ADVERTISEMENT

ಆಮ್ಲಾ, ಶಾನ್‌ ಮಾರ್ಷ್‌ ಆಕರ್ಷಣೆ

ಇಂದು ಡೇರ್‌ಡೆವಿಲ್ಸ್‌–ಕಿಂಗ್ಸ್‌ ಇಲೆವನ್‌ ಪಂದ್ಯ

ಪಿಟಿಐ
Published 29 ಏಪ್ರಿಲ್ 2017, 19:30 IST
Last Updated 29 ಏಪ್ರಿಲ್ 2017, 19:30 IST
ಆಮ್ಲಾ, ಶಾನ್‌ ಮಾರ್ಷ್‌ ಆಕರ್ಷಣೆ
ಆಮ್ಲಾ, ಶಾನ್‌ ಮಾರ್ಷ್‌ ಆಕರ್ಷಣೆ   

ಮೊಹಾಲಿ: ಐಪಿಎಲ್‌ ಹತ್ತನೇ ಆವೃತ್ತಿಯಲ್ಲಿ ಗೆಲು ವಿನ ಹಾದಿಗೆ ಮರಳಲು ಪರದಾಡುತ್ತಿ ರುವ ಡೆಲ್ಲಿ ಡೇರ್‌ ಡೆವಿಲ್ಸ್‌ ಮತ್ತು ಕಿಂಗ್ಸ್‌ ಇಲೆವನ್‌  ಪಂಜಾಬ್‌ ತಂಡಗಳು ಈಗ ಪರಸ್ಪರ ಮುಖಾಮುಖಿಯಾಗಲಿವೆ.

ಪಂಜಾಬ್‌ ಕ್ರಿಕೆಟ್‌ ಸಂಸ್ಥೆಯ ಮೈದಾನದಲ್ಲಿ ಭಾನುವಾರ ನಡೆಯುವ ಪಂದ್ಯ ಎರಡೂ ತಂಡಗಳ ಪಾಲಿಗೂ ಮಹತ್ವದ್ದೆನಿಸಿದೆ. ಆಡಿರುವ ಎಂಟು ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದು ಆರು ಪಾಯಿಂಟ್ಸ್‌ ಸಂಗ್ರಹಿಸಿರುವ ಪಂಜಾಬ್‌ ತಂಡ ‘ಪ್ಲೇ ಆಫ್‌’ ಆಸೆ ಜೀವಂತ ವಾಗಿಟ್ಟುಕೊಳ್ಳ ಬೇಕಾದರೆ ಈ ಪಂದ್ಯದಲ್ಲಿ ಗೆಲುವು ಗಳಿಸುವುದು ಅನಿವಾರ್ಯ.

ಇದೇ ಅಂಗಳದಲ್ಲಿ ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಾರಥ್ಯದ ತಂಡ ಹಾಲಿ ಚಾಂಪಿಯನ್‌ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಸೋತಿತ್ತು. ಗೆಲುವಿಗೆ 208ರನ್‌ಗಳ ಕಠಿಣ ಗುರಿ ಪಡೆದಿದ್ದ ‘ಪ್ರೀತಿ’ಯ ಬಳಗ ಬ್ಯಾಟಿಂಗ್‌ ವೈಫಲ್ಯಕ್ಕೆ ಒಳಗಾಗಿತ್ತು.

ಬ್ಯಾಟಿಂಗ್‌ನಲ್ಲಿ ತಂಡದ ಆಧಾರ ಸ್ತಂಭ ಅನಿಸಿದ್ದ ನಾಯಕ ಮ್ಯಾಕ್ಸ್‌ವೆಲ್‌ ಸೊನ್ನೆ ಸುತ್ತಿದ್ದರು, ವೃದ್ಧಿಮಾನ್‌ ಸಹಾ ಮತ್ತು ಮನನ್‌ ವೊಹ್ರಾ ಕೂಡ ಸದ್ದು ಮಾಡಿರಲಿಲ್ಲ.

ಹಾಶಿಮ್‌ ಆಮ್ಲಾ ಬದಲು ಆಡುವ ಬಳಗದಲ್ಲಿ ಸ್ಥಾನ ಗಳಿಸಿದ್ದ ಮಾರ್ಟಿನ್‌ ಗಪ್ಟಿಲ್‌ 23ರನ್‌ ಗಳಿಸಿದ್ದರು. ಹೀಗಾಗಿ ಡೆಲ್ಲಿ ವಿರುದ್ಧವೂ ತಂಡಕ್ಕೆ ಉತ್ತಮ ಆರಂಭ ಒದಗಿಸುವ ಹೊಣೆ ಅವರ ಮೇಲಿದೆ.ಆಸ್ಟ್ರೇಲಿಯಾದ  ಶಾನ್‌ ಮಾರ್ಷ್‌ ಲಯ ಕಂಡುಕೊಂಡಿರುವುದು ತಂಡಕ್ಕೆ ವರವಾಗಿ ಪರಿಣಮಿಸಿದೆ.

ಎಡಗೈ ಬ್ಯಾಟ್ಸ್‌ಮನ್‌ ಮಾರ್ಷ್‌ ಹಿಂದಿನ ಪಂದ್ಯದಲ್ಲಿ 50 ಎಸೆತಗಳಲ್ಲಿ 14 ಬೌಂಡರಿ ಮತ್ತು ಎರಡು ಸಿಕ್ಸರ್‌ ಸಹಿತ 84ರನ್‌ ಬಾರಿಸಿದ್ದರು. ತಮ್ಮ ಅಬ್ಬರದ ಬ್ಯಾಟಿಂಗ್‌ ಮೂಲಕ ಪಂದ್ಯದ ದಿಕ್ಕು ಬದಲಿಸಬಲ್ಲ ಸಾಮರ್ಥ್ಯ ಹೊಂದಿರುವ ಅವರು ಡೆಲ್ಲಿ ಬೌಲರ್‌ಗಳಿಗೂ ಸವಾಲಾ ಗಬಲ್ಲರು. 

ಬೌಲಿಂಗ್‌ನದ್ದೇ ಚಿಂತೆ: ಆದರೆ ಬೌಲಿಂಗ್‌ ವಿಭಾಗದಲ್ಲಿ ತಂಡ ಸೊರಗಿದಂತೆ ಕಾಣುತ್ತಿದೆ. ಅನುಭವಿ ವೇಗಿ ಇಶಾಂತ್‌ ಶರ್ಮಾ, ಮೋಹಿತ್‌ ಶರ್ಮಾ ಮತ್ತು ಸಂದೀಪ್‌ ಶರ್ಮಾ ಅವರು ಹಿಂದಿನ ಪಂದ್ಯಗಳಲ್ಲಿ ಎದುರಾಳಿಗಳಿಗೆ ಸರಾಗವಾಗಿ ರನ್‌ ಬಿಟ್ಟುಕೊಟ್ಟಿದ್ದರು. ಅನುರೀತ್‌ ಸಿಂಗ್‌, ಅಕ್ಷರ್‌ ಪಟೇಲ್‌, ಕರ್ನಾಟಕದ ಕೆ.ಸಿ. ಕಾರ್ಯಪ್ಪ ಅವರೂ ದುಬಾರಿಯಾಗುತ್ತಿರುವುದು ನಾಯಕ ಮ್ಯಾಕ್ಸ್‌ವೆಲ್‌ ಚಿಂತೆಗೆ ಕಾರ ಣವಾಗಿದೆ.

ಜಯದ ಅನಿವಾರ್ಯತೆಯಲ್ಲಿ ಡೆಲ್ಲಿ: ಡೆಲ್ಲಿ ಡೇರ್‌ಡೆವಿಲ್ಸ್‌ ಕೂಡ ಗೆಲುವಿನ ಅನಿವಾರ್ಯತೆಗೆ ಸಿಲುಕಿದೆ. ಈ ತಂಡ  ಆಡಿರುವ ಏಳು ಪಂದ್ಯಗಳಲ್ಲಿ 5 ರಲ್ಲಿ ಸೋತಿದ್ದು ಎರಡರಲ್ಲಷ್ಟೇ ಗೆಲ್ಲಲು ಶಕ್ತವಾ ಗಿದೆ. ಈ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನ ಹೊಂದಿದೆ. ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಸದ್ದು ಮಾಡಿದ್ದ ಜಹೀರ್‌ ಖಾನ್‌ ಪಡೆ  ಬಳಿಕ ಎದುರಾಗಿರುವ ಸತತ ಸೋಲು ಗಳಿಂದ ಕಂಗೆಟ್ಟಿದೆ.

ಈ ತಂಡ ಕಿಂಗ್ಸ್‌ ಇಲೆವನ್‌ ತಂಡವನ್ನು ಅದರದ್ದೇ ನೆಲದಲ್ಲಿ ಮಣಿಸಿ ಕಳೆದುಕೊಂಡಿರುವ ವಿಶ್ವಾಸವನ್ನು ಮರಳಿ ಪಡೆಯುವ ಆಲೋಚನೆ ಹೊಂದಿದೆ. ಒಂದು ವೇಳೆ ಈ ಪಂದ್ಯದಲ್ಲಿ ಡೆಲ್ಲಿ ಸೋತರೆ ‘ಪ್ಲೇ ಆಫ್‌’ ಹಾದಿ ದುರ್ಗಮ ವಾಗಲಿದೆ.
ಆರಂಭ: ಸಂಜೆ 4ಕ್ಕೆ.
ನೇರ ಪ್ರಸಾರ: ಸೋನಿ ಸಿಕ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.