ADVERTISEMENT

ಆತಿಥೇಯರಿಗೆ ಅಯ್ಯರ್ ಆಸರೆ

ಕ್ರಿಕೆಟ್: ದೊಡ್ಡ ಮೊತ್ತ ಪೇರಿಸಿದ ಆಸ್ಟ್ರೇಲಿಯಾ: 75 ರನ್ ಗಳಿಸಿದ ಮಾರ್ಷ್

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಮುಂಬೈನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಭಾರತ ‘ಎ’ ತಂಡದ ಶ್ರೇಯಸ್‌ ಅಯ್ಯರ್‌ –ಪಿಟಿಐ ಚಿತ್ರ
ಮುಂಬೈನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಭಾರತ ‘ಎ’ ತಂಡದ ಶ್ರೇಯಸ್‌ ಅಯ್ಯರ್‌ –ಪಿಟಿಐ ಚಿತ್ರ   
ಮುಂಬೈ: ಪ್ರವಾಸಿ ಆಸ್ಟ್ರೆಲಿಯಾ ತಂಡವು ಪೇರಿಸಿರುವ ದೊಡ್ಡ ಮೊತ್ತವನ್ನು ಬೆನ್ನತ್ತಿರುವ ಭಾರತ ‘ಎ’ ತಂಡಕ್ಕೆ  ಶ್ರೇಯಸ್ ಅಯ್ಯರ್ (ಬ್ಯಾಟಿಂಗ್ 85; 93ಎ, 7ಬೌಂ,  5 ಸಿಕ್ಸರ್) ಆಸರೆಯಾಗಿದ್ದಾರೆ. 
 
ಶನಿವಾರ ಇಲ್ಲಿ ನಡೆದ ಪಂದ್ಯದ ಎರಡನೇ ದಿನದಾಟದಲ್ಲಿ  ಆಸ್ಟ್ರೇಲಿಯಾ ತಂಡವು 127 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 469 ರನ್ ಗಳಿಸಿ ಡಿಕ್ಲೆರ್ ಮಾಡಿಕೊಂಡಿತು. ಶುಕ್ರವಾರ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ  ಆಸ್ಟ್ರೇಲಿಯಾ ತಂಡವು ಸ್ಟೀವ್ ಸ್ಮಿತ್ ಮತ್ತು  ಶಾನ್ ಮಾರ್ಷ್ ಅವರ ಶತಕಗಳ ಬಲದಿಂದ 90 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 327 ರನ್‌ ಗಳಿಸಿತ್ತು.  
 
ಆರಂಭಿಕ ಆಘಾತ: ಆಸ್ಟ್ರೇಲಿಯಾ ತಂಡವು ಡಿಕ್ಲೆರ್ ನೀಡಿದ ಮೇಲೆ ಭಾರತ ‘ಎ’ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. 
 
ನಿಧಾನಗತಿಯಲ್ಲಿ ಆಡುತ್ತಿದ್ದ ಆರಂಭಿಕ ಬ್ಯಾಟ್ಸ್‌ಮನ್ ಅಖಿಲ್ ಹೆರ್ವಾಡಕರ್ (4 ರನ್)  12ನೇ ಓವರ್‌ನಲ್ಲಿ ನಥಾನ್ ಲಿಯಾನ್ ಬೌಲಿಂಗ್‌ನಲ್ಲಿ ಔಟಾದರು. ರಣಜಿ ಟೂರ್ನಿಯಲ್ಲಿ  ರನ್ ಹೊಳೆ ಹರಿಸಿದ್ದ ಪ್ರಿಯಾಂಕ್ ಪಾಂಚಾಲ್ ಅವರು ಕೇವಲ 36 ರನ್ ಗಳಿಸಿ ಲಿಯಾನ್‌ಗೆ ವಿಕೆಟ್ ಒಪ್ಪಿಸಿದರು. 
 
ನಂತರ ಅಂಕಿತ್ ಭಾವ್ನೆ (25 ರನ್) ಮತ್ತು  ನಾಯಕ ಹಾರ್ದಿಕ್ ಪಾಂಡ್ಯ (19 ರನ್) ಅವರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆದರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಶ್ರೇಯಸ್ ಮಾತ್ರ ದಿಟ್ಟವಾಗಿ ಆಡಿದರು. ವೇಗದ ಬೌಲರ್‌ ಮತ್ತು ಸ್ಪಿನ್ನರ್‌ಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದರು. 
 
ಮುಂಬೈ ರಣಜಿ ತಂಡದ ಆಟಗಾರ ಶ್ರೇಯಸ್ ಐದು ಆಕರ್ಷಕ ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಎದುರಾಳಿ ಬೌಲರ್‌ಗಳನ್ನು ಕಂಗೆಡಿಸಿದರು. ಆದರೆ, ಇನ್ನೊಂದು ತುದಿಯಿಂದ ಅವರಿಗೆ ಉತ್ತಮ ಬೆಂಬಲ ಸಿಗಲಿಲ್ಲ.  ಅವರು ಮತ್ತು  ದೆಹಲಿಯ ರಿಷಭ್ ಪಂತ್ (ಬ್ಯಾಟಿಂಗ್ 3) ಕ್ರೀಸ್‌ನಲ್ಲಿದ್ದಾರೆ. ಆಸ್ಟ್ರೆಲಿಯಾದ ವೇಗಿ ಜ್ಯಾಕ್ಸನ್ ಬರ್ಡ್ ಅವರು ಎರಡು ವಿಕೆಟ್ ಪಡೆದರು. 
 
ಮೊದಲ ಇನಿಂಗ್ಸ್‌ನ ಬಾಕಿ ಚುಕ್ತಾ ಮಾಡಲು ಇನ್ನೂ 293 ರನ್‌ಗಳನ್ನು  ಭಾರತ ‘ಎ’ ತಂಡವು ಗಳಿಸಬೇಕಿದೆ. ಭಾನುವಾರ ಪಂದ್ಯದ ಕೊನೆಯ ದಿನವಾಗಿದ್ದು ಬಹುತೇಕ ಡ್ರಾನಲ್ಲಿ ಅಂತ್ಯ ಕಾಣುವ ಸಾಧ್ಯತೆಯೇ ಹೆಚ್ಚಿದೆ. 
 
ಸಂಕ್ಷಿಪ್ತ ಸ್ಕೋರು:
ಮೊದಲ ಇನಿಂಗ್ಸ್
 
ಆಸ್ಟ್ರೇಲಿಯಾ: 127 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 469 (ಮಿಷೆಲ್ ಮಾರ್ಷ್ 75, ಮ್ಯಾಥ್ಯೂ ವೇಡ್ 64; ನವ ದೀಪ್ ಸೈನಿ 42ಕ್ಕೆ2)
ಭಾರತ ‘ಎ’: 51 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 176 (ಪ್ರಿಯಾಂಕ್ ಪಾಂಚಾಲ್ 36, ಶ್ರೇಯಸ್ ಅಯ್ಯರ್ ಬ್ಯಾಟಿಂಗ್ 85, ಅಂಕಿತ್ ಭಾವ್ನೆ 25, ಹಾರ್ದಿಕ್ ಪಾಂಡ್ಯ 19, ಜಾಕ್ಸನ್ ಬರ್ಡ್ 15ಕ್ಕೆ2, ನಥಾನ್ ಲಿಯಾನ್ 72ಕ್ಕೆ2) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.