ADVERTISEMENT

5 ಕಾರುಗಳಿಗೆ ಗುಡ್‌ಬೈ

ಇ.ಎಸ್.ಸುಧೀಂದ್ರ ಪ್ರಸಾದ್
Published 16 ಏಪ್ರಿಲ್ 2014, 19:30 IST
Last Updated 16 ಏಪ್ರಿಲ್ 2014, 19:30 IST

ಭರವಸೆ ಮೂಡಿಸಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ಕೆಲವೊಂದು ಕಾರುಗಳು ಬದಲಾದ ಪರಿಸ್ಥಿತಿ ಹಾಗೂ ಹೊಸ ಮಾದರಿಯ ಕಾರುಗಳ ತೀವ್ರ ಪೈಪೋಟಿಯಿಂದಾಗಿ ಇಂದು ನೇಪಥ್ಯಕ್ಕೆ ಸರಿದಿವೆ. ಮಧ್ಯಮ ವರ್ಗದ ಜನಪ್ರಿಯ ಕಾರು ಎಂದೇ ಖ್ಯಾತಿ ಗಳಿಸಿದ್ದ ಮಾರುತಿ 800 ಹಾಗೂ ಶ್ರೀಮಂತ ವರ್ಗದ ಐಷಾರಾಮಿ ಕಾರು ಹೋಂಡಾ ಅಕಾರ್ಡ್‌ ಇನ್ನು ನೆನಪು ಮಾತ್ರ. ನಿರೀಕ್ಷೆಯ ಮಟ್ಟಕ್ಕೇರದ ಕಾರುಗಳ ಮಾರಾಟ ಹಾಗೂ ಇನ್ನಿತರ ಸಂಗತಿಗಳಿಂದಾಗಿ 2013–14ನೇ ಆರ್ಥಿಕ ವರ್ಷದಲ್ಲಿ ಐದು ಕಾರುಗಳ ಉತ್ಪಾದನೆ ಶಾಶ್ವತವಾಗಿ ಸ್ಥಗಿತಗೊಂಡಿದೆ. ಹೀಗೆ ಇತಿಹಾಸದ ಪುಟ ಸೇರಿದ ಐದು ಕಾರುಗಳ ವಿವರ ಇಲ್ಲಿದೆ.

ಸ್ಕೋಡಾ ಫ್ಯಾಬಿಯಾ
ಫೋಕ್ಸ್‌ ವ್ಯಾಗನ್‌ ಕಂಪೆನಿಯ ಚಕನ್‌ ಉತ್ಪಾದನಾ ಘಟಕದಿಂದ 2009ರಲ್ಲಿ ಹೊರಬಂದ ಮೊದಲ ಕಾರು ಸ್ಕೋಡಾ ಫ್ಯಾಬಿಯಾ. ಮೊದಲ ವರ್ಷದಲ್ಲೇ ಈ ಸಣ್ಣ ಕಾರಿನ ಮಾರಾಟ ಐದು ಸಾವಿರದ ಗಡಿ ದಾಟಿ ಭರವಸೆ ಮೂಡಿಸಿತ್ತು. ನಂತರದ ವರ್ಷಗಳಲ್ಲಿ ಇದರ ಮಾರಾಟ ಶೇ 60ರಷ್ಟು ಮಾತ್ರ ಇತ್ತು. ಕಳೆದ ವರ್ಷ ಇದರ ಅರ್ಧದಷ್ಟೂ ಮಾರಾಟ ಕಾಣದೆ ಕುಸಿತ ಕಂಡಿತು. ಅತ್ಯುತ್ತಮವಾಗಿ ನಿರ್ಮಾಣವಾಗಿದ್ದರೂ, ದುಬಾರಿ ನಿರ್ವಹಣೆ ಹಾಗೂ ಬಿಡಿ ಭಾಗಗಳ ಕೊರತೆಯಿಂದ ಕಾರು ಖರೀದಿದಾರರು ಇದರಿಂದ ವಿಮುಖರಾಗಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ.

ಹ್ಯುಂಡೈ ಅಸ್ಸೆಂಟ್‌
ದಶಕಕ್ಕೂ ಹಳೆಯದಾದ ಹ್ಯುಂಡೈ ಅಸ್ಸೆಂಟ್‌ ಕಾರಿಗೆ ಆರಂಭದ ದಿನಗಳಲ್ಲಿ ಭಾರೀ ಬೇಡಿಕೆ. ಮಾರುತಿ ಎಸ್ಟೀಂ ಸದ್ದು ಮಾಡುತ್ತಿದ್ದ ಕಾಲದಲ್ಲಿ ಅದಕ್ಕೆ ಪೈಪೋಟಿ ನೀಡುವ ಸಲುವಾಗಿ ಅತ್ಯಂತ ಐಷಾರಾಮಿ ಸೌಲಭ್ಯವುಳ್ಳ ಹಾಗೂ ಶಕ್ತಿಶಾಲಿ ಕಾರನ್ನು ಹ್ಯುಂಡೈ ಪರಿಚಯಿಸಿತು. ಆದರೆ ಇಂದು ಹ್ಯುಂಡೈ ಬತ್ತಳಿಕೆಯಲ್ಲಿ ಫ್ಲೂಡಿಕ್‌ ವಿನ್ಯಾಸದ ಐಷಾರಾಮಿ ಕಾರುಗಳ ದೊಡ್ಡ ದಂಡೇ ಇದೆ. ಹೀಗಾಗಿ ಹ್ಯುಂಡೈನ ನಿರೀಕ್ಷೆಯನ್ನೂ ಮೀರಿ ಮಾರಾಟವಾದ ಅಸ್ಸೆಂಟ್ ಕಾರಿಗೆ ಕಂಪೆನಿ ಗೌರವಪೂರ್ವಕ ವಿದಾಯ ಹೇಳಿದೆ.

ADVERTISEMENT

ಹೋಂಡಾ ಝಾಸ್‌

ಉತ್ಪಾದನೆ ಸ್ಥಗಿತಗೊಳಿಸಿದ ಮತ್ತೊಂದು ಕಾರು ಹೋಂಡಾ ಕಂಪೆನಿಯ ಝಾಸ್‌. ಅತಿ ಹೆಚ್ಚು ಸ್ಥಳಾವಕಾಶ ಹೊಂದಿದ್ದ ಹಾಗೂ ಐಷಾರಾಮಿ ಸಣ್ಣಕಾರು ಎಂದೇ ಖ್ಯಾತಿಯಾಗಿದ್ದ ಝಾಸ್‌ ನಿರೀಕ್ಷೆಯ ಮಾರಾಟವನ್ನು ಕಾಣಲಿಲ್ಲ. ಅದಕ್ಕಿದ್ದದ್ದು ಪೆಟ್ರೋಲ್‌ ಎಂಜಿನ್‌ ಎಂಬ ಒಂದೇ ಕಾರಣ. ಝಾಸ್‌ ಮೇಲಿನ ಬೆಲೆಯನ್ನು ಹೋಂಡಾ ಕಡಿತಗೊಳಿಸಿ ಮಾರಾಟದಲ್ಲಿ ಹೆಚ್ಚಳ ಉಂಟು ಮಾಡುವ ಪ್ರಯತ್ನಕ್ಕೂ ಕಂಪೆನಿ ಕೈಹಾಕಿತ್ತು. ಆದರೆ ಇದಕ್ಕಿಂತ ಡೀಸೆಲ್‌ ಮಾದರಿಯ ಕಾರನ್ನು ಪರಿಚಯಿಸುವುದೇ ಲೇಸು ಎಂದು ಝಾಸ್‌ ಕಾರಿನ ಉತ್ಪಾದನೆಯನ್ನು ಕಂಪೆನಿ ಸ್ಥಗಿತಗೊಳಿಸಿತು.

ಹೋಂಡಾ ಅಕಾರ್ಡ್‌

ಡಾಲರ್‌ ಎದುರು ರೂಪಾಯಿ ಬೆಲೆಯ ಏರಿಳಿತದಿಂದ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದರಿಂದ ಹಾಗೂ ಕಾರಿನ ಮಾರಾಟದಲ್ಲಿ ಅಷ್ಟಾಗಿ ಪ್ರಗತಿ ಕಾಣದ ಕಾರಣ ಹೋಂಡಾ ಕಂಪೆನಿ ತನ್ನ ವಿಲಾಸಿ ಕಾರು ಅಕಾರ್ಡ್‌ ಉತ್ಪಾದನೆಯನ್ನು ಸ್ಥಗಿತಗೊಳಿಸುವ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಕಾರಿನ ಬಹಳಷ್ಟು ಭಾಗಗಳನ್ನು ಆಮದು ಮಾಡಿಕೊಳ್ಳಲಾಗುವುದರಿಂದ ಕಾರಿನ ಉತ್ಪಾದನಾ ವೆಚ್ಚ ನಿರೀಕ್ಷೆಗೂ ಮೀರಿ ಏರಿಕೆಯಾಗುತ್ತಿತ್ತು. ಜತೆಗೆ ಸ್ಪರ್ಧೆಯೂ ಹೆಚ್ಚಾಗಿದ್ದರಿಂದ ಹೋಂಡಾ ಅಕಾರ್ಡ್‌ ಇನ್ನು ನೆನಪು ಮಾತ್ರ.

ಮಾರುತಿ 800
ಭಾರತದ ಮೊದಲ ಮಧ್ಯಮ ವರ್ಗದ ಕಾರು ಮಾರುತಿ 800 2013ರಲ್ಲಿ ವಿದಾಯ ಹೇಳಿತು. ಈವರೆಗೂ ಮೂವತ್ತು ಲಕ್ಷದಷ್ಟು ದಾಖಲೆಯ ಮಾರಾಟ ಕಂಡ ಹೆಗ್ಗಳಿಕೆ ಈ ಕಾರಿನದ್ದು. ಅಪ್ಪಟ ಕೌಟುಂಬಿಕ ಕಾರು ಎಂದೇ ಖ್ಯಾತಿ ಗಳಿಸಿದ್ದ ಮಾರುತಿ 800ನ ಮೊದಲ ಬ್ಯಾಚ್‌ನ ಕಾರನ್ನು ಕೆಲವರು ಇಂದಿಗೂ ಇಟ್ಟುಕೊಂಡಿದ್ದಾರೆ. ಇದರ ಜನಪ್ರಿಯತೆಯನ್ನು ಬಿಟ್ಟುಕೊಡದ ಕಂಪೆನಿ ಅದೇ ಹೆಸರಿನ ಹೊಸ ಮಾದರಿಯ ಕಾರು ಪರಿಚಯಿಸಿದರೂ ಹಳೆಯ 800 ಇನ್ನು ನೆನಪು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.