ADVERTISEMENT

ಕಾಂಬೋಡಿಯಾ ಸವಾಲು ಮೀರಿದ ಭಾರತ

ಸೌಹಾರ್ದ ಫುಟ್‌ಬಾಲ್‌ ಪಂದ್ಯ; ಚೆಟ್ರಿ, ಸಂದೇಶ್ ಮಿಂಚು

ಪಿಟಿಐ
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST
ಕಾಂಬೋಡಿಯಾ ಸವಾಲು ಮೀರಿದ ಭಾರತ
ಕಾಂಬೋಡಿಯಾ ಸವಾಲು ಮೀರಿದ ಭಾರತ   

ಫೊನೊಮ್‌ ಪೆನ್ಹ್‌, ಕಾಂಬೋಡಿಯಾ: ಸುನಿಲ್‌ ಚೆಟ್ರಿ, ಸಂದೇಶ್‌ ಜಿಂಗಾನ್‌ ಮತ್ತು ಜೆಜೆ ಲಾಲ್‌ಪೆಕ್ಲುವಾ ಅವರ ಕಾಲ್ಚಳಕದಲ್ಲಿ ಅರಳಿದ ತಲಾ ಒಂದು ಗೋಲುಗಳ ಬಲದಿಂದ ಭಾರತ ತಂಡ ಸೌಹಾರ್ದ ಫುಟ್‌ಬಾಲ್‌ ಪಂದ್ಯದಲ್ಲಿ ಕಾಂಬೋಡಿಯಾ ತಂಡದ ಸವಾಲನ್ನು ಮೀರಿ ನಿಂತಿತು.

ಬುಧವಾರ ನಡೆದ ಪಂದ್ಯದಲ್ಲಿ ಭಾರತ 3–2 ಗೋಲುಗಳಿಂದ ಆತಿಥೇಯ ತಂಡವನ್ನು ಮಣಿಸಿತು. ಇದರೊಂದಿಗೆ 11 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಸೌಹಾರ್ದ ಪಂದ್ಯ ಗೆದ್ದ ಹಿರಿಮೆಗೂ ಪಾತ್ರವಾಯಿತು. ಭಾರತ ತಂಡ 2006ರಲ್ಲಿ ಪಾಕಿಸ್ತಾನ ತಂಡವನ್ನು ಅದರದ್ದೇ ನೆಲದಲ್ಲಿ ಸೋಲಿಸಿತ್ತು. ಆಗ ಷಣ್ಮುಗಂ ವೆಂಕಟೇಶ್‌ ತಂಡವನ್ನು ಮುನ್ನಡೆಸಿದ್ದರು. 

ಮಾರ್ಚ್‌ 28 ರಂದು ಯಾಂಗೂನ್‌ನಲ್ಲಿ ನಡೆಯುವ ಎಎಫ್‌ಸಿ ಏಷ್ಯಾ ಕಪ್‌ ಅರ್ಹತಾ ಟೂರ್ನಿಯ  ಪೂರ್ವಭಾವಿ ಸಿದ್ಧತೆಗೆ ಕಾಂಬೋಡಿಯಾ ವಿರುದ್ಧದ ಪಂದ್ಯ ವೇದಿಕೆ ಅನಿಸಿತ್ತು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 132ನೇ ಸ್ಥಾನ ಹೊಂದಿರುವ ಭಾರತ ತಂಡ ಆರಂಭದಿಂದಲೇ ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಭೇದಿಸುವ ಪ್ರಯತ್ನ ನಡೆಸಿ ಕೆಲ ಗೋಲು ಗಳಿಸುವ ಅವಕಾಶಗಳನ್ನು ಸೃಷ್ಟಿಸಿಕೊಂಡಿತ್ತು. ಆದರೆ ಆತಿಥೇಯ ಕಾಂಬೋಡಿಯಾ ತಂಡದ ಆಟಗಾರರು ಪ್ರವಾಸಿ ಪಡೆಯ ಎಲ್ಲಾ ಪ್ರಯತ್ನಗಳನ್ನೂ ವಿಫಲಗೊಳಿಸಿದರು.

ADVERTISEMENT

34ನೇ ನಿಮಿಷದವರೆಗೂ ಖಾತೆ ತೆರೆಯಲು ಉಭಯ ತಂಡಗಳು ತುರುಸಿನ ಪೈಪೋಟಿ ನಡೆಸಿದವು. 35ನೇ ನಿಮಿಷದಲ್ಲಿ ಭಾರತ ತಂಡ ಎದುರಾಳಿ ತಂಡದ ರಕ್ಷಣಾ ವ್ಯೂಹವನ್ನು ಭೇದಿಸುವಲ್ಲಿ ಯಶಸ್ವಿಯಾಯಿತು. ಯೂಜೆನ್ಸನ್‌ ಲಿಂಗ್ಡೊ ಅವರು ಕಾರ್ನರ್‌ನಿಂದ ತಮ್ಮತ್ತ ಒದ್ದು ಕಳುಹಿಸಿದ  ಚೆಂಡನ್ನು ನಿಯಂತ್ರಣಕ್ಕೆ ಪಡೆದ ಸುನಿಲ್‌ ಚೆಟ್ರಿ ಅದನ್ನು ಸೊಗಸಾದ ರೀತಿಯಲ್ಲಿ ಗುರಿ ಮುಟ್ಟಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.

