಸದ್ದು ಕುಗ್ಗುತ್ತದೆ. ಗಿಯರ್ ಶಿಫ್ಟಿಂಗ್ ಸಹ ನಯವಾಗುತ್ತದೆ.

ಇಷ್ಟೇ ಅಲ್ಲ ಗಾಡಿಯ ಮೈಲೇಜ್ ಸಹ ಹೆಚ್ಚುತ್ತದೆ. ಸಾಮಾನ್ಯ ಮಿನರಲ್ ಆಯಿಲ್‌ಗಳ ಜೀವಿತಾವಧಿ 2500 ಕಿ.ಮೀನಿಂದ 3000 ಕಿ.ಮೀ. ಆದರೆ ಸೆಮಿಸಿಂಥೆಟಿಕ್ ಆಯಿಲ್‌ಗಳು 5000 ಕಿ.ಮೀನಿಂದ 6000 ಕಿ.ಮೀ ತನಕ ಗಾಡಿಯ ಎಂಜಿನ್‌ ಅನ್ನು ಸುಸ್ಥಿತಿಯಲ್ಲಿಡುತ್ತವೆ. ಕೊಟ್ಟ ಹಣಕ್ಕಿಂತ ಹೆಚ್ಚಿನ ಲಾಭ ಇವುಗಳಿಂದ ಪಡೆಯಬಹುದು. ಸುಮಾರು 400 ನಿಂದ ಆರಂಭವಾಗಿ 600ರೂವರೆಗೆ ವಿವಿಧ ಬಗೆಯ ಸೆಮಿಸಿಂಥೆಟಿಕ್ ಆಯಿಲ್‌ಗಳು ಲಭ್ಯ.

ಸಿಂಥೆಟಿಕ್ ಆಯಿಲ್
ಇವನ್ನು ಸಣ್ಣ ಬೈಕ್‌ಗಳಿಗಿಂತ ಕೊಂಚ ದೊಡ್ಡ ಎಂಜಿನ್‌ನ ಬೈಕ್‌ಗಳಲ್ಲಿ ಬಳಸುವುದು ಉತ್ತಮ. ಅಂದರೆ 150 ಸಿ.ಸಿ ಮತ್ತು ಹೆಚ್ಚಿನ ಎಂಜಿನ್ ಸಾಮರ್ಥ್ಯದ ಬೈಕ್‌ಗಳಲ್ಲಿ ಇವನ್ನು ಬಳಸಬಹುದು. ಸೆಮಿ ಸಿಂಥೆಟಿಕ್ ಆಯಿಲ್ ಬಳಕೆಯಿಂದ ದೊರೆಯುವ ಉಪಯೋಗ ಸಿಂಥೆಟಿಕ್‌ ಆಯಿಲ್‌ನಲ್ಲೂ ದೊರೆಯುತ್ತದೆ.

ಆದರೆ ಅದರ ಪ್ರಮಾಣ ದುಪ್ಪಟ್ಟಾಗಿರುತ್ತದೆ. ಅದರೊಂದಿಗೆ ಗಾಡಿಯ ಪರ್ಫಾರ್ಮೆನ್ಸ್ ಗಮನಾರ್ಹವಾಗಿ ಹೆಚ್ಚುತ್ತದೆ. ನಿಮ್ಮ ಬೈಕ್ ತನ್ನ ಗರಿಷ್ಠ ವೇಗವನ್ನು ನಿರಾಯಾಸವಾಗಿ ಮುಟ್ಟುತ್ತದೆ.

ಸಿಂಥೆಟಿಕ್ ಆಯಿಲ್‌ನ ಜೀವಿತಾವಧಿ 7000ಕಿ.ಮೀನಿಂದ 8000ಕಿ.ಮೀ. ಇವುಗಳ ಬೆಲೆ ಸಾಮಾನ್ಯ ಆಯಿಲ್‌ನ ಬೆಲೆಗಿಂತ ಮೂರು ಪಾಲು ಹೆಚ್ಚು. ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿಂಥೆಟಿಕ್ ಆಯಿಲ್‌ನ ಬೆಲೆ 850 ರೂನಿಂದ 1400 ರೂವರೆಗೂ ಇದೆ. ಕೊಟ್ಟ ಬೆಲೆಗೆ ಇವುಗಳಿಂದ ಮೋಸವಿಲ್ಲ. ಆದರೆ ಕೊಳ್ಳುವಾಗ ಅಸಲಿ ಮಾಲನ್ನು ಕೊಳ್ಳಬೇಕು ಅಷ್ಟೆ.

ಯಾವುದೇ ಆಯಿಲ್ ಕೊಳ್ಳುವಾಗ, ನಿಮ್ಮ ಗಾಡಿಗೆ ನಿಗದಿ ಪಡಿಸಿರುವ ವೆಸ್ಕಾಸಿಟಿ, ಅಂದರೆ ಗ್ರೇಡ್‌ನ ಆಯಿಲ್ ಅನ್ನೇ ಕೊಳ್ಳುವುದು ಉತ್ತಮ. ಕೊಂಡ ಆಯಿಲ್‌ನ ಗರಿಷ್ಠ ಗ್ರೇಡ್ ಹೆಚ್ಚಾದರೂ ಅಡ್ಡಿಯಿಲ್ಲ, ಕಡಿಮೆಯಾಗಬಾರದು. ಕನಿಷ್ಠ ಗ್ರೇಡ್‌ ಕಡಿಮೆಯಾದರೂ ಅಡ್ಡಿಯಿಲ್ಲ ಹೆಚ್ಚಾಗಬಾರದು. ಉದಾಹರಣೆಗೆ ನಿಮ್ಮ ಬೈಕ್‌ನ ಎಂಜಿನ್ ಆಯಿಲ್ ಗ್ರೇಡ್10-30 ಎಂದಿಟ್ಟುಕೊಳ್ಳಿ. ಅದು 5-40 ಆದರೆ ಅಡ್ಡಿಯಿಲ್ಲ. 15-30 ಆಗಬಾರದು. ಅಂತೆಯೇ ನಿಮ್ಮ ಬೈಕ್‌ನ ಆಯಿಲ್ ಗ್ರೇಡ್ 10-40 ಆಗಿದ್ದರೆ, ಹೊಸ ಆಯಿಲ್‌ನ ಗ್ರೇಡ್ 10-30 ಆಗಿರಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.