ADVERTISEMENT

ಸ್ಪರ್ಧೆಗೆ ಸಿದ್ಧ ಯಮಾಹ ಆರ್‌25

ಜಯಸಿಂಹ ಆರ್.
Published 29 ಅಕ್ಟೋಬರ್ 2014, 19:30 IST
Last Updated 29 ಅಕ್ಟೋಬರ್ 2014, 19:30 IST

ಯಮಾಹ. ಈ ಹೆಸರು ಕೇಳಿದರೇ ರೋಮಾಂಚಿತಗೊಳ್ಳುವ ಒಂದು ವರ್ಗವೇ ಭಾರತದಲ್ಲಿದೆ. ಉತ್ಪಾದನೆ ನಿಂತು ದಶಕವೇ ಕಳೆದರೂ ಯಮಾಹದ ಹಳೆಯ ಆರ್‌ಎಕ್ಸ್, ಆರ್‌ಎಕ್ಸ್‌ಝಡ್ ಸರಣಿ ಮತ್ತು ರಾಜ್‌ದೂತ್ 350 ಮಾದ­ರಿಯ ಬೈಕ್‌ಗಳ ಮೇಲೆ ಲಕ್ಷಾಂತರ ರೂಪಾಯಿ ಸುರಿಯುವ ಮಂದಿ ಇದ್ದಾರೆ ಎಂದ ಮೇಲೆ ಯಮಾಹ ಕುರಿತ ಭಾರತೀಯರ ನಾಡಿಮಿಡಿತ ಅರ್ಥವಾದೀತು.

ಯಮಾಹ ಒಂದು ಹೊಸ ಉತ್ಪನ್ನವನ್ನು ಬಿಡುತ್ತದೆ ಎಂದರೆ, ಇತರ ಬೈಕ್‌ ಮೇಕರ್‌ಗಳಿಗೂ ಮೈಕೊಡವಿಕೊಳ್ಳುವ ಸರದಿ ಎನ್ನುತ್ತಾರೆ ಆಟೊ­ಮೊಬೈಲ್ ತಜ್ಞರು. ಅಂತಹದ್ದೊಂದು ಸಂಚಲನ ಉಂಟು ಮಾಡಲು ಯಮಾಹ ಸಜ್ಜಾಗಿದೆ. ಬಹು ನಿರೀಕ್ಷೆಯ ವೈಝಡ್‌ಎಫ್ಆರ್25 ಮಾದರಿಯ ಪ್ರವೇಶ ಮಟ್ಟದ ಸೂಪರ್‌ ಬೈಕ್ ಡಿಸೆಂಬರ್ ಅಂತ್ಯಕ್ಕೆ ಅಥವಾ ಜನವರಿಯ ಆರಂಭದಲ್ಲಿ ಭಾರತದ ಮಾರುಕಟ್ಟೆಗೆ ಇಳಿಯಲಿದೆ.

2013ರ ಟೋಕಿಯೊ ಮೋಟೊ ಷೋನಲ್ಲಿ ಈ ಬೈಕ್‌ನ ಕಾನ್ಸೆಪ್ಟ್ ಮಾದರಿ ಪ್ರದರ್ಶಿತವಾಗಿತ್ತು. ಅಂತೆಯೇ ದೆಹಲಿ ಆಟೊ ಎಕ್ಸ್‌ಪೊ 2014ರಲ್ಲೂ ಬೈಕ್‌ ಪ್ರಿಯರ ಕಣ್ಸೆಳೆದಿತ್ತು. ಯಮಾಹ ಪ್ರಿಯರು ಈ ಬೈಕ್ ಭಾರ­ತಕ್ಕೆ ಬರುತ್ತದೆಯೇ ಎಂದು ಯೋಚಿಸು­ತ್ತಿರುವಷ್ಟರಲ್ಲೇ ಆರ್25 ಇಂಡೋನೇಷ್ಯಾದ ರಸ್ತೆಗೆ ಇಳಿದಿತ್ತು. ಈಗ ಭಾರತದ ಸರದಿ. ಭಾರತದ ಪ್ರವೇಶ ಮಟ್ಟದ  ಪರ್ಫಾರ್ಮೆನ್ಸ್ ಬೈಕ್ ವಿಭಾಗದಲ್ಲಿ ಸಂಚಲನ ಉಂಟು ಮಾಡುವಂತಹದ್ದು ಆರ್ 25ನಲ್ಲಿ ಏನಿದೆ ಎಂಬ ಪ್ರಶ್ನೆ ಕಾಡದಿರದು.

