ADVERTISEMENT

ಸಿಎಸ್‌ಯುವಿ ಹೆಚ್ಚಿದ ಪೈಪೋಟಿ

ಜಯಸಿಂಹ ಆರ್.
Published 10 ಫೆಬ್ರುವರಿ 2016, 19:48 IST
Last Updated 10 ಫೆಬ್ರುವರಿ 2016, 19:48 IST
ಸಿಎಸ್‌ಯುವಿ ಹೆಚ್ಚಿದ  ಪೈಪೋಟಿ
ಸಿಎಸ್‌ಯುವಿ ಹೆಚ್ಚಿದ ಪೈಪೋಟಿ   

ಕಾಂಪಾಕ್ಟ್ ಎಸ್‌ಯುವಿ ಭಾರತದ ಆಟೊ ಮಾರುಕಟ್ಟೆಯಲ್ಲಿ ಕ್ಷಿಪ್ರ ಬೆಳವಣಿಗೆ ಕಾಣುತ್ತಿರುವ ವಿಭಾಗ. ರೆನಾಲ್ಟ್‌ ಡಸ್ಟರ್‌ನಿಂದ ಆರಂಭವಾದರೂ, ನಂತರದ ದಿನಗಳಲ್ಲಿ ಈ ವಿಭಾಗವನ್ನು ಮುನ್ನಡೆಸಿದ್ದು ಫೋರ್ಡ್ ಎಕೋಸ್ಪೋರ್ಟ್ಸ್. ವಿದೇಶಿ ತಯಾರಕರೇ ತುಂಬಿದ್ದ ಈ ವಿಭಾಗಕ್ಕೆ ತುಸು ಬಿಸಿ ಮುಟ್ಟಿಸಿದ್ದು ಸುಜುಕಿಯ ಎಸ್‌ಕ್ರಾಸ್. ಅದನ್ನು ಅನುಸರಿಸಿ ನಮ್ಮ ರಸ್ತೆಗಿಳಿದ ಮಹೀಂದ್ರಾ ಟಿಯುವಿ 5ಒಒ ಏಳು ಸೀಟ್‌ಗಳ ಆಯ್ಕೆ ನೀಡುವ ಮೂಲಕ ಸ್ಫರ್ಧೆಗೆ ಹೊಸ ಆಯಾಮ ನೀಡಿತು.

ಈ ವಾರ ದೆಹಲಿಯಲ್ಲಿ ಮುಕ್ತಾಯವಾದ ಆಟೊ ಎಕ್ಸ್‌ಪೊದಲ್ಲಿ ಸುಜುಕಿ ಮತ್ತೊಂದು ಸಿಎಸ್‌ಯುವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ತನ್ನ ಅತ್ಯುತ್ತಮ ಪ್ರೀಮಿಯಂ ಪೆಟ್ರೋಲ್ ಎಸ್‌ಯುವಿ ವಿಟಾರಾದ ಹೆಸರನ್ನೇ ನಕಲಿಸಿ ‘ವಿಟಾರ ಬ್ರೆಝಾ’ ಎಂದು ಅದಕ್ಕೆ ಹೆಸರಿಟ್ಟಿದೆ. ದಶಕದಿಂದ ಸ್ವಿಫ್ಟ್‌ನಲ್ಲಿ ಬಳಸುತ್ತಿರುವ ಡಿಡಿಐಎಸ್‌ ಎಂಜಿನ್, ಹೊಸತನದ ಹೊರಾಂಗಣ, ಎಸ್‌ಕ್ರಾಸ್‌ನಲ್ಲಿರುವಂತಹ ಒಳಾಂಗಣ ಇದರ ಕೀ ನೋಟ್‌ಗಳು. ಆದರೆ ಡ್ಯಾಶ್‌ಬೋರ್ಡ್, ಪವರ್‌ ವಿಂಡೊ ಕನ್ಸೋಲ್, ಸ್ಟೀರಿಂಗ್ ವಿನ್ಯಾಸ ಮೊದಲ ತಲೆಮಾರಿನ ಸ್ವಿಫ್ಟ್‌ ಅನ್ನೇ ನೆನಪಿಸುತ್ತದೆ.

ಈಗಾಗಲೇ ಹತ್ತಾರು ಕಾರುಗಳಿಗೆ ಶಕ್ತಿ ನೀಡುತ್ತಿರುವ 1.3 ಡಿಡಿಐಎಸ್ (ಫಿಯೆಟ್‌ ಅವರ 1.3 ಎಂಜೆಡಿ) ಎಂಜಿನ್ ಗರಿಷ್ಠ 89 ಬಿಎಚ್‌ಪಿ ಮತ್ತು ಗರಿಷ್ಠ 200 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಫಿಕ್ಸ್‌ಡ್ ಡ್ರೈವ್‌ಮೋಡ್‌ ಇದರಲ್ಲಿದೆ. ಅಂದರೆ ಡ್ರೈವ್‌ಮೋಡ್‌ಗಳ ಆಯ್ಕೆ ಇಲ್ಲ. ಆದರೆ ಈ ವಿಭಾಗದ ಬಹುತೇಕ ಎಲ್ಲಾ ಸಿಎಸ್‌ಯುವಿಗಳಲ್ಲಿ ಡ್ರೈವ್‌ ಮೋಡ್‌ಗಳ ಆಯ್ಕೆ ಇದೆ. ಇದು ಬ್ರೆಝಾದ ಹಿನ್ನಡೆಯೇ ಸರಿ. ಜತೆಗೆ 5 ಸ್ಪೀಡ್‌ ಗಿಯರ್‌ಗಳ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಇದರಲ್ಲಿದೆ. ಇನ್ನು ಪ್ರೊಜೆಕ್ಟರ್‌ ಹೆಡ್‌ಲ್ಯಾಂಪ್, ಎಲ್‌ಇಡಿ ಟೇಲ್‌ಲ್ಯಾಂಪ್, ಡ್ಯುಯೆಲ್ ಟೋನ್ ಎಕ್ಸ್‌ಟೀರಿಯರ್ ಮತ್ತು ಇಂಟೀರಿಯರ್, 7 ಇಂಚಿನ ಸ್ಕ್ರೀನ್‌ ಇರುವ ಮಿಡಲ್ ಕನ್ಸೋಲ್, ಟ್ವಿನ್‌ ಗ್ಲೌಬಾಕ್ಸ್ (ಒಂದು ಹವಾನಿಯಂತ್ರಿತ) ಇದರ ಕೆಲವು ವಿಶೇಷತೆಗಳು.

ಒಟ್ಟು ಆರು ಅವತರಣಿಕೆಗಳಲ್ಲಿ ಬ್ರೆಝಾ ಲಭ್ಯವಿದೆ. ಎಲ್ಲಾ ಅವತರಣಿಕೆಗಳಲ್ಲೂ ಡ್ರೈವರ್‌ ಸೈಡ್‌ ಏರ್‌ಬ್ಯಾಗ್ ಇರಲಿದೆ. ಎಲ್ಲಾ ಅವತರಣಿಕೆಗಳಲ್ಲೂ ಆಯ್ಕೆಯ ಮೇರೆಗೆ ಎಬಿಎಸ್‌ ಮತ್ತು ಪ್ಯಾಸೆಂಜರ್‌ ಏರ್‌ಬ್ಯಾಗ್ ಲಭ್ಯವಿರಲಿದೆ. ಲೆಗ್‌ ರೂಂ ಹತ್ತಿರದ ಸ್ಪರ್ಧಿ ಎಕೋಸ್ಪೋರ್ಟ್ಸ್‌ಗಿಂತಲೂ ಹೆಚ್ಚಿದೆ. ಆದರೆ ಬೂಟ್‌ ಸ್ಪೇಸ್‌ನಲ್ಲಿ ಎಕೋಸ್ಪೋರ್ಟ್ಸ್‌ ಮುಂದು. ಇವೆಲ್ಲವುಗಳ ಜತೆಗೆ ಸುಜುಕಿ ಎಂಬ ಬ್ರ್ಯಾಂಡ್‌ ನೇಮ್‌ ಇರುವುದು ಬ್ರೆಝಾಗೆ ಹೆಚ್ಚಿನ ಶಕ್ತಿ ನೀಡಿದೆ ಎಂದರೆ ತಪ್ಪಾಗಲಾರದು.

