ADVERTISEMENT

ಕೆನ್ಯಾದ ಅಥ್ಲೀಟ್‌ಗಳ ಪಾರಮ್ಯ

ವಿಶ್ವ 10ಕೆ ಓಟ: ಕೊರಿಯೊ, ಇರೆನೆಗೆ ಚಿನ್ನದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 21 ಮೇ 2017, 19:30 IST
Last Updated 21 ಮೇ 2017, 19:30 IST
ಕೆನ್ಯಾದ ಅಥ್ಲೀಟ್‌ಗಳ ಪಾರಮ್ಯ
ಕೆನ್ಯಾದ ಅಥ್ಲೀಟ್‌ಗಳ ಪಾರಮ್ಯ   

ಬೆಂಗಳೂರು: ದೂರ ಅಂತರದ ಓಟದಲ್ಲಿ ತಮಗೆ ಯಾರೂ ಸಾಟಿಯಾಗ ಲಾರರು ಎಂಬುದನ್ನು ಕೆನ್ಯಾದ ಅಥ್ಲೀಟ್‌ ಗಳು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಉದ್ಯಾನನಗರಿಯ ಪ್ರಮುಖ ರಸ್ತೆಗಳಲ್ಲಿ ಮಿಂಚಿನ ಗತಿಯಲ್ಲಿ ಓಡಿ ಸ್ಥಳೀಯ  ಅಭಿಮಾನಿಗಳನ್ನು ಪುಳಕಿತರ ನ್ನಾಗಿಸಿದ ಅಲೆಕ್ಸ್‌ ಕೊರಿಯೊ ಮತ್ತು ಇರೆನ್ ಚೆಪಟಾಯಿ ಅವರು ಭಾನುವಾರ ನಡೆದ ವಿಶ್ವ 10ಕೆ ಓಟದ ಸ್ಪರ್ಧೆಯಲ್ಲಿ ಕ್ರಮವಾಗಿ ಎಲೈಟ್‌ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಚಿನ್ನದ ಪದಕಗಳಿಗೆ ಮುತ್ತಿಕ್ಕಿದರು.

ಕೊರಿಯೊ 28 ನಿಮಿಷ 12 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು. ಈ ವಿಭಾಗದ ಬೆಳ್ಳಿ ಕೆನ್ಯಾದವರೇ ಆದ ಎಡ್ವಿನ್‌ ಕಿಪ್ಟೂ ಪಾಲಾಯಿತು. ಅವರು 28.26 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು. ಉಗಾಂಡದ ಸ್ಟೀಫನ್‌ ಕಿಸ್ಸಾ (28:28ಸೆ.) ಕಂಚಿಗೆ ತೃಪ್ತಿಪಟ್ಟರು.

ADVERTISEMENT

ಹಿಂದಿನ ಎರಡು ಆವೃತ್ತಿಗಳಲ್ಲಿ ಚಿನ್ನ ಗೆದ್ದಿದ್ದ ಇಥಿಯೋಪಿಯಾದ ಮೊಸಿನೆಟ್‌  ಜೆರೆಮೆವ್‌ ಈ ಬಾರಿ  ‘ಹ್ಯಾಟ್ರಿಕ್‌’ ಸಾಧನೆ ಮಾಡುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಯಿತು. ಶನಿವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದರಿಂದ ಬೆಳಿಗ್ಗೆ ತಂಪಾದ ವಾತಾ ವರಣ ಇತ್ತು. ಕೊರಿಯೊ,   ಕಿಪ್ಟೂ ಮತ್ತು  ಕಿಸ್ಸಾ ಅವರು ಇದರ ಲಾಭ ಎತ್ತಿಕೊಂಡರು.

ಕಂಠೀರವ ಕ್ರೀಡಾಂಗಣದಲ್ಲಿ ನಿಗದಿ ಮಾಡಿದ್ದ ಆರಂಭಿಕ ರೇಖೆಯಿಂದ 500 ಮೀಟರ್ಸ್‌ ದೂರವನ್ನು  3 ನಿಮಿಷದಲ್ಲಿ ಪೂರೈಸಿದ ಇವರು  ರಸ್ತೆಗಿಳಿದ ನಂತರ ನಿಧಾನವಾಗಿ ವೇಗ ಹೆಚ್ಚಿಸಿಕೊಂಡರು.  ಮೊದಲ ಆರು ಕಿಲೊ ಮೀಟರ್ಸ್‌ವರೆಗೂ ಉಗಾಂಡದ ಕಿಸ್ಸಾ ಮುಂಚೂಣಿ ಯಲ್ಲಿದ್ದರು. ಕೊರಿಯೊ ಮತ್ತು ಕಿಪ್ಟೂ ಅವರನ್ನು ಹಿಂಬಾಲಿಸುತ್ತಿದ್ದರು.

ಚಿನ್ನಸ್ವಾಮಿ ಕ್ರೀಡಾಂಗಣದ ಎರಡನೇ ದ್ವಾರ ಸಮೀಪಿಸುತ್ತಿದ್ದಂತೆ  ಕ್ಷಿಪ್ರಗತಿಯಲ್ಲಿ ಓಡಲು ಶುರು ಮಾಡಿದ  ಕೊರಿಯೊ     ಪ್ರತಿ ಸ್ಪರ್ಧಿಗಳನ್ನು  ಹಿಂದಿಕ್ಕಿದರು. ವಿಧಾನಸೌಧದ ಮುಂಭಾಗದ ರಸ್ತೆಯ ಮೂಲಕ ಸಾಗಿ ಕಬ್ಬನ್‌ ಪಾರ್ಕ್‌ ಪ್ರವೇಶಿ ಸುತ್ತಿದ್ದಂತೆ ಅವರ ವೇಗ ಇನ್ನಷ್ಟು ಹೆಚ್ಚಿತು. ಆ ನಂತರ ಅವರು  ಪ್ರತಿ ಸ್ಪರ್ಧಿಗಳನ್ನು ಹತ್ತಿರಕ್ಕೂ ಸುಳಿಯಲು ಅವಕಾಶ ನೀಡದೆ  ಗುರಿ ಕ್ರಮಿಸಿದರು.

ಕಿಸ್ಸಾಗೆ ಬೆಳ್ಳಿ ಗೆಲ್ಲುವ ಉತ್ತಮ ಅವಕಾಶ ಇತ್ತು. ಅಂತಿಮ ರೇಖೆ ಮುಟ್ಟಲು 50 ಮೀಟರ್ಸ್‌ ಬಾಕಿ ಇದ್ದಾಗ ಅವರ ವೇಗ ತಗ್ಗಿತು.  ಹಿಂದೆ ಓಡುತ್ತಿದ್ದ  ಕಿಪ್ಟೂ, ಕಣ್ಣೆವೆ ಮುಚ್ಚಿ ತೆರೆಯುವಷ್ಟರಲ್ಲಿ ಅವರನ್ನು ಹಿಂದಿಕ್ಕಿಬಿಟ್ಟರು. ಇರೆನೆಗೆ ಚಿನ್ನದ ಸಂಭ್ರಮ: ಎಲೈಟ್‌  ಮಹಿಳೆಯರ ವಿಭಾಗದಲ್ಲಿ ಕೆನ್ಯಾದ ಇರೆನೆ 31 ನಿಮಿಷ 51 ಸೆಕೆಂಡು ಗಳಲ್ಲಿ ಗುರಿ ತಲುಪಿ ಬೆಂಗಳೂರಿನ ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು.

ಇಥಿಯೋಪಿಯಾದ ವಾರ್ಕೆನೆಶ್‌  ದಿಗೆಫಾ (32:00) ಮತ್ತು ಕೆನ್ಯಾದ ಹೆಲಾ ಕಿಪ್ರಾಪ್‌ (32:02) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನು ತಮ್ಮದಾಗಿಸಿಕೊಂಡರು. ಆರಂಭದಲ್ಲಿ ಎಲ್ಲರೂ ಗುಂಪಿನಲ್ಲಿ ಓಡುತ್ತಿದ್ದರು ಕಾಮರಾಜ ರಸ್ತೆ ಪ್ರವೇಶಿಸುತ್ತಿದ್ದಂತೆ ಇರೆನೆ, ದಿಗೆಫಾ ಮತ್ತು ಕಿಪ್ರಾಪ್‌ ಗುಂಪಿನಿಂದ ಬೇರ್ಪಟ್ಟರು. ಆ ನಂತರದ ಎರಡು ಕಿಲೋ ಮೀಟರ್ಸ್‌ ವರೆಗೆ ಇವರ ನಡುವೆಯೇ ನೇರ  ಪೈಪೋಟಿ ಕಂಡುಬಂತು.  ಆರನೇ ಕಿಲೋ ಮೀಟರ್ಸ್‌ ನಂತರ  ದಿಟ್ಟತನದಿಂದ ಓಡಿದ ಇರೆನೆ, ಯಾವ ಹಂತದಲ್ಲಿಯೂ ಮುನ್ನಡೆ ಬಿಟ್ಟುಕೊಡದೆ ಗುರಿ ತಲುಪಿದರು.

ನವೀನ್‌, ಸಾಯಿ ಗೀತಾಗೆ ಚಿನ್ನ: ಭಾರತದ ಅಥ್ಲೀಟ್‌ಗಳ ವಿಭಾಗದಲ್ಲಿ ಹರಿಯಾಣದ ನವೀನ್‌ ಕುಮಾರ್‌ ಮತ್ತು ಮಹಾರಾಷ್ಟ್ರದ ಸಾಯಿಗೀತಾ ನಾಯ್ಕ ಅವರು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಚಿನ್ನಕ್ಕೆ ಕೊರಳೊಡ್ಡಿದರು. ನವೀನ್‌ ಅವರು 30 ನಿಮಿಷ 56 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು. ವಾಯು ಪಡೆಯ ಸಂದೀಪ್‌ ತಾಯಡೆ (31:02) ಎರಡನೇ ಸ್ಥಾನ ಗಳಿಸಿದರೆ, ಶಿಲ್ಲಾಂಗ್‌ನ ಶಂಕರ್‌ ಮನ್‌ ಥಾಪಾ (31:07) ಮೂರನೇಯವರಾಗಿ ಸ್ಪರ್ಧೆ ಮುಗಿಸಿದರು.

ಮಹಿಳೆಯರ ವಿಭಾಗದಲ್ಲಿ ನಿಗದಿತ 10 ಕಿಲೊ ಮೀಟರ್ಸ್‌ ಗುರಿ ತಲುಪಲು ಸಾಯಿಗೀತಾ 36 ನಿಮಿಷ 01 ಸೆಕೆಂಡು ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.