ADVERTISEMENT

ಏಳನೇ ಪ್ರಶಸ್ತಿಯ ನಿರೀಕ್ಷೆಯಲ್ಲಿ ಸೆರೆನಾ

ಇಂದಿನಿಂದ ವಿಂಬಲ್ಡನ್‌ ಟೆನಿಸ್‌ ಟೂರ್ನಿ; ದಿಗ್ಗಜರ ಕದನಕ್ಕೆ ವೇದಿಕೆ ಸಜ್ಜು; ಜೊಕೊವಿಚ್‌, ಫೆಡರರ್‌ ಪ್ರಮುಖ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2016, 20:14 IST
Last Updated 26 ಜೂನ್ 2016, 20:14 IST
-ಸೆರೆನಾ ವಿಲಿಯಮ್ಸ್‌
-ಸೆರೆನಾ ವಿಲಿಯಮ್ಸ್‌   

ಲಂಡನ್‌ (ಎಎಫ್‌ಪಿ/ರಾಯಿಟರ್ಸ್‌): ಈ ಋತುವಿನ ಮೊದಲ ಗ್ರ್ಯಾಂಡ್‌ ಸ್ಲಾಮ್‌ ಎನಿಸಿರುವ  ವಿಂಬಲ್ಡನ್‌ ಟೆನಿಸ್‌ ಟೂರ್ನಿಗೆ ಸೋಮವಾರ ಚಾಲನೆ ಲಭಿಸಲಿದೆ. ಮಹಿಳೆಯರ ವಿಭಾಗದಲ್ಲಿ ಹಾಲಿ ಚಾಂಪಿಯನ್‌ ಸೆರೆನಾ ವಿಲಿಯಮ್ಸ್‌ ಹಾಗೂ ಪುರುಷರ ವಿಭಾಗದಲ್ಲಿ ನೊವಾಕ್‌ ಜೊಕೊವಿಚ್‌, ರೋಜರ್‌ ಫೆಡರರ್‌ ಮತ್ತು ಬ್ರಿಟನ್‌ನ ಆ್ಯಂಡಿ ಮರ್ರೆ ಅವರು ಪ್ರಮುಖ ಆಕರ್ಷಣೆ ಎನಿಸಿದ್ದಾರೆ.

ಅಮೆರಿಕದ ಸೆರೆನಾ ಅವರು ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದು ಇಲ್ಲಿ ಏಳನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. 22ನೇ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ಗೆದ್ದು   ಸ್ಟೆಫಿ ಗ್ರಾಫ್‌ ಅವರ ದಾಖಲೆಯನ್ನು ಸರಿಗಟ್ಟುವ ವಿಶ್ವಾಸ ಹೊಂದಿರುವ ಸೆರೆನಾ ಅವರು ಸ್ವಿಟ್ಜರ್‌ಲೆಂಡ್‌ನ ಅಮರಾ ಸ್ಯಾಡಿಕೊವಿಚ್ ವಿರುದ್ಧ ಆಡುವ ಮೂಲಕ ಟೂರ್ನಿಯಲ್ಲಿ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಹೊಂದಿರುವ ಹಿರಿಯ ಆಟಗಾರ್ತಿ (34 ವರ್ಷ) ಎಂಬ ಶ್ರೇಯ ಹೊಂದಿರುವ ಸೆರೆನಾ  ಅವರು ಈ ಬಾರಿಯೂ ಮಿಂಚು ಹರಿಸಲು ಸಜ್ಜಾಗಿದ್ದಾರೆ. ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದ ರಷ್ಯಾದ ಮರಿಯಾ ಶರಪೋವಾ ಅವರು  ಟೂರ್ನಿಯಲ್ಲಿ ಆಡುತ್ತಿಲ್ಲ. ಹೀಗಾಗಿ ಸೆರೆನಾ ಮತ್ತು ಇಲ್ಲಿ ಎರಡನೇ ಶ್ರೇಯಾಂಕ ಹೊಂದಿರುವ ಗಾರ್ಬೈನ್‌ ಮುಗುರುಜಾ ಅವರ ನಡುವೆ ಪ್ರಶಸ್ತಿಗಾಗಿ ನೇರ ಪೈಪೋಟಿ ಏರ್ಪಡುವ ಸಂಭವ ಇದೆ.

ವಿಂಬಲ್ಡನ್‌ನಲ್ಲಿ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿರುವ ಅಗ್ನಿಸ್ಕಾ ರಾಡ್ವಾಂಸ್ಕಾ, ಏಂಜಲಿಕ್‌ ಕೆರ್ಬರ್‌ ಮತ್ತು ಎರಡು ಬಾರಿ ವಿಂಬಲ್ಡನ್‌ ಗರಿ ಮುಡಿಗೇರಿಸಿಕೊಂಡಿರುವ ಪೆಟ್ರಾ ಕ್ವಿಟೋವಾ ಅವರೂ ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ. ಏಂಜಲಿಕ್‌ ಕೆರ್ಬರ್‌ ಅವರು ಮೊದಲ ಸುತ್ತಿನಲ್ಲಿ ಬ್ರಿಟನ್‌ನ ಆಟಗಾರ್ತಿ, ವೈಲ್ಡ್‌ ಕಾರ್ಡ್‌ ಅರ್ಹತೆ ಗಳಿಸಿರುವ ಲೌರಾ ರಾಬ್ಸನ್‌ ವಿರುದ್ಧ ಸೆಣಸಲಿದ್ದಾರೆ.

ಮುಗುರುಜಾ ಅವರು ಆರಂಭಿಕ ಪಂದ್ಯದಲ್ಲಿ ಇಟಲಿಯ ಕ್ಯಾಮಿಲಾ ಜಿಯೊರ್ಜಿ ವಿರುದ್ಧ ಪೈಪೋಟಿ ನಡೆಸಲಿದ್ದು ಗೆಲುವಿನ ವಿಶ್ವಾಸ ಹೊಂದಿದ್ದಾರೆ. ಹೋದ ವಾರ ನಡೆದಿದ್ದ ಮಲ್ಲೊರ್ಕಾ ಓಪನ್‌ ಟೂರ್ನಿಯಲ್ಲಿ ವೆನಿಜುವೆಲಾದ ಮುಗುರುಜಾ ಅವರು ಆರಂಭಿಕ ಸುತ್ತಿನಲ್ಲಿಯೇ ಸೋತು ಹೊರಬಿದ್ದಿದ್ದರು. ಆದರೆ  ಆ ಟೂರ್ನಿಯ ಬಳಿಕ ಕಠಿಣ ಅಭ್ಯಾಸ ನಡೆಸಿರುವ ಅವರು ಇಲ್ಲಿ ಪ್ರಶಸ್ತಿ ಎತ್ತಿಹಿಡಿಯುವ ತವಕದಲ್ಲಿದ್ದಾರೆ.

ಸೆರೆನಾ ಅವರ ಸಹೋದರಿ ವೀನಸ್‌ ವಿಲಿಯಮ್ಸ್‌ ಅವರೂ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.  ಆಲ್‌ ಇಂಗ್ಲೆಂಡ್‌ ಕ್ಲಬ್‌ನ ಒಂದನೇ ಕೋರ್ಟ್‌ನಲ್ಲಿ ಸೋಮವಾರ ನಡೆಯುವ ತಮ್ಮ ಆರಂಭಿಕ ಪಂದ್ಯದಲ್ಲಿ 8ನೇ ಶ್ರೇಯಾಂಕಿತೆ  ವೀನಸ್‌ ಅವರು ಕ್ರೊವೇಷ್ಯಾದ ಡೊನ್ನಾ ವೆಕಿಕ್‌ ವಿರುದ್ಧ ಹಣಾಹಣಿ ನಡೆಸಲಿದ್ದಾರೆ.

ರುಮೇನಿಯಾದ ಸಿಮೊನಾ ಹಲೆಪ್‌ ಅವರು ಟೂರ್ನಿಯಲ್ಲಿ ಐದನೇ ಶ್ರೇಯಾಂಕ ಹೊಂದಿದ್ದು ಸ್ಲೊವೇಕಿಯಾದ ಅನಾ ಕ್ಯಾರೊಲಿನಾ ಶೆಮಿಡ್ಲೊವಾ ಅವರನ್ನು ಮಣಿಸಿ  ಗೆಲುವಿನ ಮುನ್ನುಡಿ ಬರೆಯಲು ಸಿದ್ಧರಾಗಿದ್ದಾರೆ. ಆಸ್ಟ್ರೇಲಿಯಾದ ಸಮಂತಾ ಸೊಸುರ್‌, ರಷ್ಯಾದ ಏಕ್ತರಿನಾ ಅಲೆಕ್ಸಾಂಡ್ರೋವಾ, ಸರ್ಬಿಯಾದ ಅನಾ ಇವಾನೊವಿಚ್‌, ಚೀನಾದ ಜಾಂಗ್‌ ಶುಯಿ, ಸ್ಪೇನ್‌ನ ಕಾರ್ಲಾ ಸ್ವಾರೆಜ್‌ ನವಾರೊ, ಜರ್ಮನಿಯ ಸಬಿನಾ ಲಿಸಿಕಿ ಅವರೂ ಸೋಮವಾರ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ಮಿಂಚಲು ಕಾದಿರುವ ನೊವಾಕ್‌: ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ನೊವಾಕ್‌ ಜೊಕೊವಿಚ್‌  ಅವರು ಇಲ್ಲಿ ನಾಲ್ಕನೇ  ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿದ್ದಾರೆ. ಸೆಂಟರ್‌ ಕೋರ್ಟ್‌ನಲ್ಲಿ ಸೋಮವಾರ ನಡೆಯುವ ತಮ್ಮ ಆರಂಭಿಕ ಪಂದ್ಯದಲ್ಲಿ ಸರ್ಬಿಯಾದ ನೊವಾಕ್‌ ಅವರು ಬ್ರಿಟನ್‌ನ ಜೇಮ್ಸ್  ವಾರ್ಡ್‌ ಅವರ ಸವಾಲು ಎದುರಿಸಲಿದ್ದು ಸುಲಭ ಗೆಲುವಿನ ಹಂಬಲದಲ್ಲಿದ್ದಾರೆ.

29 ವರ್ಷದ ಜೊಕೊವಿಚ್‌ ಇಲ್ಲಿ ಅಗ್ರಶ್ರೇಯಾಂಕ ಹೊಂದಿದ್ದು ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ಎಂಬ ಹಣೆಪಟ್ಟಿ ಹೊಂದಿದ್ದಾರೆ.  ಅವರು 2011, 2014, 2015ರ ಟೂರ್ನಿಗಳಲ್ಲಿ ಟ್ರೋಫಿ ಎತ್ತಿಹಿಡಿದಿದ್ದರು. ಒಟ್ಟಾರೆ 12 ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ ನೊವಾಕ್‌ ಈ ಪಟ್ಟಿಗೆ ಮತ್ತೊಂದು ಟ್ರೋಫಿ ಸೇರ್ಪಡೆ ಮಾಡಲು ಸಜ್ಜಾಗಿದ್ದಾರೆ.

2009ರ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ನಾಲ್ಕನೇ ಸುತ್ತಿನಲ್ಲೇ ಹೊರಬಿದ್ದಿದ್ದ ಜೊಕೊವಿಚ್‌ ಅವರು ಆ ಬಳಿಕ ನಡೆದ ಎಲ್ಲಾ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಗಳಲ್ಲೂ ಕನಿಷ್ಠ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ದಾಖಲೆ ಹೊಂದಿದ್ದಾರೆ. ಸತತವಾಗಿ ಆಸ್ಟ್ರೇಲಿಯಾ ಮತ್ತು ಫ್ರೆಂಚ್‌ ಓಪನ್‌ ಟೂರ್ನಿಗಳಲ್ಲಿ ಪ್ರಶಸ್ತಿ ಗೆದದ್ದು ಈ ಸಾಧನೆ ಮಾಡಿರುವ ಮೊದಲ ಆಟಗಾರ ಎಂಬ ಕೀರ್ತಿ ತಮ್ಮದಾಗಿಸಿಕೊಂಡಿದ್ದರು.

ವಿಶ್ವಾಸದಲ್ಲಿ ಮರ್ರೆ: ಬ್ರಿಟನ್‌ನ ಆ್ಯಂಡಿ ಮರ್ರೆ ಅವರೂ ಈ ಟೂರ್ನಿಯಲ್ಲಿ ಪ್ರಶಸ್ತಿಗೆ ಮುತ್ತಿಕ್ಕುವ ಕನಸು ಕಾಣುತ್ತಿದ್ದಾರೆ. ವಿಶ್ವ ಕ್ರಮಾಂಕಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿರುವ ಮರ್ರೆ ಇಲ್ಲಿ ದ್ವಿತೀಯ ಶ್ರೇಯಾಂಕ ತಮ್ಮದಾಗಿಸಿಕೊಂಡಿದ್ದಾರೆ. 2013ರಲ್ಲಿ ವಿಂಬಲ್ಡನ್‌ನಲ್ಲಿ ಚೊಚ್ಚಲ ಟ್ರೋಫಿ ಗೆದ್ದಿದ್ದ ಮರ್ರೆ ಅವರು ಪ್ರಶಸ್ತಿಯ ಹಾದಿಯಲ್ಲಿ ಜೊಕೊವಿಚ್‌ಗೆ ತೀವ್ರ ಪೈಪೋಟಿ ಒಡ್ಡುವ ಪ್ರಮುಖ ಆಟಗಾರ ಎನಿಸಿದ್ದಾರೆ.

ಹೋದ ಬಾರಿ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದ ಮರ್ರೆ ಅವರು ಜೊಕೊವಿಚ್‌ ವಿರುದ್ಧ ಸೋಲು ಕಂಡು ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. 2012ರಲ್ಲಿ ಅಮೆರಿಕ ಓಪನ್‌ನಲ್ಲಿ ಪ್ರಶಸ್ತಿಯ ಸಾಧನೆ ಮಾಡಿದ್ದ ಬ್ರಿಟನ್‌ನ ಆಟಗಾರ ವೃತ್ತಿಜೀವನದ ಮೂರನೇ ಗ್ರ್ಯಾಂಡ್‌ ಸ್ಲಾಮ್‌ ಕಿರೀಟ ಮುಡಿಗೇರಿಸಿಕೊಳ್ಳಲು ಕಾದಿದ್ದಾರೆ.

ಇತ್ತೀಚೆಗೆ ಇವಾನ್‌ ಲೆಂಡ್ಲ್‌ ಅವರನ್ನು ನೂತನ ಕೂಚ್‌ ಆಗಿ ನೇಮಿಸಿಕೊಂಡಿದ್ದ ಮರ್ರೆ, ಹಿಂದಿನ ಕೆಲ ದಿನಗಳಿಂದ ಕಠಿಣ ತಾಲೀಮು ನಡೆಸಿದ್ದಾರೆ. ಮರ್ರೆ ಅವರು ತಮ್ಮ ಮೊದಲ ಪಂದ್ಯದಲ್ಲಿ ವಿಶ್ವ ರ‍್ಯಾಂಕ್‌ನಲ್ಲಿ 234ನೇ ಸ್ಥಾನದಲ್ಲಿರುವ ತಮ್ಮದೇ ದೇಶದ ಲಿಯಾಮ್‌ ಬ್ರಾಡಿ ವಿರುದ್ಧ ಆಡುವರು.

ಫೆಡರರ್‌ ಆಕರ್ಷಣೆ: 17 ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿಗಳ ಒಡೆಯ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಅವರು ಟೂರ್ನಿಯಲ್ಲಿ ಅಭಿಮಾನಿಗಳ ಆಕರ್ಷಣೆ ಎನಿಸಿದ್ದಾರೆ. ಫೆಡರರ್‌ ಅವರು ವಿಂಬಲ್ಡನ್‌ನಲ್ಲಿ  ಏಳು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2003ರಲ್ಲಿ ಇಲ್ಲಿ ಚೊಚ್ಚಲ ಟ್ರೋಫಿ ಎತ್ತಿಹಿಡಿದಿದ್ದ ಅವರು ಆ ಬಳಿಕದ ಟೂರ್ನಿಗಳಲ್ಲೂ ಪಾರಮ್ಯ ಮೆರೆದಿದ್ದರು.

34 ವರ್ಷದ ಆಟಗಾರ ಹಿಂದಿನ ಎರಡು ಟೂರ್ನಿಗಳಲ್ಲಿ ಫೈನಲ್‌ ಪ್ರವೇಶಿಸಿದ್ದರಾದರೂ ಜೊಕೊವಿಚ್‌ ಎದುರು ಮುಗ್ಗರಿಸಿ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತರಾಗಿದ್ದರು. ಗಾಯದ ಕಾರಣ ಫ್ರೆಂಚ್‌ ಓಪನ್‌ನಿಂದ ಹಿಂದೆ ಸರಿದಿದ್ದ ಫೆಡರರ್‌ ಅವರು ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ  ಸ್ಟಟ್‌ಗರ್ಟ್‌ ಮತ್ತು ಹಾಲ್‌ ಓಪನ್‌ ಟೂರ್ನಿಗಳಲ್ಲಿ ಫೆಡರರ್‌ ಸೆಮಿಫೈನಲ್‌ ಪ್ರವೇಶಿಸಿದ್ದರು.

ಒಂದೊಮ್ಮೆ ರೋಜರ್‌ ಅವರು ಈ ಬಾರಿ ಪ್ರಶಸ್ತಿ ಗೆದ್ದರೆ, ಈ ಸಾಧನೆ ಮಾಡಿದ ಹಿರಿಯ ಆಟಗಾರ ಎಂಬ ಶ್ರೇಯ ತಮ್ಮದಾಗಿಸಿಕೊಳ್ಳಲಿದ್ದಾರೆ. ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಗಾಯದ ಕಾರಣ  ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಜಪಾನ್‌ನ ಕಿ ನಿಶಿಕೋರಿ, ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾಸ್‌ ವಾವ್ರಿಂಕ, ಸ್ಪೇನ್‌ ಡೇವಿಡ್‌ ಫೆರರ್‌, ಕ್ರೊವೇಷ್ಯಾದ ಮರಿನ್‌ ಸಿಲಿಕ್‌ ಅವರೂ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.

ಭಾರತದ ಸವಾಲು
ಸಾನಿಯಾ ಮಿರ್ಜಾ, ಲಿಯಾಂಡರ್‌ ಪೇಸ್‌ ಮತ್ತು ರೋಹನ್‌ ಬೋಪಣ್ಣ ಅವರು ಟೂರ್ನಿಯಲ್ಲಿ ಭಾರತದ ಸವಾಲು ಎತ್ತಿ ಹಿಡಿಯಲಿದ್ದಾರೆ. ಸಾನಿಯಾ ಅವರು ಮಹಿಳೆಯರ ಡಬಲ್ಸ್‌ನಲ್ಲಿ ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಜತೆಗೂಡಿ ಆಡಲಿದ್ದಾರೆ. ಸಾನಿಯಾ ಮತ್ತು ಮಾರ್ಟಿನಾ ಜೋಡಿ ಟೂರ್ನಿಯ ಮೊದಲ ಸುತ್ತಿನಲ್ಲಿ ಜರ್ಮನಿಯ ಅನಾ ಲೆನಾ ಫ್ರೀಡ್‌ಸ್ಯಾಮ್‌ ಮತ್ತು ಲೌರಾ ಸಿಗ್ಮಂಡ್‌ ವಿರುದ್ಧ ಸೆಣಸಲಿದೆ.

ಪುರುಷರ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಮತ್ತು ರುಮೇನಿಯಾದ ಫ್ಲೋರಿನ್ ಮಾರ್ಗಿಯ ಅವರು ಒಂದಾಗಿ ಆಡಲಿದ್ದಾರೆ. ಆರನೇ ಶ್ರೇಯಾಂಕ ಹೊಂದಿರುವ ಬೋಪಣ್ಣ– ಮಾರ್ಗಿಯಾ ಅವರಿಗೆ ಆರಂಭಿಕ ಸುತ್ತಿನಲ್ಲಿ ಕ್ರೊವೇಷ್ಯಾದ ಮರಿನ್‌ ಡ್ರಾಗಾಂಜನ್‌ ಮತ್ತು ನಿಕೊಲಾ ಮೆಕ್‌ಟಿಕ್‌ ಅವರ ಸವಾಲು ಎದುರಾಗಲಿದೆ. ಲಿಯಾಂಡರ್‌ ಪೇಸ್‌ ಮತ್ತು ಪೋಲೆಂಡ್‌ನ ಮಾರ್ಸಿನ್‌ ಮಟ್ಕೊವ್‌ಸ್ಕಿ ಅವರು ಚೀನಾ ತೈಪೆಯ ಯೆನ್‌ ಹ್ಸುನ್‌ ಲು ಮತ್ತು ಸರ್ಬಿಯಾದ ಜಾಂಕೊ ತಿಪ್ಸರೆವಿಕ್‌ ವಿರುದ್ಧ ಪೈಪೋಟಿ ನಡೆಸುವರು.

** *** **
ಜೀವನದಲ್ಲಿ ಎಲ್ಲವನ್ನೂ ಸಾಧಿಸಬಲ್ಲೆ ಎಂಬ ಛಲ ನನ್ನಲ್ಲಿದೆ. ಹಾಲಿ ಚಾಂಪಿ ಯನ್‌ ಪಟ್ಟದೊಂದಿಗೆ ಅಭಿಯಾನ ಆರಂಭಿಸುತ್ತಿರುವುದರಿಂದ ಅಲ್ಪ ಒತ್ತಡ ಇರುವುದು ನಿಜ. ಪ್ರತಿ ಪಂದ್ಯದಲ್ಲೂ ಅದನ್ನು ಮೀರಿ ನಿಂತು ಆಡುತ್ತೇನೆ.
-ನೊವಾಕ್‌ ಜೊಕೊವಿಚ್‌,
ಸರ್ಬಿಯಾದ ಆಟಗಾರ

** *** **
ಹಿಂದಿನ ಟೂರ್ನಿಗಳಲ್ಲಿ ನನ್ನಿಂದ ಶ್ರೇಷ್ಠ ಆಟ ಮೂಡಿಬಂದಿಲ್ಲ. ಇದರಿಂದ ಖಂಡಿತ ವಿಶ್ವಾಸ ಕಳೆದುಕೊಂಡಿಲ್ಲ. ಎಲ್ಲಾ ಪಂದ್ಯಗಳಲ್ಲೂ ದಿಟ್ಟ ಆಟ ಆಡಿದರೆ ಗೆಲುವು ಕಷ್ಟವಾಗಲಾರದು.
-ಸೆರೆನಾ ವಿಲಿಯಮ್ಸ್‌,
ಅಮೆರಿಕದ ಆಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT