ADVERTISEMENT

ಸ್ಮಾರ್ಟ್‌ಫೋನ್‌ ಲೋಕಕ್ಕೆ ಹೊಸ ಫೋನ್

ಝಡ್‌ಟಿಇ ಬ್ಲೇಡ್ ಎ 2 ಪ್ಲಸ್

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2017, 19:30 IST
Last Updated 22 ಫೆಬ್ರುವರಿ 2017, 19:30 IST
ಸ್ಮಾರ್ಟ್‌ಫೋನ್‌ ಲೋಕಕ್ಕೆ  ಹೊಸ ಫೋನ್
ಸ್ಮಾರ್ಟ್‌ಫೋನ್‌ ಲೋಕಕ್ಕೆ ಹೊಸ ಫೋನ್   
ಚೀನಾ ದೇಶದ ಕೆಲವು ಕಂಪೆನಿಗಳು ಹಲವು ನಮೂನೆಯ ಎಲೆಕ್ಟ್ರಾನಿಕ್ ಸಾಧನಗಳನ್ನು ತಯಾರಿಸುತ್ತಿದ್ದು, ಇತ್ತೀಚೆಗೆ ಕೆಲವು ವರ್ಷಗಳಿಂದ ಸ್ಮಾರ್ಟ್‌ಫೋನ್ ತಯಾರಿಕೆ ಕಡೆ ತಲೆ ಹಾಕಿವೆ.
 
ಈ ಸಾಲಿಗೆ ಸೇರಿದ ಇನ್ನೊಂದು ಕಂಪೆನಿ ಝಡ್‌ಟಿಇ. ಈ ಕಂಪೆನಿ ರೂಟರ್, ಹಬ್, ಮೋಡೆಮ್ ಇತ್ಯಾದಿಗಳ ಮೂಲಕ ಭಾರತದಲ್ಲಿ ಹೆಸರುವಾಸಿಯಾಗಿದೆ. ಈಗ ಅದು ಸ್ಮಾರ್ಟ್‌ಫೋನ್‌ಗಳ ಮೂಲಕ ಈಗಾಗಲೇ ತುಂಬಿದ ಮಾರುಕಟ್ಟೆಗೆ ನಾನೂ ಇದ್ದೇನೆ ಎಂದು ಪ್ರವೇಶ ಮಾಡಿದೆ. ಈ ಕಂಪೆನಿಯ ಝಡ್‌ಟಿಇ ಬ್ಲೇಡ್ ಎ2 ಪ್ಲಸ್ (ZTE Blade A2 Plus) ನಮ್ಮ ಈ ವಾರದ ಗ್ಯಾಜೆಟ್.
 
ಗುಣವೈಶಿಷ್ಟ್ಯಗಳು
1.5 ಗಿಗಾಹರ್ಟ್ಸ್ ವೇಗದ 4 ಹೃದಯಗಳ + 1 ಗಿಗಾಹರ್ಟ್ಸ್ ವೇಗದ 4 ಹೃದಯಗಳ ಪ್ರೊಸೆಸರ್ (MT6750T), 4 +32 ಗಿಗಾಬೈಟ್ ಮೆಮೊರಿ, 128 ಗಿಗಾಬೈಟ್ ತನಕ ಮೈಕ್ರೊಎಸ್‌ಡಿ ಕಾರ್ಡ್ ಮೂಲಕ ಅಧಿಕ ಮೆಮೊರಿ ಹಾಕಿಕೊಳ್ಳಬಹುದು, ಯುಎಸ್‌ಬಿ ಓಟಿಜಿ, 2/3/4ಜಿ, ವಿಓಎಲ್‌ಟಿ (VoLTE), ಎರಡು ನ್ಯಾನೋ ಸಿಮ್, 5.5 ಇಂಚು ಗಾತ್ರದ 1920x1080 ಐಪಿಎಸ್ ಪರದೆ, 13 ಮೆಗಾಪಿಕ್ಸೆಲ್‌ ರೆಸೊಲೂಶನ್‌ನ ಪ್ರಾಥಮಿಕ ಮತ್ತು 8 ಮೆಗಾಪಿಕ್ಸೆಲ್ ರೆಸೊಲೂಶನ್‌ನ ಸ್ವಂತೀ ಕ್ಯಾಮೆರಾಗಳು, ಬೆರಳಚ್ಚು ಸ್ಕ್ಯಾನರ್, ಎಫ್‌ಎಂ ರೇಡಿಯೊ, 5000 mAH ಶಕ್ತಿಯ ತೆಗೆಯಲಸಾಧ್ಯವಾದ ಬ್ಯಾಟರಿ, 155 x 76.2 x 9.8 ಮಿ.ಮೀ. ಗಾತ್ರ, 189 ಗ್ರಾಂ ತೂಕ, ಆಂಡ್ರಾಯ್ಡ್‌ 6.0, ಇತ್ಯಾದಿ. ಫ್ಲಿಪ್‌ಕಾರ್ಟ್‌ ಮೂಲಕ ಮಾತ್ರ ಲಭ್ಯ. ನಿಗದಿತ ಬೆಲೆ ₹12,999.
 
