ADVERTISEMENT

ಕಿಂಗ್ಸ್‌ಗೆ ಮತ್ತೊಂದು ಜಯದ ಹಂಬಲ

ಇಂದು ಕೋಲ್ಕತ್ತ ನೈಟ್ ರೈಡರ್ಸ್ ಎದುರು ಪಂದ್ಯ; ವಿಶ್ವಾಸದಲ್ಲಿ ಗೌತಮ್‌ ಗಂಭೀರ್‌ ಪಡೆ

​ಪ್ರಜಾವಾಣಿ ವಾರ್ತೆ
Published 4 ಮೇ 2016, 5:00 IST
Last Updated 4 ಮೇ 2016, 5:00 IST
ಕಿಂಗ್ಸ್‌ಗೆ ಮತ್ತೊಂದು ಜಯದ ಹಂಬಲ
ಕಿಂಗ್ಸ್‌ಗೆ ಮತ್ತೊಂದು ಜಯದ ಹಂಬಲ   

ಕೋಲ್ಕತ್ತ (ಪಿಟಿಐ): ಸತತ ಮೂರು ಪಂದ್ಯ ಸೋತ ಬಳಿಕ ಕೊನೆಗೂ ಗೆಲುವಿನ ಸವಿ ಕಂಡಿರುವ ಕಿಂಗ್ಸ್ ಇಲೆವೆನ್‌ ಪಂಜಾಬ್ ತಂಡ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ.

ಮುರಳಿ ವಿಜಯ್‌ ನಾಯಕತ್ವದ ಕಿಂಗ್ಸ್ ಇಲೆವೆನ್ ತನ್ನ ಹಿಂದಿನ ಪಂದ್ಯದಲ್ಲಿ ಬಲಿಷ್ಠ ಗುಜರಾತ್‌ ಲಯನ್ಸ್ ಎದುರು ಗೆಲುವು ಸಾಧಿಸಿತ್ತು. ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಲಯನ್ಸ್ ತಂಡದ ವಿರುದ್ಧ ಪಡೆದ ಜಯ ಕಿಂಗ್ಸ್ ತಂಡದಲ್ಲಿ ಭಾರಿ ಆತ್ಮವಿಶ್ವಾಸ ತುಂಬಿದೆ.

ಏಳು ಪಂದ್ಯಗಳನ್ನಾಡಿರುವ ಈ ತಂಡ   154 ರನ್‌  ಕಲೆ ಹಾಕಿದ್ದರೂ ಸಾಧಾರಣ ಗುರಿಯನ್ನು ಮುಟ್ಟಲು ಲಯನ್ಸ್ ತಂಡಕ್ಕೆ ಅವಕಾಶ ಕೊಟ್ಟಿರಲಿಲ್ಲ. ಸಂದೀಪ್‌ ಶರ್ಮಾ, ಮೋಹಿತ್‌ ಶರ್ಮಾ, ಮಾರ್ಕಸ್‌ ಸ್ಟೊಯಿನಸ್‌, ಅಕ್ಷರ್ ಪಟೇಲ್‌ ಚುರುಕಿನ ಬೌಲಿಂಗ್ ಮಾಡಿದ್ದರು. ಸ್ಪಿನ್ನರ್‌ ಅಕ್ಷರ್‌  ನಾಲ್ಕು ಓವರ್ ಬೌಲಿಂಗ್ ಮಾಡಿ 21 ರನ್ ಮಾತ್ರ ಕೊಟ್ಟು ನಾಲ್ಕು ವಿಕೆಟ್ ಉರುಳಿಸಿದ್ದರು.

ಟೂರ್ನಿಯ ಮೊದಲ ಆರು ಪಂದ್ಯಗಳಿಗೆ ಡೇವಿಡ್‌ ಮಿಲ್ಲರ್‌ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು. ಆಗ ತಂಡ ನೀರಸ ಪ್ರದರ್ಶನ ತೋರಿ ಸತತ ಸೋಲುಗಳನ್ನು ಅನುಭವಿಸಿತ್ತು. ಆದ್ದರಿಂದ ಕಿಂಗ್ಸ್ ಇಲೆವೆನ್ ಪಂಜಾಬ್  ಫ್ರಾಂಚೈಸ್‌ ನಾಯಕರನ್ನು ಬದಲಿಸಿತ್ತು.

ನಾಯಕರಾದ ಮೊದಲ ಪಂದ್ಯದಲ್ಲಿಯೇ ತಂಡ ಗೆಲುವು ಪಡೆದಿದ್ದರಿಂದ ಮುರಳಿ ಅವರಲ್ಲಿ ವಿಶ್ವಾಸ  ಹೆಚ್ಚಿದೆ. ಮುಂದಿನ ಪಂದ್ಯಗಳಲ್ಲಿಯೂ ತಂಡವನ್ನು ಗೆಲುವಿನ ಹಾದಿಯಲ್ಲಿ ಕೊಂಡೊಯ್ಯಬೇಕಾದ ಸವಾಲಿದೆ.

ಈ ತಂಡ ಈಗಾಗಲೇ ಏಳು ಪಂದ್ಯಗಳನ್ನು ಆಡಿದ್ದು ಜಯ ಸಾಧಿಸಿದ್ದು ಎರಡರಲ್ಲಿ ಮಾತ್ರ. ಆದ್ದರಿಂದ ಪ್ಲೇ ಆಫ್‌ ಪ್ರವೇಶದ ಹಾದಿ ಕಠಿಣವಾಗಿದೆ. ಉಳಿದ ಏಳು ಪಂದ್ಯಗಳಲ್ಲಿ ಜಯ ಪಡೆದು, ಬೇರೆ ತಂಡಗಳ ಸೋಲು, ಗೆಲುವಿನ ಆಧಾರದ ಮೇಲೆ ಕಿಂಗ್ಸ್ ತಂಡದ ನಾಕೌಟ್‌ ಪ್ರವೇಶದ ಆಸೆ ಅವಲಂಬಿತವಾಗಿದೆ. ಆದರೆ ಗೌತಮ್ ಗಂಭೀರ್ ನಾಯಕತ್ವದ   ನೈಟ್ ರೈಡರ್ಸ್ ತಂಡ ಬಲಿಷ್ಠ  ಎನ್ನುವುದನ್ನು ಮರೆಯುವಂತಿಲ್ಲ.

2012 ಮತ್ತು 2014ರ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ರೈಡರ್ಸ್ ಒಂದು ದಿನದ ಹಿಂದೆಯಷ್ಟೇ ಆರ್‌ಸಿಬಿ ಎದುರು ಐದು ವಿಕೆಟ್‌ಗಳ ಗೆಲುವು ಪಡೆದು ಅದಮ್ಯ ವಿಶ್ವಾಸದಲ್ಲಿದೆ.

ಆರ್‌ಸಿಬಿ ನೀಡಿದ್ದ 186 ರನ್‌ಗಳ ಸವಾಲಿನ ಗುರಿಯನ್ನು ರೈಡರ್ಸ್‌ 19.1 ಓವರ್‌ಗಳಲ್ಲಿ ಮುಟ್ಟಿತ್ತು. ಆರಂಭಿಕ ಕ್ರಮಾಂಕದ ರಾಬಿನ್ ಉತ್ತಪ್ಪ, ಕ್ರಿಸ್‌ ಲ್ಯಾನ್‌ ಮತ್ತು ಮನೀಷ್ ಪಾಂಡೆ ವೈಫಲ್ಯ ಅನುಭವಿಸಿದ್ದರು. ಆದರೂ ಯೂಸುಫ್‌ ಪಠಾಣ್‌ ಮತ್ತು ಆ್ಯಂಡ್ರೆ ರಸೆಲ್‌ ವೇಗವಾಗಿ ರನ್ ಕಲೆ ಹಾಕಿ ಗೆಲುವು ತಂದುಕೊಟ್ಟಿದ್ದರು. ಹಿಂದಿನ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಕಂಡಿದ್ದರು. ಆರ್‌ಸಿಬಿ ಎದುರು  ಯೂಸುಫ್‌ ಮತ್ತು ರಸಲ್ ಅಬ್ಬರದಿಂದಲೇ ಪಂದ್ಯ ಜಯಿಸಿದ್ದರಿಂದ  ರೈಡರ್ಸ್‌  ಪಡೆಯಲ್ಲಿ ಆತ್ಮವಿಶ್ವಾಸ ದುಪ್ಪಟ್ಟಾಗಿದೆ.

ಬ್ಯಾಟಿಂಗ್‌ನಲ್ಲಿ ಬಲಿಷ್ಠ: ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸವಾಲಿನ ಮೊತ್ತ ಕಲೆ ಹಾಕಿ ಗೆಲುವು ಪಡೆದಿರುವ ನೈಟ್ ರೈಡರ್ಸ್ ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದೆ.

ಉತ್ತಪ್ಪ, ಗಂಭೀರ್‌, ಯೂಸುಫ್‌ ತಂಡದ ಪ್ರಮುಖ ಶಕ್ತಿ. ಯೂಸುಫ್‌ ಕೇವಲ 24 ಎಸೆತಗಳಲ್ಲಿ 39 ರನ್ ಕಲೆ ಹಾಕಿ ಅಬ್ಬರಿಸಿದ್ದರು. ಆದರೆ ರೈಡರ್ಸ್‌ ಚುರುಕಿನ ಬೌಲಿಂಗ್ ಮಾಡುವಲ್ಲಿ ವಿಫಲವಾಗುತ್ತಿದೆ.

ಸುನಿಲ್‌ ನಾರಾಯಣ್, ವೇಗಿ ಉಮೇಶ್‌ ಯಾದವ್‌ ಆರ್‌ಸಿಬಿ ವಿರುದ್ಧ ಹೆಚ್ಚು ರನ್ ನೀಡಿ ದುಬಾರಿಯೆನಿಸಿದ್ದರು. ಸ್ಪಿನ್ನರ್‌ ಸುನಿಲ್ ನಾಲ್ಕು ಓವರ್‌ಗಳಲ್ಲಿ 45 ರನ್ ಕೊಟ್ಟಿದ್ದರೆ, ಉಮೇಶ್‌ ಇಷ್ಟೇ ಓವರ್‌ಗಳಲ್ಲಿ ನೀಡಿದ್ದು 56 ರನ್. ಆದ್ದರಿಂದ ಬೌಲರ್‌ಗಳು ಚುರುಕಿನ ದಾಳಿ ನಡೆಸಬೇಕಾದ ಅನಿವಾರ್ಯತೆಯಿದೆ.

ಎಂಟು ಪಂದ್ಯಗಳನ್ನು ಆಡಿರುವ ರೈಡರ್ಸ್‌ ಆರರಲ್ಲಿ ಜಯ ಸಾಧಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ತಂಡಕ್ಕೆ ಉಳಿದಿರುವುದು ಆರು ಲೀಗ್ ಪಂದ್ಯಗಳು.

2015ರ ಐಪಿಎಲ್‌ ಟೂರ್ನಿಯಲ್ಲಿ ಕೊನೆಯ ಹಂತದಲ್ಲಿ ಪ್ಲೇ ಆಫ್‌ ಪ್ರವೇಶದ ಅವಕಾಶವನ್ನು ತಪ್ಪಿಸಿಕೊಂಡಿದ್ದ ರೈಡರ್ಸ್  ಈ ಬಾರಿ ಹಿಂದಿನ ತಪ್ಪು ಆಗದಂತೆ ಎಚ್ಚರಿಕೆ ವಹಿಸಿದೆ.

‘ನಮ್ಮ ತಂಡ ಎಲ್ಲಾ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ. ಮುಂದಿನ ಪಂದ್ಯಗಳಲ್ಲಿ ಉಳಿದ ಆಟಗಾರರೂ ವಿಜೃಂಭಿಸುತ್ತಾರೆ. ಆರಂಭಿಕ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು 15 ಓವರ್‌ಗಳವರೆಗೆ ಕ್ರೀಸ್‌ನಲ್ಲಿದ್ದರೆ ಕೊನೆಯಲ್ಲಿ ವೇಗವಾಗಿ ರನ್ ಕಲೆ ಹಾಕಬಹುದು. ಆರ್‌ಸಿಬಿ ಎದುರು ಪಡೆದ ಗೆಲುವಿನಿಂದಾಗಿ ನಮ್ಮಲ್ಲಿನ ವಿಶ್ವಾಸ ಹೆಚ್ಚಾಗಿದೆ. ಕಠಿಣ ಸವಾಲಿಗೆ ಸಜ್ಜಾಗಿದ್ದೇವೆ’ ಎಂದು ಯೂಸುಫ್ ಪಠಾಣ್ ಬೆಂಗಳೂರಿನ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಮುಖಾಮುಖಿ ಫಲಿತಾಂಶ
ಒಟ್ಟು ಪಂದ್ಯ: 18
ಕೋಲ್ಕತ್ತ ಜಯ: 12
ಪಂಜಾಬ್‌ ಜಯ: 06

ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸೋನಿ ಸಿಕ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT