ADVERTISEMENT

ಹೀರೊ ಆಗುವ ಕನಸೂ ಕಂಡಿರಲಿಲ್ಲ

ವಿದ್ಯಾಶ್ರೀ ಎಸ್.
Published 21 ಸೆಪ್ಟೆಂಬರ್ 2016, 19:30 IST
Last Updated 21 ಸೆಪ್ಟೆಂಬರ್ 2016, 19:30 IST
ವಿಕ್ಕಿ ವರುಣ್‌
ವಿಕ್ಕಿ ವರುಣ್‌   

ನಿರ್ದೇಶಕನಾಗುವ ಹಂಬಲದಿಂದ ಸಿನಿಮಾರಂಗ ಪ್ರವೇಶಿಸಿದ ವಿಕ್ಕಿ ವರುಣ್‌ ಅಚಾನಕ್‌ ಆಗಿ ನಾಯಕ ನಟನಾದವರು. ‘ಕೆಂಡಸಂಪಿಗೆ’ ತಂದಿತ್ತ ಅನುಭವದಿಂದ ಪುಳಕಿತರಾಗಿರುವ ಇವರು, ಭಿನ್ನ ಪಾತ್ರದ ಮೂಲಕ ಗುರುತಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಸಿನಿಮಾ ಪ್ರವೇಶಕ್ಕೂ ಮುನ್ನ ಸಂತೋಷ್‌ ಆಗಿದ್ದ ಇವರನ್ನು ವಿಕ್ಕಿ ವರುಣ್‌ ಎಂದು ನಾಮಕರಣ ಮಾಡಿದವರು ನಿರ್ದೇಶಕ ಸೂರಿ. ಹಣೆ ಬರಹವನ್ನು ಬದಲಿಸಿದವರು ಹೆಸರನ್ನು ಬದಲಾಯಿಸಿದ್ದಾರೆ ಎನ್ನುವ ವಿಕ್ಕಿ ನಮ್ಮೊಂದಿಗೆ ಮಾತನಾಡಿದ್ದಾರೆ.

*ನಿಮಗೆ ಸಿನಿಮಾ ನಂಟು ಬೆಳೆದಿದ್ದು ಹೇಗೆ?
ಪಿಯುಸಿ ಓದುತ್ತಿದ್ದಾಗ ಸಿನಿಮಾ ಪ್ರವೇಶಿಸುವ ಕನಸು ಚಿಗುರಿತು. ನನ್ನ ಸಂಬಂಧಿಕರೊಬ್ಬರು ಯೋಗರಾಜ್‌ ಭಟ್ಟರ ಬಳಿ ಮ್ಯಾನೇಜರ್‌ ಆಗಿದ್ದರು. ಅವರ ಸಹಾಯದಿಂದ ಡಿಗ್ರಿ ಮುಗಿಯುತ್ತಿದ್ದಂತೆ ಸಹಾಯಕ ನಿರ್ದೇಶಕನಾಗಿ ಭಟ್ಟರ ತಂಡ ಸೇರಿಕೊಂಡೆ. ನಂತರ ಸೂರಿ ಅವರ ಜೊತೆ ಕೆಲಸ ಮಾಡುವ ಅವಕಾಶ ದೊರಕಿತು. ಎಲ್ಲಾ ಹೀರೊ ಆಗಲು ತಯಾರಿ ನಡೆಸುತ್ತಾರೆ. ನಾನು ನಿರ್ದೇಶಕನಾಗಲು ಸುಮಾರು ಒಂದೂವರೆ ವರ್ಷ ತಯಾರಿ ನಡೆಸಿದ್ದೇನೆ. ವಿವಿಧ ಪುಸ್ತಕಗಳನ್ನು ಓದಿ ನಿರ್ದೇಶನದ ತಾಲೀಮುಗಳನ್ನು ಕಲಿತುಕೊಂಡೆ. 