ಇದರ ರಚನೆ ಮತ್ತು ವಿನ್ಯಾಸಗಳಲ್ಲಿ ಹೇಳಿಕೊಳ್ಳುವಂತಹದ್ದೇನೂ ಇಲ್ಲ. ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಬಹುತೇಕ ಫೋನ್‌ಗಳಂತೆಯೇ ಇದೆ. ಲೋಹದ ಫ್ರೇಂ ಇದೆ. ಹಿಂಭಾಗ ಸ್ವಲ್ಪ ಉಬ್ಬಿದ್ದು ತಲೆದಿಂಬಿನಂತಿದೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಎಡ ಭಾಗದಲ್ಲಿ ಸಿಮ್ ಮತ್ತು ಮೆಮೊರಿ ಕಾರ್ಡ್‌ ಹಾಕಲು ಪಿನ್ ಮೂಲಕ ಚುಚ್ಚಿದರೆ ಹೊರಬರುವ ಟ್ರೇ ಇದೆ.
 
ಈ ಟ್ರೇಯಲ್ಲಿ ಎರಡು ನ್ಯಾನೋ ಸಿಮ್ ಅಥವಾ ಒಂದು ನ್ಯಾನೋ ಸಿಮ್ ಮತ್ತು ಒಂದು ಮೈಕ್ರೊಎಸ್‌ಡಿ ಕಾರ್ಡ್ ಹಾಕಬಹುದು. ಅಂದರೆ ಎರಡು ಸಿಮ್ ಬಳಸುವಾಗ ಅಧಿಕ ಮೆಮೊರಿ ಇಲ್ಲ. ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿ ಇದೆ. ಮೇಲ್ಬಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿಯಿದೆ. ಹಿಂಭಾಗದಲ್ಲಿ ಮಧ್ಯದಲ್ಲಿ ಕ್ಯಾಮೆರಾ ಇದೆ. ಪಕ್ಕದಲ್ಲಿ ಫ್ಲಾಶ್ ಇದೆ. ಕ್ಯಾಮೆರಾದ (ಫ್ಲಾಶ್‌ನ) ಸ್ವಲ್ಪ ಕೆಳಗೆ ಬೆರಳಚ್ಚು ಸ್ಕ್ಯಾನರ್ ಇದೆ.  
 
ಹಿಂಭಾಗದ ಕವಚ ಸ್ವಲ್ಪ ನುಣುಪಾಗಿದೆ. ಫೋನ್ ದೊಡ್ಡದಾಗಿರುವುದರಿಂದ ಮತ್ತು ತೂಕದ್ದಾಗಿರುವುದರಿಂದ ಒಂದೇ ಕೈಯಲ್ಲಿ ಹಿಡಿದು ಕೆಲಸ ಮಾಡುವುದು ಸ್ವಲ್ಪ ಕಷ್ಟ. ಈ ಫೋನ್‌ನಲ್ಲಿ ಕಂಪೆನಿಯವರು ಶಕ್ತಿಶಾಲಿಯಾದ ಬ್ಯಾಟರಿ ನೀಡುವ ಬಗ್ಗೆ ಹೆಚ್ಚು ಗಮನವನ್ನು ನೀಡಿದ್ದಾರೆ. ಇದರಲ್ಲಿರುವುದು ಶಕ್ತಿಶಾಲಿಯಾದ 5000 mAH ಬ್ಯಾಟರಿ. ಸುಮಾರು ಎರಡೂವರೆ ದಿನ ಬಾಳಿಕೆ ಬರುತ್ತದೆ. 
 
ಯುಎಸ್‌ಬಿ ಓಟಿಜಿ ಕೇಬಲ್ ಬಳಸಿ ಇನ್ನೊಂದು ಸಾಧನಕ್ಕೆ ಚಾರ್ಜ್ ಮಾಡಬಹುದು. ಇತ್ತೀಚೆಗೆ ಕೆಲವು ಫೋನ್‌ಗಳು ಇದೇ ರೀತಿಯ ಸವಲತ್ತು ನೀಡುತ್ತಿವೆ. ಅಂದರೆ ಈ ಸವಲತ್ತು ನೀಡುತ್ತಿರುವ ಏಕೈಕ ಫೋನ್ ಇದಲ್ಲ. ಇದರ ಬ್ಯಾಟರಿ ಏನೋ ಶಕ್ತಿಶಾಲಿಯಾಗಿದೆ, ಆದರೆ ಇದರಲ್ಲಿ ವೇಗವಾಗಿ ಚಾರ್ಜ್ ಮಾಡುವ ಸವಲತ್ತು (quick charge) ಇಲ್ಲ. ಇದರಿಂದ ಇನ್ನೊಂದು ಸಾಧನಕ್ಕೆ ಚಾರ್ಜ್ ಮಾಡುವಾಗ ಇದು ಅರ್ಧ ಆಂಪಿಯರ್ ಮಾತ್ರ ವಿದ್ಯುತ್ ಪ್ರವಾಹ ನೀಡಬಲ್ಲುದು. 
 
ಇದರ ಪ್ರೊಸೆಸರ್ ಅಂತಹ ಶಕ್ತಿಶಾಲಿಯಾದ ಪ್ರೊಸೆಸರ್ ಅಲ್ಲ. ತುಂಬ ಶಕ್ತಿಯ ಫೋನ್ ಬೇಕು ಎನ್ನುವವರಿಗೆ ಈ ಫೋನ್ ಹೇಳಿದ್ದಲ್ಲ. ಹಲವು ಕೆಲಸಗಳನ್ನು ಏಕಕಾಲದಲ್ಲಿ ಮಾಡುವಾಗ ಮತ್ತು ಮೇಲ್ದರ್ಜೆಯ ಮೂರು ಆಯಾಮಗಳ ಆಟಗಳನ್ನು ಆಡುವಾಗ (ಉದಾ –ಆಸ್‌ಪಾಲ್ಟ್) ಇದರ ದೌರ್ಬಲ್ಯ ವೇದ್ಯವಾಗುತ್ತದೆ. ಹಾಗೆಂದು ಹೇಳಿ ಸಾಮಾನ್ಯ ಬಳಕೆಯಲ್ಲಿ ಅಂತಹ ತೊಂದರೆಯೇನೂ ಕಂಡುಬರುವುದಿಲ್ಲ. ಸಾಮಾನ್ಯ ಆಟ ಆಡುವುದು, ವಿಡಿಯೊ ವೀಕ್ಷಣೆ ಮಾಡುವುದು ಎಲ್ಲ ಸರಾಗವಾಗಿ ಮಾಡಬಹುದು. ಹೈಡೆಫಿನಿಶನ್ ವಿಡಿಯೊ ವೀಕ್ಷಣೆ ಮಾಡಬಹುದು, ಆದರೆ 4k ವಿಡಿಯೊ ಪ್ಲೇ ಆಗುವುದಿಲ್ಲ.
 
ಇದರ ಕ್ಯಾಮೆರಾ, ಹೆಸರಿಗೆ 13 ಮೆಗಾಪಿಕ್ಸೆಲ್ ಆಗಿದೆ. ಆದರೆ ಈ ಬೆಲೆಗೆ ದೊರೆಯುವ ಅತ್ಯುತ್ತಮ ಕ್ಯಾಮೆರಾ ಇದರದಲ್ಲ. ಇದೇ ಬೆಲೆಗೆ ದೊರೆಯುವ ಇತರೆ ಕೆಲವು ಫೋನ್‌ಗಳಲ್ಲಿ ಇದಕ್ಕಿಂತ ಉತ್ತಮ ಕ್ಯಾಮೆರಾ ಇದೆ. ಉತ್ತಮ ಬೆಳಕಿನಲ್ಲಿ ತೃಪ್ತಿದಾಯಕವಾದ ಫೋಟೊ ಬರುತ್ತದೆ.
 
ಕೆಲವು ಸಂದರ್ಭಗಳಲ್ಲಿ ನಿಖರವಾಗಿ ಫೋಕಸ್ ಆಗುವುದಿಲ್ಲ. ಕಡಿಮೆ ಬೆಳಕಿನಲ್ಲಿ ಫೋಟೊ ಚೆನ್ನಾಗಿ ಮೂಡಿಬರುವುದಿಲ್ಲ. ವಿಡಿಯೊ ಚಿತ್ರೀಕರಣವೂ ತೃಪ್ತಿದಾಯಕವಾಗಿಲ್ಲ. ಇದರ ಆಡಿಯೊ ಇಂಜಿನ್ ಪರವಾಗಿಲ್ಲ. ಮೇಲ್ಪಟ್ಟದ್ದಂತೂ ಅಲ್ಲ. ಒಂದು ಮಟ್ಟಿಗೆ ತೃಪ್ತಿದಾಯಕವಾಗಿದೆ ಎನ್ನಬಹುದು. ಫೋನ್ ಜೊತೆ ಯಾವುದೇ ಇಯರ್‌ಫೋನ್ ನೀಡಿಲ್ಲ. 
 
ಇದರಲ್ಲಿರುವುದು ಆಂಡ್ರಾಯ್ಡ್‌ 6.0. ಆದುದರಿಂದ ಕನ್ನಡದ ತೋರುವಿಕೆ ಸರಿಯಾಗಿದೆ. ಕನ್ನಡದ ಯೂಸರ್ ಇಂಟರ್‌ಫೇಸ್ ಇದೆ. ಆಂಡ್ರಾಯ್ಡ್‌ 7.0 ಮಾರುಕಟ್ಟೆಗೆ ಬಂದು ಹಲವು ತಿಂಗಳುಗಳೇ ಆಗಿರುವಾಗ ಇವರು ಯಾಕೆ ಇನ್ನೂ ಹಳೆಯ 6.0 ಆವೃತ್ತಿ ನೀಡಿದ್ದಾರೋ ಗೊತ್ತಿಲ್ಲ. 
 
ವಿಓಎಲ್‌ಟಿ (VoLTE) ಸೌಲಭ್ಯ ಇದೆ. ಅಂದರೆ ರಿಲಯನ್ಸ್ ಜಿಯೋ ಸಿಮ್ ಕೆಲಸ ಮಾಡುತ್ತದೆ. ಈ ಬೆಲೆಗೆ ಹಲವು ಫೋನ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಇದೇ ಅಂಕಣದಲ್ಲಿ ಇತ್ತೀಚೆಗೆ ಅಂತಹ ಕೆಲವು ಫೋನ್‌ಗಳ ವಿಮರ್ಶೆಯನ್ನು ನೀಡಲಾಗಿತ್ತು. ಅವುಗಳಿಗೆ ಹೋಲಿಸಿದರೆ ಈ ಫೋನ್ ಸೋಲುತ್ತದೆ. (ಅವುಗಳನ್ನು ಕೋಷ್ಟಕ ಮಾಡಿ ನೀಡಲಾಗಿದೆ). v 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.