ADVERTISEMENT

ವಾಹನ ಒಂದು ಆಯ್ಕೆ ಎಂಟು

ಮಹೀಂದ್ರಾ ಜೀತೊ

ಜಯಸಿಂಹ ಆರ್.
Published 1 ಜುಲೈ 2015, 19:30 IST
Last Updated 1 ಜುಲೈ 2015, 19:30 IST
ವಾಹನ ಒಂದು  ಆಯ್ಕೆ ಎಂಟು
ವಾಹನ ಒಂದು ಆಯ್ಕೆ ಎಂಟು   

ಮಹೀಂದ್ರಾ ಅಂಡ್ ಮಹೀಂದ್ರಾ ಕಳೆದ ವಾರ ಒಂದು ಲಘು ಸರಕು ಸಾಗಣೆ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದರ ಹೆಸರು ‘ಜೀತೊ’. ಜೀತೊ ‘ಮಹೀಂದ್ರಾ ರೈಸ್’ ಎಂಬುದನ್ನು ಸೂಚಿಸುತ್ತದೆ ಎನ್ನುತ್ತದೆ ಕಂಪೆನಿ. ಮೇಲ್ನೋಟಕ್ಕೇ ಇದು ಹತ್ತರಲ್ಲಿ ಹನ್ನೊಂದನೆಯದ್ದು ಎಂದು ಅನಿಸುವುದಿಲ್ಲ.

ಏಕೆಂದರೆ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಲಘು ಸರಕು ಸಾಗಣೆ ವಾಹನಗಳಲ್ಲಿ (ಮೈಕ್ರೊ ಅಂಡ್ ಮಿನಿ ಟ್ರಕ್) ಇರದ ಒಂದು ವಿಶೇಷತೆ ಇದರಲ್ಲಿದೆ. ಒಂದೇ ಟ್ರಕ್‌ನಲ್ಲಿ ಎಂಟು ಅವತರಣಿಕೆಗಳನ್ನು ಹೊಂದಿರುವುದು ಜೀತೊ ವಿಶೇಷ.

ದೊಡ್ಡ ಗಾತ್ರದ, ಆದರೆ ಕಡಿಮೆ ಭಾರದ ವಸ್ತುಗಳನ್ನು ಸಾಗಿಸುವವರಿಗೆ ಒಂದು ಅವತರಣಿಕೆ. ಚಿಕ್ಕ ಗಾತ್ರದ ಆದರೆ ಹೆಚ್ಚು ಭಾರದ ವಸ್ತುಗಳನ್ನು (ಆಟೊಮೊಬೈಲ್‌ ಬಿಡಿಭಾಗಗಳು, ಕಬ್ಬಿಣ ಮತ್ತಿತರ ಲೋಹ) ಸಾಗಿಸಲು ಮತ್ತೊಂದು ಅವತರಣಿಕೆ. ಇವಲ್ಲದೆ  ಎಲ್‌ಪಿಜಿ ಸಿಲಿಂಡರ್, ಮಿನರಲ್ ವಾಟರ್‌ನಂತಹ ಸರಕು ಸಾಗಣೆದಾರರಿಗೆ ಅನುಕೂಲವಾಗಲೆಂದು ಇನ್ನೊಂದು ಅವತರಣಿಕೆ. ಹೀಗೆ ಎಂಟು ಅವತರಣಿಕೆಗಳನ್ನು ಮಹೀಂದ್ರಾ ರೂಪಿಸಿದೆ.

