ADVERTISEMENT

ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಜಯ

ಕೊಹ್ಲಿ ಪಡೆಯಿಂದ ಕೈಜಾರಿದ ಸರಣಿ ಕ್ಲೀನ್‌ ಸ್ವೀಪ್‌ ಅವಕಾಶ

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 16:56 IST
Last Updated 22 ಜನವರಿ 2017, 16:56 IST
ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಜಯ
ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಜಯ   
ಕೊಲ್ಕತ್ತ: ಕೇದಾರ್‌ ಜಾದವ್‌(90) ಅದ್ಭುತ ಬ್ಯಾಟಿಂಗ್‌ ಹೊರತಾಗಿಯೂ ಇಂಗ್ಲೆಂಡ್‌ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ಸೋಲು ಕಂಡಿತು. ಇದರೊಂದಿಗೆ ವಿರಾಟ್‌ ಕೊಹ್ಲಿ ಚೊಚ್ಚಲ ನಾಯಕತ್ವದ ಭಾರತ ತಂಡಕ್ಕೆ ಇಂಗ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡುವ ಅವಕಾಶ ಕೈತಪ್ಪಿತು.
 
ಟಾಸ್‌ ಗೆದ್ದು ಪ್ರವಾಸಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ ಆತಿಥೇಯ ತಂಡದ ನಾಯಕ ವಿರಾಟ್‌ ಕೊಹ್ಲಿ ಲೆಕ್ಕಾಚಾರವನ್ನು ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳು ಸುಳ್ಳಾಗಿಸಿದರು. ಮೊದಲೆರಡು ಪಂದ್ಯಗಳಂತೆ ಈ ಪಂದ್ಯದಲ್ಲಿಯೂ ಉಭಯ ತಂಡಗಳ ಉತ್ತಮ ಬ್ಯಾಟಿಂಗ್‌ನಿಂದ ಕ್ರಿಕೆಟ್‌ ಅಭಿಮಾನಿಗಳಿಗೆ ಭರಪೂರ ಮನರಂಜನೆ ದೊರೆಯಿತು.
 
ಟಾಸ್‌ ಸೋತರು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಆಂಗ್ಲ ಬ್ಯಾಟ್ಸ್‌ಮನ್‌ಗಳು ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 321ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿ ಕೊನೆಯ ಪಂದ್ಯವನ್ನು ಗೆದ್ದು ಸರಣಿ ವೈಟ್‌ವಾಷ್‌ನಿಂದ ಪಾರಾಗಲು ಶತಪ್ರಯತ್ನ ನಡೆಸಿ ಯಶಸ್ಸು ಕಂಡರು.
 
ಆಂಗ್ಲರು ದಾಖಲಿಸಿದ ಬೃಹತ್‌ ಮೊತ್ತದೆದುರು ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳು ಪಂದ್ಯವನ್ನು ರೋಚಕ ಘಟ್ಟಕ್ಕೆ ತಂದು ನಿಲ್ಲಿಸಿದರು. ಕೊನೆಯ ಓವರ್‌ ವರೆಗೂ ಭಾರತ ಗೆಲುವಿನ ಆಸೆ ಅರಳಿಸಿದ್ದ ಕೇದಾರ್ ಜಾದವ್‌ 50ನೇ ಓವರ್‌ನ 5ನೇ ಎಸೆತದಲ್ಲಿ ವಿಕೆಟ್‌ ಕಳೆದುಕೊಂಡಿದ್ದು ಪಂದ್ಯದ ದಿಕ್ಕು ಬದಲಿಸಿತು.
 
ಅಂತಿಮವಾಗಿ ಭಾರತ 9 ವಿಕೆಟ್‌ ನಷ್ಟಕ್ಕೆ 316ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಇಂಗ್ಲೆಂಡ್‌ ಕೊನೆಯ ಪಂದ್ಯದಲ್ಲಿ 5 ರನ್‌ ಅಂತರದ ಪ್ರಯಾಸದ ಜಯಗಳಿಸಿತು.
 
ಮೂರು ಪಂದ್ಯಗಳ ಈ ಸರಣಿಯಲ್ಲಿ ಉಭಯ ತಂಡಗಳು ಪ್ರತಿ ಇನಿಂಗ್ಸ್‌ನಲ್ಲಿಯೂ 300ರನ್‌ ದಾಟಿ ಮುನ್ನಡೆದದ್ದು ಸರಣಿಯ ವಿಶೇಷ.
 
ಸಂಕ್ಷಿಪ್ತ ಸ್ಕೋರ್‌ ವಿವರ
ಇಂಗ್ಲೆಂಡ್‌: 50 ಓವರ್‌ಗಳಲ್ಲಿ 321/8
ಜೇಸನ್‌ ರಾಯ್‌ 65, ಬೆನ್‌ ಸ್ಟೋಕ್ಸ್‌ 57, ಜಾನಿ ಬೈಸ್ಟ್ರೋವ್‌
 
ಭಾರತ: 50 ಓವರ್‌ಗಳಲ್ಲಿ 316/9
ಕೇದಾರ್‌ ಜಾದವ್‌ 90, ಹಾರ್ದಿಕ್‌ ಪಾಂಡ್ಯ 56, ವಿರಾಟ್‌ ಕೊಹ್ಲಿ 55

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.