ADVERTISEMENT

ಇಂದು ಕರ್ನಾಟಕ–ಬರೋಡ ಕ್ವಾರ್ಟರ್‌ ಫೈನಲ್‌

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 19:49 IST
Last Updated 11 ಮಾರ್ಚ್ 2017, 19:49 IST
ಇಂದು ಕರ್ನಾಟಕ–ಬರೋಡ ಕ್ವಾರ್ಟರ್‌ ಫೈನಲ್‌
ಇಂದು ಕರ್ನಾಟಕ–ಬರೋಡ ಕ್ವಾರ್ಟರ್‌ ಫೈನಲ್‌   

ನವದೆಹಲಿ:  ಲೀಗ್ ಹಂತದಲ್ಲಿ ಅಮೋಘ ಆಟದ ಮೂಲಕ ಗಮನ ಸೆಳೆದಿರುವ ಕರ್ನಾಟಕ ತಂಡ ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಭಾನುವಾರ ಬರೋಡ ಎದುರು ಇಲ್ಲಿನ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಲಿದೆ.

ಈ ಟೂರ್ನಿಗೆ ಮನೀಷ್‌ ಪಾಂಡೆ ನಾಯಕರಾಗಿದ್ದು ಇವರ ಮುಂದಾಳತ್ವದಲ್ಲಿ ರಾಜ್ಯ ತಂಡ ಉತ್ತಮ ಸಾಮರ್ಥ್ಯ ನೀಡುತ್ತಿದೆ. ಲೀಗ್‌ನಲ್ಲಿ ಕ್ರಮವಾಗಿ ಜಾರ್ಖಂಡ್‌, ಸರ್ವಿಸಸ್‌, ಸೌರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ, ಹೈದರಾಬಾದ್‌ ಮತ್ತು ಛತ್ತೀಸಗಡ ಎದುರು ಗೆಲುವು ಪಡೆದಿದೆ. ಅಜೇಯ ಸಾಧನೆ ಮೂಲಕ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನಾಕೌಟ್‌ ಪ್ರವೇಶಿಸಿದ್ದು  ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದೆ.

ಬರೋಡ ತಂಡ ‘ಎ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದು ಆಡಿದ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿದೆ. ಎರಡು ಪಂದ್ಯಗಳನ್ನು ಸೋತಿದೆ.
ಕರ್ನಾಟಕ ತಂಡದ ಆರಂಭಿಕ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಮಯಂಕ್‌ ಅಗರವಾಲ್‌,  ಆರ್‌. ಸಮರ್ಥ್‌ ಅವರು ಸ್ಥಿರ ಸಾಮರ್ಥ್ಯ ನೀಡುತ್ತಿದ್ದಾರೆ. ವೇಗಿಗಳಾದ ವಿನಯ್‌ ಕುಮಾರ್‌, ಯುವ ಪ್ರತಿಭೆ ಪ್ರಸಿದ್ಧ ಕೃಷ್ಣ,  ಸ್ಟುವರ್ಟ್‌ ಬಿನ್ನಿ, ಸ್ಪಿನ್ನರ್‌ ಕೆ. ಗೌತಮ್ ತಂಡದ ಶಕ್ತಿಯಾಗಿದ್ದಾರೆ.

ADVERTISEMENT

ಇರ್ಫಾನ್‌ ಪಠಾಣ್‌ ನಾಯಕ ರಾಗಿರುವ ಬರೋಡ ತಂಡ ಲೀಗ್‌ನ ತನ್ನ ಮೊದಲ ಪಂದ್ಯದಲ್ಲಿ ರೈಲ್ವೇಸ್‌ ಎದುರು ಗೆಲುವು ಪಡೆದಿತ್ತು. ನಂತರದ ಪಂದ್ಯಗಳಲ್ಲಿ ಪಂಜಾಬ್‌, ಒಡಿಶಾ, ಅಸ್ಸಾಂ ಎದುರು ಗೆಲುವು ಪಡೆದು, ವಿದರ್ಭ ಮತ್ತು ಹರಿಯಾಣ ಎದುರು ಸೋಲು ಕಂಡಿದೆ.

ಭಾನುವಾರ ಪಾಲಂ ಮೈದಾನ ದಲ್ಲಿ ನಡೆಯಲಿರುವ ಇನ್ನೊಂದು ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ತಮಿಳುನಾಡು–ಗುಜರಾತ್‌ ಮುಖಾಮುಖಿಯಾಗಲಿವೆ.
ವಿದರ್ಭ–ಜಾರ್ಖಂಡ್ ಮತ್ತು ಬಂಗಾಳ–ಮಹಾರಾಷ್ಟ್ರ ನಡುವಣ ಇನ್ನೆರೆಡು ಎಂಟರ ಘಟ್ಟದ ಪಂದ್ಯ ಗಳು ಮಾರ್ಚ್‌ 15ರಂದು ನಡೆಯ ಲಿವೆ.  16ರಿಂದ ಸೆಮಿಫೈನಲ್‌ ಮತ್ತು 19ರಂದು ಫೈನಲ್ ಆಯೋಜನೆ ಯಾಗಿದೆ.

ಇಂದಿನ ಪಂದ್ಯಗಳು
ಕರ್ನಾಟಕ–ಬರೋಡ
ಸ್ಥಳ: ಫಿರೋಜ್‌ ಷಾ ಕೋಟ್ಲಾ, ನವದೆಹಲಿ. ತಮಿಳುನಾಡು–ಗುಜರಾತ್‌. ಸ್ಥಳ: ಪಾಲಂ  ಮೈದಾನ
ಆರಂಭ: ಬೆಳಿಗ್ಗೆ 9ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.