ಈಗಾಗಲೇ ನಮ್ಮ ರಸ್ತೆಗಳಲ್ಲಿ ಸದ್ದು ಮಾಡುತ್ತಿರುವ ಆರ್‌15 ಕಾರ್ಬನ್ ಕಾಪಿಯಂತೇನಾದರೂ ಆರ್ 25 ಇರಲಿದೆ ಎಂದು ಭಾವಿಸಿದ್ದರೆ, ಅದನ್ನು ತುಸು ಬದಲಿಸಿಕೊಳ್ಳುವುದು ಒಳಿತು. ನೋಡಲು ಆರ್‌ 15ನಂತೆಯೇ ಇದ್ದರೂ, ಇದರ ಸಂಪೂರ್ಣ ವಿನ್ಯಾಸ ಆರ್‌1 ಮತ್ತು ಆರ್‌ 6 ನಿಂದ ಎರವಲು ಪಡೆಯಲಾಗಿದೆ. ಪೈಲಟ್‌ ಲ್ಯಾಂಪ್‌ ಒಳಗೊಂಡಿರುವ ಟ್ವಿನ್ ಹೆಡ್‌ಲ್ಯಾಂಪ್‌, ಎಲ್‌ಇಡಿ ಟೇಲ್‌ಲ್ಯಾಂಪ್ ಮತ್ತು ಇಂಡಿಕೇಟರ್‌ಗಳು, ಗಡಸು ನೋಟದ ಪೆಟ್ರೋಲ್ ಟ್ಯಾಂಕ್, ಸೀಟಿಂಗ್ ಪೊಸಿಷನ್, ಬಾಡಿ ಕೋಲ್ ಅರ್ಥಾತ್ ಫೇರಿಂಗ್ ಎಲ್ಲದ­ರಲ್ಲೂ ಆರ್‌ 6 ಮತ್ತು ಆರ್‌ 1 ಅನ್ನು ಅನುಸರಿಸ ಲಾಗಿದೆ. ಇದು ಥೇಟ್ ಆರ್‌ 6ನ ಮೀನಿಯೇಚರ್‌ನಂತೆ ಕಾಣುತ್ತದೆ.
ಡಿಜಿಟಲ್ ಮೀಟರ್ ಕನ್ಸೋಲ್ ಇಂದಿನ ಎಲ್ಲ ಬೈಕ್‌ಗಳಲ್ಲಿ ಸಾಮಾನ್ಯ ಸಂಗತಿ. ಇದರದ್ದು ಅನಲಾಗ್ ಟ್ಯಾಕೊ ಮೀಟರ್ ಮತ್ತು ಡಿಜಿಟಲ್ ಸ್ಪೀಡೋ ಮೀಟರ್‌ನಿಂದ ಕೂಡಿದ ಮಿಶ್ರ ಕನ್ಸೋಲ್. ಸರ್ವೀಸ್ ಡ್ಯೂ, ಲೋ ಆಯಿಲ್ ಮತ್ತು ಲೋ ಫ್ಯುಯೆಲ್ ಇಂಡಿಕೇಟರ್‌ಗಳನ್ನು ಇದು ಹೊಂದಿದೆ. ಭಾರತದ ಪ್ರವೇಶ ಮಟ್ಟದ ಬೈಕ್‌­ಗಳಲ್ಲೂ ಇರುವ ಡಿಜಿಟಲ್ ಡ್ಯುಯೆಲ್ ಟ್ರಿಪ್ ಮೀಟರ್ ಇದರಲ್ಲೂ ಇದೆ. ಹೀಗಾಗಿ ಇತ್ತ ಹೆಚ್ಚೇನೂ ಗಮನಹರಿಸ­ಬೇಕಿಲ್ಲ.

ಟ್ವಿನ್‌ ಸಿಲಿಂಡರ್ ಎಂಜಿನ್
ಭಾರತದಲ್ಲಿ ಸದ್ಯಕ್ಕೆ ಮಾರಾಟ­ವಾಗು­ತ್ತಿರುವ 250 ಸಿಸಿ ವರ್ಗದ ಎಲ್ಲಾ ಬೈಕ್‌ಗಳು ಹೊಂದಿರುವುದು ಏಕೈಕ ಸಿಲಿಂಡರ್‌ನ  ಎಂಜಿನ್. ಆರ್‌25ನ ಎಂಜಿನ್ ಎರಡು ಸಿಲಿಂಡರ್ ಹೊಂದಿದೆ. ಪ್ರತಿ ಸಿಲಿಂಡರ್‌ಗೆ 4 ವಾಲ್ವ್‌ನಂತೆ ಎಂಟು ವಾಲ್ವ್‌ ಇರುವ ಈ ಎಂಜಿನ್‌ನ ಗರಿಷ್ಠ ಆರ್‌ಪಿಎಂ (ರೌಂಡ್ಸ್ ಪರ್ ಮಿನಿಟ್) 13000. 12000 ಆರ್‌ಪಿಎಂನಲ್ಲಿ ಎಂಜಿನ್‌ 35.5 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ. 1000 ಆರ್‌ಪಿಎಂನಲ್ಲಿ 22.1 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ತಣ್ಣಗಾಗಿಸಲು ಲಿಕ್ವಿಡ್ ಕೂಲಿಂಗ್ ವ್ಯವಸ್ಥೆ ಇದೆ.
ಆರ್‌ 25ನ ಗರಿಷ್ಠ ವೇಗ ಗಂಟೆಗೆ 173 ಕಿ.ಮೀ.. ಇದು ಸದ್ಯಕ್ಕೆ ಭಾರತದಲ್ಲಿ ಮಾರಾಟವಾಗುತ್ತಿರುವ ಇದೇ ವರ್ಗದ ಎಲ್ಲಾ ಬೈಕ್‌ಗಳಿಗಿಂತ ಹೆಚ್ಚಿನ ವೇಗ. 373 ಸಿ.ಸಿ ಸಾಮರ್ಥ್ಯದ ಕೆಟಿಎಂ ಡ್ಯೂಕ್ 390ನ ವೇಗವೂ ಇದಕ್ಕಿಂತ 7 ಕಿ.ಮೀ ಕಡಿಮೆ (ಗಂಟೆಗೆ ಗರಿಷ್ಠ 166 ಕಿ.ಮೀ). ಆದರೆ ವೇಗವರ್ಧನೆಯಲ್ಲಿ ಡ್ಯೂಕ್ ಮುಂದು.

0–100 ಕಿ.ಮೀ ವೇಗ ತಲುಪಲು ಆರ್‌ 25ಗೆ 4.6 ಸೆಕೆಂಡ್ ಸಾಕು. ಅವಳಿ ಸಿಲಿಂಡರ್, 8 ವಾಲ್ವ್‌ಗಳು, ಗರಿಷ್ಠ ಆರ್‌ಪಿಎಂ ಮತ್ತು ಅತ್ಯುತ್ತಮ ಎನ್ನಬಹುದಾದ ಬಿಎಚ್‌ಪಿಯಿಂದ  ಆರ್‌ 25 ಈ ವೇಗ ಪಡೆದಿದೆ. ಇಷ್ಟೆಲ್ಲಾ ಶಕ್ತಿ ಅಡಗಿಸಿಕೊಂಡಿರುವ ಈ ಬೈಕ್‌ನ ಸರಾಸರಿ ಮೈಲೇಜ್‌ 22.5 ಕಿ.ಮೀ/ಲೀ. ತನ್ನ ವರ್ಗದಲ್ಲಿ ಈ ಮೈಲೇಜ್ ಎಲ್ಲಕ್ಕಿಂತ ಕಡಿಮೆ. ವೇಗಕ್ಕೆ ಒತ್ತು ನೀಡಿರುವು­ದ­ರಿಂದ ಮೈಲೇಜ್ ಹಿನ್ನೆಲೆಗೆ ಸರಿದಿದೆ. 14.30 ಲೀಟರ್ ಸಾಮರ್ಥ್ಯದ ಟ್ಯಾಂಕ್ ಇರುವುದರಿಂದ ದೂರದ ಪಯಣಕ್ಕೆ ಚಿಂತಿಸಬೇಕಿಲ್ಲ.

ಇಷ್ಟು ವೇಗದ ಬೈಕ್‌ಗೆ ಕಡಿವಾಣ ಹಾಕಲು ಅಷ್ಟೇ ಶಕ್ತಿಶಾಲಿ ವಿನ್ಯಾಸ ಮತ್ತು ಮೂಗುದಾರ ಬೇಕೇಬೇಕು. ಈ ನಿಟ್ಟಿನಲ್ಲಿ ಯಮಾಹ ಆರ್‌25 ಹಿಂದು ಮತ್ತು ಮುಂದು ಎರಡೂ ಬದಿಯಲ್ಲೂ 17 ಇಂಚಿನ ಅಗಲವಾದ ಟೈರ್‌ಗಳನ್ನು ನೀಡಿದೆ. ಮುಂಬದಿಯಲ್ಲಿ 198 ಎಂಎಂ ಹಾಗೂ ಹಿಂಬದಿಯಲ್ಲಿ 220 ಎಂಎಂ ಡಿಸ್ಕ್‌ ಬ್ರೇಕ್‌ ಅಳವಡಿಸಿದೆ.

ಆದರೆ ಬಹುದೊಡ್ಡ ಕೊರತೆ ಎಂದರೆ ಎಬಿಎಸ್‌ ಇಲ್ಲದಿರುವುದು. ಹೆಚ್ಚುವರಿ  ಆಯ್ಕೆ­ಯಾಗಿಯೂ ಎಬಿಎಸ್‌ ನೀಡದಿ­ರುವುದು ದೊಡ್ಡ ಕೊರತೆ. (ಈ ವರ್ಗದ ಹೋಂಡಾ ಸಿಬಿಆರ್­250 ಆರ್‌ನ ಒಂದು ಅವತರಣಿಕೆಯಲ್ಲಿ ಎಬಿಎಸ್‌ ಆಯ್ಕೆಯಿದೆ). ಆದರೆ ಬೈಕ್‌ 166 ಕೆ.ಜಿ. ತೂಗುವುದರಿಂದ ಈ ವೇಗದಲ್ಲೂ ಅತ್ಯುತ್ತಮ ಬ್ರೇಕಿಂಗ್ ಮತ್ತು ರಸ್ತೆ ಹಿಡಿತ ಸಾಧ್ಯ ಎನ್ನುತ್ತದೆ ಯಮಾಹ.

ಪರ್ಫಾಮೆನ್ಸ್ ವಿಷಯದಲ್ಲಿ ತನ್ನ ಪ್ರತಿಸ್ಪರ್ಧಿಗಳಿಗಿಂತ ಆರ್‌ 25 ಮುಂದಿದೆ.  ಕಡಿಮೆ ಮೈಲೇಜ್ ಮತ್ತು ಎಬಿಎಸ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಇಲ್ಲದಿರು­ವುದು ಬಹುದೊಡ್ಡ ಕೊರತೆ. ಅಲ್ಲದೆ ಬೆಲೆಯೂ ಹೆಚ್ಚು. ಇದರ ಎಕ್ಸ್‌ ಷೋರೂಂ ಬೆಲೆ ಸರಿ ಸುಮಾರು ` 2.5 ಲಕ್ಷದಿಂದ 2.7 ಲಕ್ಷದವರಗೆ ಇರುತ್ತದೆ ಎನ್ನಲಾಗಿದೆ. ಈ ಮೂರೂ ಅಂಶಗಳು ಬೈಕ್‌ ಪ್ರಿಯರು ಇತರ ಆಯ್ಕೆಗಳೆಡೆ ದೃಷ್ಟಿ ಹರಿಸಲು ಪ್ರೇರೇಪಿಸುತ್ತದೆ ಎನ್ನುತ್ತಾರೆ ಆಟೊಮೊಬೈಲ್ ತಜ್ಞರು.

ಪ್ರಬಲ ಸ್ಪರ್ಧೆ
ಆರ್‌ 25 ಭಾರತದ ಮಾರುಕಟ್ಟೆಗೆ ಬಿಡುಗಡೆಯಾದಲ್ಲಿ ಕೆಟಿಎಂ ಡ್ಯೂಕ್ 200, ಡ್ಯೂಕ್ 390, ಹೋಂಡಾ ಸಿಬಿಆರ್‌ 250 ಆರ್, ನಿಂಜಾ 250 ಆರ್, ಹ್ಯೂಸಂಗ್ ಜಿಟಿಆರ್­ 250 ಆರ್ ಬೈಕ್‌ಗಳಿಗೆ ಪ್ರಬಲ ಸ್ಪರ್ಧೆ ಒಡ್ಡಲಿದೆ. ಆರ್‌ 25ನೊಂದಿಗೇ ಕವಾಸಕಿ ನಿಂಜಾ 300 ಆರ್, ಹೊಂಡಾ ಸಿಬಿಆರ್ 300 ಆರ್, ಕೆಟಿಎಂ ಆರ್‌ಸಿ 200, ಹೀರೊ ಎಚ್‌ಎಕ್ಸ್‌ 250 ಬೈಕ್‌ಗಳು ನಮ್ಮ ರಸ್ತೆಗಿಳಿಯಲಿವೆ. ಇವುಗಳಿಂದಲೂ ಆರ್‌ 25 ಸ್ಪರ್ಧೆ ಎದುರಿಸಲು ಸಿದ್ಧವಾಗ­ಬೇಕಿದೆ. ಸ್ಪರ್ಧಾತ್ಮಕ ಬೆಲೆಯೊಂದಿಗೆ ಈ ಬೈಕ್ ನಮ್ಮ ರಸ್ತೆಗಿಳಿದಲ್ಲಿ ಪ್ರತಿಸ್ಪರ್ಧಿ­ಗಳನ್ನು ಹಿಂದಿಕ್ಕುವುದರಲ್ಲಿ ಎರಡು ಮಾತಿಲ್ಲ. ಯಮಾಹ ಮೋಡಿ ಅಂಥದ್ದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.