ADVERTISEMENT

ಐಪಿಎಲ್‌ನಿಂದ ಹೊರಬಿದ್ದ ಸ್ಮಿತ್‌, ಮಾರ್ಷ್‌

​ಪ್ರಜಾವಾಣಿ ವಾರ್ತೆ
Published 2 ಮೇ 2016, 19:35 IST
Last Updated 2 ಮೇ 2016, 19:35 IST

ಪುಣೆ (ಪಿಟಿಐ): ಗಾಯಗೊಂಡಿರುವ ರೈಸಿಂಗ್‌ ಪುಣೆ ಸೂಪರ್‌ ಜೈಂಟ್ಸ್‌ ತಂಡದ ಸ್ಟೀವನ್‌ ಸ್ಮಿತ್‌ ಮತ್ತು  ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಶಾನ್‌ ಮಾರ್ಷ್ ಅವರು ಐಪಿಎಲ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಈಗಾಗಲೇ ಕಳಪೆ ಪ್ರದರ್ಶನದಿಂದ ಕಂಗೆಟ್ಟಿರುವ ಸೂಪರ್‌ಜೈಂಟ್ಸ್‌ ತಂಡಕ್ಕೆ ಸ್ಮಿತ್‌ ಗಾಯಗೊಡು ಟೂರ್ನಿಯಿಂದ ಹೊರಗುಳಿದಿರುವುದು ದೊಡ್ಡ ಆಘಾತ ಉಂಟುಮಾಡಿದೆ.

ಮಹೇಂದ್ರ ಸಿಂಗ್‌ ದೋನಿ ಬಳಗದ ಪ್ರಮುಖ ಆಟಗಾರರಾದ ಫಾಫ್‌ ಡು ಪ್ಲೆಸಿಸ್‌, ಕೆವಿನ್‌ ಪೀಟರ್ಸನ್‌ ಮತ್ತು ಮಿಷೆಲ್‌ ಮಾರ್ಷ್‌ ಅವರೂ ಗಾಯದಿಂದಾಗಿ ಟೂರ್ನಿಯ ಇತರ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ಆಸ್ಟ್ರೇಲಿಯಾದ ಪ್ರತಿಭಾನ್ವಿತ ಆಟಗಾರ ಸ್ಮಿತ್‌ ಅವರ ಬಲ ಮಣಿಕಟ್ಟಿಗೆ ಹೋದ ವಾರ ಗಾಯವಾಗಿತ್ತು. ಇದು ಇನ್ನಷ್ಟು ಉಲ್ಬಣಿಸಿರುವ ಕಾರಣ ಅವರು ಟೂರ್ನಿಯ ಇತರ ಪಂದ್ಯಗಳಲ್ಲಿ ಆಡುತ್ತಿಲ್ಲ.

ಪ್ಲೆಸಿಸ್‌ ಬದಲು ಬೇಲಿ: ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವ ಆರಂಭಿಕ ಆಟಗಾರ ಜಾರ್ಜ್‌ ಬೇಲಿ ಬದಲಿಗೆ ಪುಣೆ ಸೂಪರ್‌ಜೈಂಟ್ಸ್‌ ತಂಡ ಆಸ್ಟ್ರೇಲಿಯಾದ ಜಾರ್ಜ್‌ ಬೇಲಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಬೇಲಿ ಹಿಂದಿನ ಆವೃತ್ತಿಯಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಮುನ್ನಡೆಸಿದ್ದರು. ಆದರೆ ಈ ಬಾರಿಯ ಆಟಗಾರರ ಹರಾಜಿನಲ್ಲಿ ಅವರನ್ನು ಕೊಂಡುಕೊಳ್ಳಲು ಯಾವ ಫ್ರಾಂಚೈಸ್‌ ಕೂಡಾ ಮನಸ್ಸು ಮಾಡಿರಲಿಲ್ಲ.

‘ನಮ್ಮ ತಂಡದ ಪ್ರಮುಖ ನಾಲ್ಕು ಆಟಗಾರರು ಗಾಯಗೊಂಡು ಟೂರ್ನಿ ಯಿಂದ ಹೊರಬಿದ್ದಿದ್ದಾರೆ. ಇದರಿಂದ ತಂಡಕ್ಕೆ ದೊಡ್ಡ ಹಿನ್ನಡೆ ಉಂಟಾಗಿದೆ. ಗಾಯಗೊಂಡವರ ಬದಲಿಗೆ ಕೆಲ ಆಟ ಗಾರರನ್ನು ತಂಡಕ್ಕೆ ಸೇರಿಸಿಕೊಂಡಿ ದ್ದೇವೆ’ ಎಂದು ಸೂಪರ್‌ಜೈಂಟ್ಸ್‌ ತಂಡದ ಅಧಿಕಾರಿ ರಘು ಅಯ್ಯರ್‌ ತಿಳಿಸಿದ್ದಾರೆ.

ಮಾರ್ಷ್‌ ಹೊರಕ್ಕೆ: ಆಸ್ಟ್ರೇಲಿಯಾದ ಎಡಗೈ ಬ್ಯಾಟ್ಸ್‌ಮನ್‌ ಶಾನ್‌ ಮಾರ್ಷ್‌ ಕೂಡಾ ಗಾಯಗೊಂಡು ಟೂರ್ನಿಗೆ ಅಲಭ್ಯರಾಗಿದೆ. ಇದರಿಂದ ಕಿಂಗ್ಸ್‌ ಇಲೆವೆನ್‌ಗೆ ಭಾರಿ ಹಿನ್ನಡೆ ಉಂಟಾಗಿದೆ.

32 ವರ್ಷದ ಮಾರ್ಷ್‌ ಬೆನ್ನು ನೋವಿಗೆ ಒಳಗಾಗಿದ್ದಾರೆ. ಹೀಗಾಗಿ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.