ADVERTISEMENT

ಅಂಗಳದಲ್ಲಿ ‘ಸುದೀಪ್’ ಸೆಳೆತ

ಕೆಪಿಎಲ್‌: ‘ರಾಕ್‌ ಸ್ಟಾರ್‌್ಸ ’ ತಂಡದ ಅಭ್ಯಾಸ

ಗಿರೀಶದೊಡ್ಡಮನಿ
Published 26 ಆಗಸ್ಟ್ 2014, 19:30 IST
Last Updated 26 ಆಗಸ್ಟ್ 2014, 19:30 IST

ಮೈಸೂರು: ಅಲ್ಲಿ ಚಿತ್ರತಾರೆಗಳಿದ್ದರು. ಆದರೆ, ಅವರ ಮುಖದ ಮೇಲೆ ಮೇಕಪ್‌ ಇರಲಿಲ್ಲ. ಬೆವರಹನಿಗಳು ಸಾಲುಗಟ್ಟಿದ್ದವು. ಕ್ಯಾಮೆರಾ, ಲೈಟ್‌, ಕಟ್‌ಗಳ ಸದ್ದು ಇರಲಿಲ್ಲ. ಆದರೆ ‘ಕ್ರಿಕೆಟ್‌ ಪದಕೋಶ’ದ ಶಬ್ದಗಳು ಪ್ರತಿಧ್ವನಿಸುತ್ತಿದ್ದವು!

ಬೆಳ್ಳಿಪರದೆಯ ಮೇಲೆ ನಟಿಸುತ್ತಾ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಹಾಕುವ ತಾರಾಮಣಿಗಳ ಕ್ರಿಕೆಟ್ ರೂಪ ಎಸ್‌ಜೆಸಿಇ– ಕೆಎಸ್‌ಸಿಎ ಅಂಗಳದಲ್ಲಿ ಮಂಗಳವಾರ ಗರಿಗೆದರಿತ್ತು. ಬೆಳ್ಳಿತೆರೆಯ ‘ಕಿಚ್ಚ’, ಕಿರುತೆರೆಯ ‘ಬಿಗ್‌ ಬಾಸ್’ ಸುದೀಪ್ ನಾಯಕತ್ವದ ‘ರಾಕ್‌ ಸ್ಟಾರ್ಸ್‌ ’ ತಂಡದ ಅಭ್ಯಾಸ ರಂಗು ಪಡೆದಿತ್ತು. ಗಂಗೋತ್ರಿ ಗ್ಲೇಡ್ಸ್‌ ಮೈದಾನದಲ್ಲಿ  ಗುರುವಾರ ಆರಂಭವಾಗಲಿರುವ ಒಡೆಯರ್ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿ ಯಲ್ಲಿ ಭಾಗವಹಿಸುತ್ತಿರುವ ಚಿತ್ರತಾರೆಗಳ ತಂಡ ‘ರಾಕ್‌ ಸ್ಟಾರ್ಸ್‌’ ಎರಡು ದಿನ ಮೊದಲೇ ಇಲ್ಲಿಗೆ ಬಂದಿಳಿದಿದೆ. ತಮ್ಮ ನೆಚ್ಚಿನ ನಟರ ಕ್ರಿಕೆಟ್ ಪ್ರತಿಭೆ ನೋಡಲು  ಕಾಲೇಜು ವಿದ್ಯಾರ್ಥಿಗಳ ದಂಡೇ ಅಲ್ಲಿ ಸೇರಿತ್ತು. 

