ADVERTISEMENT

ಅಥ್ಲೆಟಿಕ್ಸ್‌: ಪೂವಮ್ಮಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 11 ಮೇ 2017, 18:49 IST
Last Updated 11 ಮೇ 2017, 18:49 IST
ಚಿನ್ನ ಗೆದ್ದ ಕರ್ನಾಟಕದ ಎಂ.ಆರ್‌. ಪೂವಮ್ಮ
ಚಿನ್ನ ಗೆದ್ದ ಕರ್ನಾಟಕದ ಎಂ.ಆರ್‌. ಪೂವಮ್ಮ   

ನವದೆಹಲಿ: ಕರ್ನಾಟಕದ ಎಂ.ಆರ್‌.ಪೂವಮ್ಮ ಇಲ್ಲಿ ಗುರುವಾರ ಆರಂಭಗೊಂಡ ಇಂಡಿಯನ್ ಗ್ರ್ಯಾಂಡ್‌ಪ್ರಿಕ್ಸ್ ಅಥ್ಲೆಟಿಕ್ ಕೂಟದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ಆದರೂ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯಲು ವಿಫಲರಾಗಿ ನಿರಾಸೆಗೊಳಗಾದರು.

ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ 52.66 ಸೆಕೆಂಡಿನಲ್ಲಿ ಗುರಿ ತಲುಪಿದ ಪೂವಮ್ಮ ಕೂದಲೆಳೆ ಅಂತರದಲ್ಲಿ ಕೇರಳದ ಜಿಸ್ನಾ ಮ್ಯಾಥ್ಯೂ (52.67ಸೆ) ಅವರನ್ನು ಹಿಂದಿಕ್ಕಿದರು. ಪಶ್ಚಿಮ ಬಂಗಾಳದ ದೇಬಶ್ರೀ ಮಜುಂದಾರ್‌ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. 52.10 ಸೆಕೆಂಡಿನಲ್ಲಿ ಗುರಿ ತಲುಪಿದ್ದರೆ ಪೂವಮ್ಮ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸುತ್ತಿದ್ದರು. ಪುರುಷರ 400 ಮೀ ಓಟದಲ್ಲಿ ತಮಿಳುನಾಡಿನ ರಾಜೀವ ಆರೋಕ (46.94ಸೆ) ಚಿನ್ನ ಗೆದ್ದರು. ಬೆಳ್ಳಿ ಮತ್ತು ಕಂಚಿನ ಪದಕ ಕ್ರಮವಾಗಿ ದೆಹಲಿಯ ಅಮೋಜ್‌ ಜೇಕಬ್‌ ಮತ್ತು ಸಚಿನ್‌ ರಾಬಿ ಗಳಿಸಿದರು.

ವಿಶ್ವ ಜೂನಿಯರ್‌ ಜಾವೆಲಿನ್ ಥ್ರೋ ದಾಖಲೆ ವೀರ, ಹರಿಯಾಣದ ನೀರಜ್ ಛೋಪ್ರಾ 80.49 ಮೀಟರ್ ದೂರ ಎಸೆದು ಚಿನ್ನ ಗಳಿಸಿದರು. ಈ ವಿಭಾಗದ ಬೆಳ್ಳಿ ಪದಕ ಉತ್ತರ ಪ್ರದೇಶದ ಅಭಿಷೇಕ್ ಸಿಂಗ್ ಪಾಲಾಯಿತು. ರಾಜಸ್ತಾನದ ಸಮರಜೀತ್ ಸಿಂಗ್ ಕಂಚಿನ ಪದಕ ಗೆದ್ದರು.

ADVERTISEMENT

ಮಹಿಳೆಯರ ಜಾವೆಲಿನ್ ಥ್ರೋ ಸ್ಪರ್ಧೆಯ ಚಿನ್ನ ಉತ್ತರ ಪ್ರದೇಶದ ಅನ್ನು ರಾಣಿ (59.75ಮೀ) ಗಳಿಸಿದರು. ಕರ್ನಾಟಕದ ಕೆ.ರಶ್ಮಿ ಮತ್ತು ಪೆಗು ರುಂಜುನ್‌ ಬೆಳ್ಳಿ ಮತ್ತು ಕಂಚು ಗಳಿಸಿದರು.

ಆಮಿಯಾ, ಮರ್ಲಿನ್‌ ವೇಗದ ಓಟಗಾರರು: ಒಡಿಶಾದ ಆಮಿಯಾ ಕುಮಾರ್‌ ಮಲಿಕ್‌ ಮತ್ತು ಕೇರಳದ ಮರ್ಲಿನ್ ಜೋಸೆಫ್‌, ಕೂಟದ ವೇಗದ ಓಟಗಾರರಾಗಿ ಗಮನ ಸೆಳೆದರು. 10.62 ಸೆಕೆಂಡುಗಳಲ್ಲಿ ಗುರಿ ಸೇರಿದ ಆಮಿಯಾ ಅವರು ಶಫೀಕುಲ್‌ ಮೊಂಡಲ್‌ ಅವರನ್ನು ಹಿಂದಿಕ್ಕಿದರು. ಶಾಲಿನ್ ಕಂಚು ಗೆದ್ದರು. ಮರ್ಲಿನ್‌ 11.72 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಪುರುಷರ ಲಾಂಗ್ ಜಂಪ್‌ನ ಚಿನ್ನ ಒಲಿಂಪಿಯನ್‌, ಮಧ್ಯಪ್ರದೇಶದ ಅಂಕಿತ್ ಶರ್ಮಾ (7.71 ಮೀ) ಪಾಲಾಯಿತು.  ಕರ್ನಾಟಕದ ಎಸ್‌.ಶಮ್ಶೀರ್‌ ಬೆಳ್ಳಿ ಗೆದ್ದರು. ಪಂಜಾಬ್‌ನ ಬಲಜೀಂದರ್‌ ಸಿಂಗ್‌ ಕಂಚು ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.