ADVERTISEMENT

ಕೆಪಿಎಲ್‌ ಟೂರ್ನಿಗೆ ಇಂದು ಚಾಲನೆ

ಮೊದಲ ಪಂದ್ಯದಲ್ಲಿ ಮಂಗಳೂರು ಯುನೈಟೆಡ್‌–ಪ್ಯಾಂಥರ್ಸ್‌ ಹಣಾಹಣಿ

ವಿಕ್ರಂ ಕಾಂತಿಕೆರೆ
Published 2 ಸೆಪ್ಟೆಂಬರ್ 2015, 19:46 IST
Last Updated 2 ಸೆಪ್ಟೆಂಬರ್ 2015, 19:46 IST

ಹುಬ್ಬಳ್ಳಿ: ‘ಕೂಡಿ ಆಡಿ ಜಗವ ಗೆಲ್ಲೋಣ...’ ಇದು ಕರ್ನಾಟಕ ಪ್ರೀಮಿ ಯರ್‌ ಲೀಗ್‌ (ಕೆಪಿಎಲ್‌) ಕ್ರಿಕೆಟ್‌ ಟೂರ್ನಿಯ ಧ್ಯೇಯಗೀತೆಯ ಪ್ರಮುಖ ಸಾಲು. ಈ ಆಶಯಕ್ಕೆ ತಕ್ಕಂತೆ ಕೂಡಿ ಆಡಿ ಗೆಲುವು ಸಾಧಿಸಲು ಆಟಗಾರರು ಸಿದ್ಧವಾ ಗಿದ್ದಾರೆ; ಕರ್ನಾಟಕದ ಕ್ರಿಕೆಟ್‌ ಉತ್ಸವದ ಸವಿ ಉಣ್ಣಲು ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇಲ್ಲಿನ ರಾಜನಗರದಲ್ಲಿರುವ ಕೆಎಸ್‌ಸಿಎ ಮೈದಾ ನದಲ್ಲಿ ಗುರುವಾರ ಮಧ್ಯಾಹ್ನ ಕೆಪಿಎಲ್‌ ಟೂರ್ನಿಯ ನಾಲ್ಕನೇ ಆವೃತ್ತಿಗೆ ಚಾಲನೆ ದೊರಕುತ್ತಿದ್ದಂತೆ ಈ ಕಾತರಕ್ಕೆ ತೆರೆ ಬೀಳಲಿದೆ.ನೃಪತುಂಗ ಬೆಟ್ಟದ ತಪ್ಪಲಿನಲ್ಲಿ ಮೈಚಾಚಿಕೊಂಡಿರುವ ವಿಶಾಲವಾದ ಹಸಿರು ಅಂಗಣ ಈ ಬಾರಿ ಟೂರ್ನಿಯ ಮೊದಲ ಆವೃತ್ತಿಯ ಪಂದ್ಯಗಳಿಗೆ ಸಜ್ಜಾ ಗಿದ್ದು ಎಲ್ಲ ಎಂಟು ತಂಡಗಳು ಹುಬ್ಬಳ್ಳಿಗೆ ಬಂದಿವೆ; ಮೈದಾನದಲ್ಲಿ ಅಭ್ಯಾಸವನ್ನೂ ನಡೆಸಿವೆ.

