ADVERTISEMENT

ಹೃದಯ ಗೆದ್ದ ಹುಡುಗಿಗೆ...

ಪ್ರಜಾವಾಣಿ ಪ್ರೇಮಪತ್ರ ಸ್ಪರ್ಧೆ–2016

ಗಂಗಪ್ಪ ತಳವಾರ
Published 10 ಫೆಬ್ರುವರಿ 2016, 19:48 IST
Last Updated 10 ಫೆಬ್ರುವರಿ 2016, 19:48 IST

ನನ್ನೊಡಲ ಕಮ್ಮಟದಲ್ಲಿ ಘಮಲಾದ ಒಡಲ ಅಕ್ಷರಗಳನ್ನೆಲ್ಲಾ ಈ ಕಾಗದದ ದೋಣಿಯಲ್ಲಿಟ್ಟು ಕಳುಹಿಸುತ್ತಿದ್ದೇನೆ. ಈ ಹುಚ್ಚು ಹೊಳೆಗೊಂದು ನನ್ನ ಕಡೆಯ ಮನವಿ. ಈ ದೋಣಿ ಯಾವುದೇ ಭೀಕರ ಸುಳಿಗೆ ಸಿಲುಕದಿರಲಿ. ನಿನ್ನನ್ನು ತಲುಪುವವರೆಗೂ ನೆನೆಯದಿರಲಿ ಎಂದು. ಸುಪ್ತಮನಸ್ಸಿನ ಕನಸಿನ ಚಿತ್ರಕ್ಕೆ ಬಣ್ಣ ತುಂಬಿಸುವ  ಓ... ಕಾಮನಬಿಲ್ಲೆ ಏನೆಂದು ಹೇಳಲಿ!? ನಿತ್ಯ ಕಣ್ಣಿನೊಳಗೆ ರೆಪ್ಪೆಗಳ ಜಗಳ. ಹದಗೊಂಡ ಹಸಿಮಣ್ಣನಂಥ ನನ್ನ ಹೃದಯವೆಂಬೋ ಹೊಲದಲ್ಲಿ ಪ್ರಣಯದ ಬೀಜಗಳನ್ನು ನೆಟ್ಟು, ನೆತ್ತಿ ಆಕಾಶಕೆತ್ತಿ ನಿನ್ನ ನಗೆಯ ಮಳೆಬಿಲ್ಲಿಗೆ ಎದುರು ನೋಡುತ್ತಿದ್ದೇನೆ.

ಈ... ಸ್ವಚ್ಛಂದ ಆಕಾಶದಲ್ಲಿ ನಿನ್ನಂತೆ ಮಿನುಗುವ ಅಗಣಿತ ತಾರೆಗಳನ್ನು ಗುಣಿಸುತ್ತಿರುವ ಹುಚ್ಚು ಫಕೀರ ನಾನು. ಈ ಹೃದಯದ ಮೇಲೆ ಮೂಡಿರುವ

ಗಾಯದ ಗೆರೆಗಳನ್ನು ಅಳಿಸಲು ಬೇಗನೆ ಬಾ...! ಅದೇಕೊ ನಾನು ಮೊದಲಿನಂತೆಯೂ ಇಲ್ಲ; ಈಗಿನಂತೆಯೂ ಇಲ್ಲ. ಪ್ರತಿಕ್ಷಣ ನಿನ್ನದೆ ಧ್ಯಾನ. ನಿನ್ನದೇ ನೆನಪು. ನಿನ್ನದೇ ಗುಂಗು. ನಿನ್ನೊಲುಮೆಯ ಕುಲುಮೆಯಲ್ಲಿ ಮಿಂದು ಬೇಯುತ್ತಿರುವೆ. ನಿನ್ನ ಮುಡಿಯ ಮೊಗ್ಗಲ್ಲಿ ನನ್ನದೇ ಯಾತನೆಗಳ ಮಧುರ ಮಿಥುನ. ನನ್ನ ಎದೆಗುಂಡಿಗೆಯಲ್ಲಿ ನಿನ್ನದೇ ಕಾಲ್ಗೆಜ್ಜೆಗಳ ನಾದ ಸಪ್ಪಳ.

