ADVERTISEMENT

‘ಮೆದುಳು’ ಸೃಷ್ಟಿಯ ಕಸರತ್ತು

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 19:30 IST
Last Updated 24 ಜನವರಿ 2018, 19:30 IST
‘ಮೆದುಳು’ ಸೃಷ್ಟಿಯ ಕಸರತ್ತು
‘ಮೆದುಳು’ ಸೃಷ್ಟಿಯ ಕಸರತ್ತು   

ಕೆಲಸಗಳ ಒತ್ತಡ, ಕಾಲ್-ಮೆಸೇಜ್, ಟ್ರಾಫಿಕ್ ಜಂಜಡಗಳ ನಡುವೆ ಕಾರು ಚಾಲನೆ ಕಿರಿಕಿರಿ ಎನ್ನುವವರು ಸ್ವಯಂಚಾಲಿತ ವಾಹನಗಳಿಗಾಗಿ ಕಾಯುತ್ತಿರಬಹುದು. ಬಹುತೇಕ ಆಟೊಮೊಬೈಲ್ ಹಾಗೂ ಸಾಫ್ಟ್‌ವೇರ್ ಸಂಸ್ಥೆಗಳು ಚಾಲಕರಹಿತ ವಾಹನಗಳನ್ನು ರಸ್ತೆಗಿಳಿಸಲು ಸಜ್ಜಾಗಿದ್ದು, ಅಭಿವೃದ್ಧಿಪಡಿಸಿರುವ ಮಾದರಿಗಳನ್ನು ಅಂತರರಾಷ್ಟ್ರೀಯ ಮೇಳಗಳಲ್ಲಿ ಪ್ರದರ್ಶಿಸುತ್ತಿವೆ.

ಹಾಗಾದರೆ, ಮನುಷ್ಯನಷ್ಟೇ ಕ್ಷಿಪ್ರವಾಗಿ ನಿರ್ಧಾರ ತೆಗೆದುಕೊಳ್ಳುವ, ಅಡೆ-ತಡೆಗಳನ್ನು ಅನುಭವದ ಆಧಾರದಲ್ಲಿ ದಾಟಿ ಸಾಗಬಹುದಾದ ಸಾಮರ್ಥ್ಯವನ್ನು ಕೃತಕ ಬುದ್ಧಿಮತ್ತೆ ಅಥವಾ ಅದನ್ನು ಒಳಗೊಂಡ ಕಂಪ್ಯೂಟರ್‌ಗಳು ಹೊಂದಿವೆಯೇ?- ಇಲ್ಲ. ಆದರೆ, ಲಕ್ಷಾಂತರ ವರ್ಷಗಳಲ್ಲಿ ಮನುಷ್ಯ ಕಂಡು ತನ್ನದಾಗಿಸಿಕೊಂಡಿರುವ ಅನುಭವವನ್ನು ಕಂಪ್ಯೂಟರ್ ಗ್ರಹಿಕೆಗೆ ತರುವ ಪ್ರಯತ್ನ ಉತ್ತುಂಗದಲ್ಲಿದೆ.

