ADVERTISEMENT

‘ಹಿತಾ’ ಹಿತವಚನ

ನಿಸರ್ಗ ಎಚ್.ಮಲ್ಲಿಗೆರೆ
Published 1 ಫೆಬ್ರುವರಿ 2017, 19:30 IST
Last Updated 1 ಫೆಬ್ರುವರಿ 2017, 19:30 IST
ಹಿತಾ ಚಂದ್ರಶೇಖರ್
ಹಿತಾ ಚಂದ್ರಶೇಖರ್   

ಕುಟುಂಬದೊಂದಿಗೆ ಹೊರ ಹೋದರೆ ಸಿಹಿ-ಕಹಿ ಚಂದ್ರು, ಗೀತಾ ಅವರ ಮಗಳೆಂದು ಪರಿಚಿತಳಾಗುತ್ತಿದ್ದರು ಹಿತಾ ಚಂದ್ರಶೇಖರ್. ಆದರೆ ಈಗ ಕನ್ನಡದ ನವ ನಟಿಯಾಗಿ, ಡಾನ್ಸಿಂಗ್ ಸ್ಟಾರ್ ಸೀಸನ್ 3ರ ವಿಜೇತೆಯಾಗಿ ತಮ್ಮದೇ ಅಸ್ಮಿತೆ ಕಂಡುಕೊಳ್ಳುತ್ತಿದ್ದಾರೆ. ಅವರು ‘ಕಾಮನಬಿಲ್ಲು’ ಜೊತೆ ಒಂದಿಷ್ಟು ಹರಟಿದ್ದಾರೆ...

*ತಾರಾ ಜೋಡಿಯ ಮಗಳಾಗಿ ನಿಮ್ಮ ಬಾಲ್ಯ?
ಬೆಂಗಳೂರಿನಲ್ಲಿಯೇ ಬಾಲ್ಯ ಕಳೆದಿದ್ದು. ಅಪ್ಪ-ಅಮ್ಮ ಸೆಲೆಬ್ರೆಟಿಗಳು. ಧಾರಾವಾಹಿ, ಸಿನಿಮಾಗಳ ಚಿತ್ರೀಕರಣದಲ್ಲಿ ಇಬ್ಬರೂ ಬ್ಯೂಸಿ. ನಾನು ಚಿಕ್ಕವಳಿದ್ದಾಗ ತಾತನ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದೆ. ಕೆಲಸದ ಒತ್ತಡದ ನಡುವೆಯೂ ಅಪ್ಪ-ಅಮ್ಮ ನನಗೆ ಸಮಯ ಕೊಡುತ್ತಿದ್ದರು. ಅದೇ ಖುಷಿ...

*ಅಪ್ಪ ನಿಮ್ಮನ್ನು ಪೊಲೀಸ್ ಸ್ಟೇಷನ್‌ಗೆ ಕರೆದೊಯ್ದಿದ್ದು ಏಕೆ?
ಕಳ್ಳತನ ಮಾಡಿದ್ದೆ. ತಾತನ ಮುದ್ದು ಮೊಮ್ಮಗಳು ನಾನು. ಚೂಯಿಂಗ್‌ ಗಮ್‌ ಎಂದರೆ ನನಗೆ ಪಂಚಪ್ರಾಣ. ಅಪ್ಪ ಅದನ್ನು ತಿನ್ನಲು ಬಿಡುತ್ತಿರಲಿಲ್ಲ. ಆದರೆ ತಾತ ಕೇಳಿದಾಗಲೆಲ್ಲ ಮೂರ್ನಾಲ್ಕು ರೂಪಾಯಿ ಕೊಡುತ್ತಿದ್ದರು.

