ADVERTISEMENT

ಉಸೇನ್‌ ಬೋಲ್ಟ್‌ ಸಂಚಲನ...

ಇಂದು ಉದ್ಯಾನನಗರಿಯಲ್ಲಿ ಮಿಂಚು ಹರಿಸಲಿರುವ ಜಮೈಕದ ಅಥ್ಲೀಟ್‌

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST
ಉಸೇನ್‌ ಬೋಲ್ಟ್‌ ಸಂಚಲನ...
ಉಸೇನ್‌ ಬೋಲ್ಟ್‌ ಸಂಚಲನ...   

ಬೆಂಗಳೂರು: ವಿಶ್ವದ ಅತ್ಯಂತ ವೇಗದ ಓಟಗಾರ, 100 ಹಾಗೂ 200 ಮೀ. ಓಟದಲ್ಲಿ ವಿಶ್ವದಾಖಲೆಯ ಒಡೆಯ, ಅಥ್ಲೆಟಿಕ್‌ ವಿಶ್ವದ ‘ಸೂಪರ್‌ ಸ್ಟಾರ್‌’ ಉಸೇನ್‌ ಬೋಲ್ಟ್‌ ಮಂಗಳವಾರ ಉದ್ಯಾನನಗರಿಯಲ್ಲಿ ಮಿಂಚಿನ ಸಂಚಲನ ಉಂಟುಮಾಡಲಿದ್ದಾರೆ.

ವಿಶ್ವದ ವಿವಿಧ ನಗರಗಳ ಕ್ರೀಡಾಂಗಣದಲ್ಲಿರುವ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ತನ್ನ ಓಟದ ಮೂಲಕ ಮಿಂಚು ಹರಿಸಿರುವ ಬೋಲ್ಟ್‌ ಬೆಂಗಳೂರಿನಲ್ಲಿ ಮಾತ್ರ ಹೊಸ ‘ವೇಷ’ ತೊಡಲಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರದರ್ಶನ ಕ್ರಿಕೆಟ್‌ ಪಂದ್ಯದಲ್ಲಿ ಅವರು ಆಡಲಿದ್ದಾರೆ. ಬೋಲ್ಟ್‌ ಮುನ್ನಡೆಸಲಿರುವ ತಂಡವು ಯುವರಾಜ್‌ ಸಿಂಗ್ ಅವರ ತಂಡದ ಎದುರು ಆಡಲಿದೆ. ನಾಲ್ಕು ಓವರ್‌ಗಳ ಈ ಪಂದ್ಯದಲ್ಲಿ ಬೋಲ್ಟ್‌ ಅಭಿಮಾನಿಗಳನ್ನು ರಂಜಿಸುವುದು ಖಚಿತ.

ಆದರೆ ಈ ಪಂದ್ಯವನ್ನು ಎಷ್ಟು ಮಂದಿ ವೀಕ್ಷಿಸಲಿದ್ದಾರೆ ಎಂಬುದನ್ನು ಸಂಘಟಕರು ಬಹಿರಂಗಪಡಿಸಿಲ್ಲ. ಬೋಲ್ಟ್‌ ಅವರ ಪ್ರಾಯೋಜಕತ್ವ ವಹಿಸಿರುವ ಪೂಮ ಕಂಪೆನಿ ಈ ಪಂದ್ಯ ಆಯೋಜಿಸಿದೆ. ಹರಭಜನ್‌ ಸಿಂಗ್‌ ಮತ್ತು ಜಹೀರ್ ಖಾನ್‌ ಅವರೂ ಪಂದ್ಯದಲ್ಲಿ ಆಡಲಿದ್ದಾರೆ.
ಬೋಲ್ಟ್‌ ಈ ಹಿಂದೆ ಕೂಡಾ ಕ್ರಿಕೆಟ್‌ ಮೈದಾನದಲ್ಲಿ ತಮ್ಮ ಸಾಮರ್ಥ್ಯ ತೋರಿದ್ದರು. ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಟ್ವೆಂಟಿ–20 ಪಂದ್ಯವೊಂದರಲ್ಲಿ ಆಡಿದ್ದರು. ಮಾತ್ರವಲ್ಲ.

ವಿಂಡೀಸ್‌ ತಂಡದ ಆಟಗಾರ ಕ್ರಿಸ್‌ ಗೇಲ್‌ ಅವರನ್ನು ‘ಕ್ಲೀನ್‌ ಬೌಲ್ಡ್‌’ ಮಾಡಿದ್ದರು. ಬೋಲ್ಟ್‌ ಅಥ್ಲೆಟಿಕ್ಸ್‌ ಟ್ರ್ಯಾಕ್‌ನಲ್ಲಿ ಸಾಮರ್ಥ್ಯ ತೋರುತ್ತಿಲ್ಲ ಎಂಬುದು ಅಲ್ಪ ನಿರಾಸೆಗೆ ಕಾರಣವಾಗಿರುವುದು ನಿಜ. ಆದರೆ ಒಲಿಂಪಿಕ್ಸ್‌ನಲ್ಲಿ ಆರು ಮತ್ತು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎಂಟು ಚಿನ್ನದ ಪದಕ ಗೆದ್ದಿರುವ ಅಥ್ಲೀಟ್‌ಅನ್ನು ನೇರವಾಗಿ ನೋಡುವ ಅವಕಾಶ ನಗರದ ಕೆಲವರಿಗಂತೂ ಲಭಿಸಲಿದೆ.

ಕಾರ್ಲ್‌ ಲೂಯಿಸ್‌, ಲಿನ್‌ಫರ್ಡ್‌ ಕ್ರಿಸ್ಟಿ ಮತ್ತು ಮೌರಿಸ್‌ ಗ್ರೀನ್‌ ಒಳಗೊಂಡಂತೆ ವಿಶ್ವದ ಹಲವು ಖ್ಯಾತ ಅಥ್ಲೀಟ್‌ಗಳು ಈ ಹಿಂದೆ ಬೆಂಗಳೂರಿಗೆ ಬಂದು ಅಭಿಮಾನಿಗಳ ಮನಗೆದ್ದಿದ್ದರು. ಆದರೆ ಬೋಲ್ಟ್‌ ಭೇಟಿ ಉಂಟುಮಾಡಿರುವ ಸಂಚಲನ ಮಾತ್ರ ಅಪಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT