ADVERTISEMENT

ಐಪಿಎಲ್‌ 2017: ಮಳೆಯ ಕಾರಣ ಪಂದ್ಯ ವಿಳಂಬ, ಜಯದ ನಿರೀಕ್ಷೆಯಲ್ಲಿ ಆರ್‌ಸಿಬಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 15:05 IST
Last Updated 25 ಏಪ್ರಿಲ್ 2017, 15:05 IST
ಐಪಿಎಲ್‌ 2017: ಮಳೆಯ ಕಾರಣ ಪಂದ್ಯ ವಿಳಂಬ, ಜಯದ ನಿರೀಕ್ಷೆಯಲ್ಲಿ ಆರ್‌ಸಿಬಿ
ಐಪಿಎಲ್‌ 2017: ಮಳೆಯ ಕಾರಣ ಪಂದ್ಯ ವಿಳಂಬ, ಜಯದ ನಿರೀಕ್ಷೆಯಲ್ಲಿ ಆರ್‌ಸಿಬಿ   

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್‌ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳ ನಡುವಿನ ಐಪಿಎಲ್‌ ಪಂದ್ಯ ಮಳೆ ಕಾರಣದಿಂದ ತಡವಾಗಿ ಆರಂಭವಾಗಲಿದೆ.

ಹತ್ತನೇ ಆವೃತ್ತಿಯ ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಆರ್‌ಸಿಬಿ ತಂಡ ತನ್ನ 8ನೇ ಲೀಗ್‌ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ.

ಲೀಗ್‌ನಲ್ಲಿ ಆಡಿರುವ ಒಟ್ಟು ಏಳು ಪಂದ್ಯಗಳ ಪೈಕಿ ಕೇವಲ ಎರಡರಲ್ಲಷ್ಟೇ ಗೆದ್ದು ಐದರಲ್ಲಿ ಸೋತಿರುವ ಆರ್‌ಸಿಬಿ ಇಂದು ತವರು ಮೈದಾನದಲ್ಲಿ ಹಾಲಿ ಚಾಂಪಿಯನ್‌ ಸನ್‌ರೈಸರ್ಸ್‌ ಎದುರು ಆಡಲಿದೆ.

ADVERTISEMENT

ಒಂದು ವಾರದ ಹಿಂದಷ್ಟೆ ರಾಜ್‌ ಕೋಟ್‌ನಲ್ಲಿ ಗುಜರಾತ್ ಲಯನ್ಸ್‌ ವಿರುದ್ಧ 20 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 213 ರನ್‌ ಗಳಿಸಿದ್ದ ಆರ್‌ಸಿಬಿ ಭಾನುವಾರ ರಾತ್ರಿ ಕೋಲ್ಕತ್ತ ನೈಟ್ ರೈಡರ್ಸ್‌ ಎದುರು ಕೇವಲ 49 ರನ್‌ ಗಳಿಗೆ ಆಲೌಟ್‌ ಆಗುವ ಮೂಲಕ ಹೀನಾಯ ಸೋಲು ಕಂಡಿತ್ತು.

ಇದರಿಂದಾಗಿ ಸಹಜವಾಗಿಯೇ ಎಚ್ಚರಿಕೆಯಿಂದ ಆಡಬೇಕಾದ ಅನಿವಾರ್ಯತೆ ವಿರಾಟ್‌ ಪಡೆಗಿದೆ.

ನಾಯಕ ವಿರಾಟ್‌ ಕೊಹ್ಲಿ, ಕ್ರಿಸ್‌ಗೇಲ್‌, ಎಬಿ ಡಿ ವಿಲಿಯರ್ಸ್‌, ಕೇದಾರ್‌ ಜಾಧವ್‌ ಅವರನ್ನೊಳಗೊಂಡ ಆರ್‌ಸಿಬಿ ಬ್ಯಾಟಿಂಗ್‌ ವಿಭಾಗದಲ್ಲಿ ಬಲಿಷ್ಠವಾಗಿದ್ದರೂ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿದೆ. ಜತೆಗೆ ಬೌಲಿಂಗ್‌ನಲ್ಲಿ ಸ್ಪಿನ್ನರ್‌ ಯಜುವೇಂದ್ರ ಚಹಾಲ್‌ ಮತ್ತು ಪವನ್‌ ನೇಗಿ ಹೊರತುಪಡಿಸಿ ಉಳಿದ ಬೌಲರ್‌ಗಳು ಹೆಚ್ಚು ಪರಿಣಾಮಕಾರಿಯಾಗದಿರುವುದು ಹಿನ್ನಡೆಯಾಗಿದೆ.

ಇನ್ನೊಂದೆಡೆ ತವರು ಅಭಿಮಾನಿಗಳ ನಿರೀಕ್ಷೆಯ ಒತ್ತಡದಲ್ಲಿ ಆಡಬೇಕಿರುವ ಆರ್‌ಸಿಬಿ ಸ್ಥಿತಿಯ ಲಾಭ ಪಡೆಯಲು ಸನ್‌ರೈಸರ್ಸ್‌ ಸಜ್ಜಾಗಿದೆ. ಸದ್ಯ ಆಡಿರುವ 7 ಪಂದ್ಯಗಳಲ್ಲಿ ನಾಲ್ಕು ಗೆಲುವು ಮೂರು ಸೋಲು ಕಂಡಿರುವ ವಾರ್ನರ್‌ ಪಡೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಉಭಯ ತಂಡಗಳು ಇದುವರೆಗೆ ರೈಸರ್ಸ್‌ ವಿರುದ್ಧ ಎಂಟು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಆರ್‌ಸಿಬಿ ಹಾಗೂ ಸನ್‌ರೈಸರ್ಸ್‌ ತಂಡಗಳು ಕ್ರಮವಾಗಿ 3 ಮತ್ತು 4 ಜಯ ಸಾಧಿಸಿವೆ. ಒಂದು ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ.

ಆರ್‌ಸಿಬಿ ತಂಡ ಇದುವರೆಗೆ ಚಿನ್ನಸ್ವಾಮಿ ಮೈದಾನದಲ್ಲಿ ಒಟ್ಟು 58 ಪಂದ್ಯಗಳನ್ನಾಡಿದ್ದು, 29 ಜಯ ಹಾಗೂ 27 ಸೋಲು ಕಂಡಿದೆ. ಉಳಿದೆರಡು ಪಂದ್ಯಗಳು ಪಲಿತಾಂಶವಿಲ್ಲದೆ ಮುಗಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.