ADVERTISEMENT

ಇಂದು ಓಟ: ಭರವಸೆಯ ಅಲೆಯಲ್ಲಿ ಮೋ ಫರಾ

ಏಜೆನ್ಸೀಸ್
Published 19 ಆಗಸ್ಟ್ 2017, 19:30 IST
Last Updated 19 ಆಗಸ್ಟ್ 2017, 19:30 IST
ಮೋ ಫರಾ - ರಾಯಿಟರ್ಸ್ ಚಿತ್ರ
ಮೋ ಫರಾ - ರಾಯಿಟರ್ಸ್ ಚಿತ್ರ   

ಲಂಡನ್‌: ಟ್ರ್ಯಾಕ್‌ನ ಅದ್ಭುತ ಪ್ರತಿಭೆ ಮೋ ಫರಾ ಅವರು ತಮ್ಮ ವೃತ್ತಿ ಜೀವನದ ಅಂತಿಮ ಓಟಕ್ಕೆ ಸಜ್ಜಾಗಿದ್ದು ತವರಿನ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಡೈಮಂಡ್ ಲೀಗ್‌ನಲ್ಲಿ 3,000 ಮೀಟರ್ಸ್ ಓಟದಲ್ಲಿ ಸ್ಪರ್ಧಿಸುವರು.

ಕಳೆದ ವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 5,000 ಮೀಟರ್ಸ್ ಓಟದಲ್ಲಿ ಚಿನ್ನ ಗೆಲ್ಲಲು ವಿಫಲರಾದ ಅವರು ಈ ಕೂಟದಲ್ಲಿ ಉತ್ತಮ ಸಾಧನೆಯ ಭರವಸೆಯಲ್ಲಿದ್ದಾರೆ.

ಆ ಕೂಟದಲ್ಲಿ ಅವರನ್ನು ಇಥಿಯೋಪಿಯಾದ ಮುಕ್ತರ್‌  ಇದ್ರೀಸ್‌ ಹಿಂದಿಕ್ಕಿದ್ದರು. 2011ರ ವಿಶ್ವ ಚಾಂಪಿಯನ್‌ಷಿಪ್‌ನ 10,000 ಮೀಟರ್ಸ್‌ ಓಟದಲ್ಲಿ ಪದಕ ಗೆಲ್ಲಲು ವಿಫಲರಾದ ನಂತರ ಅವರು ಇದೇ ಮೊದಲು ಟ್ರ್ಯಾಕ್‌ನಲ್ಲಿ ಹಿನ್ನಡೆ ಅನುಭವಿಸಿದ್ದರು.

ದೂರ ಓಟದಲ್ಲಿ ಅಮೋಘ ಸಾಧನೆ ಮಾಡಿರುವ ಫರಾ ಈ ವಿಭಾಗದಲ್ಲಿ ಕೆನ್ಯಾ ಮತ್ತು ಇಥಿಯೋಪಿಯಾ ಅಥ್ಲೀಟ್‌ಗಳ ಪಾರಮ್ಯಕ್ಕೆ ಸೆಡ್ಡು ಹೊಡೆದಿದ್ದರು. ಎರಡು ಒಲಿಂಪಿಕ್ಸ್‌ನಲ್ಲಿ ನಿರಂತರವಾಗಿ 5,000 ಮತ್ತು 10,000 ಮೀಟರ್ಸ್ ಓಟದಲ್ಲಿ ಪದಕ ಗೆದ್ದು ಮಿಂಚಿದ್ದರು. ಎಂಟು ವರ್ಷದವರಾಗಿದ್ದಾಗ ಸೊಮಾಲಿಯಾದಿಂದ ತಾಯಿ ಮತ್ತು ಸಹೋದರರೊಂದಿಗೆ ಇಂಗ್ಲೆಂಡ್‌ಗೆ ಬಂದ ಫರಾ ಅವರಿಗೆ ನೆನಪಿನಲ್ಲಿ ಉಳಿಯುವಂಥ ಬೀಳ್ಕೊಡುಗೆ ನೀಡಲು ಇಲ್ಲಿನ ಕ್ರೀಡಾ ಪ್ರೇಮಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

‘ಜಯದೊಂದಿಗೆ ಹೊರ ನಡೆಯುವುದು ನನ್ನ ಮೊದಲ ಆದ್ಯತೆ. ಭಾನುವಾರ ನನ್ನ ಜೀವನದ ಅತ್ಯಂತ ಭಾವುಕ ಕ್ಷಣಗಳಿಗೆ ಪಾತ್ರವಾಗಲಿದೆ’ ಎಂದು ಫರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.