ADVERTISEMENT

ಆಸ್ಟ್ರೇಲಿಯಾ ಕ್ರಿಕೆಟಿಗರು ಸ್ನೇಹಿತರಾಗಿ ಉಳಿದಿಲ್ಲ: ವಿರಾಟ್‌ ಕೊಹ್ಲಿ

ಏಜೆನ್ಸೀಸ್
Published 28 ಮಾರ್ಚ್ 2017, 10:15 IST
Last Updated 28 ಮಾರ್ಚ್ 2017, 10:15 IST
ಆಸ್ಟ್ರೇಲಿಯಾ ಕ್ರಿಕೆಟಿಗರು ಸ್ನೇಹಿತರಾಗಿ ಉಳಿದಿಲ್ಲ: ವಿರಾಟ್‌ ಕೊಹ್ಲಿ
ಆಸ್ಟ್ರೇಲಿಯಾ ಕ್ರಿಕೆಟಿಗರು ಸ್ನೇಹಿತರಾಗಿ ಉಳಿದಿಲ್ಲ: ವಿರಾಟ್‌ ಕೊಹ್ಲಿ   

ಧರ್ಮಶಾಲಾ:  ಬಾರ್ಡರ್‌–ಗವಾಸ್ಕರ್‌ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾದ ಕ್ರಿಕೆಟಿಗರು ಮೈದಾನದ ಒಳಗೆ ಹಾಗೂ ಹೊರಗೆ ನಿಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಇನ್ನು ಮುಂದೆ ಆಸ್ಟ್ರೇಲಿಯಾ ಆಟಗಾರರು ಸ್ನೇಹಿತರಾಗಿರುವುದಿಲ್ಲ ಎಂದಿದ್ದಾರೆ.

ವಿವಾದಾತ್ಮಕ ಅಂಪೈರ್ ತೀರ್ಪು ಮರು ಪರಿಶೀಲನಾ ಪದ್ಧತಿ (ಡಿಆರ್‌ಎಸ್‌) ಬಳಕೆ ಮಾಡುವಲ್ಲಿ ನಿಯಮವನ್ನು ಗಾಳಿಗೆ ತೂರಿದ್ದ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್‌ ಸ್ಮಿತ್ ಅವರ ವಿರುದ್ಧ ಕೊಹ್ಲಿ ಆರೋಪಿಸಿದ್ದರು.

ಆನಂತರ ಆಸ್ಟ್ರೇಲಿಯಾದ ಕೆಲ ಆಟಗಾರರು ಹಾಗೂ ಮಾಧ್ಯಮಗಳು ಕೊಹ್ಲಿ ಅವರನ್ನು ಗುರಿಯಾಗಿಸಿ ಟೀಕಾ ಪ್ರಹಾರ ನಡೆಸಿದ್ದರು. ಅಮೆರಿಕದ ವಿವಾದಾತ್ಮಕ ಅಧ್ಯಕ್ಷರೆನಿಸಿರುವ ಡೊನಾಲ್ಡ್‌ ಟ್ರಂಪ್‌ರೊಂದಿಗೆ ಹೋಲಿಕೆ ಮಾಡಿ ಮಾಧ್ಯಮಗಳು ವರದಿ ಪ್ರಕಟಿಸಿದ್ದವು.

ADVERTISEMENT

ಆಸ್ಟ್ರೇಲಿಯಾ ಕ್ರಿಕೆಟ್‌ನ ಮುಖ್ಯಸ್ಥ ಜೇಮ್ಸ್‌ ಸದರ್‌ಲ್ಯಾಂಡ್‌ ರೇಡಿಯೋ ಸಂದರ್ಶನವೊಂದರಲ್ಲಿ ‘ಕೊಹ್ಲಿಗೆ ಕ್ಷಮೆ ಪದದ ಅಕ್ಷರಗಳೇ ತಿಳಿದಿಲ್ಲ’ ಎಂಬ ಹೇಳಿಕೆ ನೀಡಿದ್ದರು.

ಸ್ಟೀವ್‌ ಸ್ಮಿತ್‌ ತಂಡದ ಆಟಗಾರರು ಮೈದಾನದ ಹೊರಗೆ ಇನ್ನೂ ಸ್ನೇಹಿತರಾಗಿ ಉಳಿದಿದ್ದಾರೆಯೇ ಎಂಬ ಪ್ರಶ್ನೆಗೆ ಕೊಹ್ಲಿ ಉತ್ತರ ಹೀಗಿದೆ–
‘ಇಲ್ಲ ಈಗ ಖಂಡಿತ ಬದಲಾಗಿದೆ. ನಾನು ಮೊದಲ ಟೆಸ್ಟ್‌ಗೂ ಮುನ್ನ ಸ್ಪರ್ಧೆಯ ನಡುವೆಯೂ ಸ್ನೇಹದ ಕುರಿತು ಹೇಳಿದ್ದೆ. ಆದರೆ, ಅದು ಸುಳ್ಳೆಂದು ಸಾಬೀತಾಗಿದೆ. ಮತ್ತೆ ಅದರ ಬಗ್ಗೆ ಯಾವತ್ತಿಗೂ ನನ್ನಿಂದ ಕೇಳುವುದಿಲ್ಲ’ ಎಂದಿದ್ದಾರೆ.

ಕೊಹ್ಲಿಗೆ ಭುಜದ ನೋವಾದ ಸಮಯದಲ್ಲಿ ಆಸ್ಟ್ರೇಲಿಯಾದ ಆಟಗಾರರು ಅದನ್ನು ಅಣಕಿಸಿದ್ದರು. ಕ್ಯಾಚ್‌ ಕುರಿತು ಮುರಳಿ ವಿಜಯ್‌ ವಿರುದ್ಧ   ಕೆಟ್ಟ ಶಬ್ದ ಬಳಸಿ ಸ್ಮಿತ್‌ ಹೀಯಾಳಿಸಿದ್ದರು. ಇನ್ನೂ ಆರ್‌.ಅಶ್ವಿನ್‌ ಮತ್ತು ರವೀಂದ್ರ ಜಡೇಜಾ ಜತೆಗೆ ಮ್ಯಾಥ್ಯೂ ವೇಡ್‌ ದೀರ್ಘ ಸಮಯದ ಮಾತಿನ ಚಕಮಕಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.