*ನಟನಾಗಲು ಅವಕಾಶ ದೊರಕಿದ್ದು ಹೇಗೆ?
ಹೀರೊ ಆಗುತ್ತೇನೆ ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ಕಾಲೇಜಿನಲ್ಲಿ ನಾಟಕ, ನೃತ್ಯ ಮಾಡಿದ್ದರ ಹೊರತಾಗಿ ನಟನೆಯ ಯಾವ ತರಬೇತಿಯನ್ನು ನಾನು ಪಡೆದಿಲ್ಲ. ಸೂರಿ ಅವರು ಆಡಿಷನ್‌ ಮಾಡಿದರು. ‘ನೀನು ಈ ಪಾತ್ರಕ್ಕೆ ಸರಿಹೋಗುತ್ತೀಯ. ಮಾಡು’ ಎಂದರು ನಾನು ‘ಸರಿ’ ಎಂದಷ್ಟೇ ಹೇಳಿದೆ.
ನಾನು ಹೀರೊ ಆದಾಗ ಪತ್ರಿಕೆಯೊಂದರಲ್ಲಿ ಚಿಕ್ಕದೊಂದು ಲೇಖನ ಬಂದಿತ್ತು. ಅದನ್ನು ನೋಡಿದ ಮೇಲೆಯೇ ಮನೆಯವರಿಗೆ ತಿಳಿದಿದ್ದು. ಸುಮಾರು 6 ವರ್ಷ ಸಹಾಯಕ ನಿರ್ದೇಶಕನಾಗಿದ್ದೆ. ನನ್ನ ಕೆಲವು ಸ್ನೇಹಿತರನ್ನು ಹೊರತುಪಡಿಸಿ ಮತ್ಯಾರಿಗೂ  ನಾನು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂಬುದು ತಿಳಿದಿರಲಿಲ್ಲ.  ಹೆಸರು ಗಳಿಸಿದ ನಂತರವೇ ಮನೆಯವರಿಗೆ ತಿಳಿಯಬೇಕು ಎಂಬುದು ನನ್ನ ಬಯಕೆಯಾಗಿತ್ತು.

*ಸೂರಿ ಮತ್ತು ಯೋಗರಾಜ್‌ ಭಟ್ಟರ ಜೊತೆಗಿನ ಅನುಭವ?
ಯೋಗರಾಜ್‌ ಭಟ್‌ ಅವರು ಬದುಕುವುದು ಕಲಿಸಿದರೆ,  ಸೂರಿ ಅವರು ಸಿನಿಮಾ ಕಲಿಸಿದರು. ನನ್ನ ಬದುಕಿನಲ್ಲಿ ಮರೆಯಲಾಗದ ವ್ಯಕ್ತಿ ಅವರಿಬ್ಬರು. ಸಿನಿಮಾ ಎಂದರೆ ಏನು ಎಂಬುದನ್ನು ಇವರಿಬ್ಬರ ಬಳಿ ಇದ್ದರೆ ಕಲಿಯಬಹುದು. ದೂರದಿಂದ ನೋಡಿದರೆ ಇವರಿಬ್ಬರ ವ್ಯಕ್ತಿತ್ವ ತದ್ವಿರುದ್ಧ ಎನಿಸುತ್ತದೆ. ಆದರೆ ಅವರಿಬ್ಬರು ಅದ್ಭುತ. ಯಾವಾಗಲೂ ತಮಾಷೆ ಮಾಡಿಕೊಂಡು ಇನ್ನೊಬ್ಬರನ್ನು ಖುಷಿಯಾಗಿರಿಸುವ ವ್ಯಕ್ತಿತ್ವ ಅವರದು.
‘ಪರಮಾತ್ಮ’ ಚಿತ್ರೀಕರಣ ಸಂದರ್ಭದಲ್ಲಿ ಪುನೀತ್‌ ರಾಜ್‌ಕುಮಾರ್‌ ಕಾರಿನಲ್ಲಿ ಹೋಗುವ ಸನ್ನಿವೇಶವನ್ನು ಹೆಲಿಕಾಪ್ಟರ್‌ನಲ್ಲಿ ಚಿತ್ರೀಕರಿಸಬೇಕಿತ್ತು. ಇದಕ್ಕಾಗಿ ಪೂರ್ತಿದಿನ ಬೇಕಾಗಿತ್ತು. ನಾನು ದೂರದಲ್ಲಿ ಕೆಲಸ ಮಾಡುತ್ತಿದ್ದೆ. ಚಿತ್ರತಂಡ ನನ್ನನ್ನು ಮರೆತು ಬಿಟ್ಟು ಹೋಗಿತ್ತು. ಸಂಜೆ ವೇಳೆ ನಾನು ಅಲ್ಲಿದ್ದೆ ಎಂಬುದು ತಂಡಕ್ಕೆ ನೆನಪಾಗಿದೆ. ನಾನು ಅಲ್ಲಿಯೇ ಅವರಿಗಾಗಿ ಕಾಯುತ್ತಾ ನಿಂತಿದ್ದೆ.   ಆಗ ಯೋಗರಾಜ್‌ ಭಟ್ಟರು ಕರೆದು ‘ಎಲ್ಲೊ ಓಡಿ ಹೋಗುತ್ತೀಯಾ ಅಂದುಕೊಂಡಿದ್ದೆ, ಇಲ್ಲೇ ಇದ್ದೀಯ, ಪರ್‍ವಾಗಿಲ್ಲ, ನೀನು ಸಿನಿಮಾದಲ್ಲಿ ತುಂಬಾ ದಿನ ಉಳಿಯುತ್ತೀಯ ಎಂದರು. ಆಗ ನನಗೆ ತುಂಬಾ ಸಂತೋಷ ಆಗಿತ್ತು.

*ಮುಂದಿನ ಸಿನಿಮಾಕ್ಕಾಗಿ ಹೇಗೆ ತಯಾರಿ ನಡೆಸುತ್ತಿದ್ದೀರ?
ಉತ್ತಮ ಚಿತ್ರತಂಡದ ಜೊತೆಗೆ ಒಳ್ಳೆಯ ಕಥೆಯುಳ್ಳ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಹೀರೊ ಆಗುವವನಿಗೆ ಏನೆಲ್ಲಾ ಅರ್ಹತೆಗಳಿರಬೇಕೋ ಅದಕ್ಕೆಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಮೊದಲ  ಸಿನಿಮಾದ ನಕಾರಾತ್ಮಕ ಅಂಶಗಳನ್ನೆಲ್ಲಾ ತಿದ್ದಿಕೊಂಡು ಉತ್ತಮ ನಟನೆಯನ್ನು ಪ್ರದರ್ಶಿಸುವ ಹುಮ್ಮಸ್ಸಿನಲ್ಲಿದ್ದೇನೆ.

*ಸಿನಿಮಾಕ್ಕೆ ಬರದಿದ್ದರೆ ಏನಾಗುತ್ತಿದ್ದಿರಿ?
ಟ್ರಾವೆಲರ್‌ ಆಗುತ್ತಿದ್ದೆ. ನನಗೆ ಊರು ಸುತ್ತುವುದೆಂದರೆ ಬಲು ಇಷ್ಟ. ಬೇರೆ ಬೇರೆ ಜಾಗಗಳಿಗೆ ಹೋಗುತ್ತಿರುತ್ತೇನೆ. ಜೊತೆಗೆ  ಬಾಲ್ಯದಿಂದಲೂ ಕಾನ್‌ಸ್ಟೆಬಲ್‌ ಆಗುವ ಕನಸು ಕಾಣುತ್ತಿದ್ದೆ. ಐದು ಬಾರಿ ಪರೀಕ್ಷೆ ಬರೆದಿದ್ದೆ. ಅಲ್ಲಿ ಆಯ್ಕೆ ಆಗದಿದ್ದ ಕಾರಣಕ್ಕೆ ಈಗ ಇಲ್ಲಿದ್ದೇನೆ.

*ಶೂಟಿಂಗ್‌ ವೇಳೆ ವಿಕ್ಕಿ ಹೇಗಿರುತ್ತಾರೆ?
ಯಾವಾಗಲೂ ತಮಾಷೆಯಾಗಿರುವ ವ್ಯಕ್ತಿ ನಾನು. ಆದರೆ ‘ಕೆಂಡಸಂಪಿಗೆ’ಯಲ್ಲಿ ಅದಕ್ಕೆ ವಿರುದ್ಧವಾದ ಪಾತ್ರ. ಹಾಗಾಗಿ ಚಿತ್ರೀಕರಣದ ವೇಳೆ ಶಾಲೆಯಲ್ಲಿ ಮಕ್ಕಳಿಗೆ ಕಿವಿ ಹಿಡಿದು ಬಗ್ಗಿಸಿ ಕೂರಿಸುತ್ತಾರಲ್ವಾ ಹಾಗೆ ಐದು ನಿಮಿಷ ಕೂತಿರುತ್ತಿದ್ದೆ. ಯಾಕೆಂದರೆ ಮುಖ ಸಪ್ಪೆಯಾಗಿ ಕಾಣಬೇಕು ಎಂಬ ಉದ್ದೇಶಕ್ಕೆ.  ಆ ಸಿನಿಮಾದಲ್ಲಿ ಸದಾ ಭಯದಲ್ಲಿರುವ ಪಾತ್ರ ನನ್ನದು. ಅದರಲ್ಲಿ ತಲ್ಲೀನವಾಗುವ ಅವಶ್ಯಕತೆಯಿತ್ತು. ಹಾಗಾಗಿ ಹಾಗೆ ಮಾಡುತ್ತಿದ್ದೆ.

*ಯಾವ ರೀತಿಯ ಪಾತ್ರ ಮಾಡುವ ಹಂಬಲವಿದೆ?
ಇದೇ ರೀತಿಯ ಪಾತ್ರ ಬೇಕು ಎಂಬ ನಿರೀಕ್ಷೆಯಿಲ್ಲ. ಆದರೆ ಒಳ್ಳೆಯ ಕಥೆಗಷ್ಟೇ ನನ್ನ ಆದ್ಯತೆ.

*ನಿಮಗೆ ಯಾವಾಗಲೂ ನೆನಪಾಗುವ ತಮಾಷೆ ಸಂಗತಿ ಯಾವುದು?
ಪ್ರತಿದಿನ ಒಂದು ಹೋಟೆಲ್‌ಗೆ ಊಟಕ್ಕೆ ಹೋಗುತ್ತಿದ್ದೆ. ನನ್ನ ಸಿನಿಮಾ ಬಿಡುಗಡೆಯಾಗುವವರೆಗೂ ಅಲ್ಲಿ ಹೆಚ್ಚು ಅನಿಸುವಷ್ಟು ಆತಿಥ್ಯ ಮಾಡುತ್ತಿದ್ದರು. ಯಾಕೆಂದರೆ ಅಲ್ಲಿರುವವರು ನನ್ನನ್ನು ಪ್ರಜ್ವಲ್‌ ದೇವರಾಜ್‌ ತಮ್ಮ ಎಂದೇ ಭಾವಿಸಿದ್ದರು. ನಾನೇನೂ  ಅವರ ಬಳಿ  ನನ್ನ ಅಣ್ಣ ಎಂದು ಹೇಳಿಕೊಂಡಿರಲಿಲ್ಲ.  ಯಾವಾಗ ಹೋದರೂ ಪ್ರಜ್ವಲ್‌ ಹೇಗಿದ್ದಾನೆ ಎಂದು ಕೇಳುತ್ತಿದ್ದರು. ನಾನು ಶೂಟಿಂಗ್‌ ಹೋಗಿದ್ದಾನೆ ಎಂದು ಹೇಳಿ ಸುಮ್ಮನಾಗುತ್ತಿದ್ದೆ. ಸಿನಿಮಾ ಬಿಡುಗಡೆ ನಂತರ ಅದೇ ಹೋಟೆಲ್‌ಗೆ ಹೋದಾಗ ಹೀಗೆ ತಪ್ಪು ತಿಳಿದುಕೊಂಡದ್ದಕ್ಕೆ ಅವರೇ ತಮಾಷೆ ಮಾಡಿ ನಗುತ್ತಿದ್ದರು.

*ಕಾಲೇಜಿನಲ್ಲಿ ಯಾವುದಾದರೂ ಹುಡುಗಿಯ ಮೇಲೆ ಕ್ರಷ್‌ ಆಗಿತ್ತಾ?
ಹಾಗೇನೂ ಆಗಿಲ್ಲ. ಏಳನೇ ತರಗತಿಯಲ್ಲಿದ್ದಾಗ ಟೀಚರ್‌ ಮೇಲೆ ಕ್ರಷ್‌ ಆಗಿತ್ತು. ಅವರು ಪಾಪ ನಾನು ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯದಿದ್ದರೂ ಒಳ್ಳೆಯ ಅಂಕ ಕೊಡುತ್ತಿದ್ದರು. ಅದಕ್ಕೆ ಹಾಗೆ ಅನಿಸಲಿಕ್ಕೂ ಸಾಕು.

*ಬಾಲ್ಯ ಎಂದರೆ ಏನು ನೆನಪಾಗುತ್ತದೆ?
ನನ್ನ ಸ್ವಂತ ಊರು ಚಾಮರಾಜನಗರ. ಓದಿದ್ದು, ಬೆಳೆದದ್ದು ಮೈಸೂರಿನಲ್ಲಿ. ಸಮಯ ಸಿಕ್ಕಾಗಲೆಲ್ಲ ಸ್ನೇಹಿತರೆಲ್ಲಾ ಸೇರಿ ಲಗೋರಿ ಆಡುತ್ತಿದ್ದೆವು. ನಮ್ಮೂರಿನಲ್ಲಿ ಮಳೆ ಬೇಡುವ  ಸಂಪ್ರದಾಯವಿದೆ. ಈ ವೇಳೆ ಮಕ್ಕಳ ತಲೆಯ ಮೇಲೆ ನೀರು ಹಾಕುತ್ತಾರೆ. ಅದನ್ನು ತುಂಬಾ ಎಂಜಾಯ್‌ ಮಾಡುತ್ತಿದ್ದೆ. ಬಾಲ್ಯದಲ್ಲಿ ನಾನು ಮನೆಯಲ್ಲಿದ್ದುದ್ದಕ್ಕಿಂತ ಹೊರಗಡೆ ಇದ್ದುದ್ದೇ ಹೆಚ್ಚು.

*ನೀವು ವಿಧೇಯ ವಿದ್ಯಾರ್ಥಿನಾ?
ಹೇ...ಹಾಗೇನೂ ಇಲ್ಲ. ಶಾಲೆಯಲ್ಲಿ ಕೊನೆಯ ಬೆಂಚ್‌ ನಮಗಾಗಿ ಮೀಸಲಿರುತ್ತಿತ್ತು. ನಾವು ಶಾಲೆಗೆ ಹೋದರೂ ಹೋಗದಿದ್ದರೂ ಅಲ್ಲಿ ಯಾರೂ ಕೂರುತ್ತಿರಲಿಲ್ಲ. ಅಷ್ಟೊಂದು ಚೆನ್ನಾಗಿ ಕಾಲೇಜಿನಲ್ಲಿ ಹೆಸರು ಮಾಡಿದ್ದೆವು. ಓದುವುದು ಕಡಿಮೆ. ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದೆ.

ನಾನು ದ್ವಿತೀಯ ಪಿಯುಸಿ ಇದ್ದಾಗ  ಕಾರ್ಯಕ್ರಮವೊಂದರಲ್ಲಿ ಪ್ರೇಮಲೋಕದ ಸಿನಿಮಾದ ಹಾಡಿನ ನೃತ್ಯಕ್ಕಾಗಿ ಹುಡುಗಿಯ ರೀತಿಯಲ್ಲಿಯೇ ತಯಾರಾಗಿದ್ದೆ. ನೀಟಾಗಿ ಶೇವ್ ಮಾಡಿಕೊಂಡಿದ್ದೆ. ನೋಡಲು ಬಿಳಿಯಾಗಿರುವುದರಿಂದ ಹುಡುಗಿ ತರಹವೇ ಕಾಣುತ್ತಿದ್ದೆ. ವೇದಿಕೆ ಮೇಲಿದ್ದ ನನಗೆ ನನ್ನ ಪ್ರಾಂಶುಪಾಲರು ‘ಅಮ್ಮ ಸ್ವಲ್ಪ ಬದಿಗೆ ನಿಂತುಕೊಳ್ಳಮ್ಮ, ಈಗ ಕಾರ್ಯಕ್ರಮ ಇದೆ’ ಎಂದಿದ್ದರು. ಇದನ್ನು ನೆನೆದಾಗ ನಗು ಬರುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.