ಈ ವಾಹನ ಮೇಳದಲ್ಲೇ ಟಾಟಾ ಮೋಟಾರ್ಸ್ ತನ್ನ ಮೊದಲ ಸಿಎಸ್‌ಯುವಿ ನೆಕ್ಸಾನ್‌ನ ಅಂತಿಮ ಮಾದರಿ ಮತ್ತು ಅದರ ವಿವರಗಳನ್ನು ಪ್ರದರ್ಶನಕ್ಕೆ ಇಟ್ಟಿದೆ. ವಿನ್ಯಾಸ, ಎಂಜಿನ್ ಮತ್ತು ಸವಲತ್ತುಗಳ ವಿಚಾರದಲ್ಲಿ ನೆಕ್ಸಾನ್‌ ಈ ವಿಭಾಗದ ಇತರ ಸ್ಪರ್ಧಿಗಳಿಗಿಂತ ಎರಡು ತಲೆಮಾರಿನಷ್ಟು ಮುಂದಿದೆ ಎಂದು ತಜ್ಞರು ಹುಬ್ಬೇರಿಸಿದ್ದಾರೆ. ನೋಡುಗರಿಗೂ ಮೊದಲ ನೋಟದಲ್ಲೇ ನೆಕ್ಸಾನ್‌ ಆ ಅನುಭವವನ್ನು ನೀಡುತ್ತದೆ. ದೊಡ್ಡ ಆದರೆ ಒರಟು ಅನ್ನುವುದಕ್ಕಿಂತ ಗಟ್ಟಿಮುಟ್ಟು ನೋಟವಿರುವ ದೇಹದ ವಿನ್ಯಾಸ ನೋಡುಗರ ಕಣ್ಮನ ಸೆಳೆಯುತ್ತದೆ. 200 ಎಂಎಂ ಗ್ರೌಂಡ್‌ ಕ್ಲಿಯರೆನ್ಸ್ ಮತ್ತು 16 ಇಂಚಿನ, ಅಗಲವಾದ ಟೈರ್‌ಗಳು ಗಡಸು ನೋಟ ನೀಡುತ್ತವೆ. ಎಲ್ಲಕ್ಕಿಂತಲೂ ಮುಖ್ಯವಾಗಿರುವುದು ಇದರ ಎಂಜಿನ್.

ರೆವೊರ್ಟನ್ ಕುಟುಂಬ 1.5 ಲೀಟರ್‌ ಡೀಸೆಲ್‌ ಎಂಜಿನ್ ಹಾಗೂ 1.0 ಲೀಟರ್‌ ಟರ್ಬೊ ಪೆಟ್ರೋಲ್‌ ಅವತರಣಿಕೆಗಳಲ್ಲಿ ನೆಕ್ಸಾನ್ ಲಭ್ಯವಿರಲಿದೆ. ಡೀಸೆಲ್ ಎಂಜಿನ್ ಗರಿಷ್ಠ 110 ಬಿಎಚ್‌ಪಿ ಮತ್ತು 260 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ. ಇದು ಈ ವಿಭಾಗದಲ್ಲೇ ಹೆಚ್ಚು. ಜತೆಗೆ 6 ಗಿಯರ್‌ಗಳ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಇದರಲ್ಲಿದೆ. ಇದು ನೆಕ್ಸಾನ್‌ನನ್ನು ತನ್ನ ಸ್ಪರ್ಧಿಗಳಿಗಿಂತ ಸಾಕಷ್ಟು ಮುಂದಿರಿಸಿರುವ ಅಂಶ. ಈ ಎಂಜಿನ್‌ ಮತ್ತು ಟ್ರಾನ್ಸ್‌ಮಿಷನ್‌ನ ವೇಗ ಮತ್ತು ಕಾರ್ಯಕ್ಷಮತೆಯನ್ನು ಬದಲಿಸಲು ಮೂರು ಡ್ರೈವ್‌ಮೋಡ್‌ಗಳ ಆಯ್ಕೆ ಇದೆ. ಇವುಗಳನ್ನು ಆಯ್ಕೆ ಮಾಡಲು ಪುಷ್‌ಬಟನ್‌ಗಳ ಬದಲಿಗೆ ರೋಟರಿ ಸ್ವಿಚ್ ನೀಡಲಾಗಿದೆ. ಇದು ಸಣ್ಣದಾದರೂ ಗಮನ ಸೆಳೆಯುವ ಸವಲತ್ತು.

ಜತೆಗೆ ಜರ್ಮನಿ ಮೂಲದ ಹರ್ಮಾನ್‌ ಅಭಿವೃದ್ಧಿಪಡಿಸಿರುವ ಇನ್ಫೊಟೈನ್‌ಮೆಂಟ್ ಸಿಸ್ಟಂ ಇದರಲ್ಲಿದೆ. ಜತೆಗೆ ಎಂಟು ಸ್ಪೀಕರ್‌ಗಳು ಇದರಲ್ಲಿದೆ. ಟಾಟಾ ಆರ್ಯಾದಲ್ಲಿ ಇದ್ದಂತಹ ಇಂಟೀರಿಯರ್‌ ಮತ್ತು ಡ್ಯಾಶ್‌ಬೋರ್ಡ್‌ ವಿನ್ಯಾಸ ಇದರಲ್ಲಿದೆ. ಸ್ಟೀರಿಂಗ್‌ ಅನ್ನು ಝೆಸ್ಟ್‌ನಿಂದ ಎರವಲು ಪಡೆಯಲಾಗಿದೆ. ವಾಹನ ಪ್ರಿಯರಲ್ಲಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ನೆಕ್ಸಾನ್‌ ಯಾವಾಗ ಮಾರುಕಟ್ಟೆಗೆ ಬಿಡುಗಡೆಯಾಗುತ್ತದೆ ಎಂಬುದರ ಮೇಲೆ ಅದರ ಯಶಸ್ಸು ಅಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.