ಈ ಎಲ್ಲಾ ಅವತರಣಿಕೆಗಳ ನಡುವೆ ವ್ಯತ್ಯಾಸ ಇರುವುದು ಅವುಗಳ ಲಗೇಜ್ ಕ್ಯಾರಿಯರ್‌ನ ಗಾತ್ರ ಮತ್ತು ಎಂಜಿನ್ ಸಾಮರ್ಥ್ಯದಲ್ಲಿ. ಜೀತೊ 11 ಎಚ್‌ಪಿ ಮತ್ತು 16 ಎಚ್‌ಪಿ ಸಾಮರ್ಥ್ಯದ ಎಂಜಿನ್ ಅವತರಣಿಕೆಗಳಲ್ಲಿ ಲಭ್ಯವಿದೆ. ಕಡಿಮೆ ಭಾರದ, ಆದರೆ ದೊಡ್ಡ ಗಾತ್ರದ ವಸ್ತುಗಳನ್ನು ಸಾಗಿಸಲು 11 ಎಚ್‌ಪಿ ಎಂಜಿನ್‌ನ ಆದರೆ ದೊಡ್ಡ ಕ್ಯಾರಿಯರ್‌ನ ಜೀತೊ. ಚಿಕ್ಕ ಗಾತ್ರದ, ಹೆಚ್ಚು ಭಾರದ ವಸ್ತು ಸಾಗಿಸಲು 16 ಎಚ್‌ಪಿ ಎಂಜಿನ್ ಮತ್ತು ಚಿಕ್ಕ ಕ್ಯಾರಿಯರ್‌. ಹೀಗೆ ಎಂಜಿನ್ ಸಾಮರ್ಥ್ಯ ಮತ್ತು ಕ್ಯಾರಿಯರ್‌ನ ಗಾತ್ರದಲ್ಲಿ ವ್ಯತ್ಯಾಸ ಮಾಡುತ್ತಾ ಮಹೀಂದ್ರಾ ಎಂಟು ಅವತರಣಿಕೆಗಳನ್ನು ರೂಪಿಸಿದೆ.

‘ಎಂ-ಡ್ಯುರಾ’ ಹೊಚ್ಚ ಹೊಸ ಎಂಜಿನ್
ಜೀತೊ ಅಭಿವೃದ್ಧಿಪಡಿಸಲು ಮಹೀಂದ್ರಾ ಒಟ್ಟು ರೂ 50 ಕೋಟಿ ವಿನಿಯೋಗಿಸಿದೆ. ಸಂಪೂರ್ಣ ನೂತನ ಪ್ಲಾಟ್‌ಫಾರಂ, ನೂತನ ಎಂಜಿನ್ ಇದರಲ್ಲಿದೆ. ಜೀತೊಗಾಗಿ ಅಭಿವೃದ್ಧಿಪಡಿಸಿರುವ ಎಂಜಿನ್‌ಗೆ ಮಹೀಂದ್ರಾ ‘ಎಂ-ಡ್ಯುರಾ’ ಎಂದು ಹೆಸರಿಟ್ಟಿದೆ.

ಚಿಕ್ಕ ಎಂಜಿನ್‌ಗೂ ಕಂಪ್ಯೂಟರೈಸ್ಡ್ ಫ್ಯುಯೆಲ್ ಇಂಜೆಕ್ಷನ್ ಸಿಸ್ಟಂ ನೀಡುವ ಮೂಲಕ ಮಹೀಂದ್ರಾ, ಮೈಕ್ರೊ ಮತ್ತು ಮಿನಿ ಟ್ರಕ್‌ಗಳಿಗೂ ಎಸಿಯು ಅಳವಡಿಸಿದ ಭಾರತದ ಮೊದಲ ಮಿನಿ ಟ್ರಕ್ ಮೇಕರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೊದಲೇ ಹೇಳಿದಂತೆ ಇದು 11 ಎಚ್‌ಪಿ ಮತ್ತು 16 ಎಚ್‌ಪಿ ಅವತರಣಿಕೆಯಲ್ಲಿ ಲಭ್ಯವಿದೆ. ಇನ್ನು ಎಂ-ಡ್ಯುರಾ ಬಿಎಸ್‌3 ಎಂಜಿನ್. 11 ಎಚ್‌ಪಿ ಎಂಜಿನ್ ಒಂದು ಲೀಟರ್‌ಗೆ ಗರಿಷ್ಠ 37 ಕಿ.ಮೀ ಹಾಗೂ 16 ಎಚ್‌ಪಿ ಎಂಜಿನ್ ಒಂದು ಲೀಟರ್‌ಗೆ ಗರಿಷ್ಠ 28 ಕಿ.ಮೀ ಮೈಲೇಜ್ ನೀಡುತ್ತದೆ ಎನ್ನುತ್ತದೆ ಮಹೀಂದ್ರಾ.

ಎಂ–ಡ್ಯುರಾ ಮೂಲಕ ಹಲವು ಮೊದಲುಗಳಿಗೆ ಮಹೀಂದ್ರಾ ಪಾತ್ರವಾಗಿದೆ. ಇದು ವರ್ಟಿಕಲ್ ಎಂಜಿನ್. ಅಂದರೆ ಈ ಎಂಜಿನ್‌ ಅನ್ನು ಎಡ ಮತ್ತು ಬಲ ಭಾಗಗಳಂತೆ ಬಿಡಿಸಬಹುದು. ಸಾಮಾನ್ಯವಾಗಿ ಎಲ್ಲಾ ಎಂಜಿನ್‌ಗಳು ಹಾರಿಝಂಟಲ್‌ ಎಂಜಿನ್‌ಗಳಾಗಿರುತ್ತವೆ. ಅಂದರೆ ಅವುಗಳನ್ನು ಮೇಲಿನ ಮತ್ತು ಕೆಳಗಿನ ಭಾಗಗಳಾಗಿ ಬಿಡಿಸಬೇಕಾಗುತ್ತದೆ. ಈ ರೀತಿಯ ವಿನ್ಯಾಸದಿಂದ ಎಂಜಿನ್‌ ಸಾಮರ್ಥ್ಯ, ಮೈಲೇಜ್ ಮತ್ತು ಕಾರ್ಯಕ್ಷಮತೆ ಹೆಚ್ಚುತ್ತದೆ ಎನ್ನುತ್ತದೆ ಈ ಎಂಜಿನ್‌ ಅನ್ನು ಅಭಿವೃದ್ಧಿಪಡಿಸಿದ ಎಂಜಿನಿಯರ್‌ಗಳ ತಂಡ.

ಈ ಎಂಜಿನ್‌ ಕೇಸ್‌ನಲ್ಲಿ ಬೇರಿಂಗ್‌ಗಳನ್ನು ಕೂರಿಸುವ ಹೊಸ ತಂತ್ರಜ್ಞಾನಕ್ಕೆ ಮಹೀಂದ್ರಾ ಪೇಟೆಂಟ್ ಪಡೆದಿದೆ. ಸಾಮಾನ್ಯವಾಗಿ ಹೈಡ್ರಾಲಿಕ್‌ ಜಾಕ್‌ಗಳಲ್ಲಿ ಹೆಚ್ಚು ಒತ್ತಡ ಹಾಕುತ್ತಾ ಬೇರಿಂಗ್‌ಗಳನ್ನು ಕೂರಿಸಲಾಗುತ್ತದೆ. ಆದರೆ ಜೀತೊ ಎಂಜಿನ್‌ನಲ್ಲಿ ಇದು ಸಂಪೂರ್ಣ ಭಿನ್ನ. ಮೊದಲು ಬೇರಿಂಗ್‌ ಅನ್ನು -100ಕ್ಕಿಂತಲೂ ಕಡಿಮೆ ಉಷ್ಣಾಂಶದಲ್ಲಿ ಇರಿಸಲಾಗುತ್ತದೆ. ಈ ತಾಪಮಾನದಲ್ಲಿ ಬೇರಿಂಗ್ ಗಾತ್ರ ಕುಗ್ಗುತ್ತದೆ. ಆಗ ಅದನ್ನು ಎಂಜಿನ್ ಕೇಸಿಂಗ್‌ನಲ್ಲಿ ಕೂರಿಸಲಾಗುತ್ತದೆ. ಸಾಮಾನ್ಯ ತಾಪಮಾನಕ್ಕೆ ಬಂದೊಡನೆ ಬೇರಿಂಗ್ ಹಿಗ್ಗಿ ಕೇಸಿಂಗ್‌ನಲ್ಲಿ ಭದ್ರವಾಗಿ ಕೂರುತ್ತದೆ.

