ADVERTISEMENT

ಅಶ್ವಿನಿ ಸೇರಿ 14 ಜನರಿಗೆ ಗೌರವ

ಕರ್ನಾಟಕ ಒಲಿಂಪಿಕ್‌ ಸಂಸ್ಥೆ ವಾರ್ಷಿಕ ಪ್ರಶಸ್ತಿ ಪ್ರದಾನ ಇಂದು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2014, 19:30 IST
Last Updated 25 ನವೆಂಬರ್ 2014, 19:30 IST

ಬೆಂಗಳೂರು: ಇಂಚೆನ್‌ ಏಷ್ಯನ್‌ ಕ್ರೀಡಾಕೂಟದ ಕಬಡ್ಡಿಯಲ್ಲಿ ಚಿನ್ನ ಗೆದ್ದ ಭಾರತ ಮಹಿಳಾ ತಂಡದಲ್ಲಿದ್ದ ಸುಷ್ಮಿತಾ ಪವಾರ್‌ ಮತ್ತು ಅಂತರರಾಷ್ಟ್ರೀಯ ಅಥ್ಲೀಟ್‌ ಅಶ್ವಿನಿ ಅಕ್ಕುಂಜಿ ಸೇರಿದಂತೆ ಒಟ್ಟು 14 ಜನರನ್ನು 2014ನೇ ಸಾಲಿನ ಕರ್ನಾಟಕ ಒಲಿಂಪಿಕ್‌ ಸಂಸ್ಥೆ (ಕೆಒಎ) ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅಂತರರಾಷ್ಟ್ರೀಯ ಹಾಕಿ ಆಟಗಾರ ನಿತಿನ್‌ ತಿಮ್ಮಯ್ಯ, ಈಜುಪಟು ಪ್ರತಿಮಾ ಕೊಳ್ಳಾಲಿ, ವುಶು ಸ್ಪರ್ಧಿ ರೇಣುಕಾ ಪೂಜಾರಿ ಅವರಿಗೂ ಕೆಒಎ ಪ್ರಶಸ್ತಿ ಲಭಿಸಿದೆ. ಕೊಡಗಿನ ನಿತಿನ್‌ ಆಸ್ಟ್ರೇಲಿಯ ಎದುರಿನ ಹಾಕಿ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿದ್ದರು. 12 ಜನ ಕ್ರೀಡಾಪಟುಗಳು ಮತ್ತು ಮಾಧ್ಯಮ ಕ್ಷೇತ್ರದ ಇಬ್ಬರು ಸಾಧಕರಿಗೂ ಈ ಗೌರವ ಲಭಿಸಿದೆ.

ಇವರ ಜೊತೆಗೆ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ರಾಜ್ಯದ ಹಿರಿಯ ಕ್ರೀಡಾಪಟುಗಳನ್ನು  ಕೆಒಎ ಸನ್ಮಾನಿಸಲಿದೆ. ಮಾಜಿ

ಅಥ್ಲೀಟ್‌ಗಳಾದ ಡಿ.ವೈ. ಬಿರಾದಾರ್‌, ಎ. ಮಾರ್ಟಿನ್‌ ರಾಜೇಂದ್ರನ್‌, ಮಾಜಿ ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಆಟಗಾರ ಜೆ. ಮುರಳಿ ಮೋಹನ್‌, ದ್ರೋಣಾಚಾರ್ಯ ಪ್ರಶಸ್ತಿ ಪಡೆದಿರುವ ಜೆ. ಮನೋಹರನ್‌ (ಬಾಕ್ಸಿಂಗ್‌), ಅಸ್ಲಾಮ್‌ ಅಹ್ಮದ್‌ ಖಾನ್ (ಫುಟ್‌ಬಾಲ್‌) ಒಲಿಂಪಿಯನ್‌ ಜೂಡ್‌ ಫೆಲಿಕ್ಸ್‌್ ಸೆಬಾಸ್ಟಿಯನ್‌ (ಹಾಕಿ), ಅರ್ಜುನ ಪ್ರಶಸ್ತಿ ಪುರಸ್ಕೃತ ಎಸ್‌. ಪ್ರಕಾಶ್‌ (ಕೊಕ್ಕೊ) ಮತ್ತು ವಸಂತ್‌ ಮಾದವ್‌ (ಟೆನಿಸ್‌) ಅವರಿಗೆ ಕೆಒಎ ಸನ್ಮಾನಿಸಿ ₨ 10,000 ನೀಡಲಿದೆ.

‘ಕೆಒಎ ಪ್ರಶಸ್ತಿಯು ₨ 50 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ. ಬುಧವಾರ ಸಂಜೆ ರಾಜಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜು­ಭಾಯಿ­ವಾಲಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’ ಎಂದು ಕೆಒಎ ಅಧ್ಯಕ್ಷ ಕೆ. ಗೋವಿಂದರಾಜ್‌ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕೆಒಎ ಪ್ರಧಾನ ಕಾರ್ಯದರ್ಶಿ ಅನಂತರಾಜು ಗೋಷ್ಠಿಯಲ್ಲಿ ಇದ್ದರು.

ವಿಕಾಸ್‌ಗೂ ಸನ್ಮಾನ: ಗ್ಲಾಸ್ಗೊ ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನ ಮತ್ತು ಇಂಚೆನ್‌ ಏಷ್ಯನ್‌ ಕೂಟದಲ್ಲಿ ಬೆಳ್ಳಿ ಜಯಿಸಿರುವ ಡಿಸ್ಕಸ್‌ ಎಸೆತ ಸ್ಪರ್ಧಿ ಕರ್ನಾಟಕದ ವಿಕಾಸ್ ಗೌಡ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ. ಇದೇ ವೇಳೆ ರಾಜ್ಯ ಸರ್ಕಾರ ನಗದು ಬಹುಮಾನ ನೀಡಲಿದೆ.

ಜೊತೆಗೆ 2014ರ ಏಷ್ಯನ್‌ ಕೂಟದಲ್ಲಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ಬಹುಮಾನ ನೀಡಿ ಸತ್ಕರಿಸಲಾ­ಗುತ್ತದೆ. ಚಿನ್ನ ಹಾಗೂ ಬೆಳ್ಳಿ ಗೆದ್ದವರಿಗೆ ₨ 50 ಸಾವಿರ ಮತ್ತು ಕಂಚು ಜಯಿಸಿದವರಿಗೆ ₨ 40 ಸಾವಿರ ಬಹುಮಾನ ದೊರೆಯಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT