ADVERTISEMENT

ಏಷ್ಯಾಕಪ್‌ ಟೂರ್ನಿಗೆ ಭಾರತ ಲಗ್ಗೆ

‌ಸುನಿಲ್ ಚೆಟ್ರಿ ಬಳಗದ ಅಜೇಯ ಓಟ

ವಿಕ್ರಂ ಕಾಂತಿಕೆರೆ
Published 11 ಅಕ್ಟೋಬರ್ 2017, 20:34 IST
Last Updated 11 ಅಕ್ಟೋಬರ್ 2017, 20:34 IST
ಪಂದ್ಯ ಗೆದ್ದ ಬಳಿಕ ಆಂಗಳದಿಂದ ಹೊರಬರುತ್ತಿರುವ ಭಾರತ ತಂಡದ ಆಟಗಾರರು.
ಪಂದ್ಯ ಗೆದ್ದ ಬಳಿಕ ಆಂಗಳದಿಂದ ಹೊರಬರುತ್ತಿರುವ ಭಾರತ ತಂಡದ ಆಟಗಾರರು.   

ಬೆಂಗಳೂರು: ಭಾರತದ ಆಸೆ ಈಡೇರಿತು. ಮಕಾವ್‌ ವಿರುದ್ಧ 4–1ರಿಂದ ಜಯ ಸಾಧಿಸಿ 2019ರ ಏಷ್ಯಾಕಪ್‌ ಫುಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿತು. ಈ ಅಪರೂಪದ ಗಳಿಗೆಗೆ ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣ ಸಾಕ್ಷಿಯಾಯಿತು.ಪಂದ್ಯದಲ್ಲಿ ಪ್ರಯೋಗಗಳಿಗೆ ಕೋಚ್ ಸ್ಟೀಫನ್‌ ಕಾನ್‌ಸ್ಟಂಟೈನ್‌ ಮುಂದಾಗದೆ ಬಲಿಷ್ಠ ತಂಡವನ್ನೇ ಕಣಕ್ಕೆ ಇಳಿಸಿದರು.

ಚೆಟ್ರಿ ಬಳಗದವರು ಆರಂಭದಲ್ಲಿ ಪಂದ್ಯದ ಮೇಲೆ ಆಧಿಪತ್ಯ ಸ್ಥಾಪಿಸಿದರು. ಎದುರಾಳಿ ತಂಡದ ಗೋಲುಪೆಟ್ಟಿಗೆ ಬಳಿ ನಿರಂತರ ಆಕ್ರಮಣ ನಡೆಸಿದರು. ಆದರೆ 15ನೇ ನಿಮಿಷದಲ್ಲಿ ಮಕಾವ್‌ ತಂಡ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡಿತು. ಗೋಲು ಗಳಿಸಲು ಭಾರತದ ಡಿಫೆಂಡರ್‌ಗಳು ಅವಕಾಶ ನೀಡಲಿಲ್ಲ.

19ನೇ ನಿಮಿಷದಲ್ಲಿ ಭಾರತಕ್ಕೆ ಫ್ರೀ ಕಿಕ್‌ ಅವಕಾಶ ಲಭಿಸಿದಾಗ ಪ್ರೇಕ್ಷಕರು ಸಂಭ್ರಮಪಟ್ಟರು. ಚೆಟ್ರಿ ಚೆಂಡು ಒದೆಯಲು ಸಜ್ಜಾದಾಗ ಈ ಸಂಭ್ರಮ ಇಮ್ಮಡಿಗೊಂಡಿತು. ಆದರೆ ಚೆಂಡು ಬಲಭಾಗದ ಕಂಬಕ್ಕೆ ತಾಗಿ ಹೊರಗೆ ಸಾಗಿತು.

ADVERTISEMENT

ಮುನ್ನಡೆ ತಂದುಕೊಟ್ಟ ಬೋರ್ಜಿ: 20 ನಿಮಿಷಗಳ ನಂತರ ಭಾರತ ಪ್ರಾಬಲ್ಯ ಮೆರೆಯಿತು. ಚೆಂಡಿನ ಮೇಲೆ ಪೂರ್ಣ ಹಿಡಿತ ಸಾಧಿಸಿದ ಭಾರತಕ್ಕೆ 27ನೇ ನಿಮಿಷದಲ್ಲಿ ಮಿಡ್‌ಫೀಲ್ಡರ್‌ ರಾವ್ಲಿನ್‌ ಬೋರ್ಜಿ ಮುನ್ನಡೆ ತಂದುಕೊಟ್ಟರು. ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಸುಲಭವಾಗಿ ಭೇದಿಸಿದ ಬೋರ್ಜಿ ಸಂಭ್ರಮ ಉಕ್ಕಿಸಿದರು. ಆದರೆ 36ನೇ ನಿಮಿಷದಲ್ಲಿ ಮಕಾವ್ ತಿರುಗೇಟು ನೀಡಿತು. ಫಾರ್ವರ್ಡ್ ಆಟಗಾರ ನಿಕೋಲಾಸ್‌ ಮಾರಿಯೊ ಟೆರಾವೊ ಸುಲಭವಾಗಿ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸಿದರು.

ಬಲ ತುಂಬಿದ ಬಲ್ವಂತ್‌: 1–1ರಿಂದ ಸಮಬಲ ಸಾಧಿಸಿ ವಿರಾಮಕ್ಕೆ ತೆರಳಿದ ಭಾರತ ದ್ವಿತೀಯಾರ್ಧದಲ್ಲಿ ಪಟ್ಟು ಬದಲಿಸಿತು. ಜಾಕಿಚಂದ್ ಸಿಂಗ್ ತೆಲೆಮ್‌ ಅವರ ಬದಲಿಗೆ ಬಲ್ವಂತ್ ಸಿಂಗ್ ಅವರನ್ನು ಕರೆಸಿಕೊಂಡ ತಂಡ ಮತ್ತಷ್ಟು ಪ್ರಬಲ ದಾಳಿ ನಡೆಸಿತು. ಇದರ ಪರಿಣಾಮ ಗೋಲುಗಳು ಹರಿದು ಬಂದವು.

52ನೇ ನಿಮಿಷದಲ್ಲಿ ಸುನಿಲ್ ಚೆಟ್ರಿ, ಬಲ್ವಂತ್ ಸಿಂಗ್ ಮತ್ತು ಹೋಲಿಚರಣ್‌ ಸಿಂಗ್‌ ಅವರು ಸುಂದರ ಪಾಸ್‌ಗಳ ಮೂಲಕ ಎದುರಾಳಿ ಗೋಲು ಪೆಟ್ಟಿಗೆ ಬಳಿಗೆ ಧಾವಿಸಿ ಆತಂಕ ಸೃಷ್ಟಿಸಿದರು. ಆದರೆ ಗೋಲು ಮೂಡಿ ಬರಲಿಲ್ಲ. ಚಾಣಾಕ್ಷ ಬಲ್ವಂತ್ ಸಿಂಗ್‌: 59ನೇ ನಿಮಿಷದಲ್ಲಿ ಭಾರತಕ್ಕೆ ಮುನ್ನಡೆ ಸಿಕ್ಕಿತು.

ಬಲ್ವಂತ್ ಸಿಂಗ್ ಅವರ ಚಾಣಾಕ್ಷ ನಡೆ ಇದಕ್ಕೆ ಕಾರಣವಾಯಿತು. ಅಂಗಣದ ಮಧ್ಯಭಾಗದಿಂದ ಎದುರಾಳಿ ತಂಡದ ಆಟಗಾರರನ್ನು ವಂಚಿಸುತ್ತ ಚೆಂಡನ್ನು ಮೋಹಕವಾಗಿ ಡ್ರಿಬಲ್ ಮಾಡುತ್ತ ಬಂದ ಅವರು ಎಡಭಾಗದಲ್ಲಿ ಹೊಂಚು ಹಾಕಿ ನಿಂತಿದ್ದ ಚೆಟ್ರಿ ಅವರಿಗೆ ಕೊನೆಯ ಕ್ಷಣದಲ್ಲಿ ಪಾಸ್ ನೀಡಿದರು. ನಾಯಕ ಚೆಂಡನ್ನು ಗುರಿ ಸೇರಿಸಲು ತಡ ಮಾಡಲಿಲ್ಲ.

ಸ್ವಯಂ ಗೋಲು ನೀಡಿದ ಲಾಮ್‌: 69ನೇ ನಿಮಿಷದಲ್ಲಿ ಮಕಾವ್ ಡಿಫೆಂಡರ್‌ ಲಾಮ್ ಕ ಸೆಂಗ್ ಮಾಡಿದ ತಪ್ಪು ಭಾರತಕ್ಕೆ ಮತ್ತೊಂದು ಗೋಲು ತಂದುಕೊಟ್ಟಿತು. ಬಲ ಮೂಲೆಯಿಂದ ಹೋಲಿಚರಣ್‌ ನರ್ಜರಿ ಒದ್ದ ಚೆಂಡನ್ನು ಗೋಲು ಪೆಟ್ಟಿಗೆಯ ಬಳಿ ತಡೆಯಲು ಮುಂದಾದ ಲಾಮ್ ಅವರ ಕೈಗೆ ತಾಗಿ ಚೆಂಡು ‘ಗುರಿ’ ಸೇರಿತು. ಹೆಚ್ಚುವರಿ (90+1) ಅವಧಿಯಲ್ಲಿ ಜೆಜೆ ಲಾಲ್‌ಪೆಕ್ಲುವಾ ಗಳಿಸಿದ ಸುಲಭ ಗೋಲು ಭಾರತದ ಮುನ್ನಡೆಯನ್ನು ಹೆಚ್ಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.