ಮಾನವನ ಮೆದುಳಿಗೆ ಸಮನಾಗಿ ವರ್ತಿಸಬಲ್ಲ ಕಂಪ್ಯೂಟರ್ ರೂಪಿಸಲು ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ನಿರಂತರ ತಪಸ್ಸಿನಂತೆ ಸಂಶೋಧನೆ ನಡೆದಿದೆ. ಸ್ವಯಂ ಚಾಲಿತ ಕಾರುಗಳ ಸುರಕ್ಷಿತ ಚಾಲನೆಗೆ ಸಹಕಾರಿಯಾಗುವುದು ಕ್ಯಾಮೆರಾ ಕಣ್ಣುಗಳು. ಕ್ಯಾಮೆರಾದಿಂದ ಒಳಗಿನ ಕಂಪ್ಯೂಟರ್‌ಗೆ ರವಾನೆಯಾಗುವ ದೃಶ್ಯಕ್ಕೆ ತಕ್ಕಂತೆ ತಕ್ಷಣ ಸ್ಪಂದಿಸುವ ಚಾತುರ್ಯವನ್ನು ಒಳಗಿನ ವ್ಯವಸ್ಥೆ ತೋರದಿದ್ದರೆ ವಾಹನ ಅಪಘಾತ ಖಂಡಿತ. ಟ್ರಾಫಿಕ್‍ನಲ್ಲಿ ಮುಂದೆ ಯಾವುದೇ ವಾಹನವಿದ್ದರೆ ಸೆನ್ಸರ್ ಹಾಗೂ ಚಿತ್ರವನ್ನು ಗಮನಿಸುವ ಮೂಲಕ ಸ್ವಯಂಚಾಲಿತ ವಾಹನ ನಿಧಾನಗೊಳ್ಳುವುದು, ಸಿಗ್ನಲ್ ಹಸಿರು ದೀಪ ಕಾಣುತ್ತಿದ್ದಂತೆ ಮುಂದೆ ಸಾಗುವುದು, ವೇಗ ನಿಯಂತ್ರಿಸುವುದು, ಏರಿಸುವುದು ಸಾಧ್ಯವಾಗಿದೆ. ಅದೇ ಪುಟ್ಟ ಹಳ್ಳ, ಟಾರು ಕಿತ್ತಿರುವ ರಸ್ತೆ, ಮಧ್ಯೆ ಎದ್ದಿರುವ ಉಬ್ಬು, ಕಲ್ಲುಗಳು ಸಿಕ್ಕಾಗ ಹೇಗೆ ಚಾಲನೆ ಮಾಡಬೇಕು? ರಸ್ತೆಯಲ್ಲಿ ತೂರಿಬರುವ ಕಾಗದ, ಪ್ಲಾಸ್ಟಿಕ್ ವಸ್ತುಗಳ ಮೇಲೆ ಚಕ್ರ ಹರಿಸಬಹುದೇ? ಇಂಥ ಸೂಕ್ಷ್ಮಗಳನ್ನು ಕಂಪ್ಯೂಟರ್ ದೃಷ್ಟಿಯ ಗ್ರಹಿಕೆಯಲ್ಲಿ ತುಂಬಿಸುವುದು ಪ್ರಸ್ತುತ ವೇಗವಾಗಿ ಸಾಗುತ್ತಿರುವ ಕಾರ್ಯ. ಅಂದರೆ ಒಂದು ಇಡೀ ‘ಮೆದುಳು’ ರೂಪಿಸಲು ಬಹಳಷ್ಟು ವಿಜ್ಞಾನಿಗಳು, ಸಂಶೋಧಕರು ಶ್ರಮಿಸುತ್ತಿದ್ದಾರೆ. ಅಮೆರಿಕದ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯ ವಿವಿಧ ಹಂತ ಹಾಗೂ ತಂಡಗಳಲ್ಲಿ ಈ ಕಾರ್ಯ ನಡೆಸುತ್ತಿದೆ.

ADVERTISEMENT

ನಮ್ಮೊಂದಿಗೆ ನಮ್ಮಂತೆಯೇ ವರ್ತಿಸಲು

ಭೂಮಿಯ ಉಗಮ, ಜೀವಿಗಳ ಸೃಷ್ಟಿ, ಮನುಷ್ಯನ ಬೆಳವಣಿಗೆ ಇಷ್ಟೆಲ್ಲ ಆಗಿ ಲಕ್ಷಾಂತರ ವರ್ಷಗಳ ಅನುಭವವನ್ನು ಹೀರಿ ಕೆಲವೇ ವರ್ಷಗಳಲ್ಲಿ ತಂತ್ರಜ್ಞಾನ ಬಹಳಷ್ಟು ಅಭಿವೃದ್ಧಿಯಾಗಿದೆ. ಯಾವುದೇ ದೃಶ್ಯ ಕಾಣಲು ಕಣ್ಣು ಬೇಕು. ಅದನ್ನು ಅರ್ಥೈಸಿಕೊಂಡು ಪ್ರತಿಕ್ರಿಯೆ ಹೊರಡಿಸುವುದು ಮೆದುಳು. ನಮ್ಮ ಸಣ್ಣದೊಂದು ಚಲನೆಯ ಪ್ರಾರಂಭ ಮೆದುಳಿನಲ್ಲಿಯೇ ಆಗುವುದರಿಂದ ಅಷ್ಟೇ ಸಮರ್ಥ ‘ಕಂಪ್ಯೂಟರ್ ಮೆದುಳು’ ಬೆಳೆಸುವುದು, ತಾನಾಗಿಯೇ ಸಂದರ್ಭವನ್ನು ಗ್ರಹಿಸುವ ದೃಷ್ಟಿ ಮೂಡಿಸುವುದನ್ನು ಸ್ಟ್ಯಾನ್‍ಫೋರ್ಡ್‌ನ ವಿಜ್ಞಾನಿ ಫೀ-ಫೀ ಲಿ ನೇತೃತ್ವದ ತಂಡ ಮಾಡುತ್ತಿದೆ.