ಒಂದಿನ ಚೂಯಿಂಗ್‌ ಗಮ್ ತಿನ್ನಬೇಕೆಂಬ ಆಸೆ ಆಯ್ತು. ತಾತ ಇರಲಿಲ್ಲ. ಅವರೇನು ಬೈಯುವುದಿಲ್ಲ ಎಂದು ಅವರ ಜೇಬಿನಿಂದ ಐದು ರೂಪಾಯಿ ತೆಗೆದಿದ್ದೆ. ಅದು ನನ್ನ ಮಟ್ಟಿಗೆ ಕಳ್ಳತನ ಆಗಿರಲಿಲ್ಲ. ಆದರೆ, ತಾತನಿಗೆ ಹೇಳದೇ ಕೇಳದೆ ಕಾಸು ತೆಗೆದದ್ದು ಹಿಡಿಸಲಿಲ್ಲ. ಅಪ್ಪನಿಗೆ ಹೇಳಿದರು. ಅಪ್ಪ ತಕ್ಷಣ ನನ್ನನ್ನು ಪೊಲೀಸ್ ಸ್ಟೇಷನ್ನಿಗೆ ಕರೆದುಕೊಂಡು ಹೋಗಿ, ಇವಳನ್ನು ಲಾಕಪ್‌ಗೆ ಹಾಕಿ ಎಂದು ದೂರು ಕೊಟ್ಟರು. ನಾನು ಹೆದರಿ ಕಾರಿನ ಡಿಕ್ಕಿಯಲ್ಲಿ ಅವಿತು ಕುಳಿತಿದ್ದೆ. ಪೊಲೀಸ್‌ನವರು ‘ಇನ್ನೂ ಚಿಕ್ಕವಳು, ಈ ಬಾರಿ ಬಿಡಿ. ಮತ್ತೊಮ್ಮೆ ಹೀಗೆ ಮಾಡಿದರೆ ಕರೆತನ್ನಿ’ ಎಂದು ಅಪ್ಪನಿಗೆ ಹೇಳಿದರು.

*ಕಾಲೇಜು ದಿನಗಳು ಹೇಗಿದ್ದವು? ಮೊದಲ ಕ್ರಶ್ ಯಾರ ಮೇಲಾಗಿತ್ತು?
ಕಾಲೇಜು ಸೂಪರ್ ಆಗಿತ್ತು. ಪಿಯುಸಿ ಓದಿದ್ದು ಸುರಾನಾ ಕಾಲೇಜಿನಲ್ಲಿ. ಅಲ್ಲಿ ‘ಮಿಸ್ ಫ್ರೆಷರ್’ ಬಿರುದು ಸಿಕ್ಕಿತ್ತು. ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ತಪ್ಪದೇ ಭಾಗವಹಿಸುತ್ತಿದ್ದೆ. ಮೊದಲ ಕ್ರಶ್ ಅಂದರೆ, ಕಾಲೇಜಿನಲ್ಲಿ ಒಬ್ಬ ತುಂಬಾ ಸ್ಮಾರ್ಟ್‌  ಹುಡುಗ ಇದ್ದ. ಯಾವಾಗಲೂ ನೋಡ್ತಿದ್ದೆ. ಆದರೆ, ಮಾತನಾಡಲು ಧೈರ್ಯ ಇರಲಿಲ್ಲ ಅಷ್ಟೆ.

*ಡಾನ್ಸಿಂಗ್ ಸ್ಟಾರ್‌ ಕಾರ್ಯಕ್ರಮದಿಂದ ಪಡೆದುಕೊಂಡಿದ್ದು?
ಮೊದಲೆಲ್ಲ ಹೊರಗಡೆ ಹೋದರೆ ಅಪ್ಪ-ಅಮ್ಮನನ್ನು ಮಾತ್ರ ಗುರುತಿಸುತ್ತಿದ್ದರು. ಈಗ ಡಾನ್ಸಿಂಗ್ ಸ್ಟಾರ್ ವಿನ್ನರ್ ಅಲ್ವಾ ಎಂದು ಗುರುತಿಸುತ್ತಾರೆ. ಮೂರೂ ಜನರೊಂದಿಗೂ ಫೋಟೊ ತೆಗೆಸಿಕೊಳ್ಳುತ್ತಾರೆ.

*‘ಪಾಪಾ ಪಾಂಡು’, ‘ಸಿಲ್ಲಿ-ಲಲ್ಲಿ’ ನಿಮ್ಮ ಮೇಲೆ ಪ್ರಭಾವ ಬೀರಿದೆಯಾ?
ನನಗಾಗ ಆರೇಳು ವರ್ಷ. ಮನೆಯಲ್ಲಿ ಸ್ಕ್ರಿಪ್ಟ್, ನಟನೆ ಬಗ್ಗೆ ಚರ್ಚೆ ನಡೆಯುತ್ತಿತ್ತು. ನಾನೂ ಹಲವು ಬಾರಿ ಅಪ್ಪನಿಗೆ ಐಡಿಯಾ ಕೊಟ್ಟಿದ್ದೇನೆ.
ಅವರೂ ನನ್ನ ಆಲೋಚನೆಗಳನ್ನು ಒಪ್ಪಿಕೊಂಡು ಬಳಸಿಕೊಂಡಿದ್ದಾರೆ. ಪಾಪಾ ಪಾಂಡುವಿನ ಐದು ಎಪಿಸೋಡ್‌ಗಳಲ್ಲಿ ಸುಮಿತ್ರಾ ಪಂಡಿತ್ ಮಗಳಾಗಿ ನಾನು ಕಾಣಿಸಿಕೊಂಡಿದ್ದೇನೆ.

*ಚಿತ್ರೀಕರಣದಲ್ಲಿ ನಕ್ಕಿದ್ದೇ ಹೆಚ್ಚಂತೆ?
ಅದಕ್ಕೆ ನನ್ನಮ್ಮನೇ ಕಾರಣ. ಟೇಕ್ ತೆಗೆದುಕೊಂಡಾಗ ಸಂಭಾಷಣೆ ಹೇಳುತ್ತ ಮಧ್ಯದಲ್ಲಿ ಜೋರಾಗಿ ನಗುತ್ತಿದ್ದರು. ಅವರ ಸಂಭಾಷಣೆಗಳು ಅಷ್ಟು ತಮಾಷೆಯಾಗಿ ಇರುತ್ತಿದ್ದವು. ಜೊತೆಗೆ ಜಹಾಂಗಿರ್ ನಟಿಸುವಾಗಲೂ ಅಷ್ಟೇ. ಹಲವು ಬಾರಿ ಟೇಕ್‌ನಲ್ಲಿ ಪಾತ್ರವನ್ನು ಇಂಪ್ರುವೈಸ್ ಮಾಡುತ್ತಿದ್ದರು. ಮೊದಲೇ ನಿರೀಕ್ಷೆ ಇಲ್ಲದಿದ್ದರಿಂದ, ಸೆಟ್ ಮಂದಿಯೆಲ್ಲ ಗೊಳ್ಳೆನ್ನುತ್ತಿದ್ದರು. ಎರಡು ಮೂರು ಟೇಕ್‌ಗಳು ನಗುವುದಕ್ಕೇ ಸೀಮಿತ ಎನ್ನುವಂತಾಗಿತ್ತು.

*ನಿಮ್ಮ ಕೆರಿಯರ್ ಬಗ್ಗೆ ಅಪ್ಪ-ಅಮ್ಮ ಏನಂತಾರೆ?
ನನಗೇನು ಇಷ್ಟವೋ ಅದನ್ನೇ ಆರಿಸಿಕೊಳ್ಳಲು ಹೇಳುತ್ತಾರೆ. ನಟನೆ ಬಗ್ಗೆ ಒಲವಿದೆ ಎಂದು ಅವರಿಗೆ ಗೊತ್ತು. ಆದರೆ ಓದು ಮುಗಿದ ನಂತರವೇ ನಟಿಸಬೇಕೆಂದು ಕಟ್ಟಾಜ್ಞೆಯಾಗಿತ್ತು.

* ನಿಮ್ಮ ಸಿನಿಮಾ ಯಾನ?
‘ಸ್ನೇಕ್‌ನಾಗ’ದಲ್ಲಿ ನಟಿಸಿದೆ. ಸಿನಿಮಾ ಕಾರಣಾಂತರಗಳಿಂದ ಪೂರ್ತಿ ಆಗಲಿಲ್ಲ. ಅಲ್ಲಿ ನನ್ನ ಅಭಿನಯವನ್ನು ಯೋಗೇಶ್ ಮೆಚ್ಚಿದ್ದರು. ‘ದುನಿಯಾ 2’ ಚಿತ್ರಕ್ಕೆ ಅವಕಾಶ ಸಿಕ್ತು. ‘ಕಾಲ್ಕೇಜಿ ಪ್ರೀತಿ’, ‘ದುನಿಯಾ 2’ ತೆರೆಕಾಣಲು ಸಿದ್ಧವಾಗಿವೆ.

*ನಟನೆ ಬಗ್ಗೆ ತರಬೇತಿ ಪಡೆದದ್ದುಂಟಾ?
ನನ್ನದು ರಂಗಭೂಮಿ ಹಿನ್ನೆಲೆ. ಅಪ್ಪ, ‘ಸಿನಿಮಾ-ರಂಗಭೂಮಿಗೆ ಸಾಕಷ್ಟು ವ್ಯತ್ಯಾಸವಿದೆ. ಹಾಗಾಗಿ ನೀನು ಮೊದಲು ನಟನಾ ಶಾಲೆಯಲ್ಲಿ ಕಲಿತು ಬಾ’ ಎಂದರು. ಬಾಂಬೆಯ ರೋಷನ್ ತನೇಜ್ ಸ್ಕೂಲ್ ಆಫ್ ಆ್ಯಕ್ಟಿಂಗ್‌ನಲ್ಲಿ ನಾಲ್ಕು ತಿಂಗಳು ತರಬೇತಿ ಪಡೆದೆ. ಅಲ್ಲಿ ನಟನೆಗೆ ಇರಬಹುದಾದ ಹಲವು ಆಯಾಮಗಳು ಕಾಣಿಸಿದವು. ನಟನೆಯ ಬಗ್ಗೆ ಸಾಕಷ್ಟು ಕಲಿತೆ.

*ಅಲ್ಲಿಗೆ ಹೋದಾಗ ತುಂಬಾ ಅತ್ತಿದ್ದಿರಂತೆ?
ಹೊಸ ಜಾಗ, ಜನ. ಅಪ್ಪ ಬಿಟ್ಟು ಹೊರಟಾಗ ಕಣ್ಣೀರಾಗಿದ್ದೆ. ಆದರೆ ಕೆಲವೇ ದಿನಗಳಲ್ಲಿ ಹೊಂದಿಕೊಂಡೆ.  ಉತ್ತಮ ಗುರುಗಳು ಸಿಕ್ಕರು. ಅಲ್ಲಿಂದ ಹಿಂದಿರುಗುವಾಗಲೂ ಅತ್ತೆ; ಬಿಟ್ಟು ಬರಬೇಕಲ್ಲ ಎಂಬ ನೋವಿನಿಂದ..

*ಬಿಡುವಿನ ವೇಳೆ ಏನ್ಮಾಡ್ತೀರಾ?
ಸಾಹಿತ್ಯ ಇಷ್ಟ. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹೆಚ್ಚು ಓದುತ್ತೇನೆ. ಸುತ್ತಾಟವೂ ತುಂಬಾ ಇಷ್ಟ. ಪ್ರತಿ ವರ್ಷ ಹೊಸದೊಂದು ಜಾಗ ನೋಡುವಾಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT