ADVERTISEMENT

ಕೊಹ್ಲಿ ಬಳಗಕ್ಕೆ ಜಯದ ತವಕ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2017, 19:30 IST
Last Updated 31 ಅಕ್ಟೋಬರ್ 2017, 19:30 IST
ಮಂಗಳವಾರ ಅಂಗಳದಲ್ಲಿ ಅಭ್ಯಾಸ ನಡೆಸಿದ ಕೆ.ಎಲ್ ರಾಹುಲ್‌ –ಎಎಫ್‌ಪಿ ಚಿತ್ರ
ಮಂಗಳವಾರ ಅಂಗಳದಲ್ಲಿ ಅಭ್ಯಾಸ ನಡೆಸಿದ ಕೆ.ಎಲ್ ರಾಹುಲ್‌ –ಎಎಫ್‌ಪಿ ಚಿತ್ರ   

ನವದೆಹಲಿ: ಏಕದಿನ ಸರಣಿಯನ್ನು ಜಯದ ಸಂಭ್ರಮದಲ್ಲಿರುವ ವಿರಾಟ್ ಕೊಹ್ಲಿ ಪಡೆಯು ಬುಧವಾರ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟ್ವೆಂಟಿ–20 ಕ್ರಿಕೆಟ್ ಸರಣಿಯಲ್ಲಿಯೂ ಜಯಭೇರಿ ಬಾರಿಸುವ ಉತ್ಸಾಹದಲ್ಲಿದೆ.

ಟ್ವೆಂಟಿ–20 ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಕೇನ್‌ ವಿಲಿಯಮ್ಸನ್‌ ಬಳಗವು ಆತಿಥೇಯ ಭಾರತ ತಂಡಕ್ಕೆ ಕಠಿಣ ಸವಾಲು ಒಡ್ಡುವ ನಿರೀಕ್ಷೆ ಇದೆ. ಎರಡೂ ತಂಡಗಳ ಹಣಾಹಣಿಗೆ  ಫೀರೋಜ್ ಶಾ ಕೋಟ್ಲಾ ಕ್ರೀಡಾಂಗಣ ಸಿದ್ಧಗೊಂಡಿದೆ.

ರಣಜಿ ಟ್ರೋಫಿಯಲ್ಲಿ ಆಡಿದ್ದ ಹೈದರಾಬಾದ್‌ನ ಯುವ ಬೌಲರ್‌ ಮಹಮ್ಮದ್ ಸಿರಾಜ್‌ಗೆ ಮೊದಲ ಬಾರಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಕ್ಕಿದೆ. ಈ ಆಟಗಾರ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮಿಂಚುವ ವಿಶ್ವಾಸ ಹೊಂದಿದ್ದಾರೆ.

ADVERTISEMENT

ರಾಹುಲ್, ಮನೀಷ್‌ ಮಿಂಚುವ ವಿಶ್ವಾಸ: ಕರ್ನಾಟಕದ ಕೆ.ಎಲ್.ರಾಹುಲ್ ಹಾಗೂ ಮನೀಷ್ ಪಾಂಡೆಗೆ ಚುಟುಕು ಕ್ರಿಕೆಟ್ ಸರಣಿಯಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡುವ ಅವಕಾಶ ಸಿಕ್ಕಿದೆ. ಆದರೆ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರೊಂದಿಗೆ ಇನಿಂಗ್ಸ್‌ ಆರಂಭಿಸಲು ರಾಹುಲ್ ಅಥವಾ ಶಿಖರ್ ಧವನ್‌ ಒಬ್ಬರಿಗೆ ಮಾತ್ರ ಅಂತಿಮ ಹನ್ನೊಂದರಲ್ಲಿ ಸ್ಥಾನ ಸಿಗಲಿದೆ.

ಮನೀಷ್ ಪಾಂಡೆ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಿದರೂ ಆಶ್ಚರ್ಯ ಇಲ್ಲ.

ವೇಗವಾಗಿ 9 ಸಾವಿರ ರನ್‌ ಸಿಡಿಸಿದ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಭಾರತದ ಶಕ್ತಿ. ಏಕದಿನ ಸರಣಿಯಲ್ಲಿ ಉತ್ತಮ ಇನಿಂಗ್ಸ್ ಕಟ್ಟಿದ್ದ ರೋಹಿತ್ ಶರ್ಮಾ ಚುಟುಕು ಮಾದರಿಯಲ್ಲೂ ಮಿಂಚುವ ಭರವಸೆ ಹೊಂದಿದ್ದಾರೆ. ಮಹೇಂದ್ರಸಿಂಗ್ ದೋನಿ ಹಾಗೂ ಧವನ್ ಕಿವೀಸ್ ಎದುರು ಉತ್ತಮವಾಗಿ ಆಡಿದ ದಾಖಲೆ ಹೊಂದಿದ್ದಾರೆ. ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಕೂಡ ಎದುರಾಳಿ ತಂಡಕ್ಕೆ ಸವಾಲಾಗಬಲ್ಲರು.

ಆಶಿಶ್ ನೆಹ್ರಾ ಮುಂದಾಳತ್ವದ ಬೌಲಿಂಗ್ ಪಡೆಯಲ್ಲಿ ಹೊಸ ಆಟಗಾರ ಸಿರಾಜ್‌ಗೆ ಆಡುವ ಬಳಗದಲ್ಲಿ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ. ಜಸ್‌ಪ್ರೀತ್ ಬೂಮ್ರಾ ಹಾಗೂ ಭುವನೇಶ್ವರ್ ಕುಮಾರ್‌ ಅವರ ಮೇಲೆ ಕೊಹ್ಲಿ ಪಡೆ ಹೆಚ್ಚು ಭರವಸೆ ಇರಿಸಿದೆ. ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಾಹಲ್ ಹಾಗೂ ಕುಲದೀಪ್‌ ಕೂಡ ಮಿಂಚಬಲ್ಲರು.

ಸವಾಲಿನ ಪಡೆ: ಕಿವೀಸ್ ಬಳಗ ಚುಟುಕು ಕ್ರಿಕೆಟ್‌ನಲ್ಲಿ ಭಾರತಕ್ಕೆ ಕಬ್ಬಿ ಣದ ಕಡಲೆ ಎನಿಸಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್‌, ಶ್ರೀಲಂಕಾ ತಂಡಗಳೊಂದಿಗೆ ಸರಣಿ ಗೆದ್ದಿರುವ ನ್ಯೂಜಿಲೆಂಡ್‌ ಈ ಮಾದರಿಯಲ್ಲಿ ವಿಶ್ವದ ಬಲಾಢ್ಯ ಶಕ್ತಿಯಾಗಿ ಬೆಳೆದಿದೆ. ಭಾರತ ತಂಡ ಕಿವೀಸ್ ಎದುರು ಆಡಿರುವ ಹಿಂದಿನ ಐದು ಪಂದ್ಯಗಳಲ್ಲಿ ಸೋತಿದೆ. ತವರಿನಲ್ಲಿ ಆಡಿದ ಎರಡು ಪಂದ್ಯಗಳಲ್ಲಿಯೂ ನಿರಾಸೆ ಕಾಡಿದೆ.

ಏಕದಿನ ಸರಣಿಯಲ್ಲಿ ಯಶಸ್ವಿ ಬ್ಯಾಟಿಂಗ್ ನಿರ್ವಹಿಸಿದ್ದ ಟಾಮ್ ಲಥಾಮ್‌ ಹಾಗೂ ನಾಯಕ ವಿಲಿ ಯಮ್ಸನ್‌ ಭಾರತದ ಜಯದ ಕನಸಿಗೆ ಪ್ರಮುಖ ಅಡ್ಡಿಯಾಗಬಲ್ಲರು.

ಪಂದ್ಯದ ಆರಂಭ: ರಾತ್ರಿ 7

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.