ADVERTISEMENT

ಏಕದಿನ ರ‍್ಯಾಂಕಿಂಗ್: ಅಗ್ರಸ್ಥಾನದಲ್ಲಿ ಭಾರತ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 10:02 IST
Last Updated 1 ಸೆಪ್ಟೆಂಬರ್ 2014, 10:02 IST
ಏಕದಿನ ರ‍್ಯಾಂಕಿಂಗ್: ಅಗ್ರಸ್ಥಾನದಲ್ಲಿ ಭಾರತ
ಏಕದಿನ ರ‍್ಯಾಂಕಿಂಗ್: ಅಗ್ರಸ್ಥಾನದಲ್ಲಿ ಭಾರತ   

ದುಬೈ (ಐಎಎನ್‌ಎಸ್‌/ಪಿಟಿಐ): ವಿಶ್ವ ಚಾಂಪಿಯನ್ ಭಾರತವು ಐಸಿಸಿ ಪ್ರಕಟಿಸಿರುವ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್  ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ.

ಹರಾರೆಯಲ್ಲಿ ಭಾನುವಾರ ನಡೆದ ತ್ರಿಕೋನ ಏಕದಿನ ಸರಣಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಜಿಂಬಾಬ್ವೆ ಮೂರು ವಿಕೆಟ್‌ಗಳ ಜಯಗಳಿಸಿದ ಬೆನ್ನಲ್ಲೇ ಭಾರತಕ್ಕೆ ಅಗ್ರಸ್ಥಾನ ಖಚಿತಗೊಂಡಿತ್ತು. 31 ವರ್ಷಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ  ಜಿಂಬಾಬ್ವೆಗೆ ದೊರೆತ ಎರಡನೇ ಗೆಲುವು ಇದಾಗಿತ್ತು.

ನಾಟಿಂಗ್ ಹ್ಯಾಮ್‌ನಲ್ಲಿ ಶನಿವಾರ ಇಂಗ್ಲೆಂಡ್‌ ವಿರುದ್ಧದ ಮೂರನೇ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದಾಗಲೇ ಭಾರತವು 114 ರೇಟಿಂಗ್‌ ಪಾಯಿಂಟ್‌ಗಳೊಂದಿಗೆ ಆಸ್ಟ್ರೇಲಿಯಾ ಜೊತೆಗೆ ಜಂಟಿಯಾಗಿ ಅಗ್ರಸ್ಥಾನವನ್ನು ಹಂಚಿಕೊಂಡಿತ್ತು.

ADVERTISEMENT

ಆದರೆ ಜಿಂಬಾಬ್ವೆ ವಿರುದ್ಧ ಸೋಲು ಕಂಡ ಆಸ್ಟ್ರೇಲಿಯಾ ಮೂರು ರೇಟಿಂಗ್ ಪಾಯಿಂಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಅಗ್ರಸ್ಥಾನದಿಂದ ಕುಸಿದು 111 ರೇಟಿಂಗ್‌ ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿತ ಕಂಡಿತು. ಅಗ್ರಸ್ಥಾನದ ಪಟ್ಟ ಭಾರತದ ಪಾಲಾಯಿತು.

ಆಸ್ಟ್ರೇಲಿಯಾ ಹಾಗೂ ಜಿಂಬಾಬ್ವೆ ವಿರುದ್ಧದ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ 113 ರೇಟಿಂಗ್‌ ಪಾಯಿಂಟ್‌  ಗಳೊಂದಿಗೆ ರ‍್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಶ್ರೀಲಂಕಾ ಕೂಡ 111 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದೆ. ಆದರೆ ದಶಮಾಂಶಗಳ ಲೆಕ್ಕಾಚಾರದಲ್ಲಿ ಸಿಂಹಳೀಯರಿಗೆ ನಾಲ್ಕನೇ ಸ್ಥಾನ ದೊರೆತಿದೆ.

ಇಂಗ್ಲೆಂಡ್ 106 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.