ಹುಬ್ಬಳ್ಳಿ–ಧಾರವಾಡ ಅವಳಿ ನಗರ ಸೇರಿದಂತೆ ಉತ್ತರ ಕರ್ನಾಟಕದಾದ್ಯಂತ ಈಗ ಕಳಸಾ ಬಂಡೂರಿ ಹೋರಾಟದ ಕಾವು. ಮಳೆ ಅಭಾವದಿಂದ ಬಿಸಿಲಿನ ತಾಪವೂ ಹೆಚ್ಚು. ಇಂಥ ವಾತಾವರಣ ದಲ್ಲಿ ‘ಛೋಟಾ ಮುಂಬೈ’ಗೆ ಬಂದಿರುವ ತಂಡಗಳ ಆಟಗಾರರ ಮೈ–ಮನವೂ ಬಿಸಿಯಾಗಿದೆ. ಕಳೆದ ವರ್ಷ ನಡೆದ ಟೂರ್ನಿಯ ರೋಚಕ ಸ್ಪರ್ಧೆಗಳ ನೆನಪು ಈ ಪರಿಸ್ಥಿತಿಗೆ ಕಾರಣ. ಆ ನೆನಪು ಆಟಗಾರರನ್ನು ಇನ್ನಷ್ಟು ಬಲಿಷ್ಠಗೊಳಿ ಸಿದೆ. ಆದ್ದರಿಂದ ಈ ಸಲದ ಸ್ಪರ್ಧೆ ರೋಮಾಂಚಕಾರಿಯಾಗಲಿದೆ ಎಂಬುದು ಪ್ರೇಕ್ಷಕರ ನಿರೀಕ್ಷೆ.

ಕಳೆದ ಬಾರಿ ಟೂರ್ನಿಯಲ್ಲಿ ಏಳು ತಂಡಗಳು ಇದ್ದವು. ಈಗ ಈ ಸಂಖ್ಯೆ ಎಂಟಕ್ಕೇರಿದೆ. ಅಂತರರಾಷ್ಟ್ರೀಯ ಆಟ ಗಾರರು, ಐಪಿಎಲ್‌ನಲ್ಲಿ ಆಡಿದ ಚುಟುಕು ಕ್ರಿಕೆಟ್‌ ಪರಿಣತರು ವಿವಿಧ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ದೇಶಿ ಟೂರ್ನಿಗಳು ಮತ್ತು ವಯೋಮಾನದವರ ಟೂರ್ನಿ ಗಳಲ್ಲಿ ಮಿಂಚಿದವರು ಕೂಡ ತಂಡಗಳಲ್ಲಿ ಇದ್ದಾರೆ. ಇವರೆಲ್ಲರೂ ‘ಗೆಲುವು ಒಂದೇ ಗುರಿ’ ಎಂಬ ಧ್ಯೇಯ ಹೊತ್ತುಕೊಂಡು ಇಲ್ಲಿಗೆ ಬಂದಿದ್ದಾರೆ.

ಉತ್ತರ ಕರ್ನಾಟಕದ ಸೊಗಡು ಹೊಂದಿರುವ ಬೆಳಗಾವಿ ಪ್ಯಾಂಥರ್ಸ್‌, ಬಿಜಾಪುರ ಬುಲ್ಸ್‌ ಹಾಗೂ ಸ್ಥಳೀಯ ಹುಬ್ಬಳ್ಳಿ ಟೈಗರ್ಸ್‌; ಗಣಿ ನಾಡಿನ ಬಳ್ಳಾರಿ ಟಸ್ಕರ್ಸ್‌, ಉದ್ಯಾನಗಳ ಊರಿನ ಮೈಸೂರು ವಾರಿಯರ್ಸ್‌, ಕರಾವಳಿಯ ಮಂಗಳೂರು ಯುನೈಟೆಡ್‌ನೊಂದಿಗೆ ಹೊಸತಾಗಿ  ಅಸ್ತಿತ್ವಕ್ಕೆ ಬಂದಿರುವ ನಮ್ಮ ಶಿವಮೊಗ್ಗ ತಂಡ ಮಲೆನಾಡಿನ ಗಂಧ ವನ್ನು ಸೂಸುತ್ತಿದೆ. ಪ್ರೇಕ್ಷಕರ ಕ್ರೀಡಾ ಪ್ರೇಮಕ್ಕೆ ಕಿಚ್ಚು ಹಚ್ಚುವ ಕಿಚ್ಚ ಸುದೀಪ ನಾಯಕತ್ವದ ರಾಕ್‌ ಸ್ಟಾರ್ಸ್‌ ತಂಡ ‘ಸ್ಯಾಂಡಲ್‌ವುಡ್‌’ನ ಸುಗಂಧವನ್ನು ತಂದಿದೆ.

ತಲಾ ಒಂದೊಂದು ಬಾರಿ ಟ್ರೋಫಿ ಗೆದ್ದಿರುವ ಮಂಗಳೂರು ಯನೈಟೆಡ್‌ ಮತ್ತು ಮೈಸೂರು ವಾರಿಯರ್ಸ್‌, ಎರಡು ಬಾರಿ ಫೈನಲ್‌ಗೆ ಪ್ರವೇಶಿಸಿ ಮುಗ್ಗರಿಸಿದ ಬೆಳಗಾವಿ ಪ್ಯಾಂಥರ್ಸ್‌ ತಮ್ಮ ಸಾಮರ್ಥ್ಯ ಇನ್ನಷ್ಟು ಬೆಳಗಲು ಪಣ ತೊಟ್ಟಿವೆ. ಕಳೆದ ಬಾರಿ ಸೆಮಿಫೈನಲ್‌  ತಲುಪಿದ್ದ ಬಿಜಾ ಪುರ ಬುಲ್ಸ್‌ ಮತ್ತೊಮ್ಮೆ ಮಿಂಚು ಹರಿಸಲು ಸಜ್ಜಾಗಿದ್ದರೆ, ತವರಿನ ಜನರ ಬೆಂಬಲದಲ್ಲಿ ಉತ್ತಮ ‘ಟೇಕ್‌ ಆಫ್’ಗಾಗಿ ಹುಬ್ಬಳ್ಳಿ ಟೈಗರ್ಸ್‌ ಕಾಯುತ್ತಿದೆ.

ADVERTISEMENT

ಕಳೆದ ಬಾರಿ ಕೇವಲ ಒಂದು ಪಂದ್ಯ ಮಾತ್ರ ಗೆಲ್ಲಲು ಸಾಧ್ಯವಾದ ಬಳ್ಳಾರಿ ಟಸ್ಕರ್ಸ್‌ ಈ ವರ್ಷ ಅಗ್ನಿ ಪರೀಕ್ಷೆಗೆ ಒಳಗಾಗಬೇಕಾ ಗಿದೆ. ಶೂನ್ಯ ಸಂಪಾದನೆ ಮಾಡಿದ ಸ್ಯಾಂಡಲ್‌ವುಡ್‌ನ ಹೀರೋಗಳಿಗೆ ವಾಸ್ತ ವದ ಅಂಗಣದಲ್ಲಿ ‘ತಾಕತ್ತು’ ಪ್ರದರ್ಶಿ ಸಲು ಈ ಟೂರ್ನಿಅವಕಾಶ ಒದಗಿಸಿದೆ.

ಮಳೆ ಸಾಧ್ಯತೆ ಕಡಿಮೆ
ಕಳೆದ ಬಾರಿ ಕೆಪಿಎಲ್‌ ಟೂರ್ನಿ ಸಂದರ್ಭದಲ್ಲಿ ಹುಬ್ಬಳ್ಳಿ ಯಲ್ಲಿ ಮಳೆ ಜೋರಾಗಿತ್ತು. ಕೆಲವು ಪಂದ್ಯಗಳಿಗೆ ಅಡ್ಡಿಯೂ ಆಗಿತ್ತು. ಆದರೆ ಈ ಬಾರಿ ಇಂಥ ಆತಂಕ ಇಲ್ಲ. ಹವಾಮಾನ ಇಲಾಖೆ ವರದಿ ಪ್ರಕಾರ ಮುಂದಿನ ಮೂರು ದಿನ ಬಿಸಿಲು ಮತ್ತು ಮೋಡದ ವಾತಾವರಣ ಇರಲಿದೆ. ಮಳೆಯ ಸಾಧ್ಯತೆ ಕಡಿಮೆ.

