ADVERTISEMENT

ಆಸ್ಟ್ರೇಲಿಯಾ ‘ಎ’ ತಂಡಕ್ಕೆ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:34 IST
Last Updated 30 ಜುಲೈ 2015, 19:34 IST
ಆಸ್ಟ್ರೇಲಿಯಾ ‘ಎ’ ತಂಡಕ್ಕೆ ಮುನ್ನಡೆ
ಆಸ್ಟ್ರೇಲಿಯಾ ‘ಎ’ ತಂಡಕ್ಕೆ ಮುನ್ನಡೆ   

ಚೆನ್ನೈ (ಪಿಟಿಐ): ಕ್ಯಾಮರಾನ್ ಬೆನ್‌ಕ್ರಾಫ್ಟ್‌ ಆಕರ್ಷಕ ಶತಕದ ನೆರವಿನಿಂದ ಆಸ್ಟ್ರೇ ಲಿಯಾ ‘ಎ’ ತಂಡವು ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ  ನಡೆಯು ತ್ತಿರುವ ಭಾರತ ‘ಎ’ ವಿರುದ್ಧದ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ ಮುನ್ನಡೆ ಸಾಧಿಸಿತು.

ಪಂದ್ಯದ ಎರಡನೇ ದಿನ ಆತಿಥೇಯ ತಂಡದ  ಆಫ್‌ಸ್ಪಿನ್ನರ್ ಬಾಬಾ ಅಪರಾಜಿತ್ (74ಕ್ಕೆ5) ಐದು ವಿಕೆಟ್‌  ಉರುಳಿಸಿದ ಸಾಧನೆ  ಮಾಡಿದರು. ಬುಧವಾರ ಮೊದಲ ಇನಿಂಗ್ಸ್‌ನಲ್ಲಿ  ಪೂಜಾರ ಬಳಗವು ಕೇವಲ 135 ರನ್‌ ಗಳಿಸಿತ್ತು. ಆಸೀಸ್ ಬಳವು ವಿಕೆಟ್‌ ನಷ್ಟವಿಲ್ಲದೇ 43 ರನ್ ಗಳಿಸಿತ್ತು. ಆಟ ಮುಂದುವರಿಸಿದ ಪ್ರವಾಸಿ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಬೆನ್‌ಕ್ರಾಫ್ಟ್‌ (150; 267ಎ, 16ಬೌಂ, 1ಸಿ) ಶತಕದ ಬಲ ತುಂಬಿದರು. ಇದರಿಂದಾಗಿ ದಿನದಾಟದ ಕೊನೆಗೆ ಆಸ್ಟೇಲಿಯಾ ‘ಎ’ ತಂಡವು 9 ವಿಕೆಟ್ ನಷ್ಟಕ್ಕೆ 329 ರನ್ ಕಲೆ ಹಾಕಿದೆ. ಒಟ್ಟು 194 ರನ್‌ಗಳ ಮುನ್ನಡೆ ಸಾಧಿಸಿದೆ.

ಆತಿಥೇಯ ಬೌಲರ್‌ಗಳನ್ನು ಸಾಕಷ್ಟು ಸತಾಯಿಸಿದ ಬೆನ್‌ಕ್ರಾಫ್ಟ್‌ ಮತ್ತು ನಾಯಕ ಉಸ್ಮಾನ್ ಕ್ವಾಜಾ (33 ರನ್) ಮೊದಲ ವಿಕೆಟ್ ಜತೆಯಾಟದಲ್ಲಿ 111 ರನ್‌ಗಳನ್ನು ಸೇರಿಸಿತು. ನಂತರ ಬಂದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆದರೆ, ಬೆನ್‌ಕ್ರಾಫ್ಟ್‌ ಮಾತ್ರ ಗಟ್ಟಿಯಾಗಿ ನಿಂತಿದ್ದರು. ಅವರು ನಾಲ್ಕನೇ ವಿಕೆಟ್‌ ಜತೆಯಾಟದಲ್ಲಿ ಕ್ಯಾಲಮ್ ಫರ್ಗ್ಯುಸನ್ (54 ರನ್) ಜೊತೆಗೆ 107 ರನ್‌ಗಳನ್ನು ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.  ಭಾರತ ತಂಡದ ಸ್ಪಿನ್ನರ್‌ಗಳಿಗೆ ಆಕರ್ಷಕ ಸ್ವೀಪ್ ಮತ್ತು ಬ್ಯಾಕ್‌ಫುಟ್‌ ಹೊಡೆತಗಳ ಮೂಲಕ ಉತ್ತರಿಸಿದ ಬೆನ್‌ಕ್ರಾಫ್ಟ್‌ ಶತಕೋತ್ತರ ಅರ್ಧಶತಕ ಗಳಿಸಿದರು. ಇನ್ನೊಂದೆಡೆ ವಿಕೆಟ್‌ಗಳು ಬೀಳುತ್ತಿದ್ದರು. ಕ್ರಾಫ್ಟ್‌ ತಾಳ್ಮೆಯ ಆಟ ಮುಂದುವರಿದಿತ್ತು.

89ನೇ ಓವರ್‌ನಲ್ಲಿ ಬೆನ್‌ಕ್ರಾಫ್ಟ್‌ ಬಾಬ ಅಪರಾಜಿತ್ ಎಸೆತದಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚಿತ್ತರು.

ಬಾಬಾ ಮಿಂಚು
ಆಫ್‌ಸ್ಪಿನ್ನರ್ ಬಾಬಾ ಅಪರಾಜಿತ್ ತಡವಾಗಿ ಕೈಚಳಕ ತೋರಿಸಿದರೂ ಆಸ್ಟ್ರೇಲಿಯಾ ಬೃಹತ್ ಮೊತ್ತ ಗಳಿಸದಂತೆ ತಡೆಯೊಡ್ಡಿದರು.
ಮಧ್ಯಮಕ್ರಮಾಂಕದ ಬ್ಯಾಟ್ಸ್‌ಮನ್‌ ಗಳಾದ ಮಾರ್ಕಸ್ ಸ್ಟೋಯಿನಿಸ್, ಮ್ಯಾಥ್ಯೂವೇಡ್‌, ಶತಕ ಗಳಿಸಿದ್ದ  ಬೆನ್‌ಕ್ರಾಫ್ಟ್‌, ಗುರೀಂದರ್ ಸಿಂಗ್ ಸಂಧು (36 ರನ್) ಮತ್ತು ಅಷ್ಟರ್ ಅಗರ್ ಅವರ ವಿಕೆಟ್‌ಗಳನ್ನು ಗಳಿಸಿದರು.

ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಮೂವರು ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು  ಔಟ್‌ ಮಾಡಿ ಮಿಂಚಿದರು. ಕರ್ನಾಟಕದ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಒಂದು ವಿಕೆಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.