ಈಗಾಗಲೇ ಸಿನೆಮಾ ಕ್ರಿಕೆಟ್ ಲೀಗ್ (ಸಿಸಿಎಲ್) ಮೂಲಕ ಪ್ರತಿಭೆ ತೋರಿರುವ ಸುದೀಪ್ ನೇತೃತ್ವದ ತಂಡವು ಕೆಪಿಎಲ್‌ ಟೂರ್ನಿಗೆ ತಾರಾಮೌಲ್ಯ ತುಂಬಲು ಕಣಕ್ಕಿಳಿ ದಿದೆ. ಇದರಲ್ಲಿ ಕನ್ನಡ, ತೆಲುಗು, ಮರಾಠಿ, ಮಲೆಯಾಳಿ ಭಾಷಾ ಚಲನಚಿತ್ರ ರಂಗದ ನಟರು, ಕಲಾವಿದರಿದ್ದಾರೆ. ಉಪನಾಯಕ ವಿಕ್ರಾಂತ್, ಕೀರ್ತಿ, ಜೈ ಕಾರ್ತಿಕ್, ಮಹೇಶ್, ಅರುಣ್ ಬಿನ್ನಿ,  ಸಿದ್ಧಾಂತ್ ಮೂಲ್ಯ, ವಿವೇಕ್ ಗೋಪನ್, ಚರಣ್ ತೇಜ್, ರಾಜೀವ್, ಆದರ್ಶ, ಪ್ರದೀಪ್, ರಘು, ಧ್ರುವ, ಶಬ್ಬೀರ್ ಅಹ್ಲುವಾಲಿಯಾ, ರಾಜು ಗೌಡ (ಮಾಜಿ ಸಚಿವರೂ ಹೌದು), ತರುಣ್ ಅವರು ಚಿತ್ರರಂಗದ ನಂಟು ಇರುವವರು.  ಮಾಜಿ ಕ್ರಿಕೆಟಿಗ ಜಿ.ಕೆ. ಅನಿಲಕುಮಾರ್ ಅವರು ತಂಡಕ್ಕೆ ತರಬೇತಿ ನೀಡುತ್ತಿದ್ದಾರೆ.  ರಾಕ್‌ ಸ್ಟಾರ್ಸ್‌  ತಂಡ  ಟೂರ್ನಿಯ ಮೊದಲ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ತಂಡವನ್ನು ಎದುರಿಸಲಿದೆ.

ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸುದೀಪ್, ‘ಕೆಪಿಎಲ್ ಸ್ಥಳೀಯ ಪ್ರತಿಭೆಗಳಿಗೆ ಉತ್ತೇಜನ ನೀಡುವ ಟೂರ್ನಿ. ಕೆಎಸ್‌ಸಿಎ ಪ್ರಸ್ತಾವವನ್ನು ಒಪ್ಪಿ ಆಡಲು ಬಂದಿದ್ದೇವೆ. ಕ್ರಿಕೆಟ್‌ ಅನ್ನು ಬಹಳಷ್ಟು ಇಷ್ಟಪಡುವ ನಮಗೆ ಜೀವನದಲ್ಲಿ ಕ್ರಿಕೆಟಿಗರಾಗುವುದು ಸಾಧ್ಯವಿಲ್ಲ. ಆದರೆ, ಇಂತಹ ಒಂದು ಅವಕಾಶದಿಂದ ಆ ಆಸೆಯನ್ನು ತಣಿಸಿಕೊಳ್ಳಬಹುದು. ಅದಕ್ಕಾಗಿಯೇ ಚಿತ್ರರಂಗದ ಬಿಡುವಿಲ್ಲದ ಚಟುವಟಿಕೆಯ ನಡುವೆಯೂ ಕ್ರಿಕೆಟ್‌ ಆಡುತ್ತಿದ್ದೇವೆ. ನಮ್ಮ ವೃತ್ತಿ ಬಾಂಧವರ ಎದುರು ಇಷ್ಟು ದಿನ ಆಡಿದ್ದೇವೆ. ಈಗ ಕ್ರಿಕೆಟಿಗರ ಮುಂದೆ ಆಡಲಿದ್ದೇವೆ. ಫಲಿತಾಂಶ ಏನೇ ಇರಲಿ, ಕರ್ನಾಟಕದ ಕ್ರಿಕೆಟ್‌ಗೆ ಬೆಂಬಲ ಕೊಡುವುದೇ ನಮ್ಮ ಉದ್ದೇಶ’ ಎಂದರು.

ಮಂಗಳವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರವರೆಗೂ ಅಭ್ಯಾಸ ಮಾಡಿದ ಆಟಗಾರರು, ಮರಳಿ ತಮ್ಮ ಬಸ್ ಹತ್ತುವವರೆಗೂ ಅಭಿಮಾನಿಗಳು ಹಸ್ತಾಕ್ಷರಕ್ಕಾಗಿ ಮುಗಿಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.