ಕಳಸಾ – ಬಂಡೂರಿ ನಾಲಾ ಜೋಡಣೆಗೆ ಸಂಬಂಧಿಸಿ ಈ ಭಾಗದಲ್ಲಿ ನಡೆಯುತ್ತಿರುವ ಹೋರಾಟ ಕೆಪಿಎಲ್‌ ಮೇಲೆ ಪರಿ ಣಾಮ ಬೀರುವ ಆತಂಕ ಸಂಘಟ ಕರನ್ನು ಕಾಡಿತ್ತು. ಬುಧವಾರ ನಗರದಲ್ಲಿ ಮೆರವಣಿಗೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸುವ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸಿದ ಕೆಎಸ್‌ಸಿಎ, ಹೋರಾಟಗಾರರು ವಿರೋಧ ವ್ಯಕ್ತಪಡಿಸುವ ಸಾಧ್ಯತೆಯನ್ನು ದೂರ ಮಾಡಿದರು. ಕೆಎಸ್‌ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್‌ ಮೆರವಣಿಗೆಗೆ ನೇತೃತ್ವ ವಹಿಸಿದ್ದರು.

ಹುಬ್ಬಳ್ಳಿಯಲ್ಲಿ 16 ಪಂದ್ಯಗಳು
ಕಳೆದ ಬಾರಿ ಮೈಸೂರಿನಲ್ಲಿ ಆರಂಭಗೊಂಡ ಟೂರ್ನಿ ಹುಬ್ಬಳ್ಳಿಯಲ್ಲಿ ಅಂತ್ಯಗೊಂಡಿತ್ತು. ಈ ಬಾರಿ ಹುಬ್ಬಳ್ಳಿಯಲ್ಲಿ ಆರಂಭಗೊಂಡು ಮೈಸೂರಿನಲ್ಲಿ ಕೊನೆಗೊಳ್ಳಲಿದೆ. ಎರಡೂ ಕಡೆಗಳಲ್ಲಿ ತಲಾ 16 ಪಂದ್ಯಗಳು ನಡೆಯಲಿವೆ. ಹುಬ್ಬಳ್ಳಿಯಲ್ಲಿ ಗುರುವಾರ ಮೊದಲ ಪಂದ್ಯದ ನಂತರ ಐದು ಗಂಟೆಗೆ ಉದ್ಘಾಟನಾ ಸಮಾರಂಭ ಇರುತ್ತದೆ. 

ಪ್ರತಿ ದಿನ ಎರಡು ಪಂದ್ಯಗಳ ನಡುವೆ 12 ವರ್ಷದೊಳಗಿನ ಮಕ್ಕಳಿಗಾಗಿ ಪ್ಲಾಸ್ಟಿಕ್ ಚೆಂಡಿನ ಪಂದ್ಯಗಳು ನಡೆಯಲಿವೆ. 16,000 ಪ್ರೇಕ್ಷಕರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿರುವ ಮೈದಾನದಲ್ಲಿ ಈ ಬಾರಿ ಮಕ್ಕಳಿಗೆ ಉಚಿತ ಪ್ರವೇಶವಿದೆ. ಮಹಿಳೆಯರಿಗೆ ಪ್ರತ್ಯೇಕ ಸ್ಟ್ಯಾಂಡ್‌ ಕೂಡ ಇದೆ.

ಇಂದಿನ ಪಂದ್ಯಗಳು
ಮಂಗಳೂರು ಯುನೈಟೆಡ್‌ – ಬೆಳಗಾವಿ ಪ್ಯಾಂಥರ್ಸ್‌ (ಮಧ್ಯಾಹ್ನ 1.30)

ಮೈಸೂರು ವಾರಿಯರ್ಸ್ – ನಮ್ಮ ಶಿವಮೊಗ್ಗ (ಸಂಜೆ 5.30)

ನೇರ ಪ್ರಸಾರ: ಸೋನಿ ಸಿಕ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.