ADVERTISEMENT

‘ಬ್ಯೂಟಿಫುಲ್’ ಮೇಘನಾ

ಗಣೇಶ ವೈದ್ಯ
Published 17 ಸೆಪ್ಟೆಂಬರ್ 2014, 19:30 IST
Last Updated 17 ಸೆಪ್ಟೆಂಬರ್ 2014, 19:30 IST

ತೆಲುಗು ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿ ಮಲಯಾಳಂನಲ್ಲಿ ಹೆಚ್ಚು ಕಾಣಿಸಿಕೊಂಡ ಕನ್ನಡತಿ ಮೇಘನಾ ರಾಜ್ ‘ಪುಂಡ’ ಚಿತ್ರದ ಮೂಲಕ ಕನ್ನಡದಲ್ಲಿಯೂ ಅದೃಷ್ಟ ಪರೀಕ್ಷಿಸಿದರು. ಅದಾದ ನಾಲ್ಕು ವರ್ಷಗಳ ನಂತರ ಮತ್ತೆ ಕನ್ನಡದ ‘ರಾಜಾಹುಲಿ’ಯಲ್ಲಿ ಮೆರೆದು ‘ಬಹುಪರಾಕ್‌’ ಹಾಕಿಸಿಕೊಂಡರು. ಈಗ ‘ಅಲ್ಲಮ’ದ ನರ್ತಕಿಯಾಗಲು ಹೊರಟಿದ್ದಾರೆ. ಅವರ ಸಿನಿ–ಬದುಕಿನ ಬಗ್ಗೆ ‘ಕಾಮನಬಿಲ್ಲು’ ಮಾತನಾಡಿಸಿದಾಗ...

*ಪುಂಡಾಟ ಹೆಚ್ಚಾಗಿ ನಡೆದಿಲ್ಲವಲ್ಲ?
‘ಪುಂಡ’ದಲ್ಲಿ ನಂದು ಸಿಂಪಲ್ ಹುಡುಗಿ ಪಾತ್ರ. ಅದು ನಿಜಕ್ಕೂ ಒಂದೊಳ್ಳೆ ಪ್ರಯತ್ನ. ಆದರೂ ಅಷ್ಟಾಗಿ ಯಶಸ್ವಿಯಾಗಲಿಲ್ಲ. ಸೋಲಿಗೆ ಇಂಥದ್ದೇ ಕಾರಣ ಎಂದು ಹೇಳಲಾಗದು. ಚಿತ್ರದ ಕಂಟೆಂಟ್, ಬಿಡುಗಡೆಯಾದ ಸಂದರ್ಭ, ಪಬ್ಲಿಸಿಟಿ ಹೀಗೆ ಹಲವು ಕಾರಣಗಳಿವೆ. ನನ್ನ ಪ್ರಕಾರ ‘ಪುಂಡ’ನಿಗೆ ಸಿಕ್ಕ ಪ್ರಚಾರ ಸಾಲಲಿಲ್ಲ.

*ಕನ್ನಡಕ್ಕಿಂತ ಮಲಯಾಳಂನಲ್ಲೇ ಹೆಚ್ಚು ಮಿಂಚುತ್ತಿದ್ದೀರಲ್ಲ?
ನನಗೆ ಮಲೆಯಾಳಂ ಚಿತ್ರಗಳಲ್ಲೇ ಕಾಣಿಸಿಕೊಳ್ಳಬೇಕು ಅಂತೇನೂ ಇರಲಿಲ್ಲ. ಕನ್ನಡಕ್ಕಿಂತ ಅಲ್ಲಿ ಹೆಚ್ಚು ಒಳ್ಳೆಯ ಚಿತ್ರ–ಪಾತ್ರಗಳು ಅರಸಿ ಬಂದವು. ಅಲ್ಲಿನ ಜನ ನನ್ನನ್ನು ಬೇಗ ಗುರ್ತಿಸಿದರು. (ಕನ್ನಡಿಗರೂ ಗುರ್ತಿಸಿಲ್ಲ ಎಂದಲ್ಲ. ‘ರಾಜಾಹುಲಿ’ ಸೆಂಚುರಿ ಬಾರಿಸಿತಲ್ಲ). ಕನ್ನಡದಲ್ಲಿ ಕಥೆ ಕೇಳಿದ ತಕ್ಷಣ ಮಾಡಿಬಿಡಬೇಕು ಎನ್ನುವಂತಹ ಪಾತ್ರಗಳು ಅರಸಿ ಬಂದಿದ್ದು ಕಡಿಮೆ. ಹಾಗೆ ನೋಡಿದರೆ ‘ರಾಜಾಹುಲಿ’ ಮತ್ತು ‘ಬಹುಪರಾಕ್’ ಕಥೆ ಕೇಳಿದ ತಕ್ಷಣ ಒಪ್ಪಿಕೊಳ್ಳಲೇಬೇಕು ಅನ್ನಿಸಿತು. ಅದಕ್ಕಾಗಿಯೇ ಒಪ್ಪಿಕೊಂಡೆ.

*ಕನ್ನಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ತೆಳ್ಳಗಾಗಿದ್ದೀರಂತೆ?
ಹಾಗೇನಿಲ್ಲ. ಮಲಯಾಳಂನಲ್ಲಿ ಹೆಚ್ಚು ಹೆಚ್ಚಾಗಿ ಕಾಣಿಕೊಳ್ಳುವಾಗಲೇ ತೆಳ್ಳಗಾಗಲು ಬಯಸಿದ್ದೆ. ಯಾರೋ ದಪ್ಪಗಾಗಿದ್ದೀಯ ಎಂದಿದ್ದಕ್ಕಲ್ಲ. ನಾನು ಆರೋಗ್ಯವಾಗಿರಬೇಕೆಂಬ ಉದ್ದೇಶಕ್ಕಷ್ಟೆ. ಇಷ್ಟಕ್ಕೂ ನಾನೇನು ದಪ್ಪಗಿರಲಿಲ್ಲ. ‘ಚಬ್ಬಿ ಟೈಪ್’ ಇದ್ದೆ ಅಷ್ಟೆ.

ADVERTISEMENT

*ನಿಮಗೆ ಯಾರಾದರೂ ‘ಬಹುಪರಾಕ್’ ಹಾಕಿದ್ದಿದ್ಯಾ?
ಹೂಂ. ನಾನು ಚಿತ್ರರಂಗಕ್ಕೆ ಬರುತ್ತೇನೆ ಎಂದು ತಿಳಿದ ತಕ್ಷಣ ಬಿ.ಸರೋಜಾ ದೇವಿ ಅವರು ಫೋನ್ ಮಾಡಿ ಶಹಬ್ಬಾಸ್ ಎಂದಿದ್ದರು. ನೀನು ಒಳ್ಳೆಯ ನಟಿಯಾಗುತ್ತೀಯ ಎಂದೂ ಹೇಳಿದ್ದರು. ಅವರನ್ನು ನೆನಪಿಸಿಕೊಳ್ಳಲೇಬೇಕು.

*ನಿಮ್ಮ ಮಲಯಾಳಂ ಚಿತ್ರಗಳು ಬಹುತೇಕ ಇಂಗ್ಲಿಷ್‌ ಶೀರ್ಷಿಕೆಯನ್ನೇ ನೆಚ್ಚಿಕೊಂಡಿವೆಯಲ್ಲ?
ಹೌದೌದು. ಆದ್ಯಾಕೆ ಹಾಗೆ  ಅಂತ ನಂಗೂ ಗೊತ್ತಾಗಿಲ್ಲ. ನಂಗೆ ಮಲಯಾಳಂ ಉಚ್ಚರಿಸೋಕೆ ಬರಲ್ಲ ಅಂತ ಇದ್ದರೂ ಇರಬಹುದು. ಆದರೆ ಮಲೆಯಾಳಂನಲ್ಲಿ ಇತ್ತೀಚೆಗೆ ಅದೊಂದು ಟ್ರೆಂಡ್ ಆಗಿ ಬೆಳೆದಿದೆ.

*ಕಲಾವಿದರ ಕುಟುಂಬದ ಕುಡಿಯ ಕನಸೇನು?
ಕಲಾವಿದೆಯಾಗೇ ಇರಬೇಕು, ಬಣ್ಣದ ಲೋಕದಲ್ಲಿ ಸೃಷ್ಟಿಯಾಗುವ ಎಲ್ಲ ಪಾತ್ರಗಳನ್ನೂ ಆವಾಹಿಸಿಕೊಳ್ಳಬೇಕು ಎಂಬುದು.

ಫಟಾಫಟ್
*ಸ್ನೇಹ–ಪ್ರೀತಿ; ಯಾವುದು ಇಷ್ಟ?
ಎರಡೂ ಇಷ್ಟ. ಯಾಕಂದ್ರೆ ನನ್ನಲ್ಲಿ ಅವೆರಡೂ ಗುಣಗಳಿವೆ. ಸಂದರ್ಭಕ್ಕೆ ತಕ್ಕಂತೆ ಆ ಗುಣಗಳು ವ್ಯಕ್ತವಾಗುತ್ತವೆ.

*ನೀವೆಷ್ಟು ಲಕ್ಕಿ?
ಸಿಕ್ಕಾಪಟ್ಟೆ.

*ಮದುವೆ ಬಗ್ಗೆ...
ಆ ವಿಚಾರವೇ ಸದ್ಯಕ್ಕಿಲ್ಲ. ಇನ್ನೂ ಸಾಕಷ್ಟು ಸಿನಿಮಾ ಮಾಡಬೇಕು.

*‘ಬ್ಯೂಟಿಫುಲ್’ ಆಗಿ ಕಾಣಿಸಿಕೊಂಡಿದ್ದರ ಗುಟ್ಟೇನು?
‘ಬ್ಯೂಟಿಫುಲ್’ ಚಿತ್ರ ನನಗೆ ಮಲಯಾಳಂನಲ್ಲಿ ತುಂಬ ಜನಪ್ರಿಯತೆ ನೀಡಿದ, ಹೊಸ ಟ್ರೆಂಡ್ ಚಿತ್ರ. ಆ ಚಿತ್ರದ ಮೂಲಕ ತುಂಬಾ ಕಲಿತೆ. ಮೂರು ವರ್ಷಗಳಾದರೂ ಅಲ್ಲಿನ ಅಭಿಮಾನಿಗಳು ನನ್ನನ್ನು ಬ್ಯೂಟಿಫುಲ್ ಚಿತ್ರದಿಂದಲೇ ಗುರ್ತಿಸುತ್ತಾರೆ. ಒಂದಿಷ್ಟೂ ಮೇಕಪ್ ಇಲ್ಲದೇ ಕಾಣಸಿಕೊಂಡ ಚಿತ್ರ ಅದು. ಆದರೂ ನಾನು ಚೆನ್ನಾಗಿ ಕಾಣುತ್ತಿದ್ದೆ ಎಂದು ಸಾಕಷ್ಟು ಜನ ಹೇಳಿದ್ದಾರೆ. ಜೀವನದಲ್ಲಿ ಬಹಳ ಖುಷಿ ಕೊಟ್ಟ ಚಿತ್ರ ಅದು.

*ಗ್ಲಾಮರ್ ಆಗುವ ಕುರಿತು...
ಚಿತ್ರರಂಗ ಅಂದಮೇಲೆ ಗ್ಲಾಮರ್ ಇರಲೇ ಬೇಕು. ಎಲ್ಲರೂ ಗ್ಲಾಮರಸ್ ಆಗಿ ಕಾಣಸಿಕೊಳ್ಳಲು ಬಯಸುತ್ತಾರೆ. ನಾನೂ ಪಾತ್ರಕ್ಕೆ ಅವಶ್ಯಕತೆ ಇದ್ದಾಗ ಗ್ಲಾಮರಸ್ ಆಗುತ್ತೇನೆ. ಒಂದು ವೇಳೆ ಕನ್ನಡದಲ್ಲಿಯೂ ಅಂತಹ ಪಾತ್ರಗಳಿದ್ದರೆ ಖಂಡಿತ ಮಾಡುತ್ತೇನೆ. ಆದರೆ ಬಾಲಿವುಡ್ ಲೆವಲ್ ಗ್ಲಾಮರ್ ನಾನು ಒಲ್ಲೆ.

*‘ರಾಜಾಹುಲಿ’ಯಲ್ಲಿ ‘ರಾಣಿಹುಲಿ’ಯಾಗಿ ಮೆರೆದಿದ್ದೀರಿ!
ಖಂಡಿತ. ಅದರಲ್ಲಿ ಟಿಪಿಕಲ್ ಮಂಡ್ಯ ಗೌಡ್ತಿ ಪಾತ್ರ ನಂದು. ಭಾರಿ ಜೋರು. ಬೇಕೆಂದಿದ್ದನ್ನು ಪಡೆಯುವ ಹಟ. ಅಷ್ಟೇ ತಿಳಿವಳಿಕೆ ಉಳ್ಳ ಬುದ್ಧಿವಂತೆ. ತುಂಬಾ ಗುಣಗಳುಳ್ಳ ಆ ಪಾತ್ರದಲ್ಲಿ ನಿಜಕ್ಕೂ ‘ರಾಣಿಹುಲಿ’ಯಾಗಿ ಘರ್ಜಿಸಿದ್ದೀನಿ.

*ರಟ್ಟು ಮಾಡಬಹುದಾದ ಗುಟ್ಟು ಯಾವುದಾದರೂ ಇಟ್ಟಿದ್ದೀರಾ?
ಗುಟ್ಟು ಅಂದ್ಮೇಲೆ ಗುಟ್ಟಾಗಿಯೇ ಇರಲಿ ಬಿಡಿ. ರಟ್ಟು ಮಾಡುವ ಸಂದರ್ಭ ಬಂದಾಗ ನಾನೇ ಬಿಚ್ಚಿಡ್ತೀನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.