ADVERTISEMENT

ಅಥ್ಲೆಟಿಕ್ಸ್‌: ಚಿನ್ನ ಗೆದ್ದ ಕೇರಳದ ಜಾನ್ಸನ್‌

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST

ಹೈದರಾಬಾದ್‌ : ಕೇರಳದ ಜಿನ್ಸನ್‌ ಜಾನ್ಸನ್‌ ಇಲ್ಲಿ ನಡೆಯುತ್ತಿರುವ 56ನೇ ರಾಷ್ಟ್ರೀಯ ಸೀನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ 800 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದರು. ಆದರೆ, ರಿಯೊ ಒಲಿಂ ಪಿಕ್ಸ್‌ಗೆ ಅರ್ಹತೆ ಪಡೆಯುವ ಅವಕಾಶ ವನ್ನು ಕೊಂಚದರಲ್ಲಿಯೇ ಕಳೆದು ಕೊಂಡರು.

ಬುಧವಾರ ನಡೆದ ಸ್ಪರ್ಧೆಯಲ್ಲಿ ಜಾನ್ಸನ್‌ ಒಂದು ನಿಮಿಷ 46.43 ಸೆಕೆಂಡುಗಳನ್ನು ಗುರಿ ತಲುಪಿದರು. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬೇಕಾ ದರೆ ಅವರು ಒಂದು ನಿಮಿಷ 40 ಸೆಕೆಂಡುಗಳ ಒಳಗೆ ಗುರಿ ಮುಟ್ಟಬೇಕಿತ್ತು.

ಜಾನ್ಸನ್‌ ಮೊದಲ ಲ್ಯಾಪ್‌ನಿಂದಲೇ ವೇಗವಾಗಿ ಓಡಿ ತಮ್ಮ ಸಾಮರ್ಥ್ಯವನ್ನು ತೋರಿಸಿದರು. ಆದರೆ ಕೊನೆಯವ ರೆಗೂ ಉತ್ತಮ ವೇಗ ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ.

25 ವರ್ಷದ ಜಾನ್ಸನ್‌ ಅವರು ಎರಡು ತಿಂಗಳ ಹಿಂದೆ ನವದೆಹಲಿಯಲ್ಲಿ ನಡೆದಿದ್ದ ಫೆಡರೇಷನ್ ಕಪ್‌ನಲ್ಲಿ ಒಂದು ನಿಮಿಷ 47.56 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು. ಇದು ಅವರ ವೈಯಕ್ತಿಕ ಉತ್ತಮ ಸಾಧನೆ ಎನಿಸಿದೆ. ಬುಧವಾರ ಇಲ್ಲಿ ತೋರಿಸಿದ ಅವರ ಸಾಧನೆ ಭಾರತದ ಅಥ್ಲೀಟ್‌ಗಳ ಪಟ್ಟಿಯಲ್ಲಿ ಮೂರನೇ ಉತ್ತಮ ವೇಗವೆನಿಸಿದೆ. 1976ರಲ್ಲಿ ಶ್ರೀರಾಮ್‌ ಸಿಂಗ್ (ಕಾಲ: 1:45.77ಸೆ.)  ಮತ್ತು 2010ರಲ್ಲಿ ಪಂಕಜ್‌ ದಿಮ್ರಿ (ಕಾಲ:  1:46.26ಸೆ.) ಮೊದಲ ಎರಡು ಸ್ಥಾನಗಳನ್ನು ಹೊಂದಿದ್ದಾರೆ.

‘ಇಲ್ಲಿ ಉತ್ತಮ ಪ್ರದರ್ಶನ ನೀಡಿ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ನನ್ನ ಗುರಿಯಾಗಿತ್ತು. ಆದರೆ ಇದು ಸಾಧ್ಯವಾಗದ ಕಾರಣ ತುಂಬಾ ಬೇಸರವಾಗಿದೆ’ ಎಂದು ಸ್ಪರ್ಧೆಯ ಬಳಿಕ ಜಾನ್ಸನ್‌ ಹೇಳಿದರು.

800 ಮೀಟರ್ಸ್ ಓಟದ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ತಮಿಳುನಾಡಿನ  ಎಂ. ಗೋಮತಿ ಎರಡು ನಿಮಿಷ 06.28 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಒಡತಿಯಾದರು.

ಟ್ರಿಪಲ್‌ ಜಂಪ್‌ ಸ್ಪರ್ಧಿ ರೆಂಜಿತ್ ಮಹೇಶ್ವರಿ ಕೂಡ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಉತ್ತಮ ಅವಕಾಶ ಹಾಳು ಮಾಡಿಕೊಂಡರು. ಅವರು ಇಲ್ಲಿ 16.56 ಮೀಟರ್ಸ್‌ ಜಿಗಿದರು.

ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಶಾಟ್‌ಪಟ್‌ ಅಥ್ಲೀಟ್‌ ಇಂದರಜಿತ್ ಸಿಂಗ್ ಇಲ್ಲಿ ಚಿನ್ನ ಗೆದ್ದರು. ಅವರು 19.28 ಮೀಟರ್ಸ್‌ ದೂರ ಎಸೆದು ಈ ಸಾಧನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.