ADVERTISEMENT

ಕೇರಳ ಬ್ಲಾಸ್ಟರ್ಸ್‌ಗೆ ಜಯದ ಸಂಭ್ರಮ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್; ನಾರ್ಥ್‌ವೆಸ್ಟ್‌ ಫುಟ್‌ಬಾಲ್ ಕ್ಲಬ್‌ಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2015, 19:47 IST
Last Updated 6 ಅಕ್ಟೋಬರ್ 2015, 19:47 IST

ಕೊಚ್ಚಿ (ಪಿಟಿಐ): ಆತಿಥೇಯ ಕೇರಳ ಬ್ಲಾಸ್ಟರ್ಸ್ ಫುಟ್‌ಬಾಲ್ ಕ್ಲಬ್ ತಂಡವು ಮಂಗಳವಾರ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಬಾರಿಸಿತು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸಹ ಮಾಲೀಕರಾರಿಗಿರುವ ಕೇರಳ ಬ್ಲಾಸ್ಟರ್ಸ್ ತಂಡವು 3–1 ಗೋಲುಗಳಿಂದ ನಾರ್ಥ್‌ವೆಸ್ಟ್‌ ಯುನೈಟೆಡ್‌ ಫುಟ್‌ಬಾಲ್ ಕ್ಲಬ್ ವಿರುದ್ಧ ಗೆದ್ದಿತು.

ಇಲ್ಲಿಯ ಜವಾಹರ ಲಾಲ್ ನೆಹರು ಮೈದಾನದಲ್ಲಿ ನಡೆದ ಪಂದ್ಯದ ಮೊದಲರ್ಧದಲ್ಲಿ ಎರಡೂ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಿತು. ಎರಡೂ ತಂಡಗಳ ಜಿದ್ದಾಜಿದ್ದಿನ ಹೋರಾಟದಿಂದ ಇಬ್ಬರಿಗೂ ಗೋಲು ಮಾಡಲು ಸಾಧ್ಯವಾಗಲಿಲ್ಲ.

ಆದರೆ ನಂತರದ ಅವಧಿಯಲ್ಲಿ ಕೇರಳ ಮೊದಲ ಸಿಹಿ ಸವಿಯಿತು. 49ನೇ ನಿಮಿಷದಲ್ಲಿ ಜೋಸು ಗೋಲು ದಾಖಲಿಸಿದರು. ಆತಿಥೇಯ ತಂಡವು ಸಂಭ್ರಮಿಸಿತು. ಕ್ರೀಡಾಂಗಣದಲ್ಲಿ ತುಂಬಿದ್ದ  ಅಭಿಮಾನಿಗಳ ಸಂತೋಷಕ್ಕೆ ಮೇರೆ ಮೀರಿತು. ಆಗ ಎದ್ದ ಮೆಕ್ಸಿಕನ್ ಅಲೆಗಳು ಆಕರ್ಷಕವಾಗಿದ್ದವು.

68ನೇ ನಿಮಿಷದಲ್ಲಿ ಮತ್ತೊಮ್ಮೆ ಕೇರಳದ ಅಭಿಮಾನಿಗಳಿಗೆ ಸುಗ್ಗಿ ಸಂಭ್ರಮ. ರಾಹುಲ್ ಬೇಕ್ ಮಾಡಿದ ಥ್ರೋ ಅನ್ನು ಕರ್ವಾಲೋ ಫ್ಲಿಕ್ ಮಾಡಿದರು. ಆ ಚೆಂಡನ್ನು  ಮೋಹಮ್ಮದ್ ರಫಿ  ಬಲಶಾಲಿ ಹೆಡ್ಡಿಂಗ್ ಮೂಲಕ ಗೋಲುಪೆಟ್ಟಿಗೆ ಸೇರಿಸಿದರು. ಚೆಂಡು ಪೆಟ್ಟಿಗೆಯ ಬಲೆಗೆ ಅಪ್ಪಳಿಸಿತು. ಕೇರಳ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತು. 2–0 ಮುನ್ನಡೆ ಗಳಿಸಿದ ತಂಡದ ಗೋಲು ಹಸಿವು ಮುಗಿದಿರಲಿಲ್ಲ.   ಕೇರಳ ಸ್ಟ್ರೈಕರ್‌ಗಳು ಪದೇ ಪದೇ ದಾಳಿ ಮಾಡಿದರು.

ನಾರ್ಥ್‌ವೆಸ್ಟ್‌ನ ರಕ್ಷಣಾ ಆಟಗಾರರು ಈ ದಾಳಿಯನ್ನು ತಡೆಯುವಲ್ಲಿ ಸಂಪೂರ್ಣ ಸಾಮರ್ಥ್ಯ ಹಾಕಿದರು.  ಆದರೂ 72ನೇ ನಿಮಿಷದಲ್ಲಿ ಕೇರಳ ಮತ್ತೊಮ್ಮೆ ಮೇಲುಗೈ ಸಾಧಿಸಿತು.  ಸಾಂಚೇಜ್ ವ್ಯಾಟ್ ಗೋಲು ಗಳಿಸುವ ಮೂಲಕ ತಂಡಕ್ಕೆ 3–0 ಮನ್ನಡೆ ನೀಡಿದರು.  ಅರ್ಸೇನಾಲ್ ಯೂತ್ ಸ್ಕೂಲ್ ಆಟಗಾರ ವ್ಯಾಟ್ ಅವರು ಬೈವಾಟರ್ ಮತ್ತು ರಫಿ ನೀಡಿದ ಪಾಸಿಂಗ್‌ ಅನ್ನು ಪಡೆದು ಗೋಲು ಗಳಿಸಿದ ರೀತಿ ಆಕರ್ಷಕವಾಗಿತ್ತು.

ಇತ್ತ ಎದುರಾಳಿ ನಾರ್ಥ್‌ವೆಸ್ಟ್‌ ಆಟಗಾರರೂ ತಮ್ಮ ಹೋರಾಟ ಮುಂದುವರೆಸಿದ್ದರು. ಆಗಾಗ ಗೋಲು ಪ್ರದೇಶಕ್ಕೆ ಲಗ್ಗೆ ಇಡುತ್ತಿದ್ದರು. ಆದರೆ, ಕೇರಳದ ಬಲಿಷ್ಠ ರಕ್ಷಣಾ ಪಡೆಯು ಎಲ್ಲ ಪ್ರಯತ್ನಗಳಿಗೂ ತಡೆಯೊಡ್ಡಿತ್ತು. 82ನೇ ನಿಮಿಷದಲ್ಲಿ ನಿಕೋಲಾಸ್ ವೆಲೆಜ್ ಯಶಸ್ವಿಯಾದರು. ಅರ್ಜೆಂಟಿನಾ ಮೂಲದ ವೆಲೆಜ್ ಚುರುಕಾದ ಸ್ಟ್ರೈಕ್ ಮೂಲಕ ಗೋಲು ಗಳಿಸಿದರು. ಸೋಲಿನ ಅಂತರವನ್ನು ತಗ್ಗಿಸಿದರು.

ಸಚಿನ್ ಬೆಂಬಲ: ಮಂಗಳವಾರ ಬೆಳಿಗ್ಗೆಯೇ ವಿಶೇಷ ವಿಮಾನದ ಮೂಲಕ ಕೊಚ್ಚಿಗೆ ಬಂದಿದ್ದ ಸಚಿನ್ ತೆಂಡೂಲ್ಕರ್ ಕೇರಳ ಬ್ಲಾಸ್ಟರ್‌ ತಂಡದೊಂದಿಗೆ ಇದ್ದರು. ಪಂದ್ಯದ ಸಂದರ್ಭದಲ್ಲಿಯೂ ವಿಐಪಿ ಗ್ಯಾಲರಿಯಿಂದ ತಮ್ಮ ತಂಡವನ್ನು ಹುರಿದುಂಬಿಸಿದರು. ನಾಳೆ ನಡೆಯುವ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಸಹ ಮಾಲೀಕತ್ವದ ಗೋವಾ ಎಫ್‌ಸಿ ಮತ್ತು ಸೌರವ್‌ ಗಂಗೂಲಿ ಸಹ ಒಡೆತನದ ಅಟ್ಲೆಟಿಕೊ ಡಿ ಕೋಲ್ಕತ್ತ ತಂಡಗಳು ಪೈಪೋಟಿ ನಡೆಸುತ್ತವೆ. ಈ ಕದನ ಕುತೂಹಲ ಮೂಡಿಸಿದೆ.

ಇಂದಿನ ಪಂದ್ಯ
ಗೋವಾ  ಎಫ್‌ಸಿ ವಿರುದ್ಧ ಅಟ್ಲೆಟಿಕೊ ಡಿ ಕೋಲ್ಕತ್ತ
ಸ್ಥಳ: ಗೋವಾ
ಸಮಯ ಸಂಜೆ 7
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.