ADVERTISEMENT

ಇಂಗ್ಲೆಂಡ್‌ ವಿರುದ್ಧ ಮೊದಲ ಏಕದಿನ ಪಂದ್ಯ: ರಾಸ್‌ ಟೇಲರ್‌ ಶತಕ

ಏಜೆನ್ಸೀಸ್
Published 25 ಫೆಬ್ರುವರಿ 2018, 18:52 IST
Last Updated 25 ಫೆಬ್ರುವರಿ 2018, 18:52 IST
ಇಂಗ್ಲೆಂಡ್‌ ವಿರುದ್ಧ ಮೊದಲ ಏಕದಿನ ಪಂದ್ಯ: ರಾಸ್‌ ಟೇಲರ್‌ ಶತಕ
ಇಂಗ್ಲೆಂಡ್‌ ವಿರುದ್ಧ ಮೊದಲ ಏಕದಿನ ಪಂದ್ಯ: ರಾಸ್‌ ಟೇಲರ್‌ ಶತಕ   

ಹ್ಯಾಮಿಲ್ಟನ್‌ (ರಾಯಿಟರ್ಸ್‌): ರಾಸ್‌ ಟೇಲರ್‌ (113; 116ಎ, 12ಬೌಂ) ಮತ್ತು ಟಾಮ್‌ ಲಥಾಮ್‌ (79; 84ಎ, 6ಬೌಂ) ಅವರ ಅಮೋಘ ಜೊತೆಯಾಟದ ಬಲದಿಂದ ನ್ಯೂಜಿಲೆಂಡ್‌ ತಂಡ ಇಂಗ್ಲೆಂಡ್‌ ಎದು ರಿನ ಮೊದಲ ಏಕದಿನ ಪಂದ್ಯದಲ್ಲಿ 3 ವಿಕೆಟ್‌ಗಳಿಂದ ಗೆದ್ದಿದೆ.

ಸೆಡನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆಂಗ್ಲರ ನಾಡಿನ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 284ರನ್ ಗಳಿಸಿತು. ಸವಾಲಿನ ಗುರಿಯನ್ನು ಕಿವೀಸ್‌ ನಾಡಿನ ಬಳಗ 7 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಆರಂಭಿಕ ಸಂಕಷ್ಟ: ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‌ 27ರನ್‌ ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟ ಎದುರಿಸಿತ್ತು.

ADVERTISEMENT

ಆ ನಂತರ ಟೇಲರ್‌ ಮತ್ತು ಲಥಾಮ್‌ ಮೋಡಿ ಮಾಡಿದರು. ಕಲಾತ್ಮಕ ಹೊಡೆತಗಳ ಮೂಲಕ ಅಂಗಳದಲ್ಲಿ ಬೌಂಡರಿಗಳ ಚಿತ್ತಾರ ಬಿಡಿಸಿದ ಇವರು ತಂಡದ ರನ್‌ ಗಳಿಕೆಗೆ ವೇಗ ನೀಡಿದರು. ಈ ಜೋಡಿ ನಾಲ್ಕನೇ ವಿಕೆಟ್‌ ಪಾಲುದಾರಿಕೆಯಲ್ಲಿ 178ರನ್‌ ಕಲೆಹಾಕಿ ತಂಡದ ಗೆಲುವಿನ ಹಾದಿ ಸುಗಮ ಮಾಡಿತು. ಟೇಲರ್‌ ಏಕದಿನ ಮಾದರಿಯಲ್ಲಿ 18ನೇ ಶತಕ ಸಿಡಿಸಿದ ಶ್ರೇಯಕ್ಕೆ ಪಾತ್ರರಾದರು.

ಕೊನೆಯಲ್ಲಿ ಮಿಷೆಲ್‌ ಸ್ಯಾಂಟನರ್‌ (ಔಟಾಗದೆ 45, 27ಎ, 2ಬೌಂ, 4ಸಿ) ಮಿಂಚಿದರು. ಆರಂಭದಲ್ಲಿ ಒಂಬತ್ತು ಎಸೆತಗಳಲ್ಲಿ ಎರಡು ರನ್‌ ಬಾರಿಸಿದ್ದ ಮಿಷೆಲ್‌, ಆ ನಂತರ ಅಬ್ಬರಿಸಿದರು. 18 ಎಸೆತಗಳಲ್ಲಿ 43ರನ್‌ ಕಲೆಹಾಕಿದ್ದು ಇದಕ್ಕೆ ಸಾಕ್ಷಿ.

ಇದಕ್ಕೂ ಮುನ್ನ ಇಂಗ್ಲೆಂಡ್‌ ತಂಡ ಸವಾಲಿನ ಮೊತ್ತ ಪೇರಿಸಿತ್ತು.  ಜೇಸನ್‌ ರಾಯ್‌ (49; 66ಎ, 5ಬೌಂ, 1ಸಿ), ಜೋ ರೂಟ್‌ (71; 75ಎ, 5ಬೌಂ, 1ಸಿ) ಮತ್ತು ಜಾಸ್‌ ಬಟ್ಲರ್‌ (79; 65ಎ, 5ಬೌಂ, 5ಸಿ) ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ್ದರು.

ಸಂಕ್ಷಿಪ್ತ ಸ್ಕೋರ್‌

ಇಂಗ್ಲೆಂಡ್‌: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 284 (ಜೇಸನ್‌ ರಾಯ್‌ 49, ಜೋ ರೂಟ್‌ 71, ಬೆನ್‌ ಸ್ಟೋಕ್ಸ್‌ 12, ಜಾಸ್‌ ಬಟ್ಲರ್‌ 7; ಟ್ರೆಂಟ್‌ ಬೌಲ್ಟ್‌ 64ಕ್ಕೆ2, ಮಿಷೆಲ್‌ ಸ್ಯಾಂಟನರ್‌ 54ಕ್ಕೆ2, ಇಶ್‌ ಸೋಧಿ 63ಕ್ಕೆ2).

ನ್ಯೂಜಿಲೆಂಡ್‌: 49.2 ಓವರ್‌ಗಳಲ್ಲಿ 7 ವಿಕೆಟ್‌ಗೆ 287 (ರಾಸ್‌ ಟೇಲರ್‌ 113, ಟಾಮ್‌ ಲಥಾಮ್‌ 79, ಮಿಷೆಲ್‌ ಸ್ಯಾಂಟನರ್‌ ಔಟಾಗದೆ 45; ಕ್ರಿಸ್‌ ವೋಕ್ಸ್‌ 47ಕ್ಕೆ2, ಬೆನ್‌ ಸ್ಟೋಕ್ಸ್‌ 43ಕ್ಕೆ2).

ಫಲಿತಾಂಶ: ನ್ಯೂಜಿಲೆಂಡ್‌ಗೆ 3 ವಿಕೆಟ್‌ ಗೆಲುವು ಹಾಗೂ 5 ಪಂದ್ಯಗಳ ಸರಣಿಯಲ್ಲಿ 1–0ರ ಮುನ್ನಡೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.