ನಿನ್ನ ನಗುವಿನ ನೆರಳ ಹಂದರದೊಳಗೆ ಹಾಲು ಬೆಳದಿಂಗಳಿನ ನೆರಳಿನಾಟ. ನೊರೆ ಹಾಲು ಉಕ್ಕಿದಂಥ ನಿನ್ನ ಕುಡಿನೋಟ. ನನ್ನ ಎದೆಯಲ್ಲಿ ಮುಕ್ಕಾದ ನಿನ್ನದೇ ಅಕ್ಷರಗಳಿಗೆ ಕಸಿಮಡಗಿದ ಅಕ್ಷರಗಳಿವು. ಗೆಳತಿ ಕೇಳು! ಟೈಲರ್‌ ಅಂಗಡಿಯಲ್ಲಿ ಕಡಿದು ಬಿದ್ದ ತುಂಡಿನ ಬಟ್ಟೆಗಳಿಂದ ನಿನಗೆಂದೇ ಚೆಂದದ ‘ಕೌದಿ’ ಹೆಣೆದಿರುವೆ. ಈ ಕೌದಿ ನಮ್ಮ ಮುರಿದ ಕನಸುಗಳಿಗೆ ಮರುಜೇವಣಿ. ನಮ್ಮಿಬ್ಬರ ಕನವರಿಕೆಗಳು ಈ ಕೌದಿಯೊಳಗೆ ಬೆಚ್ಚಗೆ ಕಾವು ಪಡೆಯಬೇಕು. ನಿನ್ನ ಮುದ್ದು ಕೆನ್ನೆಯಲ್ಲಿ ತಾರೆಗಳು ನಗಬೇಕು. ನಿನ್ನ ಇಳಿಬಿಟ್ಟ ಎರಡು ಜಡೆಗಳಲ್ಲಿ ನಾನು ಚೆಂಡು ಹೂವಾಗಿ ಅರಳಬೇಕು.

ಈ ಬಯಕೆ ಈಡೇರಬೇಕೆಂಬ ಆಸೆ. ಈ ಆಸೆಯನ್ನು ನಿರಾಶೆ ಮಾಡದಿರು. ಹಾಲಿಗೆ ನೀರು ಸುರಿದಷ್ಟೂ ಬೆಳ್ಳಗೆ ಅಂತಾರೆ. ಹಾಗಂತ ನೀನು ಬೆಳ್ಳಿ, ಬಂಗಾರಗಳಲ್ಲ. ‘ಕೆನೆ’ಗೆ ರೂಪ ಕೆಡಿಸಲು ಸಾಧ್ಯವೇ? ನನ್ನ ಪ್ರೀತಿ ಕೆನೆಯಂತೆ. ತೂಗುವ ರಾಗಿ ತೆನೆಯಂತೆ. ಈ ಕ್ಷಣಕ್ಕೂ ಕಾಡುತ್ತಿರುವ ಪ್ರಶ್ನೆ ಎಂದರೆ ಅದು ನೀನೆ! ನೀನು ನನ್ನ ಕಾಡುತ್ತಿರುವುದಾದರೂ ಏಕೆ? ಹುಚ್ಚು ಭ್ರಮೆಗಳ ಭ್ರಾಂತಿಯ ಕೆಸರಿಗೆಳಿದು ನಡೆಯಲಾರೆ. ಇನ್ನು ನಿನಗೆಂದೇ ಕಾದು
ಇದ್ದಿಲಾಗಲಾರೆ. ವಾಸ್ತವದ ಬೆಳಕಿಗೆ ಕಣ್ಣುಬಿಟ್ಟಿರುವೆ. ಈ ನನ್ನೆಲ್ಲಾ ಆತ್ಮಸ್ವಗತದ ಪಿಸುಮಾತುಗಳನ್ನು ನಿನ್ನದೇ ನೆನಪಿಗೆ ಅರ್ಪಿಸಿ ನಿಷೇಧಿಸುತ್ತಿರುವೆ.

ಸಣ್ಣಗೆ, ತಣ್ಣಗೆ ಸಾಗಿ ಹೋಗುವ ಇರುವೆಯೋ; ಜೇನುಹುಳವೋ; ಪತಂಗವೋ.... ‘ಕಣ’ ಮಾತ್ರದ ಜೀವಿಯಾಗಿ ಕಿವಿಯಾನಿಸಿ ಕೇಳಿಸಿಕೋ...! ಈ ಹೊತ್ತಿಗೂ ಹೇಳುತ್ತಿರುವೆ ನೀನೆಂದರೆ ಸತ್ತು ಹೋಗುವಷ್ಟು ಇಷ್ಟ. ನಿನಗೆ ಗೊತ್ತಿರಲಿಕ್ಕಿಲ್ಲ. ನೀ ನಡೆದಾಡಿದ ಹೆಜ್ಜೆ ಗುರುತುಗಳಲ್ಲಿ ನನ್ನದೆ ನೆರಳನ್ನು ಹುಡುಕುತ್ತಿದ್ದೆ. ಕರುವನ್ನು ಹುಡುಕುವ ಹಸುವಿನಂತೆ.

ನನ್ನಡೆ ಅದೆಷ್ಟು ಬಾರಿ ನೋಡುತ್ತೀಯಾ, ಅದೆಷ್ಟು ಬಾರಿ ಕಣ್ಣು ಮಿಟುಕಿಸುತ್ತಿರುವ, ಚೂಪು ನೋಟದ ನಿನ್ನ ಮಂದಾರ ಮುಖ ನೋಡುವಷ್ಟರಲ್ಲಿ ಸೂರ್‍ಯ ಭೂಮಿಗೆ ವಿದಾಯ ಹೇಳುತ್ತಿದ್ದ. ನಿನ್ನದೇ ಅವ್ಯಕ್ತ ಲಹರಿಯ ಗಾಣಕ್ಕೆ ಬಿದ್ದು ಬೆಲ್ಲದಚ್ಚಾಗಲು ಪಾಕುಗೊಳ್ಳುತ್ತಿರುವೆ. ನಿನ್ನ ಕಾಡಿಗೆ ಕಣ್ಣ ಪ್ರಭೆಯ ಪ್ರತಾಪವನ್ನು ನನ್ನ ಚಿತ್ರಕ್ಕೆ ತುಂಬಿಸಿ ನಿನ್ನದೇ ಚೆಂದದ ಮುಖಪುಟಕ್ಕೆ ಮುನ್ನಡಿ ಬರೆಯುತ್ತಿರುವೆ. ಕೆಲವೊಮ್ಮೆ ನಿನ್ನನ್ನು ಕವಿತೆಯ ಸಾಲುಗಳಲ್ಲಿ ಕಟ್ಟಿಹಾಕೋಣವೆಂದು ಪ್ರಯತ್ನಿಸಿ ಸೋತದ್ದೂ ಉಂಟು.

ನಿನಗೆ ಸಿಗಲಾರದಿದ್ದ ನನ್ನೀ ಆತ್ಮದ ಪಿಸುನುಡಿಗಳನ್ನು ನಮ್ಮೂರ ಗದ್ದೆಗಳಲ್ಲಿ ಸಾಗಿ ಹೋಗುತ್ತಿದ್ದ ತಂಗಾಳಿಗೆ, ದಿಬ್ಬನ್ನ ಕುಂಟೆಯ ತಂಪು ನೀರಿಗೆ, ಸಾಲು ಮರಗಳ ಸುಳಿಯಲ್ಲಿ ಅರಳಿದ ಹಳದಿ ಹೂಗಳಿಗೆ ಹೇಳುತ್ತಿದ್ದೆ. ಮನಸು ಗೂಟಕಿತ್ತ ಕರುವಿನಂತಾಗಿದೆ. ನಿನ್ನ ಮೇಲಿನ ಈ ಎಲ್ಲಾ ವರ್ಣನೆ ರೈಲಿನ ಭೀಕರ ಸದ್ದಿನಂತೆ ಕಿರುಚುತ್ತದೆಂಬ ಭಯವೂ ಇದೆ. ನನಗೆ ಸದ್ದಿಗಿಂತ ಅದರ ಯಾನವೇ ಮುಖ್ಯ. ಅದುವೇ ಪ್ರೇಮಯಾನ. ಈ ಯಾನಕ್ಕೆ ನೀನು ಜತೆಯಾಗುತ್ತೀಯ ಎಂಬ ನಿರೀಕ್ಷೆಯಲ್ಲಿ ಎದುರುಗೊಳ್ಳುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT