ADVERTISEMENT

ಏಷ್ಯನ್‌ ಅಥ್ಲೆಟಿಕ್ಸ್‌: ಇಂದರಜಿತ್‌ ಸ್ವರ್ಣ ಸಾಧನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 19:30 IST
Last Updated 3 ಜೂನ್ 2015, 19:30 IST

ವುಹಾನ್‌, ಚೀನಾ (ರಾಯಿಟರ್ಸ್‌/ ಪಿಟಿಐ): ಅಪೂರ್ವ ಸಾಮರ್ಥ್ಯ ನೀಡಿದ  ಭಾರತದ ಇಂದರಜಿತ್‌ ಸಿಂಗ್‌ ಇಲ್ಲಿ ಆರಂಭವಾದ 21ನೇ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಶಾಟ್‌ಪಟ್‌ ಸ್ಪರ್ಧೆಯಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಆದರೆ ಇತರೆ ಸ್ಪರ್ಧೆಗಳಲ್ಲಿ ಭಾರತಕ್ಕೆ ನಿರಾಸೆ ಎದುರಾಗಿದೆ.

ಬುಧವಾರ ನಡೆದ ಸ್ಪರ್ಧೆಯಲ್ಲಿ ಹರಿಯಾಣದ ಇಂದರಜಿತ್‌ ಶಾಟ್‌ಪಟ್‌ ಅನ್ನು 20.41 ಮೀಟರ್ಸ್‌ ದೂರ ಎಸೆದು ಸ್ವರ್ಣದೊಂದಿಗೆ ಭಾರತದ ಪದಕದ ಖಾತೆ ತೆರೆದರು. ಜತೆಗೆ   ಚೀನಾ ತೈಪೆಯ ಚಾಂಗ್‌ ಮಿಂಗ್‌ ಹುವಾಂಗ್್್ ಹೆಸರಿನಲ್ಲಿದ್ದ ದಾಖಲೆ ಯನ್ನು ಅಳಿಸಿ ಹಾಕಿದರು. ಹುವಾಂಗ್‌ 2011ರ ಚಾಂಪಿಯನ್‌ ಷಿಪ್‌ನಲ್ಲಿ 20.14 ಮೀಟರ್ಸ್‌ ದೂರ ಎಸೆದಿದ್ದು ಇದುವರೆಗಿನ ಶ್ರೇಷ್ಠ ಸಾಧನೆ ಎನಿಸಿತ್ತು.

ಹೋದ ತಿಂಗಳು ಮಂಗಳೂರಿನಲ್ಲಿ ನಡೆದಿದ್ದ ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌ ನಲ್ಲಿ 20.65 ಮೀಟರ್ಸ್‌ ದೂರ ಎಸೆದು ಚಿನ್ನ ಗೆದ್ದಿದ್ದ ಇಂದರಜಿತ್‌ ಈ ಚಾಂಪಿಯನ್‌ಷಿಪ್‌ನಲ್ಲೂ ತಮ್ಮ ಪ್ರಭುತ್ವ ಮುಂದುವರಿಸಿದರು.  ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚು ಗೆದ್ದ ಹೆಗ್ಗಳಿಕೆ ಹೊಂದಿರುವ ಅವರು ಮೊದಲ ಸುತ್ತಿನಲ್ಲಿ ‘ಫೌಲ್‌’ ಎಸಗಿದರು. ಆದರೆ ಎರಡನೇ ಸುತ್ತಿನಲ್ಲಿ  ಶಾಟ್‌ಪಟ್‌ ಅನ್ನು 20 ಮೀಟರ್ಸ್‌ ಗೆರೆ ದಾಟಿಸಿ ಭರವಸೆ ಮೂಡಿಸಿದರು.

ಬಳಿಕ ಹಂತ ಹಂತವಾಗಿ ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ಸಾಗಿದ ಅವರು ಮೂರು ಮತ್ತು ನಾಲ್ಕನೇ ಸುತ್ತುಗಳಲ್ಲಿ ಕ್ರಮವಾಗಿ 20.33 ಮತ್ತು 20.41ಮೀಟರ್ಸ್‌ ದೂರ ಎಸೆಯುವಲ್ಲಿ ಯಶಸ್ವಿಯಾದರು. ಐದನೇ ಸುತ್ತಿನಲ್ಲಿ 20.19 ಮೀಟರ್ಸ್‌ ದೂರ ಎಸೆದ ಅವರು ಕೊನೆಯ ಸುತ್ತಿನಲ್ಲಿ ‘ಫೌಲ್‌’ ಮಾಡುವುದರೊಂದಿಗೆ ಸ್ಪರ್ಧೆ ಕೊನೆಗೊಳಿಸಿದರು. ಚೀನಾ ತೈಪೆಯ ಚಾಂಗ್‌ 19.56 ಮೀಟರ್ಸ್‌ ಎಸೆದು ಬೆಳ್ಳಿ ತಮ್ಮದಾಗಿಸಿಕೊಂಡರು. ಈ ವಿಭಾಗದ ಕಂಚು ಚೀನಾದ  ತಿಯಾನ್‌ ಜಿಜೊಂಗ್‌ (19.25 ಮೀ.) ಅವರ ಪಾಲಾಯಿತು.

ನಿರಾಸೆ ಮೂಡಿಸಿದ ಸ್ಪರ್ಧಿಗಳು: ಮಹಿಳೆಯರ ಲಾಂಗ್‌ಜಂಪ್‌, 100ಮೀ. ಹರ್ಡಲ್ಸ್‌ ಮತ್ತು ಪುರುಷರ 110ಮೀ. ಹರ್ಡಲ್ಸ್‌ ಸ್ಪರ್ಧೆಗಳಲ್ಲಿ ಭಾರತಕ್ಕೆ ನಿರಾಸೆ ಎದುರಾಯಿತು.

ಲಾಂಗ್‌ಜಂಪ್‌ನಲ್ಲಿ ಮಾಜಿ ಚಾಂಪಿಯನ್‌ ಮಯೂಕಾ ಜಾನಿ 6.24ಮೀಟರ್ಸ್‌ ದೂರ ಜಿಗಿದು ಆರನೇ ಸ್ಥಾನ ಗಳಿಸಿದರೆ, ಹರ್ಡಲ್ಸ್‌ನಲ್ಲಿ ಗಾಯತ್ರಿ ಗೋವಿಂದರಾಜನ್‌ ಏಳನೇ ಸ್ಥಾನ ಪಡೆದರು. ಅವರು ನಿಗದಿತ ದೂರ ಕ್ರಮಿಸಲು 13.69 ಸೆಕೆಂಡುಗಳನ್ನು ತೆಗೆದುಕೊಂಡರು. ಪುರುಷರ ವಿಭಾಗದ 110ಮೀ. ಹರ್ಡಲ್ಸ್‌ನ ಹೀಟ್‌ನಲ್ಲಿ ಸಿದ್ಧಾಂತ್‌ ತಿಂಗಳಾಯ 14.10 ಸೆಕೆಂಡು ಗಳಲ್ಲಿ ಅಂತಿಮ ಗೆರೆ ಮುಟ್ಟಿದರು.

ಕತಾರ್‌ನ ಫೆಮಿ ಒಗುನೊಡೆ 100ಮೀ. ಓಟದಲ್ಲಿ 9.97 ಸೆಕೆಂಡು ಗಳಲ್ಲಿ ಗುರಿ ಮುಟ್ಟಿ ಚಾಂಪಿಯನ್‌ಷಿಪ್‌ ದಾಖಲೆಯೊಂದಿಗೆ ಫೈನಲ್‌ಗೆ ಅರ್ಹತೆ ಗಳಿಸಿದರು. ಅವರು ಸ್ಯಾಮುಯೆಲ್‌ ಫ್ರಾನ್ಸಿಸ್‌ (9.99) ಹೆಸರಿನಲ್ಲಿದ್ದ ದಾಖಲೆಯನ್ನು ಪತನಗೊಳಿಸಿದರು.

ಮಹಿಳೆಯರ 100 ಮೀ. ಓಟದಲ್ಲಿ ಭಾರತದ ಶ್ರಾಬಾನಿ ನಂದ ಹೀಟ್ಸ್‌ನಲ್ಲಿ 11.9 ಸೆಕೆಂಡುಗಳಲ್ಲಿ ಗುರಿ ಸೇರಿ ಫೈನಲ್‌ ಪ್ರವೇಶಿಸಿದರು.
ಹೆಪ್ಟಥ್ಲಾನ್‌ ಸ್ಪರ್ಧೆಯ ನಾಲ್ಕು ಸುತ್ತುಗಳ ಬಳಿಕ ಭಾರತದ ಲಿಕ್ಸಿ ಜೋಸೆಫ್‌ 3150 ಪಾಯಿಂಟ್ಸ್‌ ಗಳಿಸಿ ಆರನೇ ಸ್ಥಾನದಲ್ಲಿದ್ದರೆ, ಪೂರ್ಣಿಮ ಹೆಂಬ್ರಾಮ್‌ (3122) ಏಳನೇ ಸ್ಥಾನ ಹೊಂದಿದ್ದಾರೆ. ಚಾಂಪಿಯನ್‌ಷಿಪ್‌ನಲ್ಲಿ ಚೀನಾ ತನ್ನ ಪ್ರಾಬಲ್ಯವನ್ನು ಮುಂದು ವರಿಸಿದೆ. ಈ ದೇಶ ಮೊದಲ ದಿನ ಎಂಟು ಚಿನ್ನ ತನ್ನದಾಗಿಸಿಕೊಂಡಿದೆ.

ಆಳ್ವಾ ಅಭಿನಂದನೆ (ಮೂಡುಬಿದಿರೆ ವರದಿ):  ‘ನಮ್ಮ ಸಂಸ್ಥೆಯ ಕ್ರೀಡಾ ಪ್ರತಿಷ್ಠಾನದ ಪ್ರಾಯೋಜಕತ್ವ ಪಡೆದಿರುವ ಇಂದರಜಿತ್‌ ಸಾಧನೆ ಅನನ್ಯ. ಅವರಿಗೆ ನಮ್ಮ ಸಂಸ್ಥೆಯ ಪರವಾಗಿ ಅಭಿನಂದನೆಗಳು’ಎಂದು ಆಳ್ವಾಸ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮೋಹನ್‌ ಆಳ್ವಾ ಅವರು ತಿಳಿಸಿದ್ದಾರೆ.
 

ಫೈನಲ್‌ಗೆ ರಾಜ್ಯದ ಪೂವಮ್ಮ: ಮಹಿಳೆಯರ 400ಮೀಟರ್ಸ್‌ ಓಟದಲ್ಲಿ  ಕರ್ನಾಟಕದ ಎಂ.ಆರ್‌. ಪೂವಮ್ಮ ಫೈನಲ್‌ಗೆ ಅರ್ಹತೆ ಗಳಿಸಿದ್ದಾರೆ.

ADVERTISEMENT

ರಾಜ್ಯದ ಓಟಗಾರ್ತಿ 52.94 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಫೈನಲ್‌ ಪ್ರವೇಶಿಸಿದರು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವರ ಪೈಕಿ ಪೂವಮ್ಮ ಅತ್ಯಂತ ವೇಗವಾಗಿ ಗುರಿ ಸೇರಿ ಗಮನಸೆಳೆದರು. ಪುರುಷರ ವಿಭಾಗದಲ್ಲಿ ಅರೋಕಿಯಾ ರಾಜೀವ್‌ ಕೂಡಾ ಫೈನಲ್‌ಗೆ ಲಗ್ಗೆ ಇಟ್ಟರು. ಅವರು 46.55 ಸೆಕೆಂಡುಗಳಲ್ಲಿ ಜಯದ ರೇಖೆ ದಾಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.