ADVERTISEMENT

ಐಎಸ್‌ಎಲ್‌: ಬಿಎಫ್‌ಸಿಗೆ ಮುಂಬೈ ಮೊದಲ ಎದುರಾಳಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ಐಎಸ್‌ಎಲ್‌: ಬಿಎಫ್‌ಸಿಗೆ ಮುಂಬೈ ಮೊದಲ ಎದುರಾಳಿ
ಐಎಸ್‌ಎಲ್‌: ಬಿಎಫ್‌ಸಿಗೆ ಮುಂಬೈ ಮೊದಲ ಎದುರಾಳಿ   

ಬೆಂಗಳೂರು: ಬೆಂಗಳೂರು ಫುಟ್‌ ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಮುಂಬೈ ಎಫ್‌ಸಿ ವಿರುದ್ಧ ಆಡುವ ಮೂಲಕ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ.

ಶುಕ್ರವಾರ ಲೀಗ್‌ನ ವೇಳಾಪಟ್ಟಿ ಬಿಡುಗಡೆಯಾಗಿದ್ದು, ನವೆಂಬರ್‌ 17 ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹೋದ ಬಾರಿಯ ಚಾಂಪಿಯನ್‌ ಅಟ್ಲೆಟಿಕೊ ಡಿ ಕೋಲ್ಕತ್ತ ಮತ್ತು ರನ್ನರ್ಸ್‌ ಅಪ್‌ ಆಗಿದ್ದ ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ ತಂಡಗಳು ಸೆಣಸಲಿವೆ. ಈ ಹೋರಾಟ ಕೋಲ್ಕತ್ತದ ಸಾಲ್ಟ್‌ಲೇಕ್‌ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದೆ.

ಬಿಎಫ್‌ಸಿ ತಂಡ ಈ ಬಾರಿ ಲೀಗ್‌ಗೆ ಪದಾರ್ಪಣೆ ಮಾಡುತ್ತಿದೆ. ನವೆಂಬರ್‌ 19 ರಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಹಣಾಹಣಿಯಲ್ಲಿ ಸುನಿಲ್‌ ಚೆಟ್ರಿ ಪಡೆ ಮುಂಬೈ ವಿರುದ್ಧ ಆಡಲಿದೆ.

ADVERTISEMENT

ಐ ಲೀಗ್‌ನಲ್ಲಿ ಎರಡು ಬಾರಿ ಚಾಂಪಿಯನ್‌ ಆಗಿರುವ ಬಿಎಫ್‌ಸಿ ಮತ್ತು ಜೆಮ್‌ಷೆಡ್‌ಪುರ ಎಫ್‌ಸಿ ಈ ಬಾರಿ ಲೀಗ್‌ನಲ್ಲಿ ಆಡುವ ಅವಕಾಶ ಗಳಿಸಿವೆ. ನಾಲ್ಕನೇ ಆವೃತ್ತಿಯ ಲೀಗ್‌ನಲ್ಲಿ ಒಟ್ಟು 95 ಪಂದ್ಯಗಳು ನಡೆಯಲಿವೆ. ಬುಧವಾರದಿಂದ ಶನಿವಾರದ ವರೆಗೆ ರಾತ್ರಿ 8ಕ್ಕೆ ಪಂದ್ಯ ಜರುಗಲಿದ್ದು, ಭಾನುವಾರ ಎರಡು ಪಂದ್ಯಗಳು ನಡೆಯಲಿವೆ. ಭಾನುವಾರದ ಮೊದಲ ಪಂದ್ಯ ಸಂಜೆ 5.30 ಮತ್ತು ಎರಡನೇ ಪಂದ್ಯ ರಾತ್ರಿ 8ಕ್ಕೆ ನಿಗದಿಯಾಗಿದೆ.

ನಾಲ್ಕನೇ ಆವೃತ್ತಿಯ ಲೀಗ್‌ನಲ್ಲಿ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಹೋರಾಡಲಿದ್ದು ಇದೇ ಮೊದಲು ಬಾರಿಗೆ ನಾಲ್ಕು ತಿಂಗಳ ಕಾಲ ಲೀಗ್‌ ಆಯೋಜನೆಯಾಗಿದೆ.

ಐಎಸ್‌ಎಲ್‌ನಲ್ಲಿ ಆಡುತ್ತಿರುವ ತಂಡಗಳು ಲೀಗ್‌ ಹಂತದಲ್ಲಿ ಪರಸ್ಪರ ಎರಡು ಬಾರಿ ಮುಖಾಮುಖಿಯಾಗಲಿವೆ. 2018ರ ಮಾರ್ಚ್‌ ತಿಂಗಳ ಎರಡನೇ ವಾರ ಎರಡು ಹಂತದ ಸೆಮಿಫೈನಲ್‌ ಪಂದ್ಯಗಳು ಆಯೋಜನೆಯಾಗಿವೆ. ಫೈನಲ್‌ ಪಂದ್ಯ ನಡೆಯುವ ಸ್ಥಳ ಮತ್ತು ದಿನಾಂಕ ಇನ್ನೂ ನಿರ್ಧಾರವಾಗಿಲ್ಲ.

ಲೀಗ್‌ನ ಮೊದಲ ‘ಡಬಲ್‌ ಹೆಡರ್‌’ (ಭಾನುವಾರದ ಪಂದ್ಯಗಳು) ಹೋರಾಟಗಳಲ್ಲಿ ಚೆನ್ನೈ ಎಫ್‌ಸಿ ಮತ್ತು ಎಫ್‌ಸಿ ಗೋವಾ ತಂಡಗಳು ಎದುರಾಗಲಿವೆ. ದಿನದ ಇನ್ನೊಂದು ಪಂದ್ಯದಲ್ಲಿ ಬಿಎಫ್‌ಸಿ ಹಾಗೂ ಮುಂಬೈ ಎಫ್‌ಸಿ ಪೈಪೋಟಿ ನಡೆಸಲಿವೆ. ಈ ಬಾರಿ ತಂಡವೊಂದರಲ್ಲಿ ಆಡುವ ವಿದೇಶಿ ಆಟಗಾರರ ಸಂಖ್ಯೆಯನ್ನು 6ರಿಂದ 5ಕ್ಕೆ ಇಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.