‘ಮೊದಲು ಯಂತ್ರಕ್ಕೆ ನೋಡುವುದನ್ನು ಕಲಿಸಬೇಕು. ಆನಂತರ ಸರಿಯಾಗಿ ಕಾಣಲು ಅದು ನಮಗೆ ಸಹಕಾರಿಯಾಗುತ್ತದೆ’ ಎನ್ನುವ ವಿಜ್ಞಾನಿಗಳು ಕಂಪ್ಯೂಟರ್ ಮೆದುಳನ್ನು ಬಾಲ್ಯಾವಸ್ಥೆಗೆ ತಂದು ಅಲ್ಲಿಂದ ಪ್ರೌಢಾವಸ್ಥೆವರೆಗೂ ಬೆಳೆಸುವ ಗುರಿ ಹೊಂದಿದ್ದಾರೆ. ಕಂಪ್ಯೂಟರ್ ಪ್ರೋಗ್ರಾಮಿಂಗ್ ಮಾಡುವಾಗ ವಸ್ತುವಿನ ಆಕಾರದ ಕುರಿತು ವಿವರಿಸಬಹುದು, ಆ ವಿವರಣೆ ವಾಸ್ತವದಲ್ಲಿ ಬದಲಾದರೆ ಕಂಪ್ಯೂಟರ್ ಅದನ್ನು ಗುರುತಿಸುವುದಿಲ್ಲ. ಹಾಗಾಗಿಯೇ ಫೋಟೊಗಳ ಮೂಲಕ ಜಗತ್ತನ್ನು ಕಂಪ್ಯೂಟರ್ ಮೆದುಳಿಗೆ ಪರಿಚಯಿಸಲಾಗಿದೆ.

‘ಇಮೇಜ್‍ನೆಟ್’ ಎಂಬ ಜಾಲತಾಣವನ್ನು ಸೃಷ್ಟಿಸಿ ಅಲ್ಲಿ 100 ಕೋಟಿಯಷ್ಟು ಫೋಟೊಗಳನ್ನು ಸಂಗ್ರಹಿಸಲಾಗಿತ್ತು. ನೂರಾರು ದೇಶದ ಸಾರ್ವಜನಿಕರ ಸಹಕಾರದಿಂದ 1.5 ಕೋಟಿ ಫೋಟೊಗಳನ್ನು 22 ಸಾವಿರ ವರ್ಗಗಳಲ್ಲಿ ವಿಂಗಡಿಸಿ ಇಂಗ್ಲಿಷ್ ವಿವರಣೆಯನ್ನು ನೀಡಲಾಗಿತ್ತು. ಈ ದತ್ತಾಂಶವನ್ನು ಯಂತ್ರ ಕಲಿಕೆಗೆ ಅಳವಡಿಸಲಾಗಿದೆ. ವಿವರ ಹಾಗೂ ದೃಶ್ಯಗಳನ್ನು ಗ್ರಹಿಸಿರುವ ಕಂಪ್ಯೂಟರ್ ಮುಂದೆ ಯಾವುದೇ ಚಿತ್ರ ಹಿಡಿದರೂ ಕೆಲವು ಸಾಲುಗಳ ವಿವರಣೆಯೊಂದಿಗೆ ಅದನ್ನು ಗುರುತಿಸುವುದನ್ನು ಕಲಿತಿದೆ.

ನರಕೋಶಗಳ ಕಾರ್ಯ ಡಿಜಿಟಲೀಕರಿಸಿದರೆ?

ಒಂದು ಸಣ್ಣ ಕೆಲಸಕ್ಕಾಗಿ ಇಲಿಯನ್ನು ನಿಗದಿಪಡಿಸಿ, ಅದೇ ಕೆಲಸವನ್ನು ಕಂಪ್ಯೂಟರ್‌ಗೂ ನೀಡಿದರೆ; ಕಂಪ್ಯೂಟರ್ ಮೆದುಳಿಗಿಂತಲೂ ಇಲಿಯ ಮೆದುಳು 9 ಸಾವಿರಪಟ್ಟು ಹೆಚ್ಚು ವೇಗವಾಗಿ ಹಾಗೂ 40 ಸಾವಿರಪಟ್ಟು ಕಡಿಮೆ ಶಕ್ತಿಯನ್ನು ಬಳಸಿ ಕಾರ್ಯನಿರ್ವಹಿಸಿರುವುದನ್ನು ಈ ಹಿಂದೆಯೇ ಸಂಶೋಧಕರು ಕಂಡುಕೊಂಡಿದ್ದಾರೆ. ಇಲಿಯ ಒಂದು ಸೆಕೆಂಡ್‍ನಷ್ಟು ಪ್ರತಿಕ್ರಿಯೆಗೆ ಕಂಪ್ಯೂಟರ್ ತೆಗೆದುಕೊಳ್ಳುವ ಸಮಯ ಎರಡೂವರೆ ಗಂಟೆ. ಅಂದರೆ, ಪ್ರಾಣಿ ಹಾಗೂ ಮನುಷ್ಯನ ಮೆದುಳಿನಲ್ಲಿ ನರಕೋಶ ಮತ್ತು ಅವುಗಳ ಸಂಪರ್ಕದಿಂದ ಸೃಷ್ಟಿಯಾಗುವ ಪ್ರತಿಕ್ರಿಯೆಯ ವೇಗ ಬಹಳ. ನರಕೋಶಗಳನ್ನು ಎಲೆಕ್ಟ್ರಾನಿಕ್ ಸರ್ಕಿಟ್ ಬೋರ್ಡ್‌ಗಳಲ್ಲಿ ತರುವುದರ ಫಲವೇ ‘ನ್ಯೂರೋಗ್ರಿಡ್’.

ಲಕ್ಷ ನರಕೋಶಗಳು ಮಾಡುವಷ್ಟು ಕಾರ್ಯವನ್ನು ನಿರ್ವಹಿಸುವ ನ್ಯೂರೋಗ್ರಿಡ್‍ಗಳನ್ನು ಮೊದಲಿಗೆ 2014ರಲ್ಲಿ ಸಿದ್ಧಪಡಿಸಲಾಯಿತು. ನೋಟ್ ಪುಸ್ತಕದಷ್ಟು ದೊಡ್ಡದಾಗಿರುವ ಈ ಬೋರ್ಡ್ ಅನ್ನು ಪುಟ್ಟ ಚಿಪ್ ಗಾತ್ರಕ್ಕೆ ತರಲಾಗುತ್ತಿದೆ.

ಬದಲಾವಣೆಗಳನ್ನು ಗಮನಿಸಿ

ಒಂದೇ ಕೈಲಿ ಕೊಂಬೆಯನ್ನು ಹಿಡಿದು ನೇತಾಡುತ್ತಿರುವ ಮಂಗ; ಅದರ ಮೆದುಳಿನಲ್ಲಿ ಆಗುತ್ತಿರುವ ನರಕೋಶಗಳಲ್ಲಿನ ಬದಲಾವಣೆಯನ್ನು ದಾಖಲಿಸಲಾಗಿತ್ತು. ಅಧಿಕ ಮಾಹಿತಿ ರವಾನೆಯಲ್ಲಿ ಹೆಚ್ಚು ನರಕೋಶಗಳು ಭಾಗಿಯಾಗುತ್ತವೆ ಎನ್ನುವ ಅಧ್ಯಯನಗಳನ್ನು ಪ್ರಾಯೋಗಿಕವಾಗಿ ರೆಕಾರ್ಡ್ ಮಾಡುವ ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಇಡೀ ಜಗತ್ತಿನ ಸಾವಿರಾರು ವಿಚಾರ, ದೃಶ್ಯ, ನೆನಪುಗಳನ್ನು ಇಟ್ಟುಕೊಂಡಿರುವ ಮೆದುಳಿನ ಸಾಮರ್ಥ್ಯವನ್ನು ಯಂತ್ರಕ್ಕೆ ನೀಡುವ ಮಹತ್ವಾಕಾಂಕ್ಷೆಯ ಯೋಜನೆಗಾಗಿ ಹಲವು ಆಯಾಮಗಳಲ್ಲಿ ಸಂಶೋಧನೆ ನಡೆದಿದೆ.

ಸ್ಮಾರ್ಟ್ ಆಗುತ್ತಿವೆ ಕಂಪ್ಯೂಟರ್

ಐಬಿಎಂ ಸಂಸ್ಥೆಯ ಕೃತಕ ಬುದ್ಧಿಮತ್ತೆ ‘ವ್ಯಾಟ್ಸನ್’ ಮನುಷ್ಯರಿಗಿಂತ ಹೆಚ್ಚು ವಿಷಯಗಳನ್ನು ಓದಿ ಗ್ರಹಿಸಿ ನೆನಪಿನಲ್ಲಿಡುತ್ತದೆ. ಕ್ಯಾನ್ಸರ್ ಕುರಿತು ನಿರಂತರ ಕಲಿಕೆ ನೀಡಿದರೆ, ಯಾವುದೇ ಬಗೆಯ ಕ್ಯಾನ್ಸರ್‌ಗೆ ನೀಡಬೇಕಾದ ಚಿಕಿತ್ಸೆ ಕುರಿತು ಹೇಳಬಹುದು.

ವಿಶ್ವ ಚೆಸ್ ಚಾಂಪಿಯನ್ ಗ್ಯಾರಿ ಕ್ಯಾಸ್‍ಪ್ರೋವ್ ವಿರುದ್ಧ ಆರು ಪಂದ್ಯಗಳ ಸರಣಿಯಲ್ಲಿ ಐಬಿಎಂನ ‘ಡೀಪ್ ಬ್ಲೂ’ ಕಂಪ್ಯೂಟರ್ ಸವಾಲು ಹಾಕಿತ್ತು. 1996ರ ಫೆಬ್ರುವರಿ 10ರಂದು ಚೆಸ್ ಚಾಂಪಿಯನ್‍ನನ್ನು ಕೃತಕ ಬುದ್ಧಿಮತ್ತೆಯ ಕಂಪ್ಯೂಟರ್ ಸೋಲಿಸಿತ್ತು!

ಅಲ್ಲಿಂದ ಮುಂದೆ ಈ ತಂತ್ರಜ್ಞಾನದಲ್ಲಿ ಸಾಕಷ್ಟು ಬೆಳವಣಿಗೆಯಾಗಿದೆ. ಈಗ ಕಂಪ್ಯೂಟರ್‌ಗಳು ಸ್ಮಾರ್ಟ್ ಆಗುತ್ತಿವೆ, ವೇಗ ಹಾಗೂ ನೆನಪಿನ ಸಾಮರ್ಥ್ಯ ಹೆಚ್ಚಿಸಿಕೊಂಡಿವೆ. ಆದರೆ, ವೇಗ ಮತ್ತು ನೆನಪು ಮಾತ್ರವೇ ಮನುಷ್ಯನ ಬುದ್ಧಿವಂತಿಕೆಗೆ ಸಮನಾದುದಲ್ಲ. ಹಾಗಾಗಿಯೇ ವಿಜ್ಞಾನಿಗಳಿಗೆ ಮನುಷ್ಯನ ಮೆದುಳಿನಷ್ಟೇ ಯಂತ್ರವನ್ನು ಚುರುಕುಗೊಳಿಸುವ ಹಂಬಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.