ಈ ಖುಷಿ ಭಾರತದ ಪಾಳಯದಲ್ಲಿ ಹೆಚ್ಚು ಸಮಯ ಉಳಿಯಲು ಕಾಂಬೋಡಿಯಾ ಆಟಗಾರರು ಅವ ಕಾಶ ನೀಡಲಿಲ್ಲ. 36ನೇ ನಿಮಿಷದಲ್ಲಿ ಆತಿಥೇಯ ತಂಡದ ಖೊವುನ್‌ ಲ್ಯಾಬೊರೆವಿ ಚೆಂಡನ್ನು ಗುರಿ ಸೇರಿಸಿ 1–1ರ ಸಮಬಲಕ್ಕೆ ಕಾರಣರಾದರು. ಪಾರ್ಕ್‌ ಮೋನಿ ಉದಾಮ್‌ ಭಾರತದ ಅರ್ಣವ್‌ ಮಂಡಲ್‌ ಅವರ ಕಣ್ತಪ್ಪಿಸಿ ಲ್ಯಾಬೊರೆವಿ ಅವರತ್ತ ಚೆಂಡನ್ನು ತಳ್ಳಿದರು. ಅದನ್ನು ನಿಯಂತ್ರಣಕ್ಕೆ ಪಡೆದ   ಲ್ಯಾಬೊರೆವಿ ಶರವೇಗದಲ್ಲಿ ಗುರಿಯೆಡೆಗೆ ಒದ್ದರು. ಅದನ್ನು ತಡೆಯಲು ಭಾರತದ ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಮಾಡಿದ ಪ್ರಯತ್ನ ವಿಫಲವಾಯಿತು.

ದ್ವಿತೀಯಾರ್ಧದಲ್ಲಿ ಭಾರತ ತಂಡದ ಕೋಚ್‌ ಸ್ಟೀಫನ್‌ ಕಾನ್‌ಸ್ಟೆಂಟೈನ್‌ ಆಡುವ ಬಳಗದಲ್ಲಿ ಎರಡು ಬದಲಾವಣೆ ಮಾಡಿದರು.  ಅವರು ಅರ್ಣವ್‌ ಮಂಡಲ್‌ ಮತ್ತು ಡೇನಿಯಲ್‌ ಲಾಲಿಂಪುಯಿಯಾ ಅವರ ಬದಲು ಸಂದೇಶ್‌ ಜಿಂಗಾನ್‌ ಮತ್ತು ಲಾಲ್‌ ಪೆಕ್ಲುವಾ ಅವರನ್ನು ಅಂಗಳಕ್ಕಿಳಿಸಿದರು.
ದ್ವಿತೀಯಾರ್ಧದ ಆರಂಭದಲ್ಲೇ ಅವರ ಈ ಬದಲಾವಣೆಯ ತಂತ್ರಕ್ಕೆ ಯಶಸ್ಸು ಲಭಿಸಿತು. 49ನೇ ನಿಮಿಷದಲ್ಲಿ ಚೆಂಡಿನೊಂದಿಗೆ ಎದುರಾಳಿ ತಂಡದ ಆವರಣ ಪ್ರವೇಶಿಸಿದ ಲಾಲ್‌ಪೆಕ್ಲುವಾ ಅದನ್ನು ಜತನದಿಂದ ಗುರಿ ತಲುಪಿಸಿ ಭಾರತದ ಮುನ್ನಡೆಗೆ ಕಾರಣರಾದರು.

52ನೇ ನಿಮಿಷದಲ್ಲಿ ಸಂದೇಶ್‌ ತಂಡದ ಪಾಳಯದಲ್ಲಿ ಸಂಭ್ರಮ ಮೇಳೈಸುವಂತೆ ಮಾಡಿದರು.  ಯೂಜೆನ್ಸನ್‌ ಲಿಂಗ್ಡೊ ಅವರು ಎದುರಾಳಿ ಆವರಣದ ಬಲತುದಿಯಿಂದ ಒದ್ದು ಕಳುಹಿಸಿದ ಚೆಂಡನ್ನು ಅವರು ಚಾಕಚಕ್ಯತೆಯಿಂದ ಕಾಂಬೋಡಿಯಾದ ಗೋಲು ಪೆಟ್ಟಿಗೆಯೊಳಗೆ ಒದ್ದು ಮುನ್ನಡೆಯನ್ನು 3–1ಕ್ಕೆ ಹೆಚ್ಚಿಸಿದರು.

62ನೇ ನಿಮಿಷದಲ್ಲಿ ಕಾಂಬೋಡಿಯಾ ತಂಡದ ಚಾನ್‌ ವತನಾಕ ಗೋಲು ದಾಖಲಿಸಿ ಹಿನ್ನಡೆಯನ್ನು 2–3ಕ್ಕೆ ತಗ್ಗಿಸಿದರು.  ಆ ಬಳಿಕ  ಆತಿಥೇಯ ತಂಡ ಸಮಬಲದ ಗೋಲು ಗಳಿಸಲು ಹೋರಾಟ ಮುಂದುವರಿಸಿತಾದರೂ ಭಾರತದ ಆಟಗಾರರು ಯಾವುದೇ ಅಪಾಯಕ್ಕೆ ಆಸ್ಪದ ನೀಡದೆ ಖುಷಿಯ ಕಡಲಲ್ಲಿ ತೇಲಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.