ADVERTISEMENT

ಕೊಹ್ಲಿಗೆ ಕ್ಷಮೆ ಶಬ್ದವೇ ಗೊತ್ತಿಲ್ಲ: ಸದರ್ಲೆಂಡ್ ಟೀಕೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:30 IST
Last Updated 23 ಮಾರ್ಚ್ 2017, 19:30 IST
ಕೊಹ್ಲಿಗೆ ಕ್ಷಮೆ ಶಬ್ದವೇ ಗೊತ್ತಿಲ್ಲ: ಸದರ್ಲೆಂಡ್ ಟೀಕೆ
ಕೊಹ್ಲಿಗೆ ಕ್ಷಮೆ ಶಬ್ದವೇ ಗೊತ್ತಿಲ್ಲ: ಸದರ್ಲೆಂಡ್ ಟೀಕೆ   

ನವದೆಹಲಿ (ಪಿಟಿಐ): ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಕ್ಷಮೆ ಶಬ್ದವೇ ಗೊತ್ತಿಲ್ಲವೆಂದು ಅನಿಸುತ್ತಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ (ಸಿಎ) ಮುಖ್ಯಸ್ಥ ಜೇಮ್ಸ್‌ ಸದರ್ಲೆಂಡ್ ಟೀಕಿಸಿದ್ದಾರೆ.

ಆಸ್ಟ್ರೇಲಿಯಾ ಫೀವಿಯಾ ರೇಡಿಯೋ ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ‘ಬೆಂಗಳೂರು ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ  ನಾಯಕ ಸ್ಟೀವನ್ ಸ್ಮಿತ್ ಅವರ ತೇಜೊವಧೆ ಮಾಡುವಂತಹ ಟೀಕೆ ಮಾಡಿದ್ದ ಕೊಹ್ಲಿ ಅವರು ಕ್ಷಮೆ ಕೇಳಬೇಕಿತ್ತಲ್ಲವೇ’ ಎಂದು ರೇಡಿಯೊ ಜಾಕಿ ಕೇಳಿದ ಪ್ರಶ್ನೆಗೆ ಜೇಮ್ಸ್‌ ಪ್ರತಿಕ್ರಿಯಿಸಿದ್ದರು.

‘ವಿರಾಟ್ ಅವರಿಗೆ ಕ್ಷಮೆ ಶಬ್ದವೇ ಗೊತ್ತಿಲ್ಲವೆಂದು ಕಾಣುತ್ತದೆ. ಈ ಜಿದ್ದಾಜಿದ್ದಿನ ಸರಣಿಯ ನಂತರ ಉಭಯ ತಂಡಗಳ ಆಟಗಾರರು ಪರಸ್ಪರ ಭಿನ್ನಾಭಿಪ್ರಾಯ ಮರೆತು ಒಂದಾಗುತ್ತಾರೆಂಬ ಭರವಸೆ ಇದೆ. ಏಕೆಂದರೆ ಐಪಿಎಲ್ ಟೂರ್ನಿಯಲ್ಲಿ ಇವರಲ್ಲಿ ಬಹುತೇಕ ಆಟಗಾರರು ಕೂಡಿ ಆಡಲಿದ್ದಾರೆ‘ ಎಂದು ಸದರ್ಲೆಂಡ್ ಹೇಳಿದ್ದಾರೆ.

ADVERTISEMENT

‘ಕೊಹ್ಲಿ ಆತ್ಮಗೌರವಕ್ಕೆ ಧಕ್ಕೆ ತಂದ ಬಿಸಿಸಿಐ’
ಡಿಆರ್‌ಎಸ್ ವಿವಾದದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗೆ ರಾಜಿ  ಮಾಡಿಕೊಳ್ಳುವ ಮೂಲಕ ಬಿಸಿಸಿಐ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಆತ್ಮಗೌರವಕ್ಕೆ ಧಕ್ಕೆ ಉಂಟು ಮಾಡಿದೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುರುವಾರ ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ ಜೇಮ್ಸ್‌ ಸದರ್ಲೆಂಡ್ ಅವರು, ‘ವಿರಾಟ್‌ಗೆ ಕ್ಷಮೆ ಎನ್ನುವ ಪದವೇ ಗೊತ್ತಿಲ್ಲ’ಎಂದು ಟೀಕಿಸಿರುವುದಕ್ಕೆ ಠಾಕೂರ್ ಟ್ವೀಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಸರಣಿ ಸಂದೇಶಗಳನ್ನು ಹಾಕಿರುವ ಅವರು, ’ಕ್ರಿಕೆಟ್ ಆಸ್ಟ್ರೇಲಿಯಾವು ಯಾವಾಗಲೂ ನಮ್ಮ ಮೇಲೆ ದಬ್ಬಾಳಿಕೆ ಮಾಡು
ವುದನ್ನೇ ರೂಢಿಸಿಕೊಂಡಿದೆ. ಬೆಂಗಳೂರು ಪಂದ್ಯದಲ್ಲಿ  ಪ್ರವಾಸಿ ತಂಡದ ನಾಯಕ ಸ್ಮಿತ್ ವಿರುದ್ಧ ಕೊಹ್ಲಿ ಮಾಡಿದ್ದ ಆರೋಪ ಸರಿಯಾಗಿಯೇ ಇತ್ತು.  ಆದರೆ ಬಿಸಿಸಿಐ ಕೊಹ್ಲಿ ಮತ್ತು ತಂಡವನ್ನು  ಬೆಂಬಲಿಸಲಿಲ್ಲ. ಬದಲಿಗೆ ರಾಜಿ ಮಾಡಿಕೊಂಡಿತು. ಇದೆಂತಹ ನೀತಿ. ಆಟಗಾರರ ಹಿತಾಸಕ್ತಿ ಕಾಯಬೇಕಿತ್ತು ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.