ADVERTISEMENT

ಉತ್ತಮ ವಿನ್ಯಾಸ
ಜೀತೊ ವಿನ್ಯಾಸ ಸಮಕಾಲೀನವಾಗಿದೆ. ಹೊಸ ರೀತಿಯ ದೇಹ ಮನ ಸೆಳೆಯುತ್ತದೆ. ಹೆಡ್‌ಲ್ಯಾಂಪ್, ಗ್ರಿಲ್ ಗಡಸಿನಂತೆ ಕಂಡರೂ ನಯವಾಗಿಯೂ ಕಾಣುತ್ತದೆ. ಮುಂಚಾಚಿದ ವಿಂಡ್ ಶೀಲ್ಡ್, ದೇಹ ಹೆಚ್ಚು ಏರೊಡೈನಮಿಕ್ ಆಗಿದೆ. ಸಾಮಾನ್ಯವಾಗಿ ಮಹೀಂದ್ರಾದ ವಾಹನಗಳ ಮುಂಬದಿಯ ಚಕ್ರಗಳು ಹೆಚ್ಚು ಮುಂಚಾಚಿರುತ್ತವೆ. ಅಂದರೆ ಮುಂಭಾಗದ ಬಂಪರ್‌ಗೆ ಅಂಟಿಕೊಂಡಂತೆ ಇರುತ್ತವೆ. (ಮ್ಯಾಕ್ಸಿಮೊ ಮಿನಿ ಟ್ರಕ್ ಮಾತ್ರ ಇದಕ್ಕೆ ಅಪವಾದ).

ಇದರಿಂದ ವಾಹನದ ವ್ಹೀಲ್‌ಬೇಸ್ ಹೆಚ್ಚುತ್ತದೆ. ಜೀತೊ ವಿನ್ಯಾಸವೂ ಇದೇ ರೀತಿ ಇದೆ. ಇದರ ವ್ಹೀಲ್‌ಬೇಸ್ 2500ಎಂಎಂ. ಇದು ಈ ವರ್ಗದಲ್ಲೇ ಗರಿಷ್ಠ. ಇದರಿಂದ ಉತ್ತಮ ರಸ್ತೆ ಹಿಡಿತ ಲಭ್ಯ ಹಾಗೂ ಹಳ್ಳಕೊಳ್ಳದ ರಸ್ತೆಗಳಲ್ಲಿ ಸಾಗುವಾಗ ಚಾಲಕನ ಆರಾಮಕ್ಕೆ ಹೆಚ್ಚು ಧಕ್ಕೆಯಾಗುವುದಿಲ್ಲ. ಮುಂಬದಿಯಲ್ಲಿ ಐಎಫ್‌ಎಸ್ ಅಂದರೆ ಸ್ವತಂತ್ರ ಸಸ್ಪೆನ್ಷನ್‌ಗಳು ಇರುವುದರಿಂದ ಆರಾಮಿನ ಮಟ್ಟ ಇನ್ನೂ ಹೆಚ್ಚುತ್ತದೆ.

ಇನ್ನು ಜೀತೊ ಎಂಜಿನ್ ಹಿಂಭಾಗದಲ್ಲಿದೆ. ಹೀಗಾಗಿ ಸರ್ವಿಸ್, ರಿಪೇರಿ ಸಂದರ್ಭದಲ್ಲಿ ಹೆಚ್ಚು ಅನುಕೂಲ. ಇದೆಲ್ಲಕಿಂತ ಗಮನ ಸೆಳೆಯುವುದು ಇದರ ಒಳವಿನ್ಯಾಸ. ಒಂದು ಮಿನಿ ಕಾರ್‌ನ ಕ್ಯಾಬಿನ್ ಹೇಗಿರಬಹುದೋ ಅಂತಹ ಅನುಭವ ಜೀತೊ ಇಂಟೀರಿಯರ್ ಕೊಡುತ್ತದೆ. ಬಕೆಟ್ ಸೀಟ್‌ಗಳು, ಸ್ಪೋರ್ಟಿ ಸ್ಟೀರಿಂಗ್ ವ್ಹೀಲ್, ಸ್ಪೋರ್ಟಿ ಗಿಯರ್ ನಾಬ್, ಉತ್ತಮ ಗುಣಮಟ್ಟದ ಪ್ಲಾಸ್ಟಿಕ್‌ನಿಂದ ರೂಪಿಸಿದ ಡ್ಯಾಶ್‌ಬೋರ್ಡ್ ಪ್ರವೇಶ ಮಟ್ಟದ ಯಾವ ಕಾರಿಗೇನೂ ಕಮ್ಮಿಯಿಲ್ಲ.

ಪ್ರಬಲ ಸ್ಫರ್ಧೆ
ಜೀತೊ ಎಕ್ಸ್‌ಷೋರೂಂ ಬೆಲೆ ರೂ 2.35 ಲಕ್ಷದಿಂದ ಆರಂಭವಾಗಿ ರೂ 2.8 ಲಕ್ಷದವರೆಗೆ ಇದೆ. ಪೇಲೋಡ್, ಎಂಜಿನ್ ಸಾಮರ್ಥ್ಯ ಆಧರಿಸಿ ಜೀತೊ ಟಾಟಾ ಮೋಟಾರ್ಸ್‌ನ ಆಸ್ ಝಿಪ್ ಮತ್ತು ಏಸ್ ಎಚ್‌ಟಿ ಮಿನಿ ಟ್ರಕ್‌ ಹಾಗೂ ಪಿಯಾಗ್ಯೊ ಅಪೆ ಎಕ್ಸ್‌ಟ್ರಾ ಎಲ್‌ಡಿ ಆಟೊಗಳಿಗೆ ಪ್ರಬಲ ಸ್ಫರ್ಧಿ ಎಂದು ಮಹೀಂದ್ರಾ ಹೇಳಿದೆ.

ಈ ಎಲ್ಲಾ ಪ್ರತಿಸ್ಪರ್ಧಿಗಳಿಗಿಂತ ಜೀತೊ ಆಧುನಿಕವಾಗಿದೆ ಮತ್ತು ಆಕರ್ಷಕವಾಗಿದೆ. ಇನ್ನು ಅಪೆ ಆಟೊ ಎಕ್ಸ್‌ಷೋರೂಂ ಬೆಲೆ ರೂ 2.5 ಲಕ್ಷದಷ್ಟಿದ್ದರೆ, ಏಸ್ ಎಚ್‌ಟಿ ಟ್ರಕ್ ಬೆಲೆ ರೂ 4.2 ಲಕ್ಷ ಮೀರುತ್ತದೆ. ಹೀಗಾಗಿ ಈ ಮೂರೂ ಪ್ರತಿಸ್ಪರ್ಧಿಗಳಿಗೆ ಜೀತೊ ಪೈಪೋಟಿ ನೀಡುವುದರಲ್ಲಿ ಎರಡು ಮಾತಿಲ್ಲ.

ಬಿಎಸ್‌ 4 ಮತ್ತು ಪ್ಯಾಸೆಂಜರ್ ಅವತರಣಿಕೆ
2017ರ ನಂತರ ಭಾರತದಲ್ಲಿ ಮಾರಾಟವಾಗುವ ಎಲ್ಲಾ ವಾಹನಗಳು ಬಿಎಸ್4 ಮಾನದಂಡಗಳನ್ನು ಪೂರೈಸಬೇಕು. ಈ ನಿಟ್ಟಿನಲ್ಲಿ ಎಂ–ಡ್ಯುರಾದ ಬಿಎಸ್‌4 ಮಾನದಂಡದ ಎಂಜಿನ್ ಅಭಿವೃದ್ಧಿಪಡಿಸಲಾಗುತ್ತಿದೆ ಹಾಗೂ ಜೀತೊದ ಪ್ಯಾಸೆಂಜರ್ ಅವತರಣಿಕೆಯೂ ಮಾರುಕಟ್ಟೆಗೆ ಬರಲಿದೆ ಎಂದು ಮಹೀಂದ್ರಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.