ADVERTISEMENT

ಅಗ್ರ ಹತ್ತರಲ್ಲಿ ಸ್ಪರ್ಧೆ ಮುಗಿಸಿದ ಅರ್ಜುನ್‌

​ಪ್ರಜಾವಾಣಿ ವಾರ್ತೆ
Published 2 ಜೂನ್ 2015, 19:30 IST
Last Updated 2 ಜೂನ್ 2015, 19:30 IST

ಬೆಂಗಳೂರು: ಕರ್ನಾಟಕದ ಉದಯೋ ನ್ಮುಖ ಫಾರ್ಮುಲಾ–3 ಚಾಲಕ ಅರ್ಜುನ್‌ ಮೈನಿ ಇಟಲಿಯ ಮೊಂಜಾದಲ್ಲಿ  ನಡೆಯುತ್ತಿರುವ ಎಫ್‌ಐಎ ಯುರೋಪಿ ಯನ್‌  ಫಾರ್ಮುಲಾ–3 ಸೀರಿಸ್‌ ರೇಸ್‌ನಲ್ಲಿ ಅಗ್ರ ಹತ್ತರೊಳಗೆ ಸ್ಪರ್ಧೆ ಕೊನೆಗೊಳಿಸಿದ್ದಾರೆ.

ಐತಿಹಾಸಿಕ ಮೊಂಜಾ ಸರ್ಕ್ಯೂಟ್‌ ನಲ್ಲಿ ನಡೆದ ರೇಸ್‌ನಲ್ಲಿ ಅಮೋಘ ಚಾಲನಾ ಕೌಶಲ ಮೆರೆದ 17ರ ಹರೆಯದ ಅರ್ಜುನ್‌ ಮೊದಲ ರೇಸ್‌ನಲ್ಲಿ 10ನೇಯವರಾಗಿ ಗುರಿ ಸೇರಿದರು.

17 ವಿವಿಧ ರಾಷ್ಟ್ರಗಳ 35 ಯುವ ಚಾಲಕರು ಪಾಲ್ಗೊಂಡಿದ್ದ ರೇಸ್‌ನ ಅರ್ಹತಾ ಸುತ್ತಿನಲ್ಲಿ ಬೆಂಗಳೂರಿನ ಚಾಲಕ ಒಟ್ಟಾರೆ 13ನೇಯವರಾಗಿ ಗುರಿ ಮುಟ್ಟಿದ್ದರು.

ಎರಡು ಮತ್ತು ಮೂರನೇ ರೇಸ್‌ಗಳ ವೇಳೆ ಹಲವು ಅಪಘಾತಗಳು ಸಂಭವಿಸಿದವು. ಇದರ ನಡುವೆಯೂ ಈ ರೇಸ್‌ಗಳಲ್ಲಿ ಮಿಂಚಿನ ವೇಗ ಕಾಯ್ದುಕೊಂಡು ಸಾಗಿದ್ದ ಅರ್ಜುನ್‌ ಯಾವುದೇ ಅಪಾಯಕ್ಕೆ ಎಡೆಮಾಡಿ ಕೊಡದ ಹಾಗೆ ಬಹಳ ಜಾಗರೂಕ ತೆಯಿಂದ ಕಾರು ಚಲಾಯಿಸಿದರು.

ಅಂತಿಮ ರೇಸ್‌ನಲ್ಲೂ ಅವಘಡಗಳು ಜರುಗಿದವು. ಹೀಗಾಗಿ ಮೂರು ಲ್ಯಾಪ್‌ನ ಬಳಿಕ ಈ ರೇಸ್‌ ಅನ್ನು ರದ್ದುಮಾಡಲಾಯಿತು.
‘ಯಾವುದೇ ಅಪಾಯವಾಗದ ಹಾಗೆ ಸುರಕ್ಷಿತವಾಗಿ ಕಾರು ಚಲಾಯಿಸಿದ್ದಕ್ಕೆ ತುಂಬ ಖುಷಿಯಾಗಿದೆ. ಆದರೆ ಮೂರನೇ ರೇಸ್‌ ಅನ್ನು ಬಹುಬೇಗನೇ ರದ್ದುಮಾಡಿದ್ದು ಬೇಸರ ಉಂಟುಮಾಡಿದೆ. ಈ ರೇಸ್‌ಗಳಲ್ಲಿ ನನ್ನಿಂದ ಮೂಡಿಬಂದ ಸಾಮರ್ಥ್ಯ ತೃಪ್ತಿ ನೀಡಿಲ್ಲ. ಮುಂದಿನ ರೇಸ್‌ಗಳಲ್ಲಿ ಇನ್ನಷ್ಟು ಸಿದ್ಧತೆ ಮಾಡಿಕೊಂಡು ಪ್ರಶಸ್ತಿ ಗೆಲ್ಲುವುದು ನನ್ನ ಬಹುಮುಖ್ಯ ಗುರಿ’ ಎಂದು ಅರ್ಜುನ್‌  ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.