ADVERTISEMENT

ಎಂಟರ ಘಟ್ಟಕ್ಕೆ ಗುಣೇಶ್ವರನ್, ಯೂಕಿ

ವಿಕ್ರಂ ಕಾಂತಿಕೆರೆ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ಸಿಂಗಲ್ಸ್‌ನಲ್ಲಿ ಆಸ್ಟ್ರೇಲಿಯಾದ ಮಾರ್ಕ್ ಪೋಲ್‌ಮನ್ಸ್‌ ಎದುರು ಗೆದ್ದ ಭಾರತದ ಪ್ರಜ್ಞೇಶ್ ಗುಣೇಶ್ವರನ್ ಸಂಭ್ರಮಿಸಿದ ರೀತಿ ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್
ಸಿಂಗಲ್ಸ್‌ನಲ್ಲಿ ಆಸ್ಟ್ರೇಲಿಯಾದ ಮಾರ್ಕ್ ಪೋಲ್‌ಮನ್ಸ್‌ ಎದುರು ಗೆದ್ದ ಭಾರತದ ಪ್ರಜ್ಞೇಶ್ ಗುಣೇಶ್ವರನ್ ಸಂಭ್ರಮಿಸಿದ ರೀತಿ ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್   

ಬೆಂಗಳೂರು: ತಮ್ಮ ಎದುರಾಳಿಗೆ ಕಲಾತ್ಮಕ ಹೊಡೆತಗಳ ಮೂಲಕ  ಉತ್ತರ ನೀಡಿದ ಭಾರತದ ಪ್ರಜ್ಞೇಶ್ ಗುಣೇಶ್ವರನ್‌  ಇಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್ ಫೈನಲ್‌ ಹಂತ ಪ್ರವೇಶಿಸಿದರು.

ಕೆ.ಎಸ್.ಎಲ್‌.ಟಿ.ಎ ಅಂಗಣದಲ್ಲಿ ಬುಧವಾರದ ಮೊದಲ ಪಂದ್ಯದಲ್ಲಿ ಅವರು ಆಸ್ಟ್ರೇಲಿಯಾದ ಮಾರ್ಕ್ ಪೋಲ್‌ಮನ್ಸ್ ಅವರನ್ನು ಮಣಿಸಿದರು. ಮಧ್ಯಾಹ್ನ ನಡೆದ ಮತ್ತೊಂದು ಪಂದ್ಯದಲ್ಲಿ ಗೆದ್ದ ಸುಮಿತ್ ನಗಾಲ್‌ ಕೂಡ ಎಂಟರ ಘಟ್ಟಕ್ಕೆ ಪ್ರವೇಶಿಸಿದರು. ಮೂರನೇ ಶ್ರೇಯಾಂಕದ ಭಾರತದ ಆಟಗಾರ ಯೂಕಿ ಭಾಂಬ್ರಿ ಸಂಜೆ ನಡೆದ ಪಂದ್ಯದಲ್ಲಿ ಸುಲಭ ಜಯ ಸಾಧಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಎಡಗೈ ಆಟಗಾರರಾದ ಗುಣೇಶ್ವರನ್‌ ಮತ್ತು ಪೋಲ್‌ಮನ್ಸ್‌ ನಡುವಿನ ಹಣಾಹಣಿ ಆರಂಭದಿಂದಲೇ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಗ್ಯಾಲರಿಯಲ್ಲಿದ್ದ ಅವರ ತಂದೆ ಪ್ರಭಾಕರನ್ ಮತ್ತು ತಾಯಿ ಉಷಾ ರಾಣಿ ಅವರ ಪ್ರೋತ್ಸಾಹದ ಬಲದಲ್ಲಿ ಮೋಹಕ ಆಟವಾಡಿದ ಚೆನ್ನೈನ ಗುಣೇಶ್ವರನ್‌ ಒಟ್ಟು 10 ಏಸ್‌ಗಳನ್ನು ಸಿಡಿಸಿ ಎದುರಾಳಿಯನ್ನು ಕಂಗೆಡಿಸಿದರು. ಮೊದಲ ಗೇಮ್‌ನಲ್ಲೇ ಪೋಲ್‌ಮನ್ಸ್‌ ಅವರ ಸರ್ವ್ ಮುರಿದ ಅವರು ಎರಡನೇ ಗೇಮ್‌ನಲ್ಲಿ ಬಲಶಾಲಿ ಏಸ್ ಸಿಡಿಸಿ ಮುನ್ನಡೆದರು. ಡಬಲ್ ಫಾಲ್ಟ್ ಮೂಲಕ ಮೂರನೇ ಪಾಯಿಂಟ್‌ ಬಿಟ್ಟುಕೊಟ್ಟ ಪೋಲ್‌ಮನ್ಸ್ ನಂತರ ಸುಧಾರಿಸಿಕೊಂಡು ಎರಡು ಪಾಯಿಂಟ್‌ ಗಳಿಸಿದರು. ಆದರೆ ಗೇಮ್‌ ಗೆಲ್ಲಲು ಅವರಿಗೆ ಆಗಲಿಲ್ಲ.

ADVERTISEMENT

ಅತ್ಯಂತ ರೋಮಾಂಚನಕಾರಿಯಾಗಿದ್ದ ಎರಡನೇ ಸೆಟ್‌ನಲ್ಲಿ ಪೋಲ್‌ಮನ್ಸ್‌ ಪ್ರತ್ಯುತ್ತರ ನೀಡಿದರು. ಬಲಶಾಲಿ ನೇರ ಹೊಡೆತ ಮತ್ತು ನೆಟ್ ಬಳಿಯಲ್ಲಿ ಮನಮೋಹಕ ಡ್ರಾಪ್‌ಗಳ ಮೂಲಕ ರಂಜಿಸಿ 3–3 ಗೇಮ್‌ಗಳಿಂದ ಸಮಬಲ ಸಾಧಿಸಿದ್ದ ಗುಣೇಶ್ವರನ್ ನಂತರ ಆಸ್ಟ್ರೇಲಿಯಾ ಆಟಗಾರನ ಪ್ರತಿದಾಳಿಗೆ ಬೆಚ್ಚಿದರು. 6–5ರಿಂದ ಮುಂದಿದ್ದ ಸಂದರ್ಭದಲ್ಲಿ  ತಪ್ಪುಗಳನ್ನು ಎಸಗಿದರು. ಇದರ ಲಾಭ ಪಡೆದ ಪೋಲ್‌ಮನ್ಸ್‌ ಮಿಂಚಿನ ಆಟವಾಡಿ 6–6ರ ಸಮಬಲ ಸಾಧಿಸಿದರು. ಟೈಬ್ರೇಕರ್‌ನಲ್ಲಿ ನಿರಂತರ ಐದು ಗೇಮ್‌ಗಳನ್ನು ಗುಣೇಶ್ವರನ್‌ ಸುಲಭವಾಗಿ ತಮ್ಮದಾಗಿಸಿಕೊಂಡರು.

ಮೂರನೇ ದಿನದ ಫಲಿತಾಂಶಗಳು: ಸಿಂಗಲ್ಸ್‌ (ಎರಡನೇ ಸುತ್ತು): ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಅವರಿಗೆ ಆಸ್ಟ್ರೇಲಿಯಾದ ಮಾರ್ಕ್ ಪೋಲ್‌ಮನ್ಸ್‌ ವಿರುದ್ಧ 6–2, 6(1)–7, 6–1ರಿಂದ ಜಯ; ಸ್ಲೊವಾಕಿಯಾದ ಬ್ಲಾಜ್ ಕಾವ್ಸಿಕ್‌ ಅವರಿಗೆ ಸ್ಪೇನ್‌ನ ಮಾರಿಯೊ ವಿಲೇಲ ಮಾರ್ಟಿನೆಜ್ ವಿರುದ್ಧ 6–4, 3–6, 6–3ರಿಂದ ಜಯ; ಚೀನಾ ಥೈಪೆಯ ತ್ಸಾಂಗ್ ಹುವಾ ಯಾಂಗ್ ಅವರಿಗೆ ಕ್ರೊವೇಷಿಯಾದ ಬೋರ್ನಾ ಗೋಯೊ ಎದುರು 2–6, 6–4, 6–2ರಿಂದ ಜಯ; ಭಾರತದ ಸುಮಿತ್ ನಗಾಲ್ ಅವರಿಗೆ ಬ್ರಿಟನ್‌ನ ಬ್ರೈಡನ್ ಕ್ಲೀನ್ ಎದುರು 6–4, 4–6, 7–5ರಿಂದ ಜಯ; ಕ್ರೊವೇಷಿಯಾದ ಆಂಟೆ ಪಾವಿಕ್ ಅವರಿಗೆ ಸ್ವೀಡನ್‌ನ ಎಲಿಯಾಸ್ ಯೆಮರ್ ಎದುರು 6–3, 6(2)–7, 7–6(5)ರಿಂದ ಜಯ; ಬ್ರಿಟನ್‌ನ ಜೇ ಕ್ಲಾರ್ಕ್ ಅವರಿಗೆ ಭಾರತದ ರಾಮ್‌ಕುಮಾರ್ ರಾಮನಾಥನ್ ಎದುರು 6–7, 6–2, 6–4ರಿಂದ ಜಯ; ಫ್ರಾನ್ಸ್‌ನ ಅಂಟೊನಿ ಎಸ್ಕೊಫಿಯರ್‌ ಅವರಿಗೆ ಕಜಕಸ್ತಾನದ ಅಲೆಕ್ಸಾಂಡರ್ ನೆಡೊವ್ಯೆಸೊವ್ ಎದುರು 6–3, 2–6, 6–3ರಿಂದ ಗೆಲುವು; ಭಾರತದ ಯೂಕಿ ಭಾಂಬ್ರಿ ಅವರಿಗೆ ಸ್ಪೇನ್‌ನ ಪೆಡ್ರೊ ಮಾರ್ಟಿನೆಜ್‌ ಎದುರು 6–2, 7–6(0) ಸೆಟ್‌ಗಳಿಂದ ಜಯ.

ಡಬಲ್ಸ್‌ (ಎರಡನೇ ಸುತ್ತು): ಭಾರತದ ದಿವಿಜ್‌ ಶರಣ್–ರಷ್ಯಾದ ಮಿಖಾಯೆಲ್‌ ಎಲ್ಜಿನ್ ಜೋಡಿಗೆ ಭಾರತದ ಸುಮಿತ್ ನಗಾಲ್–ಸ್ವೀಡನ್‌ನ ಎಲಿಯಾಸ್‌ ಯೆಮರ್‌ ಜೋಡಿ ವಿರುದ್ಧ 6–3, 6–3ರಿಂದ ಜಯ; ಕ್ರೊವೇಷಿಯಾದ ಇವಾನ್ ಸಬ್ನೊವ್‌ –ಮಟೆಜ್ ಸಬ್ನೊವ್‌ ಜೋಡಿಗೆ ಬ್ರಿಟನ್‌ನ ಬ್ರೈಡನ್ ಕ್ಲೀನ್‌–ಆಸ್ಟ್ರೇಲಿಯಾದ ಮಾರ್ಕ್‌ ಪೋಲ್‌ಮನ್ಸ್‌ ವಿರುದ್ಧ 6–1, 2–6, 10–8ರಿಂದ ಗೆಲುವು; ಎನ್‌.ಶ್ರೀರಾಮ್ ಬಾಲಾಜಿ–ವಿಷ್ಣುವರ್ಧನ್ ಜೋಡಿಗೆ ಪ್ರಜ್ಞೇಶ್‌ ಗುಣೇಶ್ವರನ್‌–ಮಾರ್ಕ್ ಪೋಲ್‌ಮನ್ಸ್‌ ಎದುರು 6–3, 6–3ರಿಂದ ಜಯ; ಬೋಸ್ನಿಯಾದ ತೊಮಿಸ್ಲಾವ್ ಬ್ರಿಕ್‌–ಕ್ರೊವೇಷಿಯಾದ ಆಂಟೆ ಪಾವಿಕ್‌ ಜೋಡಿಗೆ ಕಜಕಸ್ತಾನದ ತಿಮುರ್‌ ಕಬಿಬುಲಿನ್–ಅಲೆಕ್ಸಾಂಡರ್ ನೆಡೊವ್ಯೆಸೊವ್ ಎದುರು 6–1, 4–6, 10–7ರಿಂದ ಜಯ.

ಕ್ವಾರ್ಟರ್‌ನಲ್ಲಿ ಕಾವ್ಸಿಕ್ ಎದುರಾಳಿ ನಗಾಲ್‌
ಟೂರ್ನಿಯ ಅಗ್ರ ಶ್ರೇಯಾಂಕಿತ ಆಟಗಾರ ಬ್ಲಾಜ್ ಕಾವ್ಸಿಕ್‌ಗೆ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಸುಮಿತ್ ನಗಾಲ್ ಎದುರಾಳಿ. ಈ ಪಂದ್ಯ ಗುರುವಾರ ಸಂಜೆ ಆರು ಗಂಟೆಯ ನಂತರ ನಡೆಯಲಿದೆ. ಮಧ್ಯಾಹ್ನ ನಾಲ್ಕು ಗಂಟೆಯ ನಂತರ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಯೂಕಿ ಭಾಂಬ್ರಿ ಮತ್ತು ಪ್ರಜ್ಞೇಶ್‌ ಗುಣೇಶ್ವರನ್‌ ಸೆಣಸಲಿದ್ದಾರೆ.

ಬುಧವಾರ ಮಧ್ಯಾಹ್ನ ಎರಡು ತಾಸು 53 ನಿಮಿಷ ನಡೆದ ಪಂದ್ಯದಲ್ಲಿ ಬ್ರಿಟನ್‌ನ ಬ್ರೈಡನ್ ಕ್ಲೀನ್ ಅವರನ್ನು ಮಣಿಸಿ ಸುಮಿತ್ ನಗಾಲ್ ಕ್ವಾರ್ಟರ್‌ ಫೈನಲ್ ತಲುಪಿದರೆ ಸಂಜೆ ನಡೆದ ಪಂದ್ಯದಲ್ಲಿ ಸ್ಪೇನ್‌ನ ಪೆಡ್ರೊ ಮಾರ್ಟಿನೆಜ್‌ ಎದುರು ಯೂಕಿ ಭಾಂಬ್ರಿ ಗೆದ್ದರು. ಆದರೆ ಐದನೇ ಶ್ರೇಯಾಂಕಿತ ರಾಮ್‌ಕುಮಾರ್ ರಾಮನಾಥನ್‌ ಬ್ರಿಟನ್‌ನ ಜೇ ಕ್ಲಾರ್ಕ್ ಎದುರು ಸೋತರು. ಅಗ್ರ ಶ್ರೇಯಾಂಕದ ಬ್ಲಾಜ್‌ ಕಾವ್ಸಿಕ್ ಪ್ರಯಾಸದ ಜಯ ಸಾಧಿಸಿ ಕ್ವಾರ್ಟರ್‌ ಫೈನಲ್‌ಗೆ ತಲುಪಿದರು.

ಎಲಿಯಾಸ್‌ ಯೆಮರ್‌ಗೆ ಸೋಲು
ಮೊದಲ ಸುತ್ತಿನಲ್ಲಿ ಸ್ಥಳೀಯ ಪ್ರತಿಭೆ ಸೂರಜ್ ಪ್ರಬೋಧ್ ಅವರನ್ನು ಮಣಿಸಿದ್ದ ನಾಲ್ಕನೇ ಶ್ರೇಯಾಂಕಿತ ಆಟಗಾರ ಸ್ವೀಡನ್‌ನ ಎಲಿಯಾಸ್ ಯೆಮರ್‌ ಎರಡನೇ ಸುತ್ತಿನಲ್ಲಿ ಸೋತು ಮರಳಿದರು. ಒಂದನೇ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಅವರನ್ನು ಕ್ರೊವೇಷಿಯಾದ ಆಂಟೆ ಪಾವಿಕ್‌ ದಿಟ್ಟ ಹೋರಾಟದ ಮೂಲಕ ಮಣಿಸಿದರು. ಮೊದಲ ಸೆಟ್ ಅನ್ನು ಸುಲಭವಾಗಿ ತಮ್ಮದಾಗಿಸಿಕೊಂಡ ಪಾವಿಕ್‌ಗೆ ಎರಡನೇ ಸೆಟ್‌ನಲ್ಲಿ ಯೆಮರ್ ನಿರಾಸೆ ಮೂಡಿಸಿದರು. ರೋಚಕ ಮೂರನೇ ಸೆಟ್‌ನ ಟೈ ಬ್ರೇಕರ್‌ನಲ್ಲಿ ಪಾವಿಕ್‌ ಗೆದ್ದು ಬೀಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.