ADVERTISEMENT

ಎಎಫ್‌ಸಿ ಕಪ್‌: ಗೆಲುವಿನ ವಿಶ್ವಾಸದಲ್ಲಿ ಬಾಗನ್‌

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2017, 19:30 IST
Last Updated 27 ಫೆಬ್ರುವರಿ 2017, 19:30 IST

ಕೋಲ್ಕತ್ತ (ಪಿಟಿಐ): ಬಲಿಷ್ಠ ಆಟಗಾರರ ಕಣಜ ಎನಿಸಿರುವ ಮೋಹನ್‌ ಬಾಗನ್‌ ತಂಡ ಎಎಫ್‌ಸಿ ಕಪ್‌ ದಕ್ಷಿಣ ವಲಯ ಫುಟ್‌ಬಾಲ್‌ ಟೂರ್ನಿಯಲ್ಲಿ ಮತ್ತೊಂದು ಹೋರಾಟಕ್ಕೆ ಸಜ್ಜಾಗಿದೆ.

ರವೀಂದ್ರ ಸರೋವರ ಕ್ರೀಡಾಂಗಣ ದಲ್ಲಿ ಮಂಗಳವಾರ ನಡೆಯುವ ಎರಡನೇ ಲೆಗ್‌ನ ಫ್ಲೇ ಆಫ್‌ ಪಂದ್ಯದಲ್ಲಿ ಆತಿಥೇಯ ಬಾಗನ್‌ ತಂಡ ಮಾಲ್ಡೀವ್ಸ್‌ನ ಕ್ಲಬ್‌ ವಲೆನ್ಸಿಯಾ ವಿರುದ್ಧ ಸೆಣಸಲಿದ್ದು ಜಯದ ಮಂತ್ರ ಜಪಿಸುತ್ತಿದೆ.

ಮಾಲೆಯಲ್ಲಿ ನಡೆದಿದ್ದ ಉಭಯ ತಂಡಗಳ ನಡುವಣ ಮೊದಲ ಲೆಗ್‌ನ ಪಂದ್ಯ 1–1 ಗೋಲುಗಳಿಂದ ಡ್ರಾ ಆಗಿತ್ತು.  ಆ ಪಂದ್ಯದಲ್ಲಿ ಬಾಗನ್‌ ತಂಡ ಪ್ರಮುಖ ಆರು ಮಂದಿ ಆಟಗಾರರ ಅನುಪಸ್ಥಿತಿ ಯಲ್ಲಿ ಕಣಕ್ಕಿಳಿದಿದ್ದರೂ ಕೆಚ್ಚೆದೆಯಿಂದ ಹೋರಾಡಿತ್ತು.

ADVERTISEMENT

ಗಾಯದ ಕಾರಣ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಹೈತಿಯ ಫಾರ್ವರ್ಡ್‌ ಆಟಗಾರ ಸೋನಿ ನೋರ್ಡೆ ಪೂರ್ಣ ವಾಗಿ ಗುಣಮುಖರಾಗಿದ್ದು ಮಂಗಳ ವಾರದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಆತಿಥೇಯರ ಮುಂಚೂಣಿ ವಿಭಾಗದ ಶಕ್ತಿ ಹೆಚ್ಚಿದೆ.

ಗೋಲ್‌ಕೀಪರ್‌ ದೇವಜಿತ್‌ ಮಜುಂ ದಾರ್‌ ಕೂಡ ಆಡುವ ಬಳಗದಲ್ಲಿ ಸ್ಥಾನ ಗಳಿಸಿದ್ದು ಎದುರಾಳಿಗಳ ಗೋಲು ಗಳಿಕೆಯ ಪ್ರಯತ್ನಗಳಿಗೆ ಅಡ್ಡಿಯಾಗುವ ಹುಮ್ಮಸ್ಸಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.