ADVERTISEMENT

ನಾ ಓದದ ಮೊದಲ ಪ್ರೇಮಪತ್ರ…

ಪ್ರೇಮಪತ್ರ ಸ್ಪರ್ಧೆ 2018

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 19:30 IST
Last Updated 7 ಫೆಬ್ರುವರಿ 2018, 19:30 IST
ರೇಣುಕಾ ನಿಡಗುಂದಿ ನೊಯಿಡಾ
ರೇಣುಕಾ ನಿಡಗುಂದಿ ನೊಯಿಡಾ   

ಯಾರಿಗೆ ಹೇಳಲಿ?
ಒಮ್ಮೊಮ್ಮೆ ನೆನಪಾದರೆ ಹೊಟ್ಟೆಯಲ್ಲಿ ಮಳೆಗಾಲದಲ್ಲಿ ರೊಚ್ಚಿಗೆದ್ದು ಭೋರ್ಗರೆವ ಕಡಲೊಂದು ಮಗುಚಿ ಮಗುಚಿ ಬೀಳುತ್ತಿರುವ ಸಂಕಟ…!

ನಾನಾಗ ಒಂಬತ್ತನೆ ತರಗತಿಯ ವಿದ್ಯಾರ್ಥಿನಿ. ತುಂಬಾ ಸ್ಟ್ರಿಕ್ಟಿನ, ಸದಾ ಗಂಟುಮೋರೆಯಲ್ಲಿರುತ್ತಿದ್ದ ಜೀವಶಾಸ್ತ್ರದ ಟೀಚರ್ ತರಗತಿ ನಡೆಯುತ್ತಿತ್ತು. ಹೊರಗೆ ಸಣ್ಣಗೆ ಜಿಟಿಜಿಟಿ ಮಳೆ ಸಾಣೆ ಹಿಡಿದಿತ್ತು. ಆಗ ಶಾಲೆಯ ಜವಾನನೊಬ್ಬ ಬಂದು ನನ್ನ ಹೆಸರಿಡಿದು ನನ್ನ ‘ಮಾಮ’ ಬಂದಿದ್ದಾರೆಂದು, ಕರೆಯುತ್ತಿದ್ದಾರೆಂದೂ ತಿಳಿಸಿದ. ನನಗೆ ಹಾಗೆ ಶಾಲೆಯವರೆಗೂ ಬರುವ ಯಾವ ಮಾವಂದಿರೂ, ಕಾಕಂದಿರೂ ಇದ್ದಿಲ್ಲ. ಹೈಸ್ಕೂಲಿನ ಅಡ್ಮಿಶನ್ನಿಗೂ ನನ್ನ ಅಜ್ಜನನ್ನು ಕರೆದುಕೊಂಡು ಹೋಗಿದ್ದೆ. ಯಾರೋ ಬಂದಾರೆಂದು ಕರೆದಾಕ್ಷಣ ಮನಸ್ಸಿನಲ್ಲಿ ಭಯವೂ ಸುಳಿದುಹೋಯ್ತು.

ಹೊರಗೆ ಬಂದರೆ ಯಾರೂ ಕಾಣಿಸಲಿಲ್ಲ. ತುಸು ಮುಂದಕ್ಕೆ ಸ್ಟಾಫ್ ರೂಮಿನ ಕಡೆ ಕಣ್ಣು ಹಾಯಿಸಿದರೆ... ಆ ಜಿಟಿಜಿಟಿ ಮಳೆಯಲ್ಲಿ ಸೈಕಲ್ಲಿನ ಮೇಲೆ ಕೂತು, ಒಂದು ಕಾಲು ನೆಲಕ್ಕೆ ಊರಿ ನಿಂತವರೊಬ್ಬರು ಕಣ್ಣಿಗೆ ಕಂಡರು. ಮುಖ ಪರಿಚಯವಿತ್ತು.

ADVERTISEMENT

ಇತ್ತೀಚೆಗಷ್ಟೇ ನಮ್ಮ ಓಣಿಗೆ ಹೊಸದಾಗಿ ಬಾಡಿಗೆಗೆ ಬಂದವರು. ಅದೂ ನನಗೆ ಒಬ್ಬ ನೆರೆಯ ಕಾಕೂ ಒಬ್ಬಳು ಹೇಳಿದ್ದು ಮತ್ತು ನಾನು ಎದುರು ಮನೆಯ ಅಜ್ಜಿಯ ಕಟ್ಟೆ ಮೇಲೆ ಕೂತು ಆಣಿಕಲ್ಲಿನ ಆಟ ಆಡುತ್ತ... ದೃಷ್ಟಿ ಹೊರಳಿದಾಗ…’ ಆ ಅಜ್ಜಿ ಮನೆಯೆದುರಿನ ಮನೆಯ ಕಿಟಕಿಯಲ್ಲಿ ಯಾರೋ ನಿಂತು ನನ್ನತ್ತ ನೋಡುತಿರುವಂತೆ ಭಾಸವಾಗಿತ್ತು ಅಷ್ಟೇ! ಮತ್ತದು ವಿಶೇಷವೂ ಅನಿಸಲಿಲ್ಲ ಅಥವಾ ಹಾಗೆಲ್ಲ ಯೋಚಿಸದ ಮತ್ತು ಏನೂ ಅನಿಸಿದ ವಯಸ್ಸು ನನ್ನದು. ಈಗ ಆತ ಇಲ್ಲಿ… ಶಾಲೆಯ ಕಾಂಪೌಂಡಿನಲ್ಲಿ.

ನಾನು ಹೆದರಿಕೊಳ್ಳುತ್ತಲೇ ಹತ್ತಿರ ಹೋದೆ. ಏನು ಕೇಳಿದೆನೋ, ಅವರೇನು ಅಂದರೋ… ನನ್ನ ಕೈಯಲ್ಲಿ ಲಕೋಟೆಯೊಂದನ್ನಿತ್ತು ಆತ ಗಾಳಿಯಷ್ಟೇ ವೇಗವಾಗಿ ಸೈಕಲ್ ತುಳಿದುಕೊಂಡು ಹೊರಟೂ ಹೋದ.

ಈಗ ಈ ಲಕೋಟೆಯನ್ನು ಆ ಗಂಟುಮುಖದ ಟೀಚರ್ ಕೊಡು ಇಲ್ಲಿ ಅಂತ ಇಸಿದುಕೊಂಡು, ನನ್ನನ್ನು ಬೆಂಚ್ ಮೇಲೆ ನಿಲ್ಲಿಸಿ ಪ್ರಿನ್ಸಿಪಾಲ್ ಅವರನ್ನು ಕರೆಸಿ…! ಅಬ್ಬಾ… ಇಂಥಾ ಭಯದಲ್ಲಿ ಅದನ್ನು ಮುದ್ದೆ ಮಾಡಿ ಹಿಡಿಯಲ್ಲಿ ಹಿಡಿದುಕೊಂಡು, ಲಂಗದ ನೆರಿಗೆಯಲ್ಲಿ ಅಡಗಿಸಿಕೊಂಡೆ. ತಲೆಯೆಲ್ಲ ಧಿಂ ಅನ್ನುತ್ತಿತ್ತು. ಸದ್ಯ ಟೀಚರ್ ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ಮೆಲ್ಲಗೇ ಪಾಟೀಚೀಲದಲ್ಲಿ ಬಚ್ಚಿಟ್ಟುಕೊಂಡು ಡವಗುಡುತ್ತಿದ್ದ ಎದೆಯನ್ನು, ನಡಗುತ್ತಿದ್ದ ಕಾಲುಗಳನ್ನು ಸಂತೈಸುವುದರಲ್ಲೆ ನನ್ನ ಜೀವ ಹಾರಿಹೋಗಿದ್ದು ಇವತ್ತಿಗೂ ಸ್ಪಷ್ಟವಾಗಿ ನೆನಪಿದೆ.

ಆತ ಮದುವೆ ವಯಸ್ಸಿಗೆ ಬಂದವ. ನಾನಿನ್ನೂ ಹೈಸ್ಕೂಲು. ಒಳ್ಳೆ ಕೆಲಸದಲ್ಲಿರುವ ಅವನಿಗೆ ಮನೆಯಲ್ಲಿ ಮದುವೆಗೆ ಒತ್ತಾಯಿಸುತ್ತಿದ್ದರು. ಯಾರೋ ಅವನಿಗೆ ನಿಮ್ಮ ಜಾತಿಯವರೊಬ್ಬರು ಇಲ್ಲಿದ್ದಾರೆಂದೂ ಅವರ ಮನೆಯಲ್ಲಿ ಹೆಣ್ಣುಮಕ್ಕಳಿದ್ದಾರೆಂದೂ ಹೇಳಿಬಿಟ್ಟಿದ್ದರು. ಅವನು ಕದ್ದು ಕದ್ದು ನೋಡುವುದನ್ನಾಗಲಿ, ನಮ್ಮ ಮನೆಯ ಎದುರು ಬರುತ್ತಲೇ ನಡಿಗೆ ನಿಧಾನವಾಗುವುದನ್ನಾಗಲಿ ನಾನು ಗಮನಿಸಿರಲಿಲ್ಲ. ಅವತ್ತು ಕಿಟಕಿಯಲ್ಲಿ ಕದ್ದು ನೋಡುತ್ತಿದ್ದವನು ಇವನೇ ಅಂತ ಲಕೋಟೆಯನ್ನು ಕೊಟ್ಟಾಗ ಹತ್ತಿರದಿಂದ ನೋಡಿದ್ದು. ಆ ಹೊತ್ತಿಗಾಗಲೇ ನನ್ನಿಬ್ಬರೂ ಚಿಕ್ಕ ತಂಗಿಯರು ಅವನ ಪರಿಚಿತರಾಗಿ ಅವನ ಮನೆಯಲ್ಲೇ ಆಟವಾಡಲು ಇತರ ಮಕ್ಕಳೊಂದಿಗೆ ಲಗ್ಗೆಹಾಕುತ್ತಿದ್ದರು.

ಲಕೋಟೆ ನನ್ನ ಪಾಟೀಚೀಲದಲ್ಲಿ ಸರ್ಪದಂತೆ ಕೂತು ನನ್ನ ಜೀವಹಾರಿಹೋಗುವಷ್ಟು ಭಯ ಹುಟ್ಟಿಸಿತ್ತು. ಯಾರಿಗೆ ಹೇಳಿಕೊಳ್ಳಲಿ ನನ್ನ ಸಂಕಟ? ಅದನ್ನು ಮುಟ್ಟುವ ಧೈರ್ಯವೂ ಇದ್ದಿಲ್ಲ. ಅವ್ವನ ಕೈಗೆ ಸಿಕ್ಕರಂತೂ ಬರ್ಲುಕಡ್ದಿ ಕಸಬರಗಿಯಿಂದಲೇ ನನ್ನನ್ನು ಹೊಡೆದಾಳು. ತಕ್ಷಣ ಮನೆಯ ಹತ್ತಿರವಿದ್ದ ನನ್ನ ಕಸಿನ್ ನೆನಪಾದಳು. ಅವಳ ತಾಯಿಗೆ, ಅಂದರೆ ನನ್ನ ದೊಡ್ಡಮ್ಮನಿಗೆ ಕಿವಿ ಸರಿಯಾಗಿ ಕೇಳಿಸುತ್ತಿದ್ದಿಲ್ಲವಾದ್ದರಿಂದ ಅಲ್ಲಿ ಹೋಗಿ ಪತ್ರವನ್ನು ಬಿಡಿಸಿ ನೋಡಬಹುದು ಅಂತ ಯೋಚಿಸಿ ಅವಳ ಮನೆಗೆ ಹಾರಿದೆ. ನಿಜ... ಯಥಾವತ್ ನಾ ಹಾರಿಕೊಂಡೇ ಹೋದೆ.

ಒಂದೇ ಓಟಕ್ಕೆ. ಅಡುಗೆ ಒಲೆಮುಂದೆ ಕೂತ ಅವಳಲ್ಲಿ ಹೀಗೆ ಹೀಗೆ ಅಂತ ವಿವರಿಸಿ...” ಏಯ್… ನೀನss ಓದು’ ಅಂತ ಅವಳಿಗೆ ಪತ್ರ ಕೊಟ್ಟು ಅವಳ ಮುಖ ನೋಡುತ್ತ ಕುಳಿತೆ.

ಈಗಲೂ ಆತ ಏನೇನು ಬರೆದಿದ್ದನು ಅಂತ ಗೊತ್ತಿಲ್ಲ. ‘ಪ್ರಿಯ’, ‘ಒಲವಿನ’ ಏನಂತ ಸಂಭೋದಿಸಿದ್ದನೋ ಗೊತ್ತಿಲ್ಲ. ಪ್ರೇಮದ ನಿವೇದನೆಯನ್ನೂ ನಾನು ಈ ಕಣ್ಣುಗಳಿಂದ ನೋಡಲಿಲ್ಲ. ಓದಲಿಲ್ಲ. ಕಿವಿಗೆ ಬಿದ್ದ ಯಾವ ಶಬ್ದಗಳೂ ಪುಳಕ ಹುಟ್ಟಿಸಲಿಲ್ಲ. ಚಿಟ್ಟೆಗಳು ಹಾರಲಿಲ್ಲ. ಹದಿನಾಲ್ಕರ ವಯಸ್ಸಿನಲ್ಲಿ ಯಾವ ಪ್ರೇಮ ಹುಟ್ಟಬಹುದಿತ್ತು! ಈಗ ನೆನೆದರೆ ನಗುವೂ ವಿಷಾದವೂ ಒಟ್ಟೊಟ್ಟಿಗೆ ಆಗುತ್ತದೆ. ಕತ್ತಲು ತುಂಬಿದ ಅಡುಗೆಮನೆಯಲ್ಲಿ ಉರಿವ ಒಲೆ, ಕುದಿವ ಅನ್ನದ ಮುಂದೆ ಬುಡ್ಡಿದೀಪದಲ್ಲಿ ಅವಳು ಪತ್ರವನ್ನು ಓದುತ್ತಿದ್ದರೆ ನಾನು ಕೋಡಂಗಿಯಂತೆ ಕುಕ್ಕುರುಗಾಲಿನಲ್ಲಿ ಕೂತು ನಿಗಿನಿಗಿ ಕೆಂಡವನ್ನೂ, ಉರಿವ ಒಲೆಯನ್ನು ನೋಡುತ್ತ ಕೇಳುತ್ತಿದ್ದೆ. ಮೊದಲ ಪ್ರೇಮಪತ್ರ ! ಸುಮಾರು ಮೂರು ನಾಲ್ಕು ಪುಟಗಳ ಪತ್ರ. ಅಷ್ಟೊಂದು ಏನೇನು ಬರೆದಿದ್ದನೋ ಆ ಪುಣ್ಯಾತ್ಮ ಗೊತ್ತಿಲ್ಲ. ಆಮೇಲೇನಾಯ್ತು ಅಂತೀರಾ?

ಏನೂ ಆಗಲಿಲ್ಲ. ಆಕೆ ಓದಿ ‘ಮುಂದೇನು?’ ಅನ್ನುವ ಹಾಗೆ ನನ್ನತ್ತ ನೋಡಿದಳು ಅಂತ ನೆನಪು. ನಾನು ಅಷ್ಟೇ ಆ ಪತ್ರ ಇಟ್ಟುಕೊಂಡು ನನಗೇನಾಗಬೇಕಿದೆ ಅನ್ನುವಂತೆ ಪರ ಪರ ಹರಿದು ಉರಿಯುವ ಒಲೆಗೆ ಹಾಕಿ ಮತ್ತದೇ ನಿರ್ಭಾವುಕತೆಯಲ್ಲಿ ದೊಡ್ಡ ಕಂಟಕವೊಂದು ಕಳೆಯಿತೆಂಬ ನೆಮ್ಮದಿಯಲ್ಲಿ ಮನೆಗೋಡಿದೆ; ಬಂದ ಹಾಗೆ ಜಿಂಕೆಯಂತೆ ಹಾರುತ್ತಾ …ಹಾರುತ್ತಾ…!

ಮುಂದಿನ ಕಥೆ ಕೇಳಿ. ಅವರ ಮದುವೆಯೂ ಆಯಿತು. ನನ್ನ ಮದುವೆಯೂ ಆಯ್ತು. ನಮ್ಮ ನಮ್ಮ ಕುಟುಂಬದವರು ತೋರಿದಕಡೆ. ವಿಷಾದವಿಲ್ಲ! ಸತ್ಯವೆಂದರೆ ಮುಂದೆ ನನ್ನ ಬದುಕಿನಲ್ಲಿ ಒಂದೇ ಒಂದು ಪ್ರೇಮಪತ್ರವನ್ನು ಯಾವನೂ ಬರೆಯಲಿಲ್ಲ. ಎಲ್ಲೋ ಅಲ್ಲೋ ಪ್ರೇಮವೂ ಆಯ್ತು. ಆದರೆ ಮೊದಲ ಪ್ರೇಮಪತ್ರದಂತೆ ನನ್ನನ್ನು ಕಾಡಲಿಲ್ಲ.

ಹಳಹಳಿಕೆಯನ್ನುಳಿಸಲಿಲ್ಲ. ವಿಷಾದವನ್ನು ಗುಡ್ಡೆಹಾಕಲಿಲ್ಲ. ಹೀಗೆ ನನಗೇನೇನೂ ಸಂಬಂಧವಿರದ, ಪ್ರೇಮದ ಸ್ಪರ್ಶವೂ ಸೋಕಿರದ ಹೃದಯದಲ್ಲಿ ನಾ ಓದದೇ ಸುಟ್ಟು ಹೋದ ಅಕ್ಷರಗಳು ಮತ್ತು ಕಣ್ಣಿಂದಲೂ ಸ್ಪರ್ಶಿಸಲಾಗದ, ಮತ್ಯಾರೂ ನನಗೆ ಬರೆಯದ ಆ ಅನಾಥ ‘ಪ್ರೇಮಪತ್ರ’ ಸದಾ ಕಾಡುತ್ತಿರುತ್ತದೆ ಆಯುಷ್ಯಪೂರ್ತಿ.
⇒ಏನೂ ಅಲ್ಲದವಳು…

***
ಒಕ್ಕಣೆ ವೈವಿಧ್ಯ

ಪ್ರೇಮಪತ್ರಗಳಲ್ಲಿ ಬಳಸಿದ ಒಕ್ಕಣೆ ವೈವಿಧ್ಯ ಇಲ್ಲಿದೆ:

ಇಬ್ಬರೂ ಬಳಸಿದ ಒಕ್ಕಣೆ
ಹೃದಯವೇ
ಹೇ ಜೀವಾ
ನನ್ನುಸಿರೇ
ಆತ್ಮವೇ

ಮಹಿಳೆಯರು ಬಳಸಿದ ಒಕ್ಕಣೆ

ಪತಿರಾಯನಿಗೆ,
ರಾಜಕುಮಾರನಿಗೆ,
ಇನಿಯನಿಗೆ
ಆಪ್ತನಿಗೆ
ಮನದರಸನಿಗೆ
ಮುದ್ದು ಹುಡುಗನಿಗೆ
ನನ್ನವರೇ
ಮುದ್ದು ಮಾಮನಿಗೆ
ನಲ್ಮೆಯ ನಾವಿಕನೇ
ಕಾಫಿ ಕುಡಕನಿಗೆ
ಪ್ರೇಮದೊರೆಗೆ
ಇಲ್ ಕೇಳೋ

ಪುರುಷರು ಬಳಸಿದ ಒಕ್ಕಣೆ

ಹೇ ಬ್ಯೂಟಿಫುಲ್
ನನ್ನೊಲವ ಹೂವೇ
ನವಿಲುಗರಿಗೆ
ಪಾರುಗೆ
ಭಾಗ್ಯದೇವತೆಗೆ,
ಮಾಯದ ಜಿಂಕೆಯೇ,
ಮುಂಗುರುಳ ಚೆಲುವಿಗೆ
ಒಲವಿನ ಅರಸಿಗೆ
ಮಾವನ ಮಗಳೇ
ಕನಸಿನ ಕನ್ನಿಕೆಗೆ
ಲೇ ಇವಳೇ
ಒಲವಿನ ಶಕುಂತಳಾ
ಪ್ರೀತಿಯ ಪಾರಿಜಾತವೇ
ಪ್ರೀತಿಯ ವಾಗ್ದೇವಿಗೆ
ಬೆಳದಿಂಗಳ ಬಾಲೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.