ADVERTISEMENT

ಆರನೇ ಪ್ರಶಸ್ತಿಗೆ ಇನ್ನೊಂದೇ ಹೆಜ್ಜೆ

ಮಹಿಳಾ ಏಷ್ಯಾಕಪ್‌ ಕ್ರಿಕೆಟ್‌; ಇಂದು ಪಾಕ್ ವಿರುದ್ಧ ಫೈನಲ್‌; ವಿಶ್ವಾಸದಲ್ಲಿ ಭಾರತ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2016, 19:30 IST
Last Updated 3 ಡಿಸೆಂಬರ್ 2016, 19:30 IST
ಭಾರತ ತಂಡದ ಭರವಸೆ ಎನಿಸಿರುವ (ಎಡದಿಂದ) ಹರ್ಮನ್‌ಪ್ರೀತ್‌ ಕೌರ್‌, ಜೂಲನ್‌ ಗೋಸ್ವಾಮಿ ಮತ್ತು ಮಿಥಾಲಿ ರಾಜ್‌.
ಭಾರತ ತಂಡದ ಭರವಸೆ ಎನಿಸಿರುವ (ಎಡದಿಂದ) ಹರ್ಮನ್‌ಪ್ರೀತ್‌ ಕೌರ್‌, ಜೂಲನ್‌ ಗೋಸ್ವಾಮಿ ಮತ್ತು ಮಿಥಾಲಿ ರಾಜ್‌.   

ಬ್ಯಾಂಕಾಕ್‌: ಮಹಿಳಾ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಸತತ ಆರನೇ ಟ್ರೋಫಿ ಎತ್ತಿಹಿಡಿಯುವ ಕನಸು ಹೊತ್ತಿ ರುವ ಭಾರತ ತಂಡ ಈ ಹಾದಿಯಲ್ಲಿ ಇನ್ನೊಂದು ಹೆಜ್ಜೆ ಸಾಗಬೇಕಿದೆ. ಭಾನುವಾರ ನಡೆಯುವ ಟೂರ್ನಿಯ ಫೈನಲ್‌ ಹಣಾಹಣಿಯಲ್ಲಿ ಹರ್ಮನ್‌ ಪ್ರೀತ್‌ ಕೌರ್‌ ಪಡೆ ಪಾಕಿಸ್ತಾನದ ಸವಾಲಿಗೆ ಎದೆಯೊಡ್ಡಲಿದೆ.

ಸಾಂಪ್ರದಾಯಿಕ ಎದುರಾಳಿಗಳ ನಡುವಣ ಈ ಹೋರಾಟಕ್ಕೆ ಏಷ್ಯಾ ತಾಂತ್ರಿಕ ಮಹಾವಿದ್ಯಾಲಯದ  ಮೈದಾ ನದಲ್ಲಿ ವೇದಿಕೆಯೂ ಸಿದ್ಧಗೊಂಡಿದೆ.
ಹಿಂದಿನ ಐದು ಟೂರ್ನಿಗಳಲ್ಲಿ ಟ್ರೋಫಿ ಎತ್ತಿಹಿಡಿದಿದ್ದ ಭಾರತ ತಂಡ ಈ ಬಾರಿಯೂ ಅಮೋಘ ಸಾಮರ್ಥ್ಯ ತೋರುತ್ತಿದೆ. ಹರ್ಮನ್‌ಪ್ರೀತ್‌ ಬಳಗ ಲೀಗ್‌ ಹಂತದ ಐದೂ ಪಂದ್ಯಗಳಲ್ಲೂ ಗೆದ್ದು ಅಜೇಯವಾಗಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ.

ಭಾರತ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಬಲಿಷ್ಠವಾಗಿದೆ. ಅನು ಭವಿ ಆಟಗಾರ್ತಿ ಮಿಥಾಲಿ ರಾಜ್‌, ಸ್ಮೃತಿ ಮಂದಾನ ಅವರು ಯಶಸ್ವಿ ಆರಂಭಿಕ ಜೋಡಿ ಎನಿಸಿದ್ದಾರೆ. ಇವರು ಹಿಂದಿನ ಪಂದ್ಯಗಳಲ್ಲಿ ತಂಡಕ್ಕೆ  ಭದ್ರ ಅಡಿಪಾಯ ಹಾಕಿಕೊಟ್ಟು ಗೆಲುವಿನ ಹಾದಿಯನ್ನು ಸುಲಭಗೊಳಿಸಿದ್ದರು.

ಅಮೋಘ ಲಯದಲ್ಲಿರುವ ಮಿಥಾಲಿ  ಈ ಬಾರಿ ಆಡಿರುವ ಮೂರು ಪಂದ್ಯಗಳಿಂದ ಒಂದು ಅರ್ಧಶತಕ ಸೇರಿದಂತೆ 147ರನ್‌ ಪೇರಿಸಿದ್ದಾರೆ. ಮಂದಾನ ಕೂಡಾ ದಿಟ್ಟ ಆಟ ಆಡಿ ಗಮನ ಸೆಳೆದಿದ್ದಾರೆ.  ಹೀಗಾಗಿ ಇವರ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ಕರ್ನಾಟಕದ ವೇದಾ ಕೃಷ್ಣಮೂರ್ತಿ, ನಾಯಕಿ ಹರ್ಮನ್‌ಪ್ರೀತ್‌, ಅನುಜಾ ಪಾಟೀಲ್‌, ವೆಲ್ಲಸ್ವಾಮಿ ವನಿತಾ ಹಾಗೂ ಸಬ್ಬಿನೇನಿ ಮೇಘನಾ ಅವರು ಮಧ್ಯಮ ಕ್ರಮಾಂಕದಲ್ಲಿ ತಂಡದ ಆಧಾರ ಸ್ತಂಭಗಳೆನಿಸಿದ್ದಾರೆ.

ಬೌಲಿಂಗ್‌ನಲ್ಲೂ ಭಾರತ ತಂಡ ಬಲಯುತವಾಗಿದೆ. ಜೂಲನ್‌ ಗೋಸ್ವಾಮಿ ತಂಡದ ವೇಗದ ಅಸ್ತ್ರ ಎನಿಸಿದ್ದಾರೆ. ಏಕ್ತಾ ಬಿಸ್ಟ್‌, ಅನುಜಾ ಪಾಟೀಲ್‌, ಮಾನಸಿ ಜೋಶಿ ಮತ್ತು ಪೂನಮ್‌ ಯಾದವ್‌ ಅವರೂ ಎದು ರಾಳಿ ಆಟಗಾರ್ತಿಯರ ಸದ್ದಡಗಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಚೊಚ್ಚಲ ಪ್ರಶಸ್ತಿಯ ಕನಸು: ಪಾಕಿಸ್ತಾನ ಕೂಡಾ ಚೊಚ್ಚಲ ಪ್ರಶಸ್ತಿಯ ಕನಸು ಕಾಣುತ್ತಿದೆ. ಈ ತಂಡ ಲೀಗ್‌ ಹಂತದಲ್ಲಿ ಆಡಿದ್ದ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆದ್ದಿತ್ತು. ಈ ಮೂಲಕ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿ ಫೈನಲ್‌ ಹಾದಿ ಸುಗಮ ಮಾಡಿಕೊಂಡಿತ್ತು. ಅಯೇಶಾ ಜಾಫರ್‌, ಜವೇರಿಯಾ ಖಾನ್‌, ಬಿಸ್ಮಾ ಮರೂಫ್‌, ನೈನಾ ಅಬಿದಿ ಅವರು  ತಂಡದ ಬ್ಯಾಟಿಂಗ್‌ ಬೆನ್ನೆಲು ಬಾಗಿದ್ದಾರೆ.

ಅಸ್ಮಾವಿಯಾ ಇಕ್ಬಾಲ್‌, ಅಲಿಯಾ ರಿಯಾಜ್‌, ಅನಾಮ್‌ ಅಮಿನ್‌, ಸನಾ ಮಿರ್‌, ನಿದಾ ದಾರ್‌ ಮತ್ತು ಸಾದಿಯಾ ಯೂಸುಫ್‌ ಅವರು ಭಾರತದ ಬ್ಯಾಟ್ಸ್‌ವುಮನ್‌ಗಳನ್ನು ಬೇಗನೆ ಕಟ್ಟಿ ಹಾಕುವ ವಿಶ್ವಾಸ ಹೊಂದಿದ್ದಾರೆ.

ಈ ಬಾರಿಯ ಲೀಗ್‌ ಹಂತದ ಏಳನೇ ಪಂದ್ಯದಲ್ಲಿ ಉಭಯ ತಂಡ ಗಳು ಮುಖಾಮುಖಿಯಾಗಿದ್ದವು. ಆಗ ಹರ್ಮನ್‌ಪ್ರೀತ್‌ ಪಡೆ 5 ವಿಕೆಟ್‌ಗಳಿಂದ ಗೆದ್ದಿತ್ತು. ಜೊತೆಗೆ ನಾಲ್ಕು ವರ್ಷಗಳ ಹಿಂದೆ ಚೀನಾದಲ್ಲಿ ನಡೆದಿದ್ದ ಟೂರ್ನಿ ಯ ಫೈನಲ್‌ನಲ್ಲೂ ಭಾರತ ತಂಡ ಪಾಕಿಸ್ತಾನವನ್ನು ಮಣಿಸಿತ್ತು. ಹಿಂದಿನ ಈ ಗೆಲುವುಗಳ ಬಲದಿಂದ ಬೀಗುತ್ತಿರುವ  ಭಾರತವೇ ಈ ಪಂದ್ಯದಲ್ಲೂ ಜಯದ ತೋರಣ ಕಟ್ಟುವ ನೆಚ್ಚಿನ ತಂಡ ಎನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.