ADVERTISEMENT

ಕೆನಡಾ ಎದುರು ಭಾರತ ನೆಚ್ಚಿನ ತಂಡ

ಹಾಕಿ: ಇಂದು ಮೊದಲ ಪಂದ್ಯ, ವಿಶ್ವಾಸದಲ್ಲಿ ರಿತು ಬಳಗ

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST

ಗ್ಲಾಸ್ಗೊ (ಪಿಟಿಐ): ಮಲೇಷ್ಯಾ ಎದುರಿನ ಹಾಕಿ ಸರಣಿಯಲ್ಲಿ ಗೆಲುವು ಪಡೆದು ವಿಶ್ವಾಸದಲ್ಲಿರುವ ಭಾರತ ಮಹಿಳಾ ಹಾಕಿ ತಂಡ 20ನೇ ಕಾಮನ್‌ವೆಲ್ತ್‌ ಕ್ರೀಡಾಕೂಟದ ಉದ್ಘಾಟನಾ ಪಂದ್ಯದಲ್ಲಿ ಗುರುವಾರ ಕೆನಡಾ ಎದುರು ಪೈಪೋಟಿ ನಡೆಸಲಿದೆ.

ಹೋದ ಸಲದ ಕ್ರೀಡಾಕೂಟದಲ್ಲಿ ಐದನೇ ಸ್ಥಾನ ಪಡೆದಿದ್ದ ರಿತು ರಾಣಿ ಸಾರಥ್ಯದ ಭಾರತ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ನೆಚ್ಚಿನ ತಂಡವೆನಿಸಿದೆ. ಕಾಮನ್‌ವೆಲ್ತ್‌ ಕೂಟದಲ್ಲಿ ಉಭಯ ತಂಡಗಳು 2002 ಮತ್ತು 2010ರಲ್ಲಿ ಮುಖಾಮುಖಿಯಾಗಿದ್ದವು. ಆಗ ಭಾರತವೇ ಗೆಲುವು ಸಾಧಿಸಿತ್ತು. 2012ರಲ್ಲಿ ಒಮ್ಮೆ ಪೈಪೋಟಿ ನಡೆಸಿದ್ದ ವೇಳೆ ಭಾರತ 4–0 ಗೋಲುಗಳಿಂದ ಜಯ ಪಡೆದಿತ್ತು.

‘ಎ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ವಿಶ್ವ ರ್‍್ಯಾಂಕಿಂಗ್‌ನಲ್ಲಿ13ನೇ ಸ್ಥಾನ ಹೊಂದಿದೆ. ಎದುರಾಳಿ ಕೆನಡಾ 22ನೇ ಸ್ಥಾನದಲ್ಲಿದೆ. ಇದೇ ಗುಂಪಿನಲ್ಲಿ ಹಾಲಿ ರನ್ನರ್ಸ್‌ ಅಪ್‌ ನ್ಯೂಜಿಲೆಂಡ್‌, ಟ್ರಿನಿಡಾಡ್‌ ಮತ್ತು ಟೊಬಾಗೊ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ. ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಸಜ್ಜುಗೊಳ್ಳಲು ಭಾರತ ತಂಡ ಮಲೇಷ್ಯಾಕ್ಕೆ ತೆರಳಿತ್ತು. ಅಲ್ಲಿ ಆಡಿದ ಆರೂ ‘ಟೆಸ್ಟ್‌್’ ಪಂದ್ಯಗಳಲ್ಲಿ  ಜಯ ಪಡೆದಿತ್ತು.

‘ಯುವ ಆಟಗಾರ್ತಿಯರೇ ಹೆಚ್ಚಾಗಿರುವ ನಮ್ಮ ತಂಡ ಉತ್ತಮ ಪ್ರದರ್ಶನ ತೋರಲಿದೆ. ಮಲೇಷ್ಯಾ ಎದುರು ತೋರಿದ ಪ್ರದರ್ಶನ ನಮ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಕೆನಡಾ ಎದುರು ಜಯದ ಆರಂಭ ಪಡೆಯಬೇಕೆನ್ನುವುದು ನಮ್ಮ ಗುರಿ’ ಎಂದು ಭಾರತ ತಂಡದ ಮುಖ್ಯ ಕೋಚ್‌ ನೀಲ್‌ ಹಾವುಡ್ ಹೇಳಿದ್ದಾರೆ.

‘ಯುವ ಆಟಗಾರ್ತಿಯರಿಂದ ಕೂಡಿರುವ ಕೆನಡಾ ತಂಡವೂ ಬಲಿಷ್ಠ ಎನ್ನುವುದು ಗೊತ್ತಿದೆ. 15 ಅಂತರರಾಷ್ಟ್ರೀಯ ಪಂದ್ಯಗಳನ್ನಷ್ಟೇ ಆಡಿದ್ದರೂ ಅಪೂರ್ವ ಪ್ರದರ್ಶನ ತೋರಿರುವ ರಿತುಷಾ ಆರ್ಯ      ಭರವಸೆಯ ಆಟಗಾರ್ತಿ ಎನಿಸಿದ್ದಾರೆ. ರಾಣಿ ರಾಂಪಾಲ್‌, ಪೂನಮ್‌ ರಾಣಿ ಮತ್ತು ಗೋಲ್‌ ಕೀಪರ್‌ ಸವಿತಾ ಸವಾಲನ್ನು ಸಮರ್ಥವಾಗಿ ಎದುರಿಸಲಿದ್ದಾರೆ’ ಎಂದೂ ಹಾವುಡ್‌ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.