ADVERTISEMENT

ಸ್ವರ ಲೋಕದ ಪಥಿಕ ‘ಪೃಥ್ವಿ’

ರಶ್ಮಿ ಕಾಸರಗೋಡು
Published 27 ಜುಲೈ 2016, 19:30 IST
Last Updated 27 ಜುಲೈ 2016, 19:30 IST
ಸ್ವರ ಲೋಕದ ಪಥಿಕ ‘ಪೃಥ್ವಿ’
ಸ್ವರ ಲೋಕದ ಪಥಿಕ ‘ಪೃಥ್ವಿ’   

ವಿದ್ಯಾರ್ಥಿಯಾಗಿದ್ದಾಗಲೇ ಸಂಗೀತದ ಸೆಳೆತಕ್ಕೆ ಮನಸೋತು ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ತೆರೆದುಕೊಂಡವರು ಬೆಂಗಳೂರಿನ  ಗಾಯಕ ಪೃಥ್ವಿರಾಜ್. ಹಲವೆಡೆ ಸಂಗೀತ ಸವಿ ಹರಿಸಿರುವ ಅವರು ಚಿಕ್ಕ ವಯಸ್ಸಿನಲ್ಲೇ  ಅಲ್ಬಟ್ರಾಸ್‌ ಕರೋಕೆ ಸ್ಟಾರ್ಟ್‌ ಅಪ್ ಕೂಡ ಆರಂಭಿಸಿದವರು. ಜೊತೆಗೆ ‘ದೇಶದ ಮೊದಲ ಯುವ
ಸೌಂಡ್  ಎಂಜಿನಿಯರ್’ ಎಂದೂ ಹೆಸರು ಪಡೆದಿದ್ದಾರೆ. ಸಂಗೀತದ ಬಗ್ಗೆ ಅತೀವ ಪ್ರೀತಿ ಇಟ್ಟುಕೊಂಡಿರುವ ಅವರು ಕನಸುಗಳನ್ನು ಇಲ್ಲಿ ಹರಿಯಬಿಟ್ಟಿದ್ದಾರೆ...

ಪ್ರತಿಯೊಬ್ಬರಲ್ಲಿಯೂ ಪ್ರತಿಭೆ ಎಂಬುದು ಅಡಕವಾಗಿರುತ್ತದೆ. ಅದು ಸುಪ್ತವಾಗಿದ್ದರೆ ಅದನ್ನು ಗುರುತಿಸಿ ಸಾಧನೆಯ ಮಟ್ಟಕ್ಕೆ ಏರುವವರು ಅತಿ ವಿರಳ. ಸಾಧನೆ ಮತ್ತು ಪ್ರತಿಭೆ ಇವು ಪರಸ್ಪರ ಪರಿಪೋಷಕಗಳು. ಅಗಾಧವಾದ ಸಂಗೀತ ಕ್ಷೇತ್ರದಲ್ಲಿ ದಿನೇ ದಿನೇ ಹೊಸ ಗಾಯಕರು ಬೆಳಕಿಗೆ ಬರುತ್ತಲೇ ಇರುತ್ತಾರೆ. ಅದರಲ್ಲಿ ನೆಲೆ ನಿಲ್ಲುವವರು ಸಂಗೀತವನ್ನು ತಪಸ್ಸುಗೈದವರು ಮಾತ್ರ.

ಈ ಸಾಲಿಗೆ ಸೇರುವವರು ಪೃಥ್ವಿರಾಜ್. ವಿದ್ಯಾರ್ಥಿ ದೆಸೆಯಲ್ಲಿಯೇ ಸಂಗೀತ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಾ, ಗಾಯಕರಾಗಿ ಮಿಂಚುತ್ತಿರುವ ಯುವ ಪ್ರತಿಭೆ ಪೃಥ್ವಿರಾಜ್. ನಗರದ ಬಿಎಂಎಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ಪದವಿ ವಿದ್ಯಾರ್ಥಿಯಾಗಿರುವ ಪೃಥ್ವಿರಾಜ್ ಈಗಾಗಲೇ ಹಲವು ಖ್ಯಾತ ಗಾಯಕರೊಂದಿಗೆ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. 

13 ನೇ ವಯಸ್ಸಿನಲ್ಲಿ ಸಂಗೀತ ಕ್ಷೇತ್ರಕ್ಕೆ ಪ್ರವೇಶಿಸಿದ ಪೃಥ್ವಿರಾಜ್, ‘ನಟ ವಿಷ್ಣುವರ್ಧನ್ ಅವರೇ ನನ್ನ ಗುರು’ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಇಲ್ಲಿಯವರೆಗೆ ಯಾವುದೇ ಸಂಗೀತ ಗುರುವಿನಿಂದ  ಶಿಕ್ಷಣ ಪಡೆಯದೇ ಇರುವ ಈ ಗಾಯಕ, ವಿಷ್ಣುವರ್ಧನ್ ಅವರನ್ನೇ ‘ಗುರು’ವಾಗಿ ಸ್ವೀಕರಿಸಿದ್ದರ ಹಿಂದೆ ಒಂದು ಕಥೆಯಿದೆ. 2009 ಜೂನ್ ತಿಂಗಳಲ್ಲಿ ಅದೊಂದು ದಿನ ನಟ ವಿಷ್ಣುವರ್ಧನ್ ಅವರ ‘ಸ್ನೇಹಲೋಕ’ ಕರೋಕೆ ಕ್ಲಬ್‌ನಲ್ಲಿ ಮಹಮ್ಮದ್ ರಫಿ ಅವರ ‘ಪುಕಾರ್ ತಾ ಚಲಾ ಹು ಮೈ’ ಹಾಡನ್ನು ಹಾಡಿದಾಗ ಸ್ವತಃ ವಿಷ್ಣುವರ್ಧನ್ ಅವರೇ ಅಭಿನಂದಿಸಿ ‘ಬೆಸ್ಟ್ ಸಿಂಗರ್ ಆಫ್ ದ ಡೇ’ ಪ್ರಶಸ್ತಿಯನ್ನೂ ನೀಡಿದ್ದರು.

ಅದು ಇವರ ಜೀವನದ ಅತಿ ಮುಖ್ಯ ತಿರುವು ಆಗಿತ್ತು. ಪ್ರತೀ ತಿಂಗಳ ಎರಡನೇ ಶನಿವಾರ ಸ್ನೇಹಲೋಕ ಕರೋಕೆ ಕ್ಲಬ್‌ನಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿ ಹಿಂದಿ ಹಾಡುಗಳನ್ನಷ್ಟೇ ಹಾಡಲಾಗುತ್ತದೆ. ‘ವಿಷ್ಣುವರ್ಧನ್ ಅವರಿಗೆ ಹಿಂದಿ ಹಾಡುಗಳೆಂದರೆ ತುಂಬಾ ಇಷ್ಟವಿತ್ತು. ಅವರಿಗೆ ಹಳೆ ಹಿಂದಿ ಹಾಡುಗಳ ಬಗ್ಗೆ ಅಪಾರ ಜ್ಞಾನವೂ ಇತ್ತು. ತುಂಬಾ ಅಪರೂಪದ ಹಾಡುಗಳು ಅವರ ಸಂಗ್ರಹದಲ್ಲಿರುತ್ತಿತ್ತು.

ಇಂತಿರುವಾಗ ನನ್ನ ಹಾಡುಗಳು ಅವರಿಗೆ ತುಂಬಾ ಹಿಡಿಸಿದ್ದವು. ಹಾಗೆ ಆ ಪರಿಚಯದ ಮೂಲಕ ಇತರ ವೇದಿಕೆಯೂ ಸಿಕ್ಕಿ ಬಿಟ್ಟಿತು’ ಎನ್ನುವ ಪೃಥ್ವಿ,  ಅಲ್ಲಿಂದ ಸಿಕ್ಕ ಅವಕಾಶಗಳನ್ನೆಲ್ಲಾ ಬಳಸಿಕೊಂಡು ಪ್ಲಸ್  ಟು ತಲುಪುವ ಹೊತ್ತಿಗೆ 500 ಶೋಗಳನ್ನು ಮಾಡಿ ಸಾಧನೆಯ ಮೆಟ್ಟಿಲೇರಿದ್ದರು. ‘ವಾಯ್ಸ್ ಆಫ್ ಬೆಂಗಳೂರು’ ಶೋನಲ್ಲಿ ಭಾಗವಹಿಸಿ ಪ್ರೀ ಕ್ವಾರ್ಟರ್ ಅಂತಿಮ ಸ್ಪರ್ಧೆಗೂ, ‘ಅಲೈವ್ ಇಂಡಿಯಾ ಕಾನ್ಸರ್ಟ್’ ರಿಯಾಲಿಟಿ ಶೋನಲ್ಲಿ ಅಂತಿಮ ಹಂತಕ್ಕೂ ತಲುಪಿದ್ದರು. ಆದರೆ ಆ ಹೊತ್ತಲ್ಲಿ 12ನೇ ತರಗತಿಯ ಪ್ರೀ ಬೋರ್ಡ್ ಪರೀಕ್ಷೆಗೆ ತಯಾರಿ ನಡೆಸಬೇಕಾಗಿ ಬಂದಿದ್ದರಿಂದ ಆ ಶೋ ಕೈ ಬಿಡಬೇಕಾಗಿ ಬಂತು.

12ನೇ ತರಗತಿಯಲ್ಲಿದ್ದಾಗ ಚಾನ್ಸೆರಿ ಹೋಟೆಲ್ ನಲ್ಲಿ ಎ.ಆರ್.ರೆಹಮಾನ್ ಜತೆ ಹಾಡಿದ್ದು ಅವಿಸ್ಮರಣೀಯ ಅನುಭವಗಳಲ್ಲೊಂದು ಎಂದು ನೆನಪಿಸಿಕೊಳ್ಳುತ್ತಾರೆ.‘ಓದು ಮತ್ತು ಸಂಗೀತ-ಇವೆರಡನ್ನೂ ಜತೆಯಾಗಿ ಸಂಭಾಳಿಸಲು ಕಷ್ಟವಾಗುತ್ತಿತ್ತು. ಸಿಬಿಎಸ್‌ಇ ಶಾಲೆಯಲ್ಲಿ ಕಲಿಯುತ್ತಿದ್ದರಿಂದ  ಪರೀಕ್ಷೆ ಸಮಯಗಳಲ್ಲಿ ಸಂಗೀತ ಕಾರ್ಯಕ್ರಮ ಬಂದರೆ ಅದನ್ನು ಬಿಟ್ಟು ಓದಿನತ್ತ ಗಮನ ಹರಿಸಬೇಕಾಗಿತ್ತು.

ನಾನು ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದರೂ ಎರಡನ್ನೂ ಸಂಭಾಳಿಸಬೇಕಾಗಿ ಬಂದಾಗ ಕಷ್ಟ ಎನ್ನಿಸುತ್ತಿತ್ತು. ಆ ಸಮಯದಲ್ಲೆಲ್ಲಾ ಅಪ್ಪ ಅಮ್ಮ ತುಂಬಾ ಸಹಾಯ ಮಾಡುತ್ತಿದ್ದರು. ಸಂಗೀತದಲ್ಲಿ ಎಷ್ಟೇ ಒಲವಿದ್ದರೂ ಓದು ಮುಖ್ಯ ಎಂಬುದು ನನಗೆ ಗೊತ್ತಿತ್ತು. 12ನೇ ತರಗತಿಯಲ್ಲಿರುವಾಗ ನಾನೊಂದು ವರ್ಕ್‌ಶಾಪ್‌ನಲ್ಲಿ ಭಾಗವಹಿಸಿದೆ.

ಸೌಂಡ್ ಎಂಜಿನಿಯರಿಂಗ್ ವರ್ಕ್‌ಶಾಪ್‌ ಅದಾಗಿತ್ತು. ಅಲ್ಲಿ ನಾನು ಸೌಂಡ್ ಎಂಜಿನಿಯರಿಂಗ್ ಮೂಲಗಳನ್ನು ಕಲಿತೆ. ಸಂಗೀತ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಸ್ಪರ್ಧೆ ಇರುವಾಗ ತಾಂತ್ರಿಕ ವಿಷಯಗಳನ್ನು ಅರಿತು ಮುಂದೆ ಸಾಗುವುದು ನನ್ನ ಉದ್ದೇಶವಾಗಿತ್ತು. ಪ್ಲಸ್  ಟು ಮುಗಿಸಿ ಒಳ್ಳೆ  ಕಾಲೇಜಿನಲ್ಲಿ ಎಂಜಿನಿಯರಿಂಗ್ ಸೀಟು ಕೂಡಾ ಸಿಕ್ಕಿತು.

ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ಅಷ್ಟೊಂದು ಕಷ್ಟ ಇರಲ್ಲ, ಆದ್ದರಿಂದಲೇ ಅದನ್ನು ಆಯ್ಕೆ ಮಾಡಿಕೊಂಡೆ. ಜತೆ ಜತೆಗೇ ನನ್ನ ಸಂಗೀತ ಪಯಣವನ್ನೂ ಮುಂದುವರಿಸಬೇಕಿತ್ತಲ್ಲಾ? 2013 ಜುಲೈನಲ್ಲಿ ಕಾಲೇಜು ಶುರುವಾಯಿತು. ಆ ಹೊತ್ತಲ್ಲೇ ನಾನು ಜೆ.ಪಿ ನಗರದಲ್ಲಿರುವ ‘ಆಡಿಯೊ ಲೈಫ್ ಸ್ಕೂಲ್ ಆಫ್ ಎಂಜಿನಿಯರಿಂಗ್’ನಲ್ಲಿ ಸೌಂಡ್   ಎಂಜಿನಿಯರಿಂಗ್ ತರಬೇತಿಗೆ ಸೇರಿಕೊಂಡೆ.

ಬೆಳಿಗ್ಗೆ ಎಂಜಿನಿಯರಿಂಗ್ ಕಾಲೇಜು ಮುಗಿಸಿ ಆಮೇಲೆ ಸಂಜೆ 6 ಗಂಟೆಯಿಂದ 9 ಗಂಟೆವರೆಗೆ  ಸೌಂಡ್ ಎಂಜಿನಿಯರಿಂಗ್ ಕಲಿಯಲು ಸಂಜೆ ಕಾಲೇಜಿಗೆ ಹೋಗುತ್ತಿದ್ದೆ. ಬೆಳಗ್ಗೆ 6.30ಕ್ಕೆ ದಿನಚರಿ ಆರಂಭವಾಗಿ ರಾತ್ರಿ 11 ಗಂಟೆಗೆ ಮನೆಗೆ ಸೇರುತ್ತಿದ್ದೆ. ಇವುಗಳ ನಡುವೆ ಸಂಗೀತ ಕಾರ್ಯಕ್ರಮ ನೀಡಲು ಹೋಗುತ್ತಿದ್ದೆ. ಕೆಲವೊಂದು ಸಾರಿ ಬೆಳಿಗ್ಗೆ ಕಾಲೇಜಿನಲ್ಲಿ ಪರೀಕ್ಷೆ ಇರುತ್ತಿತ್ತು, ಸಂಜೆ ಸಂಗೀತ ಕಾರ್ಯಕ್ರಮ. ಹೀಗಿರುವಾಗ ಸರಿಯಾಗಿ ಅಭ್ಯಾಸ ಮಾಡುವುದಕ್ಕೂ ಸಮಯ ಸಿಗುತ್ತಿರಲಿಲ್ಲ.

ಈ ಕಾರಣದಿಂದಲೇ ಸಂಗೀತ ಕಾರ್ಯಕ್ರಮಗಳನ್ನು ಕೈ ಬಿಟ್ಟದ್ದೂ ಇದೆ. ಎಂಜಿನಿಯರಿಂಗ್ ಕಲಿಕೆಯ ಜತೆಗೇ 18 ತಿಂಗಳುಗಳ ಸೌಂಡ್ ಎಂಜಿನಿಯರಿಂಗ್ ಕೋರ್ಸ್ ಮುಗಿಸಿದಾಗ ನನಗೆ 19 ವರ್ಷ. ‘ದೇಶದ ಮೊದಲ ಯಂಗ್ ಸೌಂಡ್  ಎಂಜಿನಿಯರ್’ ಎಂಬ ದಾಖಲೆಯೂ ನನ್ನದಾಯಿತು. ನನಗೀಗ 21 ವರ್ಷ. ಇನ್ನೊಂದು ವರ್ಷದಲ್ಲಿ ಎಂಜಿನಿಯರಿಂಗ್ ಮುಗಿದು  ಬಿಡುತ್ತದೆ.

ಅನಂತರ ಪೂರ್ಣ ಪ್ರಮಾಣದಲ್ಲಿ ಸಂಗೀತ ಕ್ಷೇತ್ರದಲ್ಲೇ ತೊಡಗಿಸಿಕೊಂಡು ಬಾಲಿವುಡ್‌ಗೆ ಪ್ರವೇಶಿಸಬೇಕು. ಎಂಜಿನಿಯರಿಂಗ್ ಮುಗಿದ ಕೂಡಲೇ ಸಂಗೀತಕ್ಕೆ ಸಂಬಂಧಪಟ್ಟಂತೆ ಬೇರೆ ಕೋರ್ಸ್‌ಗಳನ್ನು ಮಾಡಬೇಕು. ಸಂಗೀತದಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಾ ಹೆಚ್ಚಿನ ಸಾಧನೆ ಮಾಡುತ್ತೇನೆ’ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.

‘‘ಕಳೆದ ವರ್ಷ ದುಬೈನಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸುನಿಧಿ ಚೌಹಾಣ್, ಬಾದ್ ಷಾ, ನಟಿ ಜರೀನ್ ಖಾನ್ ಭಾಗವಹಿಸಿದ್ದರು.  ದೊಡ್ಡ  ಸಂಗೀತ ಕಾರ್ಯಕ್ರಮ ಅದಾಗಿದ್ದು, ಸರಿ ಸುಮಾರು 7000 ಸಭಿಕರು ಅಲ್ಲಿದ್ದರು. ದುಬೈನಲ್ಲಿರುವ ಭಾರತೀಯರು, ಅದರಲ್ಲೂ ಕೇರಳಿಗರ ಸಂಖ್ಯೆ ಜಾಸ್ತಿಯೇ ಇತ್ತು. ಹಾಗಾಗಿ  ಮೊದಲು ಮಲಯಾಳಂ ಹಾಡೊಂದನ್ನು ಹಾಡಿದೆ.

ಐದಾರು ಹಿಂದಿ ಹಾಡುಗಳನ್ನು ಹಾಡಿ, ಕನ್ನಡ ಹಾಡು ಹಾಡದೇ ಇದ್ದರೆ ಹೇಗೆ? ಅಲ್ಲಿ ಕನ್ನಡಿಗರೇನೂ ಜಾಸ್ತಿ ಇರಲಿಲ್ಲ. ಆದರೆ ನಾನು ಸಭಿಕರಿಗೆ ಮೊದಲು ಹಾಡಿನ ಸಾಹಿತ್ಯ ಹೇಳಿಕೊಟ್ಟು ಅವರೂ ತನ್ನ ಜತೆ ದನಿಗೂಡಿಸುವಂತೆ ಮಾಡಿ ‘ಹುಟ್ಟಿದರೇ ಕನ್ನಡ ನಾಡಲಿ ಹುಟ್ಟಬೇಕು’ ಹಾಡು ಹಾಡಿದಾಗ ಜನರ ಪ್ರತಿಕ್ರಿಯೆ ಅದ್ಭುತ ವಾಗಿತ್ತು.! ಅಲ್ಲಿ ಕಳೆದ ಆ 30 ನಿಮಿಷ ನನ್ನ ಜೀವನದ ಅವಿಸ್ಮರಣೀಯ ಕ್ಷಣವಾಗಿತ್ತು.

ಅಷ್ಟೇ ಅಲ್ಲ ಮೊದಲ ಬಾರಿ ದುಬೈನಲ್ಲಿ ಶೋ ನೀಡಲು ಹೋಗಿದ್ದಾಗ, ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಅಲ್ಲಿನ ಗಲ್ಫ್ ಟೈಮ್ಸ್, ಖಲೀಜ್ ಟೈಮ್ಸ್ ಪತ್ರಿಕೆಗಳಲ್ಲಿ ನನ್ನ ಫೋಟೊ ರಾರಾಜಿಸುತ್ತಿದ್ದು, ನಡೆಯಲಿದ್ದ ನಮ್ಮ ಸಂಗೀತ ಕಾರ್ಯಕ್ರಮದ ಪ್ರೋಮೊಗಳನ್ನು ನೋಡುತ್ತಿದ್ದಂತೆ ಹೊಸತೊಂದು ಅನುಭವ. ವಿದೇಶಿ ನೆಲದಲ್ಲಿ ಉಂಟಾದ ರೋಮಾಂಚನ ಅದಾಗಿತ್ತು’ ಎಂದು ತಮ್ಮ ಅನುಭವಗಳ ಬುತ್ತಿ ಬಿಚ್ಚುತ್ತಾರೆ. 

ಈಗಾಗಲೇ ಬಾಲಿವುಡ್‌ನ ಖ್ಯಾತ ಗಾಯಕರಾದ ಆಕೃತಿ ಕಕ್ಕರ್, ಕುಮಾರ್ ಸಾನು, ಕೆಕೆ, ಸುನಿಧಿ ಚೌಹಾಣ್, ಎ.ಆರ್  ರೆಹಮಾನ್ ಅವರ ಜತೆಯಲ್ಲಿ ಹಾಡಿದ ಅನುಭವ ಪೃಥ್ವಿರಾಜ್ ಅವರದ್ದು. ‘ಸಂಗೀತ ಕ್ಷೇತ್ರದಲ್ಲಿ ಮಹಮದ್‌ ರಫಿ ಮತ್ತು ಕಿಶೋರ್ ಕುಮಾರ್ ಅವರೇ ನನಗೆ ಪ್ರೇರಣೆ’ ಎಂದು ಹೇಳುವ ಈ ಯುವ ಗಾಯಕ, ಅರಿಜೀತ್ ಸಿಂಗ್, ಕೆಕೆ, ಸೋನು ನಿಗಮ್ ಅವರ ಹಾಡುಗಳನ್ನೇ ಹೆಚ್ಚಾಗಿ ಹಾಡುತ್ತಾರೆ.

ಹೊಸ ಸಿನಿಮಾಗಳ ಜನಪ್ರಿಯ ಹಾಡುಗಳನ್ನು ಹಾಡಿ ಅವುಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡುವ ಮೂಲಕ ಪೃಥ್ವಿರಾಜ್ ಆನ್‌ಲೈನ್‌ ಮೀಡಿಯಾಗಳಲ್ಲೂ ಸಕ್ರಿಯರಾಗಿದ್ದಾರೆ. ಇಂಟರ್‌ನೆಟ್ ಮೂಲಕವೇ ಗಿಟಾರ್, ಕೀ ಬೋರ್ಡ್ ಸೇರಿದಂತೆ ಇನ್ನಿತರ ಸಂಗೀತ ಸಾಧನಗಳನ್ನು ನುಡಿಸಲು ಕಲಿತಿದ್ದಾರೆ. ಮನೆಯಲ್ಲಿಯೇ ಸ್ಟುಡಿಯೊ ಇರುವುದರಿಂದ ಅಲ್ಲಿಯೂ ಸಂಗೀತ ಅಭ್ಯಾಸ ನಡೆಯುತ್ತಲೇ ಇರುತ್ತದೆ. ಈಗಾಗಲೇ 1000ಶೋಗಳನ್ನು ಮಾಡಿದ ಇವರಿಗೆ ಕಾಲೇಜಿನಲ್ಲಿಯೂ ಉತ್ತಮ ಪ್ರೋತ್ಸಾಹ  ಸಿಕ್ಕಿದೆ.

ಇಷ್ಟೆಲ್ಲಾ ಮಾತನಾಡಿ ಮುಂದಿನ ಯೋಜನೆ, ಹೊಸ ಕನಸುಗಳ ಬಗ್ಗೆ ಮಾತು ಹೊರಳಿದಾಗ, ‘ನಾನೇ ರಾಗ ಸಂಯೋಜನೆ ಮಾಡಿ, ಹಾಡಿದ ಒಂದು ಆಲ್ಬಂ ಹೊರತರಲಿದ್ದೇನೆ. ಈ ವರ್ಷಾಂತ್ಯದಲ್ಲಿ ಆ ಆಲ್ಬಂ ಬಿಡುಗಡೆ ಮಾಡುವ ಯೋಚನೆ ಇದೆ. ಬೇರೆ ಕನಸಿನ ಬಗ್ಗೆ ಹೇಳುವುದಾದರೆ, ನನಗೆ ಪೈಲಟ್ ಆಗಬೇಕೆಂದಿತ್ತು. ಆದರೆ ವಿಮಾನಯಾನ ಪದವಿ ಮಾಡಿದರೆ ಸಂಗೀತಕ್ಕೆ ಸಮಯ ಸಾಕಾಗಲ್ಲ ಎಂದು ಎಂಜಿನಿಯರಿಂಗ್ ಆಯ್ಕೆ ಮಾಡಿದೆ. ಮುಂದೊಂದು ದಿನ ಪೈಲಟ್ ಲೈಸೆನ್ಸ್ ಪಡೆಯುವ ಕನಸನ್ನೂ ಇಟ್ಟುಕೊಂಡಿದ್ದೀನಿ’ ಎಂದು ನಗುತ್ತಾರೆ... 

ಮರೆಯಲಾಗದ ಉಡುಗೊರೆ
ಕಳೆದ  ಡಿಸೆಂಬರ್‌ನಲ್ಲಿ ಹೀಗೊಂದು ಘಟನೆ ನಡೆಯಿತು. ನನ್ನ ಸಂಗೀತ ಕಾರ್ಯಕ್ರಮ ನೋಡಿದ ಮಹಿಳೆಯೊಬ್ಬರು ‘ನನ್ನ ಪತಿಗೆ ಹಾಡು ಕಲಿಸಲು ಸಾಧ್ಯವೇ?’ ಎಂದು ಕೇಳಿದ್ದರು. ಅದಕ್ಕೆ ಒಪ್ಪಿ ಅವರ ಮನೆಗೆ ಹೋದೆ. ಅದೊಂದು ದೊಡ್ಡ ಉದ್ಯಮಿಯ ಐಷಾರಾಮಿ ಮನೆ.  ನನ್ನದೇನಿದ್ದರೂ ಆ ಉದ್ಯಮಿಗೆ ಒಂದು ಗಂಟೆಗಳ ಕಾಲ ಹಿಂದಿ ಹಾಡು ಹೇಳಿಕೊಡುವ ಕೆಲಸ. ನಾನು ಹಾಡು ಕಲಿಸುತ್ತಿದ್ದೆ, ಅವರು ಜಾಣ ವಿದ್ಯಾರ್ಥಿಯಂತೆ ನಾನು ಹೇಳಿಕೊಟ್ಟಿದ್ದನ್ನು ಬೇಗನೆ ಕಲಿತು ಬಿಡುತ್ತಿದ್ದರು.

ಅದೊಂದು ದಿನ, ಅವರು ‘ನನಗೆ ಇವತ್ತು ಹಾಡಲು ಸಾಧ್ಯವಾಗುತ್ತಿಲ್ಲ. ನನಗಾಗಿ ನೀನೇ ಹಾಡು ಹಾಡಬೇಕು’ ಎಂದರು. ಅವರಿಷ್ಟದ ಹಾಡುಗಳನ್ನೇ ನಾನು ಹಾಡಿದೆ. ಎಲ್ಲ ಮುಗಿದ ಮೇಲೆ ಅವರು ನನಗೆ ವಾಚ್‌ ಒಂದನ್ನು ಉಡುಗೊರೆಯಾಗಿ ನೀಡಿದರು. ‘ನಿನ್ನ ದನಿ ನನಗೆ ತುಂಬಾ ಇಷ್ಟ. ನಿನ್ನ ಹಾಡುಗಳು ಮನಸ್ಸಿಗೆ ತಟ್ಟಿತು. ಅದಕ್ಕಾಗಿ ಈ ಉಡುಗೊರೆ’ ಎಂದರು. ನನಗೆ ವಾಚ್ ಎಂದರೆ ತುಂಬಾ ಇಷ್ಟ. ವಾಚುಗಳ ಸಂಗ್ರಹವೇ ನನ್ನಲ್ಲಿದೆ. ಅವರು ಕೊಟ್ಟ ಶೋಪಾರ್‌ ಬ್ರಾಂಡ್ ವಾಚಿನ ವಿಶೇಷತೆ ಏನು ಎಂದು ಗೂಗಲಿಸಿದಾಗ ಗೊತ್ತಾಯ್ತು, ಅದು ಲಿಮಿಟೆಡ್ ಎಡಿಷನ್ ವಾಚ್ ಎಂದು. 8 ಲಕ್ಷ ಮೌಲ್ಯದ ವಾಚನ್ನು ಆ ವ್ಯಕ್ತಿ ನನಗೆ ಉಡುಗೊರೆಯಾಗಿ ನೀಡಿದ್ದರು!

ಅಲ್ಬಟ್ರಾಸ್‌ ಕರೋಕೆ ಸ್ಟಾರ್ಟ್‌ಅಪ್
ನಾನು 12ನೇ ತರಗತಿಯಲ್ಲಿದ್ದಾಗ ‘ಅಲ್ಬಟ್ರಾಸ್‌ ಕರೋಕೆ’ ಎಂಬ ಸ್ಟಾರ್ಟ್‌ಅಪ್ ಆರಂಭಿಸಿದ್ದು. ಕ್ಲಬ್, ಪಬ್‌ಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯಕ್ರಮ ನೀಡುವಾಗ ಜನರ ಬೇಡಿಕೆ ಅನುಸಾರವಾಗಿ ನಾನು ಹಾಡಬೇಕಾಗುತ್ತದೆ. ಅದಕ್ಕಾಗಿ ಹಲವಾರು ಹಾಡುಗಳ ಸಂಗ್ರಹ ನನ್ನಲ್ಲಿರಬೇಕು. ನಾನು ಸಾಮಾನ್ಯವಾಗಿ ಕರೋಕೆ ಟ್ರ್ಯಾಕ್ ಇಟ್ಟುಕೊಂಡು ಹಾಡುಗಳನ್ನು ಹಾಡುತ್ತೇನೆ. ನನಗೆ ಬೇಕಾದರೆ ಕರೋಕೆ ಟ್ರ್ಯಾಕ್‌ಗಳನ್ನು ನಾನೇ ತಯಾರಿಸುತ್ತೇನೆ.

ಅಲ್ಲಿ ಹಾಡುತ್ತಿದ್ದಂತೆ ಹಾಡಿನ ಸಾಲುಗಳು ಸ್ಕ್ರೀನ್‌ನಲ್ಲಿ ಮೂಡಿ ಬರುವಂತೆ ಮಾಡುತ್ತಿದ್ದೆ. ನಾನು ಹಾಡುತ್ತಿದ್ದಂತೆ ಜನರಿಗೆ ನನ್ನ ಟ್ರ್ಯಾಕ್‌ಗಳು ಇಷ್ಟವಾಗಿ ಅದಕ್ಕೆ ಬೇಡಿಕೆಗಳು ಬರತೊಡಗಿತು. ಹಾಗೆ ನಾನು ‘ಅಲ್ಬಟ್ರಾಸ್‌ ಕರೋಕೆ’ ಎಂಬ ಸ್ಟಾರ್ಟ್ಅಪ್ ಆರಂಭಿಸಿ ಟ್ರ್ಯಾಕ್‌ಗಳನ್ನು ಮಾರತೊಡಗಿದೆ. ಅದರಿಂದ ಒಳ್ಳೆಯ ಆದಾಯವೂ ಬಂತು.

‘ಅಲ್ಬಟ್ರಾಸ್‌’ ಹೆಸರಿನ ಹಿಂದೆ ಒಂದು  ಕಥೆಯಿದೆ. ಪಠ್ಯಪುಸ್ತಕದಲ್ಲಿದ್ದ ಸುದೀರ್ಘವಾದ ಇಂಗ್ಲಿಷ್  ಕವನವೊಂದರಲ್ಲಿ ಅಲ್ಬಟ್ರಾಸ್‌ ಎಂಬ ಪದ ನನ್ನ ಗಮನ ಸೆಳೆದಿತ್ತು. ಆ ಪದದ ಅರ್ಥ ಹುಡುಕಿದಾಗ ಅದೊಂದು ಬೃಹತ್ ಪಕ್ಷಿ, 1000 ಮೈಲುಗಟ್ಟಲೆ ಹಾರುತ್ತದೆ ಎಂಬುದು ಗೊತ್ತಾಯಿತು. ಆ ಪದದ ಮೇಲಿನ ಆಸಕ್ತಿಯಿಂದಲೇ ನನ್ನ ಸ್ಟಾರ್ಟ್‌ ಅಪ್‌ಗೆ ಅಲ್ಬಟ್ರಾಸ್‌ ಎಂಬ ಹೆಸರಿಟ್ಟೆ. ‘albatrosskaraoke.in’ ಎಂಬ ವೆಬ್‌ಸೈಟಿನಲ್ಲಿ  ಹಾಡುಗಳ ಸಂಗ್ರಹವೇ ಇದೆ.

ಜನರ ಬೇಡಿಕೆಗೆ ಅನುಸಾರವಾಗಿ ನಾನು ಟ್ರ್ಯಾಕ್ ತಯಾರಿಸುತ್ತೇನೆ. ಅದು ನನ್ನ ಗಾಯನಕ್ಕೆ ಸಹಾಯವಾಗುವುದರ ಜತೆಗೇ ಆದಾಯವನ್ನೂ ತಂದುಕೊಡುತ್ತದೆ. ಬೆಂಗಳೂರಿನ ಪಬ್‌ಗಳಲ್ಲಿ ಇಂಗ್ಲಿಷ್ ಕರೋಕೆ ಹಾಕುತ್ತಿದ್ದರು. ನಾನು ಬಾಲಿವುಡ್ ಕರೋಕೆ ಶುರು ಮಾಡಿದಾಗ ಜನರಿಗೆ ಅದು ಹೆಚ್ಚು ಇಷ್ಟವಾಗತೊಡಗಿತು. ನಾನು ಹಾಡುವುದು ಮಾತ್ರವಲ್ಲದೆ ಕೆ.ಜೆ (ಕರೋಕೆ ಜಾಕಿ)ಯಾಗಿಯೂ ಕಾರ್ಯ ನಿರ್ವಹಿಸುತ್ತೇನೆ.

ಕರೋಕೆ ಜಾಕಿಯಾಗಿ ನಾನು ಹಾಡುವುದಿಲ್ಲ, ಕರೋಕೆ ನೈಟ್‌ನಲ್ಲಿ ಸಭಿಕರನ್ನು ಹಾಡುವಂತೆ ಮಾಡುವುದು ನನ್ನ ಕೆಲಸ. ತಿಂಗಳುಗಳ ಹಿಂದೆಯಷ್ಟೇ ಅಲ್ಬಟ್ರಾಸ್‌ ಸ್ಟುಡಿಯೊ ಆರಂಭಿಸಿದ್ದೇನೆ. ಇಲ್ಲಿ ದಿನವೂ ಹಾಡುತ್ತೇನೆ, ಹಾಡು ಸಂಯೋಜನೆ ಮಾಡುತ್ತೇನೆ. ಟ್ರ್ಯಾಕ್‌ಗಳನ್ನು ಸಿದ್ಧಪಡಿಸುತ್ತೇನೆ. ಅಷ್ಟೇ ಅಲ್ಲದೆ ಟ್ರ್ಯಾಕ್‌ಗಳನ್ನು ಸಂಗ್ರಹಿಸಿರುವ ಲ್ಯಾಪ್‌ ಟಾಪನ್ನು ಬಾಡಿಗೆಗೆ ಕೊಡುತ್ತೇನೆ.

ಈ ಮೂಲಕ ಜನರು ಕರೋಕೆ ನೈಟ್, ಸಂಗೀತ ಕಾರ್ಯಕ್ರಮಗಳನ್ನು ಸುಲಭವಾಗಿ ಆಯೋಜಿಸಬಹುದು. ಒಬ್ಬ ಎಂಜಿನಿಯರಿಂಗ್ ವಿದ್ಯಾರ್ಥಿ ಕೋರ್ಸ್ ಮುಗಿಸಿ ಕೆಲಸಕ್ಕೆ ಸೇರಿ ಪಡೆಯುವ ಸಂಬಳಕ್ಕಿಂತ ದುಪ್ಪಟ್ಟು ಹಣವನ್ನು ನಾನು ಸಂಗೀತದ ಮೂಲಕ ಸಂಪಾದಿಸಿದ್ದೇನೆ ಎಂದು ಹೇಳಲು ಹೆಮ್ಮೆ ಎನಿಸುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.