ADVERTISEMENT

ಹೊಳೆಯೇ ಮುಳುವಾದಾಗ

ಬಿಸಿಲ ಕಾಲದ ನೀರ ನೆನಪು

​ಪ್ರಜಾವಾಣಿ ವಾರ್ತೆ
Published 17 ಮೇ 2017, 19:30 IST
Last Updated 17 ಮೇ 2017, 19:30 IST
ಬಿರುಬಿಸಿಲು. ಹೊಳೆಯಾಚೆಯ ಮತ್ತೂರು, ಸ್ನೇಹಿತ ಗೂಳೆಪ್ಪನ ಊರು. ನಾವು ಆತನಲ್ಲಿಗೆ ಬಸ್‌ಚಾರ್ಜ್‌ ಇಲ್ಲದೇ ಹೋಗಬೇಕು. ಹಾಗಾಗಬೇಕೆಂದರೆ 3–4 ಕಿ.ಮೀ. ಅಗಲದ ಹಿನ್ನೀರಿನ ತುಂಗಭದ್ರಾ ಹೊಳೆ, ಬೇಸಿಗೆಯಲ್ಲಿ 3–4 ಫರ್ಲಾಂಗಿಗೆ ಇಳಿಯುವವರೆಗೆ ಕಾಯಬೇಕು.
 
ಬೇಸಿಗೆ ಬಂತೆಂದರೆ 3–4 ಫರ್ಲಾಂಗ್‌ ಸುಲಭವಾಗಿ ಈಜಿ ಆಚೆ ದಡ ಸೇರುತ್ತಿದ್ದೆವು. ‘ಮಮ ಮಮಯೋರ ಚಲುವ ಚಕೋರ’ ಎಂಬ ಅಂದಿನ ಚಲನ ಚಿತ್ರಗೀತೆಯನ್ನು ಬದಲಿಸಿ ‘ಮಮ ಮಮಯೋರ ಹೊಳಿಯಾಚೆಕೋರ’ ಎಂದು ಹಾಡುತ್ತಾ ಹೊಳೆಗೆ ಹಾರುತ್ತಿದ್ದೆವು. ಪ್ರಯಾಣದ ನಡುವೆ ಹೊಳೆ ಹೊಲದ ಸೌತೆ, ಅಲಸಂದೆ, ಜೋಳದ ಬೆಳೆಸಿ ನಮ್ಮ ಹೊಟ್ಟೆ ಸೇರುತ್ತಿದ್ದವು.
 
ಹೀಗೆ ಆಚೀಚೆ ದಂಡೆಯ ಎರಡೂ ಕಡೆ ಸ್ನೇಹಿತರು ಈಜಿಕೊಂಡೇ ಬರುವ ಸಾಹಸ ಪದೇ ಪದೇ ಮಾಡುತ್ತಿದ್ದೆವು. ನಡುನಡುವೆ ಹೊಳೆಗೆ ಆಳ ಮತ್ತು ಸೆಳವು ಎರಡೂ ಇರುತ್ತಿತ್ತು. ಈಜಲು ಹೆದರುವ ಪುಕ್ಕಲರು ವಾಪಸ್‌ ಹೋಗಿ ಮನೆ ಸೇರುತ್ತಿದ್ದರು. ಈಜುವಾಗ ಮಧ್ಯಕ್ಕೆ ಕೈ ಸೋತರೆ ಅಂಬಿಗ ಸ್ನೇಹಿತನ ನಿರ್ದೇಶನ ಇದ್ದೇ ಇರುತ್ತಿತ್ತು. ನೀರಿನಲ್ಲಿ ನೆಲೆ ತುಳಿಯುವುದು, ಅಂಗಾತ ಬಿದ್ದು ನಿರಾಯಾಸ ತೇಲುವುದು, ದಣಿವಾರಿದ ಮೇಲೆ ಮುಂದಕ್ಕೆ ಈಸುತ್ತಿದ್ದೆವು.
 
ತೀರಾ ಕೈ ಸೋತಾಗ ಸೆಳವಿನ ದಿಕ್ಕಿನಲ್ಲಿ ಸುಲಭವಾಗಿ ಚಲಿಸುತ್ತಿದ್ದೆವು. ಮತ್ತೂರು ಸೇರಿದ ಮೇಲೆ ಹತ್ತೂರಿನಲ್ಲಿಲ್ಲದ ಆತಿಥ್ಯದಿಂದ ಸ್ನೇಹಿತ ಗ್ವಾರಂಟಿ ಗೂಳೆಪ್ಪ ಉಪಚರಿಸುತ್ತಿದ್ದ. ಈತ ನಮಗೆ ಹುಡ್ಡದಂಥ ಬೆಂಬಲಿಗನಾಗಿದ್ದ. ಆಳು ಕೂಡ ಜಟ್ಟಿಯಂತೆಯೇ ಸೈ.
 
ಹೀಗಿರುತ್ತಿರಲಾಗಿ ಒಮ್ಮೆ ತನ್ನ ಗೆಳೆಯ ಸಿದ್ಧಲಿಂಗಯ್ಯನನ್ನು ಜೊತೆ ಮಾಡಿಕೊಂಡು ನಮ್ಮೂರು ಬಸರಕೋಡು ಕಡೆ ಈಜುತ್ತಾ ಬರುತ್ತಿದ್ದಾನೆ. ಹೀಗೆ ಆತ ಎಷ್ಟೋ ಬಾರಿ ಈಜಿಕೊಂಡು ಬಂದಿದ್ದಾನೆ. ಆದರೆ ಅಂದು ಹೊಳೆ ಮಧ್ಯದಲ್ಲಿಯೇ ಮುಳುಗಿ ಅಸುನೀಗಿಬಿಟ್ಟ. ಮೀನಿನಂತೆ ಈಜುತ್ತಿದ್ದವರು ನಾವು. ಹರೆಯದ ಸೊಕ್ಕಿನಿಂದ ಬೀಗುತ್ತಿದ್ದವರು ನಾವು. ಅಂಥ ಭಂಟರಾದ ನಾವು ಈ ಘಟನೆಯಿಂದ ತುಂಬಾ ಹೆದರಿಕೊಂಡೆವು. ಅಂದಿನಿಂದಲೇ ನಮ್ಮ ಈಜುವ ಕಾಯಕಕ್ಕೆ ಶರಣು ಹೇಳಿಬಿಟ್ಟೆವು.  
–ಮೇಟಿ ಕೊಟ್ರಪ್ಪ ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.